ದೆಹಲಿ ರೈತ ಹೋರಾಟ | ಸೋಲು ಗೆಲುವಿನ ಆಚೆಯ ಹುಡುಕಾಟದ ಬಗ್ಗೆ ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ.. |

November 21, 2021
10:34 AM

ತಮ್ಮ ಪಾಲಿಗೆ ವಾಟರ್ ಲೂ‌ ಕದನದ ಫಲಿತಾಂಶ ಆಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು………….

Advertisement

ಆಗಿನ ಫ್ರಾನ್ಸ್ ದೇಶದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ನೆಪೋಲಿಯನ್ ಬೊನಪಾರ್ಟೆ ತನ್ನ ಹಠ ಮತ್ತು ದುಡುಕಿನಿಂದ ಅನವಶ್ಯಕ ವಾಟರ್ ಲೂ ಕದನ ಮಾಡಿ ಸೋತ ನಂತರ ಆತನ ಸಾಮ್ರಾಜ್ಯದ ನಿಜವಾದ ಅಧಃಪತನ ಆರಂಭವಾಗುತ್ತದೆ.
ಆದರೆ ಮೋದಿಯವರ ವಿಷಯದಲ್ಲಿ…….., ದಯವಿಟ್ಟು ಪೂರ್ವಾಗ್ರಹ ಪೀಡಿತರಾಗದೆ ಮುಕ್ತ ಮನಸ್ಸಿನಿಂದ ಯಾವುದೇ ಪಕ್ಷ ಅಥವಾ ಸಿದ್ದಾಂತದ ದಾಸರಾಗದೆ ಭಾರತ ಮತ್ತು ರೈತರ ಸಮಗ್ರ ಹಿತದೃಷ್ಟಿಯ ಪರಿಪೂರ್ಣವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ…

ಈಗಿನ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ರೈತ ಮಸೂದೆಗಳು, ಅದರ ವಿರುದ್ಧ ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣ ರೈತರ ಒಂದು ವರ್ಷದ ಅತ್ಯಂತ ಪರಿಣಾಮಕಾರಿ ಹೋರಾಟ ಮತ್ತು ಇದೀಗ ಪ್ರಧಾನಿಗಳು ತಮ್ಮ ರೈತ ಪರ ನಿಲುವುಗಳನ್ನು ರೈತರಿಗೆ ವಿವರಿಸುವಲ್ಲಿ ವಿಫಲರಾದ ಕಾರಣ ಅದಕ್ಕೆ ಕ್ಷಮೆ ಯಾಚಿಸಿ ಹಿಂಪಡೆಯುವ ಭರವಸೆ ಎಲ್ಲವೂ ಯೋಚನೆಯ ಭಾಗವಾಗಿರಲಿ.

ಮೊದಲಿಗೆ ಸಿಖ್ ಸಮುದಾಯದ ಕೆಲವು ಹಠ ಮತ್ತು ತಮ್ಮ ಸಮುದಾಯದ ಮೇಲೆ ನಡೆವ ಘಟನೆಗಳಿಗೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನನ್ನ ಇತಿಹಾಸದ ಅರಿವಿನಿಂದ ನಿಮಗೆ ನೆನಪಿಸುತ್ತೇನೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದೆ ಉಳಿವ ಕೆಲವೇ ಕಹಿ ಮತ್ತು ಹಿಂಸಾತ್ಮಕ ಘಟನೆಗಳಲ್ಲಿ ಪಂಜಾಬ್ ನ ಜಲಿಯನ್ ವಾಲಾಬಾಗ್ ಒಂದು ಪ್ರಮುಖ ಸ್ಥಳ. ಅಂದು ಬ್ರಿಟೀಷರ ವಿರುದ್ಧ ಪ್ರತಿಭಟನೆಯ ಭಾಗವಾಗಿ ಒಂದು ಸಮಾರಂಭ ಏರ್ಪಡಿಸಲಾಗಿತ್ತು.

Advertisement

ಆದರೆ ಅಲ್ಲಿ ಯಾವುದೇ ಪ್ರಚೋದನಾತ್ಮಕ ಗಲಭೆಗಳು ಇಲ್ಲದಿದ್ದರೂ ಜನರಲ್ಲಿ ಭೀತಿ ಹುಟ್ಟಿಸಲು ಜನರಲ್ ಡಯರ್ ಎಂಬ ನರರಾಕ್ಷಸ ಅಲ್ಲಿನ ಎಲ್ಲಾ ಬಾಗಿಲುಗಳನ್ನು ಮುಚ್ಚಿಸಿ ಮಹಿಳೆಯರು ಮಕ್ಕಳು ಎಂಬುದನ್ನು ಸಹ ನೋಡದೆ ಆ ಅಸಹಾಯಕರ ಮೇಲೆ ಗುಂಡಿನ ಮಳೆ ಸುರಿಸಿ ನೂರಾರು ಜನರ ಸಾವಿಗೆ ಕಾರಣನಾದ.

ನಂತರ ಬ್ರಿಟಿಷ್ ಸರ್ಕಾರ ಜನರಲ್ ಡಯರ್ ಮೇಲೆ ತನಿಖೆ ಮಾಡಿ ಅವನನ್ನು ಹುದ್ದೆಯಿಂದ ತೆರವು ಗೊಳಿಸಿ ಆತನನ್ನು ಇಂಗ್ಲೆಂಡಿಗೆ ಕರೆಸಿಕೊಂಡು ಆತನ ರಕ್ಷಣಾ ದೃಷ್ಟಿಯಿಂದ ಒಂದು ಅಜ್ಞಾತ ಸ್ಥಳದಲ್ಲಿ ಇರಿಸಿತು.

ಆದರೂ ಯಾವುದೇ ಹೆಚ್ಚಿನ ಸಂಪರ್ಕ ಸಾಧನಗಳು ಇಲ್ಲದಿದ್ದ ಸಮಯದಲ್ಲಿ, ಬ್ರಿಟೀಷರ ಆಡಳಿತವೇ ಇದ್ದ ಸಂದರ್ಭದಲ್ಲಿ ಈ ಘಟನೆಯಲ್ಲಿ ಮನನೊಂದಿದ್ದ ಉದೋಮ್ ಸಿಂಗ್ ಎಂಬ ವ್ಯಕ್ತಿ ಇಂಗ್ಲೇಂಡಿಗೆ ತೆರಳಿ, ಜನರಲ್ ಡಯರ್ ನನ್ನು ಹುಡುಕಿ ಅವನನ್ನು ಹತ್ಯೆ ಮಾಡುತ್ತಾನೆ ಎಂದರೆ ಆತನ ಕೆಚ್ಚು ಎಷ್ಟಿರಬೇಕು ಊಹಿಸಿ. ನಾನು ಹಿಂಸೆಯನ್ನು ಬೆಂಬಲಿಸುತ್ತಿಲ್ಲ. ಕೇವಲ ಘಟನೆಯನ್ನು ವಿವರಿಸಿದ್ದೇನೆ.

ಹಾಗೆಯೇ, ಖಾಲಿಸ್ತಾನದ ಭಯೋತ್ಪಾದನೆಯ ವಿರುದ್ಧ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅಮೃತಸರದ ಸ್ವರ್ಣ ಮಂದಿರದ ಒಳಗೆ ಸೈನ್ಯ ನುಗ್ಗಿಸಿ ಬ್ಲೂಸ್ಟಾರ್ ಕಾರ್ಯಾಚರಣೆ ಮಾಡಿಸುತ್ತಾರೆ. ಸಿಖ್ ಸಮುದಾಯದ ಬಹುತೇಕರಿಗೆ ಅವರ ಮಂದಿರಕ್ಕೆ ಸೈನ್ಯ ನುಗ್ಗಿಸಿದ್ದು ಅವಮಾನ ಎಂದು ಭಾವಿಸುತ್ತಾರೆ. ಅದು ನಡೆದ ಕೆಲವೇ ವರ್ಷಗಳಲ್ಲಿ ಸತ್ವಂತ್ ಸಿಂಗ್ ಮತ್ತು ಬೇಹಂತ್ ಸಿಂಗ್ ಎಂಬ ಅವರ ಅಂಗರಕ್ಷಕರೇ ಇಂದಿರಾ ಗಾಂಧಿಯವರನ್ನು ಹಾಡು ಹಗಲೇ ಹತ್ಯೆ ಮಾಡುತ್ತಾರೆ.

ಅಷ್ಟೇ ಅಲ್ಲ, ಬ್ಲೂ ಸ್ಟಾರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಸೈನ್ಯದ ಮುಖ್ಯಸ್ಥರಾಗಿದ್ದ ಮತ್ತು ನಿವೃತ್ತಿಯ ನಂತರ ಅತ್ಯಂತ ಸುರಕ್ಷಿತ ಅಜ್ಞಾತ ಸ್ಥಳದಲ್ಲಿ ವಾಸವಾಗಿದ್ದ ಜನರಲ್ ಎ. ಎಸ್. ವೈದ್ಯ ಅವರನ್ನು ಸಹ ಪುಣೆಯ ಒಂದು ಮಾರುಕಟ್ಟೆಯ ಬಳಿ ಆ ಸೇಡಿನ ಭಾಗವಾಗಿ ಹತ್ಯೆ ಮಾಡಲಾಗುತ್ತದೆ. ಮತ್ತೆ ಹೇಳುತ್ತೇನೆ. ಹಿಂಸೆಯನ್ನು ಬೆಂಬಲಿಸುತ್ತಿಲ್ಲ. ಘಟನೆಗಳನ್ನು ಮಾತ್ರ ವಿವರಿಸುತ್ತಿದ್ದೇನೆ.

Advertisement

ಈ ಇತಿಹಾಸವನ್ನು ನೆನಪಿಸುತ್ತಾ…..

ಸಿಖ್ ರೈತರ ಈ ಮುಷ್ಕರದ ಮುಂದೆ ಸರ್ಕಾರಕ್ಕೆ ಮಸೂದೆ ಹಿಂಪಡೆಯದೆ ಬೇರೆ ದಾರಿ ಇರಲಿಲ್ಲ. ಕಾರಣ ಆ ರೈತರನ್ನು
ಬಲಪ್ರಯೋಗದಿಂದ ಅಲ್ಲಿಂದ ತೆರವುಗೊಳಿಸಲು ಸಾಧ್ಯವಿರಲಿಲ್ಲ ಅಥವಾ ಹಾಗೆ ಮಾಡಿದ್ದರೆ ಅಲ್ಲಿ ಹಿಂಸೆಯಾಗಿದ್ದರೆ ಅದು ಪ್ರಧಾನಿಯವರ ಪಾಲಿಗೆ ಅಪಾಯಕಾರಿ ಅಗುವ ಸಾಧ್ಯತೆಯನ್ನು ಇತಿಹಾಸದ ಘಟನೆಗಳಿಂದ ಊಹಿಸಬಹುದು.

ಆದ್ದರಿಂದ, ತಡವಾಗಿಯಾದರೂ ಫ್ರಧಾನಿಯವರ ನಿರ್ಧಾರ ಸರಿಯಾಗಿದೆ. ಅವರನ್ನು ಅಭಿನಂದಿಸುತ್ತಾ….. ಸರ್ಕಾರ ಮತ್ತು ಹೋರಾಟಗಾರರು ಕಲಿಯಬೇಕಾದ ಪಾಠ ಏನು ?……..

ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಬಹುಮತ ಪಡೆದ ಸರ್ಕಾರ ಜನರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಭಾವಿಸಿ ತನ್ನ ಅಧಿಕಾರ ಚಲಾಯಿಸಿ ಕೆಲವು ಕಾನೂನುಗಳನ್ನು ಮಾಡುತ್ತಾರೆ ಮತ್ತು ಬದಲಾಯಿಸುತ್ತಾರೆ. ಅದು ಸಂವಿಧಾನಾತ್ಮಕ ಹಕ್ಕು ಸಹ. ಆದರೆ ಕೆಲವೊಮ್ಮೆ ಬೇರಾವುದೋ ಹಿತಾಸಕ್ತಿಗೆ ಮಣಿದು ಅಥವಾ ಹಿಡನ್ ಅಜೆಂಡಾ ಭಾಗವಾಗಿ ಅಥವಾ ಅರಿವಿಲ್ಲದೆ ತಪ್ಪು ನಿರ್ಧಾರ ಅಥವಾ ಒಟ್ಟು ವ್ಯವಸ್ಥೆಯ ಗ್ರಹಿಕೆಯ ಲೋಪದಿಂದ ಕೆಲವು ವ್ಯತ್ಯಾಸಗಳು ಆಗುತ್ತವೆ. ಆಗ ಸಾರ್ವಜನಿಕರು ಸಹ ಪ್ರತಿಭಟಿಸುವ ಹಕ್ಕು ಹೊಂದಿರುತ್ತಾರೆ. ಅದಕ್ಕೆ ಸರ್ಕಾರಗಳು ಉತ್ತಮ ಪ್ರತಿಕ್ರಿಯೆ ನೀಡಬೇಕೆ ಹೊರತು ಅದನ್ನು ಹತ್ತಿಕ್ಕಲು ಪ್ರಯತ್ನಿಸಬಾರದು. ಜನರು ಮತ್ತು ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳು.

ಈ ಕ್ಷಣದಲ್ಲಿ ಕೇಂದ್ರ ಸರ್ಕಾರ ಮಾಡಿದ ಮೂರು ರೈತ ಮಸೂದೆಗಳು ಭವಿಷ್ಯದಲ್ಲಿ ಮುಗ್ಧ ರೈತರ ಪಾಲಿಗೆ ಅತಿಹೆಚ್ಚು ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಆಳವಾಗಿ ರೈತ ಜಾಗೃತಿ ಮನಸ್ಥಿತಿಯವರೊಂದಿಗೆ ಮಾತನಾಡಿದಾಗ ಅರಿವಾಯಿತು. ಈಗಿನ ದಲ್ಲಾಳಿಗಳ ಜಾಗದಲ್ಲಿ ಕಾರ್ಪೊರೇಟ್ ಸಂಸ್ಕೃತಿಯ ಜನ ಮಧ್ಯಪ್ರವೇಶಿಸಿ ದಲ್ಲಾಳಿಗಳಿಗಿಂತ ಹೆಚ್ಚು ರೈತರನ್ನು ಶೋಷಿಸುವ ಸಾಧ್ಯತೆ ಗೋಚರಿಸಿತು.

Advertisement

ಸರ್ಕಾರ ಬಹುಶಃ ದೀರ್ಘವಾಗಿ ಯೋಚಿಸಿ ಮತ್ತು ತನ್ನ ರಾಜಕೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ವಾಪಸ್ಸು ತೆಗೆದುಕೊಂಡಿದೆ. ಪ್ರಜಾಪ್ರಭುತ್ವ ರಕ್ಷಣೆಯ ಜವಾಬ್ದಾರಿಯ ಹಿನ್ನಲೆಯಲ್ಲಿ ಸರ್ಕಾರದ ನಿರ್ಧಾರ ಖಂಡಿತ ಸ್ವಾಗತಾರ್ಹ.

ಹಾಗೆಯೇ, ಅಬ್ಬಬ್ಬಾ ಏನಿದು ರೈತರ ಅಚಲ ನಿರ್ಧಾರ. ವಾವ್….,

ಸುಮಾರು 50000 ಸಾಮಾನ್ಯ ರೈತರು, ಒಂದು ವರ್ಷ ಮಳೆ ಚಳಿ ಗಾಳಿಗಳ ನಡುವೆ 700 ಸಾವುಗಳು ನಂತರ ಅನೇಕ ಆಪಾದನೆಗಳ ನಡುವೆ, ಕೋರೋನ ಅಲೆಗಳನ್ನು ಮೀರಿ ಸರ್ಕಾರದ ವಿರುದ್ಧ ಹೋರಾಡುವುದು ಅಸಾಮಾನ್ಯ ಸಾಧನೆ ಮತ್ತು ಸ್ಪೂರ್ತಿದಾಯಕ.

ರ್ನಾಟಕದ ಭ್ರಷ್ಟಾಚಾರದ ವಿರುದ್ಧ ಹೋರಾಟಗಾರರೇ, ರೈತ ಹೋರಾಟಗಾರರೇ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟಗಾರರೇ, ಶಾಂತಿ ಸಾಮರಸ್ಯದ ಪರವಾದ ಹೋರಾಟಗಾರರೇ, ಕನ್ನಡ ಪರ ಹೋರಾಟಗಾರರೇ, ಕಾರ್ಮಿಕರ ಪರ ಹೋರಾಟಗಾರರೇ, ದುಶ್ಚಟಗಳ ವಿರುದ್ಧ ಹೋರಾಟಗಾರರೇ, ಮಹಿಳೆಯರು ದಿವ್ಯಾಂಗ ಪರ ಹೋರಾಟಗಾರರೇ, ಸಾಮಾಜಿಕ ಪರಿವರ್ತನೆಯ ಪರ ಹೋರಾಟಗಾರರೇ ಹಾಗು ಇತರ ಎಲ್ಲಾ ರೀತಿಯ ಸಾರ್ವಜನಿಕ ಬದುಕಿನ ಹೋರಾಟಗಾರರೇ ದಯವಿಟ್ಟು ಈ ಹೋರಾಟವನ್ನು ಗಮನಿಸಿ, ಅಭ್ಯಸಿಸಿ, ಚಿಂತಿಸಿ……

ನಾವು ಹೋರಾಡುವ ವಿಷಯ, ಅದರ ಸಾರ್ವಜನಿಕ ಪರಿಣಾಮ, ಪ್ರಾಮಾಣಿಕತೆ, ಬದ್ದತೆ, ನಿರಂತರತೆ, ನಿಸ್ವಾರ್ಥತೆ, ವಿಶಾಲತೆ ಮತ್ತು ಅದರ ಅಂತಿಮ ಗುರಿ ತಲುಪುವವರೆಗೂ ಎದುರಿಸಬೇಕಾದ ಕಷ್ಟ ಸುಖ ಆರೋಪ ಅವಮಾನಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು ಇತ್ಯಾದಿಗಳನ್ನು.

Advertisement

ಅನಂತರವೇ ಹೋರಾಟಗಳನ್ನು ರೂಪಿಸಿ. ಕೇವಲ ಹಣ ಅಧಿಕಾರ ಪ್ರಚಾರ ಏನಾದರೂ ಮಾಡಬೇಕೆಂಬ ಹಠ, ಹಿಡೆನ್ ಅಜೆಂಡಾ ಮುಂತಾದವುಗಳು ಹೆಚ್ಚು ಪ್ರಾಮುಖ್ಯತೆ ಪಡೆದರೆ ಹೋರಾಟಗಳು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತದೆ..

ಎರಡೂ ಕಡೆಯವರು ಸೋಲು ಗೆಲುವುಗಳ ಲೆಕ್ಕ ಹಾಕದೆ ನಮಗೆ ಅನ್ನ ನೀಡುವ ರೈತರ ಹಿತರಕ್ಷಣೆಯ ಮಾರ್ಗೋಪಾಯಗಳ ಬಗ್ಗೆ ಸದಾ ಚಿಂತಿಸೋಣ ಮತ್ತು ಕಾರ್ಯೋನ್ಮುಖರಾಗೋಣ.

# ವಿವೇಕಾನಂದ ಎಚ್‌ ಕೆ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ
ಹೊಸರುಚಿ | ಹಲಸಿನ ಬೀಜದ ಪರೋಟ
July 12, 2025
7:11 AM
by: ದಿವ್ಯ ಮಹೇಶ್
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ 148 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ
July 11, 2025
7:07 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group