Opinion

ವಕ್ಫ್ ಆಸ್ತಿ ವಿವಾದ | ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು……..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಕ್ಫ್ ಬೋರ್ಡ್ ನೋಟಿಸ್ ಗಳು ಈಗ ಇಡೀ ದೇಶದಲ್ಲಿ ಸದ್ಯ ಚರ್ಚೆಯಾಗುತ್ತಿರುವ ವಿಷಯವಾಗಿದೆ. ವಕ್ಫ್ ಹಿಂದುಗಳ ಮೇಲೆ ಸರ್ವಾಧಿಕಾರಿಯಂತೆ ವರ್ತಿಸಿ ಸಾಕಷ್ಟು ಭೂಮಿಯನ್ನು ಕಬಳಿಸುತ್ತಿದೆ ಎಂಬ ವಿಷಯದ ಮೇಲೆ ರಾಜಕೀಯ ಪಕ್ಷಗಳು, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಸಾಮಾನ್ಯ ಜನರು ಚರ್ಚಿಸುತ್ತಿದ್ದಾರೆ…..

Advertisement

ಇದರ ಬಗ್ಗೆ ನಿಜವಾದ, ವಾಸ್ತವದ ಮಾಹಿತಿಗಿಂತ ನಾವು ನೋಡುತ್ತಿರುವುದು, ಕೇಳುತ್ತಿರುವುದು, ಓದುತ್ತಿರುವುದು ಕೇವಲ ಪರ ಅಥವಾ ವಿರೋಧದ ಅಂಶಗಳನ್ನು ಮಾತ್ರ. ಮನಸ್ಸುಗಳೇ ಮಲಿನವಾಗಿ, ಧರ್ಮಗಳ ಗೋಡೆ ಕಟ್ಟಿಕೊಂಡು, ಸಂವಿಧಾನವನ್ನು ಸಂಪೂರ್ಣ ನಿರ್ಲಕ್ಷಿಸಿ, ರಾಜಕೀಯ ಮಾಡುತ್ತಿರುವಾಗ ಮನಸ್ಸುಗಳು ಸತ್ಯದ ಹತ್ತಿರಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ ಅಥವಾ ಸತ್ಯ ಅರ್ಥವಾದರೂ ಒಪ್ಪಿಕೊಳ್ಳುವ ಮನಸ್ಥಿತಿಯೂ ಇಲ್ಲ. ಧಾರ್ಮಿಕ ಮುಖಂಡರು, ರಾಜಕಾರಣಿಗಳು ವಾದ ಮಾಡಿದರೆ ನಿರ್ಲಕ್ಷಿಸಬಹುದು. ಆದರೆ ಸಾಮಾನ್ಯ ಜನರೂ ಸಹ ರಾಜಕೀಯ, ಭಾವನಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ, ಸಾರ್ವಜನಿಕ ಅಭಿಪ್ರಾಯ ರೂಪಗೊಳ್ಳುವ ಪ್ರಕ್ರಿಯೆಗೆ ಅಪಾಯಕಾರಿ. ಈ ರೀತಿಯ ಚರ್ಚೆಗಳು ಯಾವತ್ತೂ ಏಕಮುಖವಾಗಿರಬಾರದು……

ವಕ್ಫ್ ಬೋರ್ಡ್ ಎಂಬುದು ಒಂದು ರಿಯಲ್ ಎಸ್ಟೇಟ್ ಏಜೆನ್ಸಿಯಲ್ಲ. ಅದೊಂದು ಧಾರ್ಮಿಕ ಸೇವಾ ಮನೋಭಾವದ ಸಂಸ್ಥೆ. ನನಗಿರುವ ಮಾಹಿತಿಯಂತೆ ಬ್ರಿಟಿಷರ ಕಾಲದಲ್ಲೇ ಇದನ್ನು ಸ್ಥಾಪಿಸಲಾಗಿತ್ತು. ನಂತರದಲ್ಲಿ ಅದನ್ನು ಭಾರತ ಸರ್ಕಾರ ಎರಡು/ಮೂರು ಬಾರಿ ತಿದ್ದುಪಡಿಯನ್ನು ಮಾಡಿದೆ. ಈಗ ಮತ್ತೊಂದು ತಿದ್ದುಪಡಿ ಕೇಂದ್ರದ ಲೋಕಸಭೆಯ ಜಂಟಿ ಸಂಸದೀಯ ಸದನ ಸಮಿತಿಯ ಮುಂದಿದೆ…….

ಬ್ರಿಟಿಷರು ರೂಪಿಸಿದ ಈ ಕಾನೂನಿಗೆ ಕಾಂಗ್ರೆಸ್ ಸರ್ಕಾರ ಎರಡು ಬಾರಿ ಮುಸ್ಲಿಮರ ಪರವಾಗಿ ತಿದ್ದುಪಡಿ ಮಾಡಿದ್ದರೆ, ಇದೀಗ ಬಿಜೆಪಿ ಸರ್ಕಾರ ಮುಸ್ಲಿಮರ ವಿರುದ್ಧವಾಗಿ ಅಥವಾ ಅದಕ್ಕೆ ನಿಯಂತ್ರಣ ಹೇರುವ ರೀತಿಯಲ್ಲಿ ಮತ್ತಷ್ಟು ತಿದ್ದುಪಡಿ ಮಾಡುತ್ತಿದೆ. ಅಂದರೆ ರಾಜಕೀಯ ಪಕ್ಷಗಳು ಇದನ್ನು ತಮ್ಮ ಹಿಂದೂ ಮುಸ್ಲಿಂ ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಿವೆ ಎಂಬುದರಲ್ಲಿ ಯಾವುದೇ ಸಂದೇಹವು ಉಳಿದಿಲ್ಲ…..

ಒಂದು ವಿಷಯವನ್ನು ನ್ಯಾಯದ, ಕಾನೂನಿನ ಹೆಸರಿನಲ್ಲಿ ಸಾರ್ವಜನಿಕವಾಗಿ ವಿವಾದಾತ್ಮಕ ಗೊಳಿಸಿ ಆನಂತರ ಅದಕ್ಕೆ ನಿಯಂತ್ರಣ ಹೇರುವುದು ಸಾಮಾನ್ಯವಾಗಿ ಆಡಳಿತ ಪಕ್ಷಗಳ ಒಂದು ಕಾರ್ಯತಂತ್ರ. ಅದರ ಭಾಗವೇ ವಕ್ಫ್ ಆಸ್ತಿ ವಿವಾದ…….

ಇಸ್ಲಾಂ ಧರ್ಮದ ಕೆಲವು ನೀತಿ ನಿಯಮಗಳಂತೆ ಅದರ ಅನುಯಾಯಿಗಳು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಬಡವರಿಗೆ ದಾನ ಮಾಡಬೇಕು ಎಂದು ಹೇಳಲಾಗಿದೆ. ಅದರ ಪ್ರಕಾರ ಕೆಲವು ಮುಸ್ಲಿಮರು ತಮ್ಮ ಬಳಿ ಇರುವ ಜಮೀನನ್ನು ದೇವರು ಹೆಸರಿನಲ್ಲಿ ದಾನ ಮಾಡುತ್ತಾರೆ. ಅದನ್ನು ಬಡವರಿಗೆ ಮತ್ತು ಅವಶ್ಯಕತೆ ಇರುವವರ ಏಳಿಗೆಗೆ ದೇವರ ಹೆಸರಿನಲ್ಲಿಯೇ ಹಂಚಬೇಕು, ಅದನ್ನು ಕ್ರಮಬದ್ಧವಾಗಿ ನಿರ್ವಹಿಸಲು ವಕ್ಫ್ ಬೋರ್ಡ್ ಸ್ಥಾಪಿಸಲಾಗಿದೆ. ಇದು ಮೇಲ್ನೋಟದ ಒಂದು ಸರಳ ವ್ಯಾಖ್ಯಾನ…..

ಹಾಗೆಯೇ ಈ ಜಮೀನಿನ ದಾನ ದೇವರ ಹೆಸರಿನಲ್ಲಿ ನೀಡುವುದು ಪ್ರಾರಂಭವಾಗಿ ದಿನೇ ದಿನೇ ಸಾವಿರಾರು, ಲಕ್ಷಾಂತರ ಎಕರೆಗಳು ಇಡೀ ದೇಶಾದ್ಯಂತ ವಕ್ಫ್ ಬೋರ್ಡ್ ಗೆ ಸೇರುತ್ತದೆ. ಅದರ ಲೆಕ್ಕಾಚಾರಗಳನ್ನು ಇದೇ ಬೋರ್ಡ್ ನಿಯಂತ್ರಿಸುತ್ತಿರುತ್ತದೆ…

ಈಗಿನ ಪರಿಸ್ಥಿತಿಯಲ್ಲಿ ನೋಡುವುದಾದರೆ ಸಾಕಷ್ಟು ಜಮೀನುಗಳನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸದೆ ಹಿಂದೆ ಅದನ್ನು ನಿರ್ಲಕ್ಷಿಸಿಕೊಂಡು ಬಂದಿದೆ ಎಂಬುದು ತಿಳಿಯುತ್ತದೆ. ಏಕೆಂದರೆ ಆಗ ಜಮೀನುಗಳಿಗೆ ಯಾವುದೇ ಕಿಮ್ಮತ್ತು ಇರಲಿಲ್ಲ. ಆದರೆ ಯಾವಾಗ ಭೂಮಿಯ ಬೆಲೆ, ರಿಯಲ್ ಎಸ್ಟೇಟ್ ಉದ್ದಿಮೆ, ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಹಣಕಾಸಿನ ಮೂಲವಾಯಿತೋ ಆಗ ಎಲ್ಲಾ ಧಾರ್ಮಿಕ ಸಂಸ್ಥೆಗಳು, ಮಠಮಾನ್ಯಗಳು, ಚರ್ಚುಗಳು, ದೇವಸ್ಥಾನಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಭೂಮಿಯನ್ನು ಸಾಧ್ಯವಾದಷ್ಟು ಆಕ್ರಮಿಸಿಕೊಳ್ಳಲು ಪ್ರಾರಂಭವಾಯಿತು. ಅದಕ್ಕೆ ದೊಡ್ಡಬೆಲೆ ಬಂದಿತು. ಆಗ ನಿಜವಾದ ವಕ್ಫ್ ಆಸ್ತಿ ವಿವಾದ ಪ್ರಾರಂಭವಾಗುತ್ತದೆ….

ಕರ್ನಾಟಕದಲ್ಲಿ ವಕ್ಫ್ ಗೆ ಸೇರಿದ ಅನೇಕ ಜಮೀನನ್ನು ಅಲ್ಲಿನ ಸದಸ್ಯರು, ನಿರ್ದೇಶಕರುಗಳೇ ಕಬಳಿಸಿದ್ದಾರೆ ಎಂದು ಒಂದು ಅಧ್ಯಯನ ಸಮಿತಿ ವರದಿಯನ್ನು ನೀಡಿದೆ. ಅದು ಬಹಳ ಹಿಂದಿನಿಂದಲೂ ಸರ್ಕಾರದಲ್ಲಿ ಕೊಳೆಯುತ್ತಿದೆ…

ಎಲ್ಲಾ ಕ್ಷೇತ್ರಗಳು ಮಲಿನವಾಗಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಒಳಗಾದಂತೆ ವಕ್ಫ್ ಕೂಡ ಅದರಿಂದ ಹೊರತಾಗಿಲ್ಲ. ಅದು ಸಹ ಒಂದಷ್ಟು ಒಳ್ಳೆಯ, ಒಂದಷ್ಟು ಆದಾಯ ತರುವ, ಒಂದಷ್ಟು ರಿಯಲ್ ಎಸ್ಟೇಟ್ ಉದ್ಯಮದ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತಲೇ ಬಂತು. ಆದರೆ ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ಅದರ ಮೇಲೆ ನಿಯಂತ್ರಣ ಸಾಧಿಸುವ ಸಂದರ್ಭ ಸೃಷ್ಠಿಯಾಗಿರುವಾಗ ಕರ್ನಾಟಕದ ವಕ್ಫ್ ಮಂತ್ರಿಗಳು ಆ ಕಾಯ್ದೆ ಜಾರಿಯಾಗುವುದಕ್ಕೆ ಮೊದಲು ಎಷ್ಟು ಸಾಧ್ಯವೋ ಅಷ್ಟು ವಕ್ಫ್ ಗೆ ಸೇರಿದ್ದ ಈಗ ತಮ್ಮ ನಿಯಂತ್ರಣ ಮೀರಿ ಹೋಗಿರುವ ಆಸ್ತಿಗಳನ್ನು ಮತ್ತೆ ಪಡೆಯಲು ಆತುರಾತುರವಾಗಿ ನೋಟಿಸ್ ಜಾರಿ ಮಾಡಿದರು……

ಸಹಜವಾಗಿಯೇ ಆ ಜಮೀನಿನಲ್ಲಿ ಅದನ್ನು ಆಕ್ರಮಿಸಿಕೊಂಡು ಸಾಕಷ್ಟು ವರ್ಷಗಳಿಂದ ಅನುಭವಿಸುತ್ತಿರುವ ರೈತರು ಅಥವಾ ಈಗಿನ ಆ ಜಮೀನಿನ ಮಾಲೀಕರು ಮತ್ತು ಇತರೆ ಈ ರೀತಿಯ ಜನರು ಪ್ರತಿಭಟನೆ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅವರಿಗೆ ರಾಜಕಾರಣಿಗಳು ಬೆಂಬಲ ನೀಡುತ್ತಿದ್ದಾರೆ……

ಇದೀಗ ವಕ್ಫ್ ಕಾಯ್ದೆಗಳ ಬಗ್ಗೆ ಚರ್ಚೆಯು ಪ್ರಾರಂಭವಾಗಿದೆ. ಎಂದಿನಂತೆ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕಿನ ರಾಜಕೀಯದ ಭಾಗವಾಗಿ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಮಾತುಗಳನ್ನು ಆಡುತ್ತಿದ್ದಾರೆ. ಯಾವುದೇ ರೀತಿಯ ದ್ವೇಷವೆಂಬುದು ತೀರಾ ವಿಷಕಾರಿ ಮತ್ತು ಅಪಾಯಕಾರಿ. ಅದನ್ನು ನಿಯಂತ್ರಣದಲ್ಲಿ ಇಡದಿದ್ದರೆ ಅದು ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ತನ್ನನ್ನು ಮತ್ತು ಇಡೀ ಸಮಾಜವನ್ನು ನಾಶ ಮಾಡುತ್ತದೆ. ಈಗ ಆ ಪರಿಸ್ಥಿತಿ ಉದ್ಭವಿಸಿದೆ…..

ವಕ್ಫ್ ಮೂಲಭೂತವಾಗಿ ಹಿಂದೆ ತಮಗೆ ಸೇರಿರುವ ಮತ್ತು ಆ ಬಗ್ಗೆ ಖಚಿತ ದಾಖಲೆ ಇರುವ, ಈಗ ಪರಾರ ಪಾಲಾಗಿರುವ ಜಮೀನಿನ ಬಗ್ಗೆ ಮಾತ್ರ ನೋಟಿಸ್ ಕೊಡುವ ಅಧಿಕಾರ ಹೊಂದಿದೆ. ಯಾವುದೇ ದಾಖಲೆಯಿಲ್ಲದೆ ಯಾರದೋ ಜಮೀನಿಗೆ ಇದು ನನ್ನದು ಎಂದು ಹೇಳುವ ಅಧಿಕಾರ ವಕ್ಫ್ ಗೆ ಇಲ್ಲ. ಅನೇಕ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿರುವುದು ಸುಳ್ಳು ಮಾಹಿತಿ. ಏಕೆಂದರೆ ಈ ದೇಶದಲ್ಲಿ ಅಷ್ಟೊಂದು ಸರ್ವಾಧಿಕಾರ ಯಾರಿಗೂ ಇಲ್ಲ……

ಒಂದು ವೇಳೆ ವಕ್ಫ್ ಬಳಿ ಇರುವ ದಾಖಲೆಯ ಪ್ರಕಾರ ಆ ಜಮೀನನ್ನು ಇತರ ಯಾರೇ ಆಗಲಿ ಆಕ್ರಮಿಸಿಕೊಂಡಿದ್ದರೆ ಅವರಿಗೆ ನೋಟಿಸ್ ನೀಡಿ ಅವರು ಅದನ್ನು ವಕ್ಫ್ ಮಂಡಳಿಯ ಮುಂದೆ ತಮ್ಮ ದಾಖಲೆಗಳನ್ನು ಇಟ್ಟು ಖಚಿತಪಡಿಸಿದರೆ ಮತ್ತೆ ಜಮೀನನ್ನು ಮರಳಿ ಕೊಡಲಾಗುತ್ತದೆ. ಇದನ್ನು ಕೋರ್ಟ್ ನಲ್ಲಿ ಪ್ರಶ್ನಿಸುವಂತಿಲ್ಲ ಎಂಬ ತಿದ್ದುಪಡಿ ಇದೆ ಎನ್ನಲಾಗಿದೆ…..

ಆದರೆ ಯಾವುದೇ ರೀತಿಯ ತಮಗಾದ ಮೂಲಭೂತ ಹಕ್ಕಿನ ಉಲ್ಲಂಘನೆಯನ್ನು, ಅನ್ಯಾಯಗಳನ್ನು ಖಂಡಿತವಾಗಿ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾವ ಧರ್ಮವೂ ದೊಡ್ಡದಲ್ಲ. ಅಂತಿಮವಾಗಿ ಈ ದೇಶದ ಕಾನೂನು ಎಲ್ಲವನ್ನು, ಎಲ್ಲಾ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸುತ್ತದೆ. ಸಂವಿಧಾನದ ಮೂಲ ಆಶಯದಂತೆ ಎಲ್ಲರಿಗೂ ನ್ಯಾಯ ಒದಗಿಸುತ್ತದೆ…..

ಒಂದು ವೇಳೆ ಮುಸ್ಲಿಂ ತುಷ್ಟೀಕರಣದ ಭಾಗವಾಗಿ ಕೆಲವು ಸಾಮಾನ್ಯ ಜನರ ಮೂಲಭೂತ ಹಕ್ಕಿಗೆ ತೊಂದರೆಯಾಗಿದ್ದಲ್ಲಿ ಖಂಡಿತವಾಗಲೂ ಅದನ್ನು ಭಾರತದ ಶ್ರೇಷ್ಠ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಈ ವಿಷಯವನ್ನು ಅನಾವಶ್ಯಕವಾಗಿ ಎರಡು ಸಮುದಾಯಗಳ ನಡುವೆ ದ್ವೇಷ ಉಂಟು ಮಾಡಿ, ಮುಸ್ಲಿಮರು ಯಾವ ಜಮೀನು, ಯಾರ ಜಮೀನು ಬೇಕಾದರೂ ಆಕ್ರಮಿಸಿಕೊಳ್ಳಬಹುದು, ಇಡೀ ದೇಶ ಅವರ ಪಾಲಾಗುತ್ತದೆ ಎನ್ನುವ ಸುಳ್ಳು ಮಾಹಿತಿ ಮತ್ತು ದ್ವೇಷ ಹರಡುವುದು ಬೇಡ……

ಹಾಗೆಯೇ ವಕ್ಫ್ ಮಂಡಳಿ ಅನಾವಶ್ಯಕವಾಗಿ ತನ್ನ ಹಿಂದಿನ ನಿರ್ಲಕ್ಷ್ಯಕ್ಕೆ ಈಗ ಆ ಜಾಗದಲ್ಲಿ ಯಾರಾದರೂ ಒಕ್ಕಲುತನ ಮಾಡುತ್ತಿದ್ದರೆ ಅವರಿಗೆ ನೋಟಿಸ್ ಕೊಡುವ ದಾಷ್ಟ್ಯತನದ ಮನೋಭಾವ ತೋರಿಸಬಾರದು. ಮೂಲಭೂತವಾಗಿ ವಕ್ಫ್ ಒಂದು ಸೇವಾ ಸಂಸ್ಥೆ. ಆದರೆ ಅಲ್ಲಿನ ಅನೇಕರು ಅದನ್ನು ರಿಯಲ್ ಎಸ್ಟೇಟ್ ಏಜೆನ್ಸಿ ರೀತಿ ಕೆಲವು ಕಡೆ ನಿರ್ವಹಿಸಿರುವುದು ಕಂಡು ಬರುತ್ತದೆ. ಅದು ತಪ್ಪು…..

ವಕ್ಫ್ ತಮ್ಮ ಬಳಿ ಇರುವ ಲಕ್ಷಾಂತರ ಎಕರೆ ಜಾಗವನ್ನು ತಾವೇ ಇಟ್ಟುಕೊಂಡು ಸುಮ್ಮನೆ ವ್ಯರ್ಥ ಮಾಡುವ ಬದಲು ದಯವಿಟ್ಟು ಹೆಚ್ಚಾಗಿ ಮುಸ್ಲಿಂ ಸಮುದಾಯಕ್ಕೆ ಹಂಚಿ, ಹಾಗೆಯೇ ಸ್ವಲ್ಪ ಭಾಗವನ್ನು ಭಾರತದ ಇತರ ಎಲ್ಲ ಸಮುದಾಯದ ಬಡವರಿಗಾಗಿ ಕೃಷಿ ಭೂಮಿಯನ್ನು ಕೃಷಿಗಾಗಿ, ವಾಣಿಜ್ಯ ಭೂಮಿಯನ್ನು ಶಾಲೆ, ಆರೋಗ್ಯ, ಗ್ರಂಥಾಲಯಗಳಿಗೆ ಬಳಸಿ, ವಾಸಯೋಗ್ಯ ಭೂಮಿಯನ್ನು ಜನರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಿ. ಹೀಗೆ ಜನಸೇವೆ ಮಾಡಿ ಆಗ ಯಾವ ವಿವಾದವು ಇರುವುದಿಲ್ಲ…..

ಈ ಸಲಹೆ ಕೇವಲ ವಕ್ಫ್ ಬೋರ್ಡ್ ಗೆ ಮಾತ್ರ ಸೀಮಿತವಲ್ಲ. ಎಲ್ಲಾ ಧರ್ಮದ ಧಾರ್ಮಿಕ ಸಂಸ್ಥೆಗಳು ಮತ್ತು ತಮ್ಮ ಬಳಿ ಸಾಕಷ್ಟು ಭೂಮಿಯನ್ನು ಹೊಂದಿರುವ ಪ್ರತಿಯೊಬ್ಬರಿಗೂ ಇದು ಅನ್ವಯಿಸುತ್ತದೆ. ಪ್ರಾಕೃತಿಕವಾಗಿ ಲಭಿಸಿರುವ
ಈ ದೇಶದ ಭೂಮಿ ಯಾರೋ ಕೆಲವರ ಬಳಿ ಸಂಗ್ರಹವಾಗಲು ಬಿಡಬಾರದು. ಅದು ಯಾರೇ ಆಗಿರಲಿ, ಎಂತಹ ದೊಡ್ಡ ವ್ಯಕ್ತಿ, ಸಂಸ್ಥೆಗಳೇ ಆಗಿರಲಿ ಇದು ಎಲ್ಲರಿಗೂ ಏಕಪ್ರಕಾರವಾಗಿ ಅನ್ವಯಿಸಬೇಕು. ಅದನ್ನೇ ಬಾಬಾ ಸಾಹೇಬರು ಸಂಪತ್ತಿನ ಮರುಹಂಚಿಕೆ ಎಂದು ಸಂವಿಧಾನದ ಆಶಯದಲ್ಲಿ ಸೇರಿಸಿದ್ದಾರೆ ಮತ್ತು ತಮ್ಮ ಭಾಷಣಗಳಲ್ಲಿ ಆಗಾಗ ಹೇಳುತ್ತಿದ್ದರು….

ಆದ್ದರಿಂದ ಯಾವುದೋ ಒಂದು ಸಂಸ್ಥೆ ಅಥವಾ ವ್ಯಕ್ತಿಯ ಬಳಿ ಸಾವಿರಾರು ಎಕರೆ ಇರುವುದೇ ಅಸಮಾನತೆಯ ಸಂಕೇತ, ಅಧರ್ಮದ ಸಂಕೇತ, ಶೋಷಣೆಯ ಸಂಕೇತ. ಇದಕ್ಕೆ ತಿರುಪತಿಯೂ ಹೊರತಲ್ಲ, ಧರ್ಮಸ್ಥಳ, ಶಬರಿಮಲೆಯೂ ಹೊರತಲ್ಲ, ವಕ್ಫ್ ಬೋರ್ಡ್ ಕೂಡ ಹೊರತಲ್ಲ, ಕ್ರಿಶ್ಚಿಯನ್ ಮಿಷನರಿಗಳು ಹೊರತಲ್ಲ. ಬೌದ್ಧ ಜೈನ ಮಂದಿರ ಬಸದಿಗಳು, ಲಿಂಗಾಯತ ಮಠಗಳು ಹೊರತಲ್ಲ…..

ಎಲ್ಲಾ ಧರ್ಮಗಳು ಇರುವುದು ಬಡವರ, ಸಾಮಾನ್ಯ ಜನರ ಹಿತ ರಕ್ಷಣೆಗಾಗಿಯೇ ಹೊರತು ರಿಯಲ್ ಎಸ್ಟೇಟ್ ಉದ್ಯಮಿಗಳಿಗಾಗಿ ಅಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲಿ. ವಕ್ಫ್ ಬೋರ್ಡ್ ವಿಷಯದಲ್ಲಿ ಆಕ್ರೋಶದ ಅವಶ್ಯಕತೆ ಇಲ್ಲ. ಇನ್ನೊಂದಷ್ಟು ನಿಮ್ಮ ನಿಮ್ಮ ಸಂಪರ್ಕದ ಮಿತಿಯಲ್ಲಿ ಮಾಹಿತಿ ಸಂಗ್ರಹಿಸಿ ಸತ್ಯ ಸುಳ್ಳುಗಳ ನಡುವಿನ ವ್ಯತ್ಯಾಸವನ್ನು ಗಮನಿಸಿ, ಸಮಗ್ರವಾಗಿ ಚಿಂತಿಸಿ, ದೇಶದ ಒಟ್ಟು ಭವಿಷ್ಯದ ದೃಷ್ಟಿಯಿಂದ ಸಹಜವಾಗಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ…..

ಈ ರಾಜಕಾರಣಿಗಳ ದ್ವೇಷದ ಮಾತುಗಳಿಗೆ, ಮಾಧ್ಯಮಗಳ ಅನಾವಶ್ಯಕ ಚರ್ಚೆಗಳಿಗೆ, ಪಕ್ಷಗಳ ವಕ್ತಾರರ ವಕೀಲಿಕೆಗಳಿಗೆ ದಯವಿಟ್ಟು ಬಲಿಯಾಗಬೇಡಿ. ಈ ದೇಶ ಯಾರೊಬ್ಬರ ಸ್ವತ್ತಲ್ಲ. ಇದೆಲ್ಲ ನಮ್ಮೆಲ್ಲರದು. ತಪ್ಪುಗಳನ್ನು ಸರಿಪಡಿಸಿಕೊಳ್ಳೋಣ, ಸರಿಯಾದದ್ದನ್ನು ಅಳವಡಿಸಿಕೊಳ್ಳೋಣ, ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸೋಣ….

ಮುಸ್ಲಿಮರು ಹೆಚ್ಚಲ್ಲ ಹಿಂದುಗಳೂ ಹೆಚ್ಚಲ್ಲ, ನಾವೆಲ್ಲರೂ ಸಮಾನರು……

ಬರಹ :
ವಿವೇಕಾನಂದ. ಎಚ್. ಕೆ.

9844013068…….

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?

ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…

3 hours ago

2025: ಲಕ್ಷ್ಮೀನಾರಾಯಣ ಯೋಗ | ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

4 hours ago

ರೈತರ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿಯೇ ವಿದ್ಯುತ್ ನೀಡಲು ತೀರ್ಮಾನ

ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…

12 hours ago

ಹೀಟ್‌ವೇವ್‌ ಸಂಕಷ್ಟದಲ್ಲಿ ತೆಲಂಗಾಣ-ಹೈದರಾಬಾದ್‌ |

ತೆಲಂಗಾಣ ಹಾಗೂ ಹೈದ್ರಾಬಾದ್‌ ಪ್ರದೇಶದಲ್ಲಿ ಹೀಟ್‌ವೇವ್‌ ಪರಿಸ್ಥಿತಿ ಕಂಡುಬಂದಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣ…

12 hours ago

ಜೀವನದಿ ಕಾವೇರಿ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆ | ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಚಾಲನೆ

ಚಾಮರಾಜನಗರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅರಣ್ಯ ಇಲಾಖೆ ಹಾಗೂ  ಹೊಳೆಮತ್ತಿ ನೇಚರ್…

20 hours ago

ಹವಾಮಾನ ವರದಿ | 04-05-2025 | ಕೆಲವು ಕಡೆ ಮಳೆ ನಿರೀಕ್ಷೆ | ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣ |

ಘಟ್ಟದ ಕೆಳಗಿನ ಪ್ರದೇಶಗಳ ಒಂದೆರಡು ಕಡೆ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ.…

22 hours ago