ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾ…..
ಸುಮಾರು ಈಗಿರುವ 30 ವರ್ಷ ವಯಸ್ಸಿನ ಬಹುತೇಕ ಯುವಕ ಯುವತಿಯರಿಗೆ ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ವ್ಯಕ್ತಿ ಅಷ್ಟೇನು ತೀವ್ರವಾಗಿ ಕಾಡುವುದಿಲ್ಲ. ಕೆಲವರಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಒಬ್ಬ ಒಳ್ಳೆಯ ವ್ಯಕ್ತಿ ಎನ್ನುವ ಅಭಿಪ್ರಾಯವಿದ್ದರೆ ಮತ್ತೆ ಕೆಲವರಿಗೆ ಅವರ ಬಗ್ಗೆ ಸಾಕಷ್ಟು ಕೋಪವಿದೆ. ಅವರ ಕೆಲವು ನಿರ್ಧಾರಗಳಿಂದ ದೇಶ ಇಂದು ಕೋಮುದಳ್ಳುರಿಗೆ ಸಿಲುಕಿದೆ, ಇಲ್ಲದಿದ್ದರೆ ದೇಶ ಪ್ರಶಾಂತವಾಗಿ ಇರುತ್ತಿತ್ತು ಮತ್ತು ಸ್ವಾತಂತ್ರ್ಯ ಅವರೊಬ್ಬರಿಂದ ಬಂದಿಲ್ಲ ಸಾಕಷ್ಟು ಜನರ ತ್ಯಾಗ ಬಲಿದಾನಗಳು ಅದರ ಹಿಂದಿದೆ. ಕುತಂತ್ರದಿಂದ ಎಲ್ಲಾ ಹೆಸರನ್ನು ಅವರೇ ಪಡೆದರು.
ಇದರಲ್ಲಿ ಆಶ್ಚರ್ಯವೇನು ಇಲ್ಲ. ಯುವಕರು ಚೈತನ್ಯ ಶೀಲರು, ಉತ್ಸಾಹಿಗಳು, ಕನಸುಗಾರರು, ಧೈರ್ಯಶಾಲಿಗಳು, ಒಂದು ದೇಶದ ನಿಜವಾದ ಆಸ್ತಿ ಎಂಬುದು ನಿಜ. ಆದರೆ ಆಧುನಿಕ ಭಾರತದ ಯುವಕರು ವಿವೇಚನೆ, ವಿವೇಕ, ದೂರದೃಷ್ಟಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯ ದೌರ್ಬಲ್ಯಗಳಿಂದ ದೂರ ಸರಿದು ದೇಶದ ನಿಜವಾದ ಸಾಂಸ್ಕೃತಿಕ ಆತ್ಮದಿಂದ ವಿಮುಖರಾಗಿ ” ಯಾವುದೇ ರೀತಿಯಲ್ಲಿ ಬೇಕಾದರೂ ಹಣ ಮಾಡು ಅದೇ ನಿನ್ನ ಯಶಸ್ಸು ” ( Success at any cost ) ಎಂಬ ಸೂತ್ರದ ಹಿಂದೆ ಬಿದ್ದಿದ್ದಾರೆ ಎಂದು ಪರಿಸ್ಥಿತಿ ಸೂಕ್ಷ್ಮವಾಗಿ ಅವಲೋಕಿಸಿದಾಗ ಕಂಡುಬರುತ್ತಿದೆ.
ಇಂತಹ ಮನಸ್ಥಿತಿಯಲ್ಲಿ ಗಾಂಧಿ ಅರ್ಥವಾಗುವುದು ಸಾಧ್ಯವೇ ಇಲ್ಲ. ಐದು ವರ್ಷದ ಮಗುವಿಗೆ ದೇಶದ ಬಜೆಟ್ ಬಗ್ಗೆ ಪಾಠ ಮಾಡಿದರೆ ಅರ್ಥವಾಗುತ್ತದೆಯೇ, ಹಾಗೆಯೇ ಗಾಂಧಿ. ನಮ್ಮ ಯುವಕರ ಮನಸ್ಸುಗಳೇ ಸಂಕುಚಿತಗೊಂಡಿರುವಾಗ, ರಾಜಕೀಯ ವಾತಾವರಣವೇ ಕಲ್ಮಶಗಳಿಂದ ತುಂಬಿಕೊಂಡಿರುವಾಗ, ಹಣ ಅಧಿಕಾರಗಳೇ ಅವರ ಅರ್ಹತೆಯ ಮಾನದಂಡಗಳಾಗಿರುವಾಗ ಸತ್ಯ ಅಹಿಂಸೆ ಸರಳತೆ ಪ್ರಾಮಾಣಿಕತೆ ಪಾರದರ್ಶಕತೆ ಹಾಸ್ಯಾಸ್ಪದ ವಿಷಯಗಳಾಗಿವೆ.
ಹಾಗೆಂದು ಗಾಂಧಿಯವರದು ಪರಿಪೂರ್ಣ ವ್ಯಕ್ತಿತ್ವ ಎಂದು ಪರಿಗಣಿಸಬೇಕಿಲ್ಲ. ಕಾಲದ ಸಂಘರ್ಷದಲ್ಲಿ ಅವರ ಚಿಂತನೆಗಳು ಸಹ ಪ್ರಶ್ನಾರ್ಹ. ಆದರೆ ನಾಗರಿಕ ಸಮಾಜದ ಮೂಲಭೂತ ಗುಣಗಳ ವೇದಿಕೆ ಗಾಂಧಿ ಚಿಂತನೆಗಳು. ಆ ವೇದಿಕೆಯ ಮೇಲೆ ನಿಂತು ನಾವು ಪ್ರದರ್ಶನ ಮಾಡಿದರೆ ಅದೊಂದು ಅತ್ಯುತ್ತಮ ವ್ಯಕ್ತಿತ್ವ ಮತ್ತು ಅದ್ಭುತ ಸಮಾಜದ ನಿರ್ಮಾಣ ಮಾಡಬಹುದು. ಇಂದು ನಾವು ಆ ವೇದಿಕೆಯನ್ನೇ ಹಾಳು ಮಾಡಿದ್ದೇವೆ, ಅದರ ಮೇಲೆ ನಿಂತು ಪ್ರದರ್ಶನ ಮಾಡಿದರೆ ಅದನ್ನು ನೋಡುವುದೇ ಒಂದು ಹಿಂಸೆ. ಅದರಿಂದಾಗಿ ಪ್ರೇಕ್ಷಕರು ಸಹ ಅತ್ತ ಸುಳಿಯುತ್ತಿಲ್ಲ.
ಯುವಕ ಯುವತಿಯರೆ,
ಗಾಂಧಿ ಎಂಬುದು ಒಂದು ಚಿಂತನೆ, ವಿಚಾರಧಾರೆ, ಜೀವನಶೈಲಿ, ಕನ್ನಡಿ, ಬೆಳಕು. ಆ ಬೆಳಕಿನಲ್ಲಿ ನಿಂತಾಗ ನಮ್ಮಲ್ಲಿರುವ ಕತ್ತಲು ನಮಗೆ ಕಾಣುತ್ತದೆ. ಆ ಕತ್ತಲನ್ನು ಗುರುತಿಸಿ ಹೋಗಲಾಡಿಸಲು ಪ್ರಯತ್ನಿಸಲು ಆ ಬೆಳಕು ನಮಗೆ ಸಹಾಯ ಮಾಡುತ್ತದೆ. ಗಾಂಧಿಯವರು ಆತ್ಮದಲ್ಲಿ ಇದ್ದ ಸತ್ಯ ಮತ್ತು ಅಹಿಂಸೆಯ ತೀವ್ರತೆಯನ್ನು ಸಾಂಕೇತಿಕವಾಗಿ ಈ ಎರಡು ಅಂಶಗಳ ಮುಖಾಂತರ ಅರ್ಥ ಮಾಡಿಸುವ ಒಂದು ಸಣ್ಣ ಪ್ರಯತ್ನ.
ಅಹಿಂಸೆಯ ಗಾಂಧಿ:
ಗಾಂಧಿ ಒಂದು ವೇಳೆ ಈ ಪರಿಸ್ಥಿತಿಯಲ್ಲಿ ಇದ್ದಿದ್ದರೆ…
ಮಿಸ್ಟರ್ ನಾಥುರಾಂ ಘೋಡ್ಸೆ, ಅಂದು ನಿಮ್ಮ ಬಂದೂಕಿನಿಂದ ಸಿಡಿದ ಮೂರನೆಯ ಗುಂಡು ನನ್ನ ಹೃದಯವನ್ನು ಛಿದ್ರಗೊಳಿಸಿ ನನ್ನನ್ನು ನಿಸ್ತೇಜಗೊಳಿಸದೇ ಇದ್ದಿದ್ದರೆ………… ಆಗ ಮೂಡಿದ ನನ್ನ ಒಡಲಾಳದ ಭಾವನೆಗಳು ಧ್ವನಿತರಂಗಗಳಾಗಿ ಗಂಟಲಿನಿಂದ ಹೊರಬಂದಿದ್ದರೆ ನನ್ನ ಮೊದಲ ಮಾತೇ ನಿಮ್ಮನ್ನು ಅಲ್ಲಿಯೇ ಕ್ಷಮಿಸುವುದಾಗಿತ್ತು.
ದುರಾದೃಷ್ಟವಶಾತ್,
ಅವು ಹೊರಬರದೆ ಅಡಗಿ ಹೋದವು. ಅದು ನಿಮಗೆ ಮತ್ತು ಅಲ್ಲಿದ್ದವರಿಗೆ ತಲುಪಲೇ ಇಲ್ಲ. ಅದಕ್ಕಾಗಿ ನಾನು ಪಶ್ಚಾತಾಪದಿಂದ ಈಗಲೂ ನರಳುವಂತೆ ಮಾಡುತ್ತಿದೆ.
ಪ್ರೀತಿಯ ಘೋಡ್ಸೆ ...…., ನನ್ನಿಂದಾಗಿ ನೀವು ಗಲ್ಲು ಶಿಕ್ಷೆಗೆ ಗುರಿಯಾಗಿ ಪ್ರಾಣ ಕಳೆದುಕೊಂಡಿದ್ದಕ್ಕೆ 72 ವರ್ಷಗಳ ನಂತರವೂ ನನ್ನ ಹೃದಯ ಮಿಡಿಯುತ್ತಿದೆ. ನಿಮ್ಮನ್ನು ಉಳಿಸಲಾಗದಿದ್ದಕ್ಕೆ ಪರಿತಪ್ಪಿಸುತ್ತಿದ್ದೇನೆ.
ಗೆಳೆಯ ನಾಥುರಾಂ,…… ಪ್ರಕೃತಿಯ ಪ್ರತಿ ಜೀವವೂ ಅಮೂಲ್ಯ. ಅವುಗಳ ಸಾವು ಸಹಜ ಕ್ರಿಯೆಯಾಗಬೇಕೆ ಹೊರತು ಕೊಲೆ, ಹತ್ಯೆ ಅಥವಾ ಶಿಕ್ಷೆಯಾಗಬಾರದು.
ಜೀಸಸ್ ಶಿಲುಬೆಗೇರುವಾಗ ಅವರನ್ನು ಶಿಕ್ಷಿಸುತ್ತಿರುವವರನ್ನು ಕುರಿತು, ” ಓ ದೇವರೆ , ಇವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲ. ಆದ್ದರಿಂದ ಇವರನ್ನು ದಯವಿಟ್ಟು ಕ್ಷಮಿಸು ” ಎಂದರು.
ಘೋಡ್ಸೆಜಿ, ನಾನು, ನಿಮಗೂ ಅದನ್ನೇ ಪ್ರಾರ್ಥಿಸುತ್ತೇನೆ.
ಆ ದಿನಗಳು ಭಾರತದ ಇತಿಹಾಸದಲ್ಲಿ ಅತ್ಯಂತ ಘೋರ ಮತ್ತು ಯಾತನಾಮಯ ದಿನಗಳು. ಕೆಲವು ಶತಮಾನಗಳಷ್ಟು ದೀರ್ಘಕಾಲ ಒಡಹುಟ್ಟಿದ ಅಣ್ಣ ತಮ್ಮಂದಿರಂತಿದ್ದ ಹಿಂದೂ ಮುಸ್ಲೀಮರು ಬ್ರಿಟೀಷರ ಒಡೆದು ಆಳುವ ನೀತಿಗೆ ಬಲಿಯಾದರು. ಯಾವ ಸ್ವಾತಂತ್ರ್ಯಕ್ಕಾಗಿ ಇಡೀ ಭಾರತ ತನ್ನ ಶಕ್ತಿಯನ್ನು ಉಪಯೋಗಿಸಿತೊ ಅದೇ ಶಕ್ತಿ ಭಾರತವನ್ನು ಒಡೆಯಿತು. ಹೋಗಲಿ ಅದಾದರೂ ಸುಗಮವಾಗಿ ನಡೆಯಲಿಲ್ಲ. ಮಾನವ ಇತಿಹಾಸದ ಘೋರ ದುರಂತಗಳಲ್ಲಿ ಒಂದಾಗಿ ದಾಖಲಾಯಿತು. ರಕ್ತದ ಖೋಡಿಯೇ ಹರಿಯಿತು ಅದೂ ನನ್ನ ಕಣ್ಣ ಮುಂದೆ ನನ್ನ ಅರಿವಿನ ಅಂತರದಲ್ಲಿ.
ಮಗು ನಾಥುರಾಂ, ನಿಮಗೆ ಮತ್ತು ನಿಮ್ಮಂತ ಎರಡೂ ಕಡೆಯ ಜನರಿಗೆ ಹತ್ಯೆಯಾದದ್ದು ಹಿಂದೂಗಳು ಮತ್ತು ಮುಸ್ಲೀಮರು. ಆದರೆ ಸಂಪೂರ್ಣ ಬದುಕನ್ನು, ಹೋರಾಟವನ್ನು, ಅತ್ಯಂತ ಕಠೋರ ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ನನ್ನ ದೇಹ ಮತ್ತು ಮನಸ್ಸಿಗೆ ಇದು ಮಾನವ ಜನಾಂಗದ ಮೇಲೆ ನಡೆದ ಅಮಾನುಷ ಮತ್ತು ಅನಾಗರಿಕ ವರ್ತನೆಯಾಗಿ ಕಂಡಿತು.
ಒಂದು ಮಗು ಮತ್ತು ಆಕೆಯ ತಾಯಿಯನ್ನು ಬೇರೆ ಧರ್ಮ ಎಂಬ ಒಂದೇ ಕಾರಣಕ್ಕಾಗಿ ಚಾಕುವಿನಿಂದ ಹಲವಾರು ಬಾರಿ ತಿವಿದು ರಕ್ತ ಸುರಿಯುತ್ತಿದ್ದರೂ ಗೋಳಾಡುತ್ತಿದ್ದರೂ ಮತ್ತೆ ಒಂದು ದೊಡ್ಡ ಕಲ್ಲನ್ನು ಆಕೆಯ ಮೇಲೆ ಹಾಕಿ ಮಗುವಿನ ತಲೆಯನ್ನು ಕತ್ತರಿಸಿ ಕೈಯಲ್ಲಿ ಹಿಡಿದು ಸಂಭ್ರಮಿಸಿವ ಜನರನ್ನು ಅದು ಹೇಗೆ ಧರ್ಮ ರಕ್ಷಕರು ಎಂದು ಕರೆಯುವುದು.
ನಾಥುರಾಂಜಿ, ಸನಾತನ ಧರ್ಮದಲ್ಲಿ ಅಚಲ ನಂಬಿಕೆಯಿದ್ದ ನಾನು ಅದು ಹೇಗೆ ಹಿಂದೂಗಳನ್ನು ದ್ವೇಷಿಸಲು ಸಾಧ್ಯ. ನಾನು ಮುಸ್ಲೀಮರ ಪರವೂ ಇರಲಿಲ್ಲ. ಕೇವಲ ಸತ್ಯ ಮತ್ತು ಅಹಿಂಸೆಯ ಪರವಾಗಿ ಎಲ್ಲಾ ಹತ್ಯೆಗಳನ್ನು ವಿರೋಧಿಸಿದೆ. ಹಿಂಸೆಗೆ ಹಿಂಸೆ ಪರಿಹಾರವಲ್ಲ ಎಂಬ ಅಚಲ ನಂಬಿಕೆ ನನಗೆ ಈಗಲೂ ಇದೆ. ಭಾರತದ ಏಕತೆ ಮತ್ತು ಐಕ್ಯತೆ ಉಳಿದಿರುವುದೇ ಇಲ್ಲಿನ ಸತ್ಯ ಅಹಿಂಸೆ ಮತ್ತು ಶಾಂತಿಪ್ರಿಯ ಮನಸ್ಥಿತಿಯ ಜನರಿಂದ.
ಸನ್ಮಾನ್ಯ ನಾಥುರಾಂ ಘೋಡ್ಸೆಯವರೆ, ನೀವು ನನ್ನನ್ನು ಕೊಂದದ್ದು ಈ ದೇಶದ ಮತ್ತು ಹಿಂದೂ ಧರ್ಮದ ರಕ್ಷಣೆಗಾಗಿಯಲ್ಲವೇ. ಹಿಂಸೆಯಿಂದ ದೇಶದ ರಕ್ಷಣೆ ಸಾಧ್ಯವಾಗಿದೆಯೇ ?, ನನ್ನ ಸಾವು ನಿಮ್ಮ ಗುರಿ ಈಡೇರಿಸಿದೆಯೇ ?, ಹಿಂದೂಗಳ ಮಾರಣಹೋಮ ಮಾಡಿದ ಪಾಕಿಸ್ತಾನ ನೆಮ್ಮದಿಯಿಂದ ಇದೆಯೇ ?
ಈ ಎಲ್ಲಾ ಪ್ರಶ್ನೆಗಳಿಗೆ ನನ್ನ ಉತ್ತರ. ” ಓ ಭಾರತ ಮಾತೆಯೇ ಇವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲ. ಇವರನ್ನು ಕ್ಷಮಿಸು “
ಅಂದು ಒಬ್ಬ ದೇಶಭಕ್ತ ಘೋಡ್ಸೆ ನನ್ನನ್ನು ಕೊಂದರೆ ಇಂದು ಹಲವಾರು ಘೋಡ್ಸೆಗಳಿದ್ದಾರೆ. ಹಾಗಾದರೆ ಭಾರತ ಈಗ ಅತ್ಯಂತ ಸುರಕ್ಷಿತ ಎನ್ನೋಣವೇ ? ಅಹಿಂಸೆ ಮತ್ತು ಸತ್ಯದ ವಿರುದ್ಧ ಹಿಂಸೆ ಮತ್ತು ಅಸತ್ಯ ಜಯಗಳಿಸಿದೆ ಎಂದು ಭಾವಿಸೋಣವೇ ?
ಅಂದು ಸಾವಿರಾರು ಸಂಖ್ಯೆಯಲ್ಲಿದ್ದ ನನ್ನಂತವರು ಇಂದು ಅವಸಾನದ ಅಂಚಿಗೆ ಬಂದು ನಿಂತಿದ್ದಾರಲ್ಲವೇ ? ಅದನ್ನು ನಿಮ್ಮ ಆತ್ಮಾವಲೋಕನಕ್ಕೆ ಬಿಡುತ್ತಾ…
ನಾಥುರಾಂ ಸರ್, ನಿಮ್ಮ ಸಾವಿಗೆ ನಾನು ಕಾರಣವಾದುದ್ದಕ್ಕಾಗಿ ಮತ್ತೊಮ್ಮೆ ನಿಮ್ಮಲ್ಲಿ ಕ್ಷಮೆಕೋರುತ್ತಾ… ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಮೂಡಲಿ ಎಂದು ಹಾರೈಸುವ..
ನಿಮ್ಮ ಪ್ರೀತಿಯ…
ಮೋಹನ್ ದಾಸ್ ಕರಮಚಂದ್ ಗಾಂಧಿ.
ಹಾಗೆಯೇ ಮತ್ತೊಂದು….
ಸತ್ಯದ ಗಾಂಧಿ:
ಸತ್ಯದ ಶುಧ್ಧತೆ ಮತ್ತು ಪ್ರಾಮಾಣಿಕ ಸತ್ಯದ ನಿಷ್ಕಳಂಕ ವ್ಯಕ್ತಿತ್ಬವನ್ನು ಸ್ಪಷ್ಟವಾಗಿ ಸಾರುವ ಒಂದು ಸಣ್ಣ ಕಥೆ ಮಹಾತ್ಮ ಗಾಂಧಿಯವರ ದೃಷ್ಟಿಕೋನದಲ್ಲಿ.
ಎಲ್ಲೋ ಓದಿದ್ದು…..
ಒಮ್ಮೆ ಬ್ರಿಟಿಷ್ ವ್ಯಕ್ತಿಯೊಬ್ಬ ಗಾಂಧಿಯವರ ಬಳಿ ಅವರ ಸತ್ಯ ನಿಷ್ಠೆಯನ್ನು ಪ್ರಶ್ನೆ ಮಾಡುವ ಅಥವಾ ಅವಹೇಳನ ಮಾಡುವ ರೀತಿಯಲ್ಲಿ ಅವರಿಗೆ ಹೀಗೆ ಹೇಳುತ್ತಾನೆ., ” ಗಾಂಧಿಯವರೆ, ನಿಮ್ಮ ಕಠೋರ ಸತ್ಯ ಎಷ್ಟೊಂದು ಅಮಾನವೀಯ ಗೊತ್ತೆ. ಒಮ್ಮೆ ಒಬ್ಬ ಬೇಟೆಗಾರ ಒಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬರುತ್ತಾನೆ. ಅವನಿಂದ ತಪ್ಪಿಸಿಕೊಂಡು ಓಡುತ್ತಾ ಬರುವ ಜಿಂಕೆ ದಾರಿಯಲ್ಲಿ ಒಂದು ಮರದ ಕೆಳಗೆ ತಪಸ್ಸು ಮಾಡುತ್ತಾ ಕುಳಿತಿದ್ದ ಮಹಾನ್ ಸತ್ಯಸಂಧ ಮುನಿಯ ಬಳಿ, ” ಅಯ್ಯಾ ಋಷಿ , ಬೇಟೆಗಾರನೊಬ್ಬ ನನ್ನನ್ನು ಕೊಲ್ಲಲು ಬರುತ್ತಿದ್ದಾನೆ. ದಯವಿಟ್ಟು ರಕ್ಷಿಸು. ತಪ್ಪಿಸಿಕೊಳ್ಳಲು ಜಾಗ ತೋರಿಸು ” ಎಂದು ಕೇಳಿಕೊಳ್ಳುತ್ತದೆ.
ಆಗ ಋಷಿ ‘ ಆಯಿತು. ಇಲ್ಲೇ ನನ್ನ ಹಿಂದೆ ಇರುವ ಆ ಗುಹೆಯಲ್ಲಿ ಅಡಗಿಕೋ’ ಎಂದು ಹೇಳುತ್ತಾನೆ.
ಸ್ವಲ್ಪ ಹೊತ್ತಿನಲ್ಲಿ ಜಿಂಕೆಯನ್ನು ಹುಡುಕುತ್ತಾ ಅದೇ ದಾರಿಯಲ್ಲಿ ಬಂದ ಬೇಟೆಗಾರ ಅಲ್ಲಿದ್ದ ಅದೇ ಮುನಿಯನ್ನು ” ಋಷಿವರ್ಯ ನಾನೊಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದೆ ನೀವೇನಾದರೂ ನೋಡಿದಿರೆ ”
ಅದಕ್ಕೆ ಎಂದೂ ಸುಳ್ಳಾಡದ ಆ ಮುನಿ ‘ ಹೌದು ನೋಡಿದೆ ‘ ಎನ್ನುತ್ತಾನೆ. ಬೇಟೆಗಾರ ‘ ಹಾಗಾದರೆ ಎಲ್ಲಿ ಹೋಯಿತು’
ಆಗ ಮುನಿ ‘ ನನ್ನನ್ನು ರಕ್ಷಣೆಗಾಗಿ ಕೇಳಿಕೊಂಡಿತು. ನಾನೇ ಹಿಂದೆ ಇರುವ ಗುಹೆಯಲ್ಲಿ ಬಚ್ಚಿಟ್ಟುಕೊಳ್ಳಲು ಹೇಳಿದ್ದೇನೆ’
ಅದನ್ನು ಕೇಳಿದ ಬೇಟೆಗಾರ ಗುಹೆಗೆ ಹೋಗಿ ಜಿಂಕೆಯನ್ನು ಕೊಂದು ಹೊತ್ತೊಯ್ಯುತ್ತಾನೆ.”
ಈ ಕಥೆಯನ್ನು ಗಾಂಧಿಗೆ ಹೇಳಿದ ಆ ಬ್ರಿಟಿಷ್ ” ನೋಡಿದಿರಾ ಗಾಂಧಿ, ಸಾಮಾನ್ಯ ಸಮಯ ಪ್ರಜ್ಞೆ ಇಲ್ಲದ ಮುನಿ ಒಂದು ಸಣ್ಣ ಸುಳ್ಳು ಹೇಳಿದ್ದರೆ ಆ ಅಮಾಯಕ ಜಿಂಕೆಯ ಪ್ರಾಣ ಉಳಿಸಬಹುದಿತ್ತು. ನಿಮ್ಮ ಆ ಸತ್ಯ ಕೂಡ ಕೆಲವೊಮ್ಮೆ ಎಷ್ಟೊಂದು ಕಠೋರ ”
ಅದಕ್ಕೆ ಗಾಂಧಿಯ ಉತ್ತರ,
” ಗೆಳೆಯ, ನಿಮ್ಮ ಕಥೆಯಲ್ಲಿ ತಪ್ಪು ಸತ್ಯದ್ದಲ್ಲ. ಅದು ಋಷಿಮುನಿಯದು. ಒಂದು ವೇಳೆ ನಾನು ಋಷಿಯ ಜಾಗದಲ್ಲಿದ್ದಿದ್ದರೆ ಬೇಟೆಗಾರ ಬಂದು ಕೇಳಿದಾಗ
‘ ಹೌದು ಜಿಂಕೆಯನ್ನು ನಾನೇ ಬಚ್ಚಿಟ್ಟಿದ್ದೇನೆ, ಅದು ಇರುವ ಜಾಗ ತಿಳಿದಿದೆ. ಆದರೆ ಅದನ್ನು ನೀನು ಕೊಲ್ಲುವುದರಿಂದ ಅದು ಎಲ್ಲಿದೆ ಎಂದು ಹೇಳುವುದಿಲ್ಲ.ಅದಕ್ಕಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದ ಎಂದೇ ಹೇಳುತ್ತೇನೆ. ಸಮಸ್ಯೆ ಇರುವುದು ಸತ್ಯದ ಆಳದಲ್ಲಿ ಅಲ್ಲ. ಅದರ ಆಚರಣೆಗಳ ಪ್ರಾಮಾಣಿಕತೆಯಲ್ಲಿ.” ಎನ್ನುತ್ತಾರೆ.
ಮುಂದಿನ ವಿವರಣೆ ಬೇಕಿಲ್ಲ ಅಲ್ಲವೇ ?
ಸತ್ಯದ ದೈವಿಕತೆಯ ಸಾಕ್ಷಾತ್ಕಾರವೆಂದರೆ ಇದೇ….
ಹಾಗೆಯೇ ಒಂದು ಬೃಹತ್ ದೇಶದ ಪ್ರಧಾನ ಮಂತ್ರಿಯಾಗಿಯೂ ಅತ್ಯಂತ ಸರಳವಾಗಿ ಮತ್ತು ಪ್ರಾಮಾಣಿಕವಾಗಿ ಬದುಕಬಹುದು ಎಂದು ದೇಶಕ್ಕೆ ಮಾದರಿಯಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರನ್ನು ಸಹ ಈ ಸಂಧರ್ಭದಲ್ಲಿ ನೆನಪಿಸಿಕೊಳ್ಳುತ್ತಾ.
ಮಾತಿಗಿಂತ – ಬರಹಕ್ಕಿಂತ ಬದುಕಿನ ರೀತಿಯೇ ಮುಖ್ಯ.
ಮೌಲ್ಯಗಳ ಪ್ರವಚನಕ್ಕಿಂತ ಅಳವಡಿಕೆಯೇ ನಮ್ಮ ಗುರಿಯಾಗಲಿ ಎಂಬ ಆಶಯದೊಂದಿಗೆ….
# ವಿವೇಕಾನಂದ ಎಚ್ ಕೆ
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…