ಈ ಪ್ರಪಂಚದಲ್ಲಿ, ಅದರಲ್ಲೂ ನಮ್ಮ ಆಕಾಶಕಾಯದಲ್ಲಿ ಅದೇನೇನು ಕೌತುಕಗಳಿವೆ ಅನ್ನೋದನ್ನು ಈಗಾಗಲೇ ನಮ್ಮ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆದರೆ ಅದೊಂದು ಮುಗಿಯದ ಯೋಜನೆ, ಬಗೆದಷ್ಟು ಮತ್ತಷ್ಟು ವಿಶೇಷಗಳು ಸಿಗುತ್ತಲೇ ಹೋಗುತ್ತದೆ. ವಿಜ್ಞಾನಿಗಳಿಗೆ ಅಲ್ಲಿನ ಕೌತುಕಗಳನ್ನು ಮತ್ತಷ್ಟು ತಿಳಿಯುವ ಉತ್ಸಾಹ. ಇದೀಗ ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್‌ನಲ್ಲಿ ವ್ಯೋಮಿತ್ರ #Vyommitra ಹೆಸರಿನ ಮಹಿಳಾ ರೋಬೋಟ್ #FemaleRobot ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಈ ಬಾಹ್ಯಾಕಾಶ ಯಾನದ ಮೊದಲ ಪ್ರಯೋಗವನ್ನು ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಂತರದ ಕಾರ್ಯಾಚರಣೆಗಳಲ್ಲಿ ಮಹಿಳಾ ರೋಬೋಟ್ ‘ವ್ಯೋಮಿತ್ರ’ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದೆ ಎಂದು ತಿಳಿಸಿದರು. ಮಹಿಳಾ ರೋಬೋಟ್ ಎಲ್ಲಾ ಮಾನವ ಚಟುವಟಿಕೆಗಳನ್ನು ಅನುಕರಿಸಲಿದೆ. ಈ ಪ್ರಯೋಗ ಯಶಸ್ವಿಯಾದ ಬಳಿಕ ನಾವು ಈ ಯೋಜನೆಯಲ್ಲಿ ಮುಂದುವರಿಯಬಹುದು ಎಂದು ಹೇಳಿದರು. 2019 ರವರೆಗೆ ಮುಚ್ಚಿದ್ದ ಶ್ರೀಹರಿಕೋಟಾದ ಗೇಟ್‌ಗಳನ್ನು ಈಗ ತೆರೆಯಲಾಗಿದೆ. ಈಗ ಮಾಧ್ಯಮಗಳನ್ನು ಮತ್ತು ಶಾಲಾ ಮಕ್ಕಳನ್ನು ಆಹ್ವಾನಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಅವರು ಬಾಹ್ಯಾಕಾಶ ಕ್ಷೇತ್ರವನ್ನು ಎಲ್ಲರಿಗೂ ಈಗ ತೆರೆದಿದ್ದಾರೆ ಎಂದರು.
ಗಗನಯಾನ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು ಸುರಕ್ಷಿತವಾಗಿ ಭೂಮಿಗೆ ಮರಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ#ISRO ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ನಿಗದಿ ಪ್ರಕಾರ 2024ಕ್ಕೆ ಮೂವರು ಗಗನಯಾನಿಗಳನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು. ಆದರೆ ಕೋವಿಡ್‌ನಿಂದಾಗಿ ಈ ಯೋಜನೆ ವಿಳಂಬವಾಗಿದೆ. ಗಗನಯಾನ ಮಿಷನ್‌ನಲ್ಲಿ ಮೂವರು ಗಗನಯಾನಿಗಳನ್ನು ಮೂರು ದಿನ 400 ಕಿ.ಮೀ ಎತ್ತರದ ಕಕ್ಷೆಗೆ ಕಳುಹಿಸಿ ನಂತರ ಸಮುದ್ರದ ನೀರಿನ ಮೇಲೆ ಇಳಿಸಲಾಗುತ್ತದೆ.