ಅಕ್ರಮ ಗರ್ಭಪಾತದ ಪ್ರತ್ಯೇಕ ಪ್ರಕರಣದ ತನಿಖೆಯಲ್ಲಿ ವಾರ್ಧಾದ ಅರವಿಯಲ್ಲಿರುವ ಖಾಸಗಿ ಆಸ್ಪತ್ರೆಯ ಜೈವಿಕ ಅನಿಲ ಘಟಕದಲ್ಲಿ 11 ತಲೆಬುರುಡೆಗಳು ಮತ್ತು 54 ಭ್ರೂಣಗಳ ಮೂಳೆಗಳು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಯ ನಿರ್ದೇಶಕಿ ರೇಖಾ ಕದಂ ಮತ್ತು ಅವರ ಸಹಚರರಲ್ಲಿ ಒಬ್ಬರನ್ನು ಬಂಧಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಜ್ಯೋತ್ಸ್ನ ಗಿರಿ ತಿಳಿಸಿದ್ದಾರೆ.
ಗರ್ಭಪಾತ ನಡೆದ ಆಸ್ಪತ್ರೆಯ ಹಿಂಭಾಗದ ಜಾಗದಲ್ಲಿ ಬುಧವಾರ ಅಗೆಯುವಾಗ ಮಾನವ ತಲೆಬುಡೆ, ರಕ್ತಸಿಕ್ತ ಬಟ್ಟೆ ಭ್ರೂಣ ಪತ್ತೆಯಾಗಿದೆ. ನಂತರ ಗುರುವಾರ ಆ ಪ್ರದೇಶದಲ್ಲಿನ ಜೈವಿಕ ಅನಿಲ ಘಟಕವನ್ನು ಪರಿಶೀಲಿಸಿದಾಗ ಚಿಕ್ಕ ಮಕ್ಕಳ ತಲೆಬುರುಡೆಯೂ ಪತ್ತೆಯಾಗಿದೆ. ಇಲ್ಲಿಯವರೆಗೆ ಒಟ್ಟು 11 ಮಾನವ ತಲೆಬುರುಡೆಗಳು, 54 ಮೂಳೆಗಳು, ಭ್ರೂಣಗಳು ಮತ್ತು ರಕ್ತಸಿಕ್ತ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಾ.ರೇಖಾ ಕದಂ 30 ಸಾವಿರ ರೂ.ಗೆ ಅಕ್ರಮ ಗರ್ಭಪಾತ ಮಾಡಿಸಿರುವುದು ಬಯಲಾದ ಹಿನ್ನಲೆಯಲ್ಲಿ ಅರವಿ ಪೊಲೀಸರು ಕ್ಷಿಪ್ರ ತನಿಖೆ ನಡೆಸಿ ರೇಖಾ ಸಹಿತ ಅಪ್ರಾಪ್ತ ಬಾಲಕಿಯ ಪೋಷಕರನ್ನು ಬಂಧಿಸಿದ್ದಾರೆ.