ಹೋರಾಡಿ ಇಲ್ಲ ನಾಶವಾಗಿ…. ಮುಕ್ತ ಮುಕ್ತ ಮುಕ್ತ…. ಎಲ್ಲವೂ ಮುಕ್ತ….
ಕೃಷಿ ಭೂಮಿ, ಕೃಷಿ ಮಾರುಕಟ್ಟೆ, ಕಾರ್ಮಿಕ ಕಾನೂನುಗಳು, ಡಬ್ಬಿಂಗ್ ಸಿನಿಮಾ ಮತ್ತು ಧಾರವಾಹಿಗಳು ಮುಂತಾದ ಎಲ್ಲವೂ ಮುಕ್ತ….
ರೈಲು ರಕ್ಷಣೆ ಜೀವವಿಮೆ ಮಾಧ್ಯಮಗಳು ಸಹ ಮುಕ್ತ…..
ಉದಾರತವಾದದ ಅಂತಿಮ ಹಂತಕ್ಕೆ ಭಾರತದ ಆರ್ಥಿಕ ನೀತಿಗಳು…
ಸ್ಪರ್ಧೆಗೆ ಎಲ್ಲರೂ ಸಿದ್ದರಾಗಿ, ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ …….
ನೀವು ರೈತರೇ ಆಗಿರಬಹುದು, ಕೂಲಿ ಕಾರ್ಮಿಕರೇ ಆಗಿರಬಹುದು, ಮಹಿಳೆಯರೇ ಆಗಿರಬಹುದು, ತುಳಿತಕ್ಕೆ ಒಳಗಾದ ಸಮುದಾಯದವರೇ ಆಗಿರಬಹುದು ಇನ್ನು ನಿಮಗೆ ವಿನಾಯಿತಿಗಳು ಕಷ್ಟ……
ಪ್ರಜಾಪ್ರಭುತ್ವ ವ್ಯವಸ್ಥೆಯ ರೀತಿಯಲ್ಲಿ ನಾವೇ ಚುನಾಯಿಸಿದ ಬಹುಮತದ ಸರ್ಕಾರಗಳ ನಿರ್ಧಾರವಿದು….
ಪ್ರತಿಭಟನೆ ಅಥವಾ ವಿರೋಧ ದಾಖಲಿಸಬಹುದು ಅಷ್ಟೆ. ಹೆಚ್ಚಿನ ಬದಲಾವಣೆ ತುಂಬಾ ಕಷ್ಟ……
ರೈತ ನಾಯಕರು, ಪ್ರಗತಿಪರ ಚಿಂತಕರು, ಹೋರಾಟಗಾರರು ಇದನ್ನು ವಿರೋಧಿಸಿದರೆ ಕಾರ್ಪೊರೇಟ್ ಕುಳಗಳು ಮತ್ತು ಆಡಳಿತಗಾರರು ಇದನ್ನು ಸ್ವಾಗತಿಸಿದ್ದಾರೆ. ಅವರವರ ಅಭಿವೃದ್ಧಿಯ ಮಾನದಂಡಗಳ ಆಧಾರದ ಮೇಲೆ……
ಭಾರತೀಯ ಸಮಾಜದ ವಿಶ್ವ ಮಟ್ಟದ ಮುಕ್ತ ಮಾರುಕಟ್ಟೆಗೆ ಈಗಾಗಲೇ ತೆರೆದುಕೊಂಡಿದೆ. ಈಗ ಆಂತರಿಕವಾಗಿಯೂ ಬಹುತೇಕ ಮುಕ್ತತೆಗೆ ಸ್ವಾಗತ ಕೋರುತ್ತಿದೆ…….
ಪರಿಣಾಮ ಮತ್ತು ಫಲಿತಾಂಶ….. ಆ ಬಗ್ಗೆ ಯೋಚಿಸುವ ಮೊದಲು ಇದನ್ನೂ ಸ್ವಲ್ಪ ಯೋಚಿಸಿ……
ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮತದಾರರು ಬುದ್ದಿವಂತರು ಮತ್ತು ಪ್ರಾಮಾಣಿಕರು ಆಗಿರಬೇಕು. ಆಗ ಒಳ್ಳೆಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲದಿದ್ದರೆ ಎಂದಿನಂತೆ ಬೇರೆ ರೀತಿಯ ಆಸೆ ಅಮಿಷಗಳಿಗೆ ಒಳಗಾಗಿ ಅನರ್ಹರನ್ನು ಅಧಿಕಾರಕ್ಕೆ ಏರಿಸುತ್ತಾರೆ.
ಹಾಗೆಯೇ ಮುಕ್ತ ವ್ಯವಸ್ಥೆ ಯಶಸ್ವಿಯಾಗಲು ಸ್ವಲ್ಪ ಹೆಚ್ಚು ಕಡಿಮೆ ಸಮ ಬಲದವರ ನಡುವೆ ಸ್ಪರ್ಧೆ ಏರ್ಪಡಬೇಕು. ತೀರಾ ಪ್ರಬಲರು ಮತ್ತು ದುರ್ಬಲರ ನಡುವೆ ಸ್ಪರ್ಧೆ ಏಕಮುಖವಾಗಿರುತ್ತದೆ ಅಷ್ಟೇ ಅಲ್ಲ ದುರ್ಬಲರು ಬಹುಬೇಗ ಶೋಷಣೆಗೆ ಒಳಗಾಗುತ್ತಾರೆ. ಅದು ಅನಿವಾರ್ಯ ಕೂಡ……..
ಭಾರತದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ವಾಸ್ತವದಲ್ಲಿ ಸ್ಪರ್ಧೆಗೆ ಸರಿಯಾದ ಅಖಾಡವಾಗಿದೆಯೇ ಎಂಬುದು ಯೋಚಿಸಬೇಕಿದೆ……
ಕೃಷಿ ಭೂಮಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕೊಳ್ಳಲು ನೀಡಿದ ಅನುಮತಿ ಮೇಲುನೋಟಕ್ಕೆ ನಿಜಕ್ಕೂ ಉತ್ತಮ ನಿರ್ಧಾರ. ದೇಶದ ನಾಗರಿಕರಿಗೆ ನೀಡಿದ ಒಂದು ಸ್ವಾತಂತ್ರ್ಯ. ಯಾರು ಬೇಕಾದರೂ ಕೃಷಿ ಭೂಮಿ ಕೊಂಡು ವ್ಯವಸಾಯ ಮಾಡಲಿ ಬಿಡಿ. ತೊಂದರೆ ಏನು. ಕೃಷಿ ಏನು ರೈತರ ಸ್ವಂತ ಆಸ್ತಿಯೇ. ತಾಖತ್ತಿದ್ದವರು ಮಾಡಲಿ. ಇಲ್ಲದಿದ್ದವರು ಹಾಳಾಗಲಿ ಅಥವಾ ಬೇರೆ ಕೆಲಸ ನೋಡಿಕೊಳ್ಳಲಿ……
ರೈತರ ಪರ ಅಪಾರ ಕಾಳಜಿ ಇರುವ ಪ್ರಧಾನ ಮಂತ್ರಿ, ಮುಖ್ಯಮಂತ್ರಿ , ಕಂದಾಯ ಮಂತ್ರಿ , ಕೃಷಿ ಮಂತ್ರಿ ಏನು ದಡ್ಡರೇ, ತುಂಬಾ ಯೋಜನೆ ಮಾಡಿಯೇ ಈ ತಿದ್ದುಪಡಿ ಜಾರಿಗೆ ತಂದಿದ್ದಾರೆ……
ಇದನ್ನು ಸ್ವಾಗತಿಸೋಣವೇ ?
ಒಂದು ನಿಮಿಷ ಸ್ವಲ್ಪ ಯೋಚಿಸಿ…..
ಸಾಪ್ಟ್ ವೇರ್, ಕಾರ್ಪೊರೇಟ್, ಗಣಿ, ಶಿಕ್ಷಣ, ಲಿಕ್ಕರ್, ರಿಯಲ್ ಎಸ್ಟೇಟ್, ರಾಜಕೀಯ, ವೈದ್ಯಕೀಯ ಮುಂತಾದ ಕ್ಷೇತ್ರಗಳ ವ್ಯವಹಾರ ನಿಪುಣರು ( ಮಾಫಿಯಾಗಳು ) ಹೇಗೆ ತಮ್ಮ ತಮ್ಮ ಕ್ಷೇತ್ರಗಳನ್ನು ಹಣದ ದಾಹದಿಂದ ಕೆಟ್ಟ ಸ್ಪರ್ಧೆಗೆ ಒಡ್ಡಿ ಅದನ್ನು ವ್ಯಾಪಾರೀಕರಣ ಮಾಡಿ ಸಾಮಾಜಿಕ ಮೌಲ್ಯಗಳನ್ನೇ ಹಾಸ್ಯಾಸ್ಪದವಾಗಿ ಮಾಡಿದ್ದಾರೆ. ಹೋಗಲಿ ಜನರಿಗಾದರೂ ಇದರಿಂದ ಒಳ್ಳೆಯದಾಗಿದೆಯೇ. ಭಾರತದ ಮಧ್ಯಮ ವರ್ಗದ ಜನರ ಇಡೀ ಜೀವನದ ಸಂಪಾದನೆ ಮಕ್ಕಳ ಶಿಕ್ಷಣ ಮತ್ತು ಹಿರಿಯರ ಆರೋಗ್ಯಕ್ಕೇ ಮೀಸಲಿಡಬೇಕಾಗಿದೆ. ಅಷ್ಟು ದುಬಾರಿಯಾಗಿದೆ ಮತ್ತು ಅದೇ ಕಾರಣದಿಂದಾಗಿ ಇವು ಸಾಮಾನ್ಯ ಜನರನ್ನು ವಂಚಿಸುತ್ತಿವೆ. ಮಾನವೀಯತೆ ಮರೆತು ಹಣದ ಹಿಂದೆ ಬಿದ್ದಿವೆ. ಬಹುಶಃ ದೀರ್ಘಕಾಲದಲ್ಲಿ ಕೃಷಿಗೂ ಈ ಪರಿಸ್ಥಿತಿ ಬರದಿರುತ್ತದೆಯೇ……
ನಗರದ ವಿದ್ಯಾವಂತ ಜನ ಕೃಷಿ ಕ್ಷೇತ್ರ ಪ್ರವೇಶಿಸಿ ಕೃಷಿಯನ್ನು ಒಂದು ಉದ್ಯಮದ ರೀತಿ ಬೆಳೆಸುತ್ತಾರೆ ಎಂದು ಕೆಲವರ ಆಶಾ ಭಾವನೆ. ಅದರಿಂದ ರೈತರು ಉದ್ದಾರವಾಗುತ್ತಾರೆ ಎಂಬ ಕಲ್ಪನೆ ಇದೆ…..
ನನ್ನಲ್ಲಂತೂ ಇದು ನಗು ಉಕ್ಕಿಸುತ್ತಿದೆ. ವ್ಯವಸಾಯ ಅಷ್ಟು ಸುಲಭ ಅಲ್ಲಾರೀ, ಅದರಲ್ಲಿರುವ ಸವಾಲುಗಳು ತುಂಬಾ ಕಠಿಣ. ಪ್ರಕೃತಿಯ ಮೇಲಿನ ಅವಲಂಬನೆ ಅಥವಾ ನೀರಾವರಿ ಸೌಕರ್ಯಗಳ ಕೊರತೆ, ವಿದ್ಯುತ್ ಅಭಾವ, ಸಮಯಕ್ಕೆ ಸರಿಯಾಗಿ ಕೆಲಸಗಾರರ ಅಲಭ್ಯತೆ, ಕ್ರಿಮಿ ಕೀಟಗಳ ಹಾವಳಿ, ಕಳಪೆ ಬೀಜಗಳ ಸಾಧ್ಯತೆ, ಬರಗಾಲ ಅಥವಾ ಪ್ರವಾಹ, ಎಲ್ಲವನ್ನೂ ಮೀರಿ ಫಸಲು ಉತ್ತಮವಾಗಿ ಬಂದರೆ ಅದರ ಮಾರಾಟದ ಕಷ್ಟ, ಬೆಲೆಗಳು ದಿಢೀರನೆ ಇಳಿದರೆ ಆಕಾಶವೇ ಕಳಚಿ ಬಿದ್ದಂತ ಅನುಭವ, ಮುಂದಿನ ಬೆಳೆಯವರೆಗೆ ಮತ್ತೆ ಕಾಯುವುದು, ಆಗ ಎದುರಿಸುವ ಹಣದ ಕೊರತೆ ಒಂದೇ ಎರಡೇ ಅಬ್ಬಾ….
ಎಲ್ಲೋ ಕೆಲವೇ ಜನ ತುಂಬಾ ಶ್ರದ್ಧೆಯಿಂದ ಮತ್ತು ಎಲ್ಲಾ ಸವಾಲುಗಳನ್ನು ತಾಳ್ಮೆಯಿಂದ ಎದುರಿಸಬಹುದು. ಉಳಿದವರಿಗೆ ಇದು ಅಸಾಧ್ಯ. ಅದರಲ್ಲೂ ನಗರ ಜೀವನದ ಶೋಕಿಗೆ ಬಿದ್ದವರು ಮತ್ತೆ ಬೆವರು ಸುರಿಸಲು ಅಥವಾ ಕನಿಷ್ಠ ಬಿಸಿಲಿನಲ್ಲಿ ನಿಂತು ರೈತ ಕಾರ್ಮಿಕರಿಂದ ಕೆಲಸ ಮಾಡಿಸಲು ಅಸಮರ್ಥರಾಗಿರುತ್ತಾರೆ. ಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ ಮತ್ತು ಬೇಗ ಲಾಭ ನಿರೀಕ್ಷಿಸುತ್ತಾರೆ…….
ಮೂಲತಃ ಬಹುತೇಕ ಈ ನಗರದ ಜನ ರೈತರ ಮಕ್ಜಳೇ. ಅಲ್ಲಿ ಬದುಕು ಕಷ್ಟ ಎಂದೇ ಶಾಲೆ ಕಲಿತು ನಗರಕ್ಕೆ ಬಂದು ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದಾರೆ. ಕೃಷಿಯಲ್ಲಿ ಆ ರೀತಿಯ ನಿರ್ಧಿಷ್ಟ ಆದಾಯ ಸಿಗುವುದಿಲ್ಲ……
ನಗರದ ಜನ ಲಾಭದ ಆಸೆಯಿಂದ ಮತ್ತು ಅತ್ಯುತ್ಸಾಹದಿಂದ ಪ್ರಾರಂಭದಲ್ಲಿ ಸ್ವಲ್ಪ ಹೆಚ್ಚಿನ ಹಣ ಕೊಟ್ಟು ಕೃಷಿ ಭೂಮಿ ಕೊಳ್ಳುತ್ತಾರೆ. ರೈತರ ಜಮೀನಿಗು ಸ್ವಲ್ಪ ಲಾಭ ಬರಬಹುದು. ಆದರೆ ಬಹುಬೇಗ ನಿರಾಶರಾಗುವ ಸಾಧ್ಯತೆಯೇ ಹೆಚ್ಚು. ಕೊನೆಗೆ ರೈತರ ಬಳಿ ಜಮೀನು ಇರುವುದಿಲ್ಲ, ಜಮೀನಿನ ಮಾಲೀಕರ ಬಳಿ ವ್ಯವಸಾಯ ಮಾಡಲು ಆಸಕ್ತಿ ಇರುವುದಿಲ್ಲ. ಆಹಾರದ ಕೊರತೆ ಎದುರಾಗಬಹುದು……
ಇನ್ನು ಕಾರ್ಪೊರೇಟ್ ಸಂಸ್ಥೆಗಳ ವ್ಯವಹಾರ ರೀತಿ ತುಂಬಾ ಸ್ಪಷ್ಟ. ಪ್ರಾರಂಭದಲ್ಲಿ ಅತ್ಯಂತ ರೈತ ಸ್ನೇಹಿ, ಗ್ರಾಹಕ ಸ್ನೇಹಿಯಂತೆ ವರ್ತಿಸುತ್ತಾರೆ. ನಿಧಾನವಾಗಿ ಅದರ ಮೇಲೆ ಹಿಡಿತ ಸಾಧಿಸಿ, ತಾವೇ ಎಲ್ಲವನ್ನೂ ಒಳಗೊಂಡ ಬೃಹತ್ ಮಾರುಕಟ್ಟೆ ನಿರ್ಮಿಸಿ ಕೊನೆಗೆ ಅವರದೇ ನೀತಿ ನಿಯಮಗಳ ಒಳಗೆ ಸಾಮಾನ್ಯರನ್ನು ಬಂಧಿಸಿ ಜನರೇ ಸ್ವತಃ ಶೋಷಣೆಗೆ ಒಳಗಾಗುವಂತೆ ಕುರಿ ಮಂಧೆ ನಿರ್ಮಿಸುತ್ತಾರೆ. ಆಮೇಲೆ ಕುರಿಗಳು ಸಾರ್ ಕುರಿಗಳು, ನಾವು ನೀವು ಕುರಿಗಳು…….
ಹೇಗೋ ರೈತರು ಹಿಂದಿನಿಂದಲೂ ಕಷ್ಟ ಪಟ್ಟು ದುಡಿಯುತ್ತಿದ್ದಾರೆ. ಅವರಿಗೆ ಹೆಚ್ಚಿನ ಪ್ರೋತ್ಸಾಹ ಕೊಡೋಣ. ಅವರನ್ನು ಬಲಶಾಲಿಗಳಾಗಿ ಮಾಡೋಣ, ಅವರ ಅನುಭವದ ಲಾಭ ಪಡೆಯೋಣ….
ಭಾರತಕ್ಕೆ ಇನ್ನೂ ಸ್ವಲ್ಪ ದಿನ ಜನ ಜಾಗೃತವಾಗಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಬರುವವರೆಗೆ ಕೆಲವು ಕ್ಷೇತ್ರಗಳ ಮೇಲೆ ಸರ್ಕಾರದ ನಿಯಂತ್ರಣ ಬೇಕಾಗುತ್ತದೆ. ರೈತರು, ಮಹಿಳೆಯರು, ಗ್ರಾಮೀಣ ಪ್ರದೇಶದವರು ಮತ್ತು ಎಲ್ಲಾ ವರ್ಗದ ಬಡವರ ಪರವಾಗಿ ಆಡಳಿತಗಾರರು ಸ್ವಲ್ಪ ಸಹಾನುಭೂತಿ ಹೊಂದಿರಬೇಕು. ಮುಕ್ತ ವ್ಯವಸ್ಥೆ ಎದುರಿಸುವ ಸಾಮರ್ಥ್ಯ ವೃದ್ದಿಸಬೇಕು……..
ವೈಯಕ್ತಿಕವಾಗಿ, ನನ್ನ ದೃಷ್ಟಿಯಲ್ಲಿ ಭಾರತದ ಶೇಕಡಾ 60% ಕ್ಕಿಂತ ಹೆಚ್ಚು ಜನ ಸಾಮಾನ್ಯ ಜ್ಞಾನಕ್ಕಿಂತ ಕೆಳಮಟ್ಟದ ತಿಳಿವಳಿಕೆ ಉಳ್ಳವರಾಗಿದ್ದಾರೆ. ಬಡತನ ಅಜ್ಞಾನ ಮೂಡನಂಬಿಕೆಯ ಕಾರಣದಿಂದಾಗಿ ಅವರ ವಿವೇಚನಾ ಶಕ್ತಿ ಮುಕ್ತವಾಗಿ ಬೆಳೆದಿಲ್ಲ. ಒತ್ತಡದ ಮತ್ತು ವೇಗದ ಬದುಕಿನ ಕಾರಣದಿಂದ ಬೇಗ ತನ್ನ ವೈಯಕ್ತಿಕ ಲಾಭದ ವಿಷಯಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ. ಅವರನ್ನು ಬೇಗ ವಿಭಜಿಸಬಹುದು ಮತ್ತು ಶೋಷಿಸಬಹುದು.
ಆದ್ದರಿಂದ ಮುಕ್ತ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುವ ಮುನ್ನ ನಮ್ಮ ಸುತ್ತಮುತ್ತಲಿನ ಜನರ ಪರಿಸ್ಥಿತಿಯನ್ನು ಮಾನವೀಯ ದೃಷ್ಟಿಯಿಂದ ಪರಶೀಲಿಸಿ. ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಸಮನ್ವಯತೆ ಎಷ್ಟು ಮುಖ್ಯ ಯೋಚಿಸಿ.
ನಮಗೆ ಲಾಭವಾಗುವುದು ಮಾತ್ರ ನ್ಯಾಯವಲ್ಲ ಅದು ಅನ್ಯಾಯವೂ ಆಗಿರಬಹುದು………