ಅನುಕ್ರಮ

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

Share

ಮುಂಜಾನೆ ಬೇಗ ಏಳುವುದೆಂದರೆ ಅದೆಷ್ಟು ಕಷ್ಟ! ಬೆಚ್ಚನೆಯ ಹೊದಿಕೆಯನ್ನು ಬದಿಗಿಟ್ಟು ಹೊರಗಿನ ಚಳಿಗೆ ತೆರೆದುಕೊಳ್ಳುವುದೆಂದರೆ ಅದೊಂದು ಸಾಧನೆಯೇ. ಅದಕ್ಕೂ ಒಂದು ಹಟ ಬೇಕು. ಹಟವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಬೆಳಗ್ಗೆ ಸೂರ್ಯೋದಯಕ್ಕೆ ಮೊದಲೇ ಏಳುವ ಹಟ ವ್ಯರ್ಥವಾಗುವುದಿಲ್ಲ!

Advertisement

ಮುಖ್ಯವಾದ ಲಾಭವೆಂದರೆ ಮುಂಜಾವಿನ ಶಕ್ತಿಯುತವಾದ ಪರಿಸರ ನಮ್ಮ ಶರೀರವನ್ನು ಆವರಿಸಿ ಸತ್ವ ತುಂಬುತ್ತದೆ. ರಾತ್ರಿಯಿಡೀ ಅಂಗಾರಾಮ್ಲವನ್ನು ಆಮ್ಲಜನಕವಾಗಿ ಪರಿವರ್ತಿಸುವ ವೃಕ್ಷಗಳು ಪರಿಸರವನ್ನು ಶುದ್ಧಗೊಳಿಸಿರುತ್ತವೆ. ಅದಿನ್ನೂ ಶುದ್ಧ ಸ್ಥಿತಿಯಲ್ಲಿರುವಾಗಲೇ ನಮಗೆ ಲಭ್ಯವಾಗುತ್ತದೆ. ದಿನವು ಏರು ಹೊತ್ತಿಗೆ ಸಾಗಿದಂತೆ ವಾತಾವರಣವು ಕಲುಷಿತಗೊಳ್ಳುತ್ತದೆ. ಅದು ರಾತ್ರಿ ಕಾಲದಲ್ಲಿ ಮತ್ತಷ್ಟು ಘನಿಷ್ಟವಾಗುತ್ತದೆ. ತಡವಾಗಿ ನಿದ್ರಿಸುವವರಿಗೆ ಹೊರಗಿನ ಈ ಕಲುಷಿತ ಗಾಳಿಯ ಸೇವನೆ ಮತ್ತಷ್ಟು ಹಾನಿಕರವಾಗುತ್ತದೆ. ಅವರಿಗೆ ಹೊರಗಿನ ಶುಭ್ರ ಗಾಳಿಯ ಸ್ಪರ್ಶ ಸಿಗಬೇಕಿದ್ದರೆ ಅವರು ಎದ್ದು ಹೊರಗೆ ಬರಬೇಕಾಗುತ್ತದೆ. ತಡವಾಗಿ ನಿದ್ರಿಸುವವರಿಗೆ ಅದೇ ಕಷ್ಟವಾಗುವುದು. ಹಾಗಾಗಿ early to bed and early to rise ಎಂಬ ಮುಂಜಾವಿನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪ್ರಯತ್ನದಲ್ಲಿ ದಿನದ ಹೆಚ್ಚಿನ ಸಮಯವು ಬೇಗನೇ ಎದ್ದವರಿಗೆ ಲಭ್ಯವಾಗುತ್ತದೆ ಎಂಬುದು ಗಮನೀಯ. ಅರ್ಥಾತ್ ಏಳು ಗಂಟೆಗೆ ಏಳುವವರಿಗಿಂತ ಐದು ಗಂಟೆಗೆ ಎದ್ದವರಿಗೆ ಎರಡು ಗಂಟೆ ಹಗಲು ಹೆಚ್ಚು ಸಿಗುತ್ತದೆ. ಅದೇನೂ ಸಣ್ಣ ಸಮಯವಲ್ಲ! ಅದೆಷ್ಟೋ ಕೆಲಸಗಳನ್ನು ಮುಗಿಸಬಹುದಾದ ಸಶಕ್ತ ಸಮಯ ಅದು.

ಹತ್ತಿರದಲ್ಲಿ ಒಂದಿಷ್ಟು ಕಾಡು ಮತ್ತು ಕುರುಚಲು ಗಿಡಗಳಿದ್ದರೆ ಐದು ಗಂಟೆಯಿಂದ ಆರು ಗಂಟೆಯ ತನಕ ಹಕ್ಕಿಗಳ ವೈವಿಧ್ಯಮಯ ಹಾಡುಗಳನ್ನು ಕೇಳಬಹುದು. ಅವು ಕಿವಿಗಿಂಪು ಮತ್ತು ಎದೆಗೆ ಕಂಪು ನೀಡುತ್ತವೆ. ಆ ಸಮಯವೇ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳಿಗೆ ಸೂಕ್ತವಾದದ್ದು. ಅದು ನಮ್ಮ ಪ್ರಾಣವನ್ನು, ಆರೋಗ್ಯವನ್ನು ದೃಢಗೊಳಿಸುವಂತಹದ್ದು. ಆದರೆ ಈ ಸಂಗ್ರಹದ ಕುರಿತು ಈಗ ನಮ್ಮ ಹಿಂದೂ ಯುವ ಜನರು ನಿರ್ಲಕ್ಷ ತೋರುತ್ತಿದ್ದಾರೆ. ಇದು ಅವರಿಗಷ್ಟೇ ಆಗುತ್ತಿರುವ ನಷ್ಟವಲ್ಲ. ಬದಲಾಗಿ ತಮ್ಮ ಮಕ್ಕಳ ತಲೆಮಾರಿಗೂ ಈ ನಷ್ಟ ಮುಂದುವರಿಯುತ್ತದೆ. ಮುಂಜಾನೆ ಬೇಗನೆ ಏಳದಿರುವ ತಮ್ಮ ಅಭ್ಯಾಸದಿಂದಾಗಿ ಅವರ ಮಕ್ಕಳಿಗೂ ತಡವಾಗಿ ಏಳುವುದೇ ರೂಢಿಯಾಗುತ್ತದೆ. ಇದು ಸೂರ್ಯೋದಯಕ್ಕೆ ಮೊದಲೇ ಏಳುತ್ತಿದ್ದ ಹಿಂದೂ ಸಂಸ್ಕೃತಿಯ ಪುನರುತ್ಥಾನಕ್ಕೆ ದೊಡ್ಡ ಆಡಚಣೆಯಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲೆದ್ದು ಸ್ನಾನಾದಿಗಳನ್ನು ತೀರಿಸಿ ಜಪ-ತಪಗಳಲ್ಲಿ ತೊಡಗಿ ಸೂರ್ಯನ ಸ್ವಾಗತಕ್ಕೆ ಸಿದ್ಧರಾಗುತ್ತಿದ್ದ ಹಿಂದೂ ಧರ್ಮೀಯರು ಈಗ ರಾತ್ರಿಗಳನ್ನು ಸಂಭ್ರಮಿಸುತ್ತ ಸೂರ್ಯೋದಯವನ್ನು ನೋಡದ ಸ್ಥಿತಿಗೆ ತಲುಪಿರುವುದು ಸುಧಾರಣೆ ಮಾಡಬೇಕಾದ ಅಂಶ.

ವೈದ್ಯಕೀಯ ವಿಜ್ಞಾನದಲ್ಲಿ ಹೇಳುವಂತೆ ನಮ್ಮ ದೇಹದ ಮೇಲೆ ಹಗಲಿನ ಬೆಳಕು ಮತ್ತು ರಾತ್ರಿಯ ಕತ್ತಲೆಗಳಿಗೆ ವಿಶಿಷ್ಟ ಪ್ರಭಾವವಿದೆ. ಸಿರ್ಕಾಡಿಯನ್ ಇಫೆಕ್ಟ್ ಎಂದು ಹೆಸರಿಸಲಾಗುವ ಈ ಪ್ರಕ್ರಿಯೆಯು ನಮ್ಮ ದೈಹಿಕ, ಮಾನಸಿಕ ಮತ್ತು ವರ್ತನಾ ವಿಧಾನಗಳನ್ನು ಪ್ರಭಾವಿಸುತ್ತದೆ. ಇದು ದೈಹಿಕ ಚುರುಕುತನ, ಮಾನಸಿಕ ಸೃಜನಶೀಲತೆ ಹಾಗೂ ವರ್ತನೆಗಳ ನಿರ್ದೇಶನಕ್ಕೆ ಕಾರಣವಾಗುತ್ತದೆ. ಹಾಗಾಗಿ ಮುಂಜಾನೆ ಬೇಗ ಏಳುವವರಲ್ಲಿ ಲವಲವಿಕೆ ಇರುತ್ತದೆ, ಅವರ ಕೆಲಸದಲ್ಲಿ ವೇಗ ಇರುತ್ತದೆ, ತಕ್ಷಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಮಾತುಕತೆ ಹಾಗೂ ಕ್ರಿಯಾಶೀಲತೆಗಳು ಇನ್ನೊಬ್ಬರನ್ನು ಪ್ರೇರೇಪಿಸುವಂತಿರುತ್ತವೆ. ಈ ಎಲ್ಲಾ ಚಟುವಟಿಕೆಗಳು ಉಂಟು ಮಾಡುವ ಫಲಿತಾಂಶಗಳು ತಡವಾಗಿ ಏಳುವವರಿಗಿಂತ ಹೆಚ್ಚು ಇರುತ್ತವೆ. ಬೇಗ ಏಳುವವರು ತಡವಾಗಿ ಏಳುವವರಿಗೆ ಸಹವರ್ತಿಗಳಾಗಲು ಸಾಧ್ಯವಿಲ್ಲ. ಅವರು ತಮ್ಮ ಕೆಲಸಗಳಲ್ಲಿ ಮುಂದೆ ಹೋಗಿರುತ್ತಾರೆ. ಅವರ ಉಪಾಹಾರ ಮತ್ತು ಊಟದ ಸಮಯ ನಿರ್ಧರಿತವಾಗುತ್ತದೆ. ಅಂದರೆ ಅವರ ಒಟ್ಟು ಸಂಸ್ಕಾರದಲ್ಲಿ ಸಮಯ ಪಾಲನೆಯ ಶಿಸ್ತು ಸೇರಿಕೊಳ್ಳುತ್ತದೆ. ಅದೆಷ್ಟು ಕ್ರಮಬದ್ಧವಾಗಿವಾಗಿರುತ್ತದೆಂದರೆ ಅವರ ಕೆಲಸವನ್ನು ನೋಡಿಯೇ ಸಮಯವನ್ನು ಹೇಳಬಹುದಾಗುತ್ತದೆ. ಆದರೆ ತಡವಾಗಿ ಏಳುವವರಿಗೆ ಸ್ನಾನ, ಉಪಾಹಾರ, ಊಟ ಮುಂತಾದುವುಗಳಿಗೆ ನಿಗದಿತ ಸಮಯವಿರುವುದಿಲ್ಲ. ಅವರ ರಾತ್ರೆ ಊಟದ ಸಮಯವೇ ತಡರಾತ್ರಿಯಾಗಿರುತ್ತದೆ. ಆದರೆ ಮುಂಜಾನೆ ಬೇಗ ಏಳುವವರು ಸಂಜೆ ಬೇಗ ಊಟ ಮಾಡಿ ತಾವು ಮಲಗುವ ಸಮಯದ ನಡುವೆ ಎರಡು ಮೂರು ಗಂಟೆಗಳ ಅಂತರ ಇಟ್ಟುಕೊಳ್ಳುತ್ತಾರೆ. ತಜ್ಞರು ಹೇಳುವ ಪ್ರಕಾರ ರಾತ್ರಿಯ ಆಹಾರದ ಬಳಿಕ ಮಲಗುವ ಹೊತ್ತಿನ ನಡುವೆ ಮೂರು ಗಂಟೆಗಳ ಅಂತರ ಇರಬೇಕು. ಆದರೆ ತಡವಾಗಿ ಏಳುವವರು ರಾತ್ರೆ ತಡವಾಗಿಯೇ ಊಟ ಮಾಡಿ ತಕ್ಷಣ ಮಲಗುತ್ತಾರೆ. ಹೀಗಾಗಿ ಅನಿಯಮಿತವಾಗಿ ಏಳುವುದಲ್ಲದೆ ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಸೇವನೆ ಮಾಡುತ್ತಾರೆ ಮತ್ತು ಮಲಗುವ ತನಕ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಣ್ಣುಗಳ ಉರಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇಂತಹ ದಿನಚರಿಯಿಂದ ಅವರು ಹೊರಗೆ ಬರಬೇಕು. ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ತಾನೂ ಬೆಳೆಸಿಕೊಂಡು ಮನೆಯವರೆಲ್ಲರಿಗೂ ಅದನ್ನೇ ರೂಢಿಸಬೇಕು. ಇದು ಒಟ್ಟು ಸಮಾಜದ ಸಂಸ್ಕಾರವನ್ನು ಸುಧಾರಿಸುತ್ತದೆ.

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ ಅದು ನಮಗೆ ಹರಟೆಯಾಗುವುದಿಲ್ಲ. ಅದು ಸಂಗೀತದಂತೆ ಹಿತವಾಗುತ್ತದೆ. ಅದೇ ಹೊತ್ತಿನಲ್ಲಿ ನಾವು ಓಂಕಾರವನ್ನು ಸಣ್ಣದಾಗಿ ಆರಂಭಿಸಿ ಗಟ್ಟಿ ಧ್ವನಿಗೆ ಏರಿಸಿದರೆ ಮತ್ತು ಅದರೊಂದಿಗೆ ಪ್ರಾಣಾಯಾಮವನ್ನು ಸೇರಿಸಿದರೆ ನಮ್ಮ ಶ್ವಾಸೋಚ್ಛಾಸ ಕ್ರಿಯೆ ಶುಭ್ರವಾಗುತ್ತದೆ. ಇದು ಆರೋಗ್ಯಕರವಾದ ಆಯುಸ್ಸಿನ ವೃದ್ಧಿಗೆ ಕಾರಣವಾಗುತ್ತದೆ.

ಸಾಮಾನ್ಯವಾಗಿ ಮಧ್ಯವಯಸ್ಸು ಕಳೆದ ಬಳಿಕ ಬೆಳಗ್ಗೆ ಬೇಗನೇ ಎಚ್ಚರವಾಗುತ್ತದೆ. ಆದರೂ ಏಳುಲು ಉದಾಸೀನ ತಾಳುವವರಿದ್ದಾರೆ. ಆದರೆ ಉದಾಸೀನ ಬಿಟ್ಟು ಏಳುವವರು ಚುರುಕಾಗುತ್ತಾರೆ. ವೃದ್ಧಾಪ್ಯದಲ್ಲಿ ಇರುವವರಿಗಂತೂ ನಿದ್ರೆಯ ಅವಧಿ ಅಸ್ತವ್ಯಸ್ತವಾಗಿರುತ್ತದೆ. ಆದರೆ ಬೆಳಗ್ಗೆ ಬೇಗ ಏಳುವ ಅಭ್ಯಾಸ ಇದ್ದವರಿಗೆ ರಾತ್ರಿಯೂ ಬೇಗ ನಿದ್ರೆ ಬರುತ್ತದೆ. ಇಂತಹ ಅಭ್ಯಾಸವು ಶರೀರಕ್ಕೆ ಸ್ವಾಸ್ಥ್ಯವನ್ನು ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಪ್ರಾತಃಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ತೀರಿಸಿ ಗಟ್ಟಿ ಸ್ವರದಲ್ಲಿ ಶ್ಲೋಕಗಳನ್ನು, ಮಂತ್ರಗಳನ್ನು ಹೇಳುವ ಮೂಲಕ ದಿನಚರಿಯನ್ನು ಆರಂಭಿಸುವವರಿಗೆ ಉಚ್ಛಾರ ಶುದ್ಧಿಯನ್ನು ಗಳಿಸಲು ಸಾಧ್ಯ. ಸ್ವರ ಮಾಧುರ್ಯವನ್ನು ಬೆಳೆಸಿಕೊಳ್ಳುವವರಿಗೂ ಮುಂಜಾನೆಯ ಅಭ್ಯಾಸ ಹೆಚ್ಚು ಫಲಕಾರಿಯಾಗಿದೆ. ವಿದ್ಯಾರ್ಥಿಗಳಿಗೂ ಮುಂಜಾನೆ ಓದುವ ಅಭ್ಯಾಸ ಹೆಚ್ಚು ಪ್ರಯೋಜನಕಾರಿಯಾಗಿದೆ.

ಭಾರತದಲ್ಲಿ ರೈತರು ಕೂಡಾ ಮುಂಜಾನೆ ಬೇಗ ಏಳುತ್ತಿದ್ದರು. ಹೊತ್ತು ಏರುವ ಮೊದಲೇ ಹೊಲದಲ್ಲಿ ಉಳುಮೆ ಆರಂಭಿಸಿ ಮುಗಿಸುತ್ತಿದ್ದರು. ಇದರಿಂದಾಗಿ ಕೆಲಸಗಳು ಬೇಗ ಬೇಗನೇ ಆಗುತ್ತಿದ್ದುವು. ಹಟ್ಟಿಗಳಿಂದ ದನಕರುಗಳ ಅಂಬಾ ಎಂಬ ಕೂಗು ರೈತ ಮಹಿಳೆಯರನ್ನು ಎಬ್ಬಿಸುತ್ತಿದ್ದುವು. ಕೋಳಿಯ ಕೂಗಿನೊಂದಿಗೆ ಎಚ್ಚರಗೊಳ್ಳುತ್ತಿದ್ದ ರೈತರ ಜೀವನ ಶೈಲಿ ಈಗ ಬದಲಾಗಿದೆ. ಈಗ ಹಸು ಸಾಕಣೆಯು ಕಷ್ಟವೆನ್ನಿಸಿ ಹಟ್ಟಿಗಳು ಖಾಲಿಯಾಗಿವೆ. ಹಳ್ಳಿಗಳಲ್ಲಿಯೂ ಡೈರಿಯಿಂದ ಹಾಲನ್ನು ಒಯ್ಯುವವರಿದ್ದಾರೆ. ಒಲೆ ಉರಿಸುವ ಕೆಲಸವೂ ಗೇಸ್ ಬಂದ ಬಳಿಕ ಹಗುರವಾಗಿದೆ. ರಾತ್ರಿಯ ಹೊತ್ತು ಕಳೆಯಲು ಟಿ.ವಿ. ಮಾಧ್ಯಮವಿದೆ. ಹಾಗಾಗಿ ಮಲಗುವುದು ತಡವಾಗುತ್ತದೆ. ಈ ಬದಲಾವಣೆಯು ಮಕ್ಕಳ ದಿನಚರಿಯ ಮೇಲೆ ಪರಿಣಾಮ ಬೀರಿದೆ. ಅವರಲ್ಲಿ ಓದುವ ಮತ್ತು ಕಲಿಯುವ ಅಭ್ಯಾಸಗಳು ಬೆಳೆಯುತ್ತಿಲ್ಲ. ತಮ್ಮ ಜ್ಞಾನದ ಗಳಿಕೆಯ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರಾತಃಕಾಲದಲ್ಲಿ ಎದ್ದು ಓದುವ ದಿನಚರಿಯನ್ನು ಮೂಡಿಸಬೇಕಾಗಿದೆ. ಆದರೆ ಈ ಅಭ್ಯಾಸ ಹಿರಿಯರಿಗೆ ಇಲ್ಲದೆ ಹೋದರೆ ಮಕ್ಕಳಿಗೆ ಬರಲಾರದು.

ಈ ವಿಷಯವನ್ನು ಹೇಳುವಾಗ ನಾನು ಹಿಂದೂ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ತಮ್ಮ ಪೋಷಕರಲ್ಲಿರುವ ಸ್ವತ್ತು ಮತ್ತು ಸಂಪತ್ತು ಅವರ ಸುಲಭಶೀಲತೆ ಹಾಗೂ ಸ್ವಲ್ಪದರಲ್ಲೇ ತೃಪ್ತಿ ಹೊಂದುವ ಅಭ್ಯಾಸಕ್ಕೆ ಕಾರಣವಾಗಿದೆ. ತಮ್ಮ ಓದುವಿಕೆಯನ್ನು ಪಾಠಗಳಿಗಷ್ಟೇ ಸೀಮಿತ ಮಾಡಿಕೊಂಡಿರುವ ಈ ಮಕ್ಕಳು ಪಾಠಗಳನ್ನು ಕೂಡಾ ಸರಿಯಾಗಿ ಓದುತ್ತಿಲ್ಲ. ಹಿಂದೂ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ವ್ಯವಸ್ಥೆಯೂ ಇಲ್ಲ. ದೇವಸ್ಥಾನಗಳಲ್ಲಿ ನಮ್ಮ ಸಂಸ್ಕೃತಿಯ ಮೂಲ ಸಂದೇಶಗಳ ಶ್ಲೋಕಗಳನ್ನು ಹೇಳಿಕೊಡುವ ವ್ಯವಸ್ಥೆ ಇಲ್ಲ. ಪುರಾಣಗಳ ಬಗ್ಗೆ ವ್ಯಾಖ್ಯಾನಗಳಿಲ್ಲ. ನಮ್ಮ ಧರ್ಮದ ವಿಶ್ವ ದೃಷ್ಟಿಯ ಬಗ್ಗೆ ವಿವರಣೆ ತಿಳಿಸುವ ವ್ಯವಸ್ಥೆ ಇಲ್ಲ. ಇದೆಲ್ಲವೂ ಇಂದು ಮಸೀದಿಗಳಲ್ಲಿ ಇದೆ. ಮುಸ್ಲಿಮರು ತಮ್ಮ ಮಕ್ಕಳನ್ನು ಬೇಗ ಎಬ್ಬಿಸಿ ಸಿದ್ಧಗೊಳಿಸಿ ಮಸೀದಿಗೆ ಕಳಿಸುತ್ತಾರೆ. ಹೆಣ್ಣು ಮಕ್ಕಳನ್ನೂ ಕಳಿಸುತ್ತಾರೆ. ಇದರಿಂದಾಗಿ ಅವರ ಭಾವೀ ಜೀವನದಲ್ಲಿ ಆಚರಿಸಬೇಕಾದ ಧರ್ಮನಿಷ್ಟೆ ಗಟ್ಟಿಯಾಗುತ್ತದೆ. ಅದು ಒಂದು ರೀತಿಯ ನಿರಂತರತೆಯನ್ನು ಪಡೆಯುತ್ತದೆ. ಆದರೆ ಹಿಂದೂಗಳಲ್ಲಿ ಈ ಪ್ರವಾಹ ದುರ್ಬಲವಾಗಿದೆ. ದೇವಾಲಯಗಳಲ್ಲಿ ಪ್ರವಚನಗಳಿಲ್ಲ. ಇದ್ದರೂ ಅವುಗಳಲ್ಲಿ ಮಕ್ಕಳೊಂದಿಗೆ ಪೋಷಕರು ಭಾಗವಹಿಸುವುದಿಲ್ಲ. ತಮ್ಮ ಮಕ್ಕಳು ಆಧ್ಯಾತ್ಮಿಕ ಶಿಕ್ಷಣ ಪಡೆದರೆ ಸಾಕು, ತಮಗೆ ಬೇಕಾಗಿಲ್ಲ ಎಂಬ ಚಿಂತನೆ ಹಿಂದೂ ಮತದ ಪ್ರೌಢ ಪೋಷಕರಲ್ಲಿದೆ. ಇದರಿಂದಾಗಿ ಹಿಂದೂ ಪುರಾಣ, ಕಾವ್ಯಗಳು, ಶೃತಿ-ಸಂಸ್ಕೃತಿ, ಭಗವದ್ಗೀತೆ, ಭಜನೆ, ತತ್ವಪದಗಳು ಮುಂತಾದುವುಗಳ ಜ್ಞಾನ ತಪ್ಪಿಹೋಗುತ್ತದೆ. ಹೀಗಾದಾಗ ಸಂಭವಿಸುವ ಧಾರ್ಮಿಕ ದೌರ್ಬಲ್ಯವನ್ನು ಹಿಂದೂ ಸಮಾಜವು ಅನುಭವಿಸುವ ದಿನಗಳು ಹತ್ತಿರದಲ್ಲೇ ಇವೆ. ಆದ್ದರಿಂದಲೇ ಈ ಲೇಖನದ ಆಶಯವು ಹಿಂದೂ ಮಕ್ಕಳೂ ಬೇಗ ಏಳಬೇಕು ಎಂಬುದಾಗಿದೆ.

ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

48 minutes ago

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |

ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…

1 hour ago

ಹೊಸರುಚಿ | ಗುಜ್ಜೆ ಕಡಲೆ ಗಸಿ

ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…

1 hour ago

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …

2 hours ago

ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ನ  ಹಣಕಾಸು ನೀತಿ ಸಮಿತಿ ಹಲವು  ಮಹತ್ವದ ನಿರ್ಧಾರಗಳನ್ನು…

2 hours ago

ಪಾರಂಪರಿಕ ಮಾಗಿ ಉಳುಮೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲ | ಕೃಷಿ ಇಲಾಖೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವುರಿಂದ, ಪಾರಂಪರಿಕ ಮಾಗಿ…

2 hours ago