ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕಂದಾಯ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ನಿರ್ದೇಶನ ನೀಡಿದ್ದಾರೆ. ರೈತರಿಗೆ ನೋಟಿಸ್ ನೀಡಿರುವ ವಿಚಾರದಲ್ಲಿ ಕೆಲ ಅಧಿಕಾರಿಗಳ ಕಾರ್ಯವೈಖರಿಗೆ ಮುಖ್ಯಮಂತ್ರಿ ಸಭೆಯಲ್ಲಿ ಅಸಮಾದಾನ ವ್ಯಕ್ತಪಡಿಸಿದ್ದಾರೆ. ರೈತರಿಗೆ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು. ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾನೂನು ಬಾಹಿರವಾಗಿ ಹಾಗೂ ನೋಟಿಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡುವಂತೆ ತಿಳಿಸಿದ್ದಾರೆ.
ವಕ್ಫ್ ಬೋರ್ಡ್ ಆಸ್ತಿ ವಿಚಾರವಾಗಿ ರೈತರಿಗೆ ಯಾವುದೇ ನೋಟಿಸ್ ನೀಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಈಗಾಗಲೇ ನೀಡಿರುವ ನೋಟಿಸ್ ವಾಪಸ್ ಪಡೆಯಲು ಸೂಚನೆ ನೀಡಲಾಗಿದೆ. ತುಮಕೂರಿನಲ್ಲಿ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಂದಾಯ ಇಲಾಖೆಯಲ್ಲಿನ ದಾಖಲಾತಿ ಹಾಗೂ ವಕ್ಫ್ ದಾಖಲಾತಿಯಲ್ಲಿ ಒಂದೇ ಇದ್ದರೆ ಯಾವುದೇ ಗೊಂದಲ ಆಗುವುದಿಲ್ಲ. ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯವಾಗಿದೆ ಎಂದು ಹೇಳಿದ್ದಾರೆ.