ಜಲ ಸಂರಕ್ಷಣೆ | ಏಕೆ, ಹೇಗೆ? | ಅರಿಯಿರಿ ಭೀಕರ ಜಲಕ್ಷಾಮದ ಸಮಸ್ಯೆ..

March 7, 2024
7:26 PM

ನೀರು(Water) ಎಲ್ಲ ಜೀವಿಗಳಿಗೆ ಅಗತ್ಯವಾದ ಜೀವಧಾರಕ ಸಂಪನ್ಮೂಲ(resource). ಭೂಮಿಯ(Earth) ಮೇಲ್ಮೈಯ ಶೇ. 71ರಷ್ಟು ಭಾಗದಲ್ಲಿ ನೀರು ಇದ್ದರೂ ಮಾನವ ಬಳಕೆಗೆ ಉಪಯೋಗಿಸಿಕೊಳ್ಳಬಹುದಾದ ನೀರಿನ ಪ್ರಮಾಣ ಶೇ. 3ರಷ್ಟು ಮಾತ್ರ. ಇಡಿಯ ಭೂಮಂಡಲದಲ್ಲಿ ಒಟ್ಟು 940 ಕೋಟಿ ಘನ ಕಿ.ಮೀ.ಗಳಷ್ಟು ನೀರು ವಿವಿಧ ರೂಪಗಳಲ್ಲಿ ಇವೆಯೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಬಹಳಷ್ಟು ಭಾಗ ಸಮುದ್ರಗಳಲ್ಲಿ(Ocean), ಧ್ರುವಪ್ರದೇಶಗಳಲ್ಲಿ, ಘನರೂಪದಲ್ಲಿ, ಮೋಡ-ನೀರಾವಿಯ ರೂಪದಲ್ಲಿದೆ. ಆದ್ದರಿಂದ ಮಾನವ(Human) ಹಾಗೂ ಇನ್ನಿತರ ಕೆಲಜೀವಿಗಳಿಗೆ ಅಗತ್ಯವಿರುವ ಸಿಹಿನೀರು(Sweet water) ದೊರಕುವ ಜಲಮೂಲಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ ತೀರಾ ಕಡಮೆ.

Advertisement
Advertisement
Advertisement

ನಮ್ಮ ಸನಾತನ ಪರಿಕಲ್ಪನೆ ಮತ್ತು ಭಾರತೀಯ ಸಂಸ್ಕøತಿಯಲ್ಲಿ ಪುರಾತನ ಕಾಲದಿಂದಲೂ ನೀರಿಗೆ ವಿಶೇಷ ಸ್ಥಾನವಿದೆ. ನಮ್ಮ ಆರಾಧನಾ ಕ್ರಮಗಳಲ್ಲೂ ಪಂಚಭೂತಗಳ ರೂಪದಲ್ಲಿ ಆಕಾಶ, ವಾಯು, ಭೂಮಿ, ಅಗ್ನಿಯ ಜೊತೆಗೆ ‘ಜಲ’ಕ್ಕೂ ದೈವಿಕಸ್ಥಾನ ನೀಡಲಾಗಿದೆ. ಇಲ್ಲಿ ನಾವು ಅರ್ಥೈಸಿಕೊಳ್ಳಬೇಕಾದ ಸಂಗತಿಯೆಂದರೆ, ನೀರಿಗೆ ದೇವತಾ ಸ್ಥಾನವನ್ನು ನೀಡಿ, ನೀರಿನ ಮಹೋನ್ನತ ಶಕ್ತಿಯ ಜೊತೆಗೆ ಅದರ ಸಂರಕ್ಷಣೆಗೂ ನಮ್ಮವರು ನೀಡಿದ ದೂರದೃಷ್ಟಿಕೋನದ ಪರಿಶ್ರಮ. ಇದು ಗಮನಾರ್ಹ. ಆದರೆ, ಇವುಗಳೆಲ್ಲವನ್ನೂ ಮೀರಿ ಆಧುನಿಕತೆಯ ಅಲೆಗಳಲ್ಲಿ ತೇಲುತ್ತಿರುವ ನಾವು ಬದುಕಿನ ಮೂಲಾಧಾರವಾದ ಪ್ರಕೃತಿಯನ್ನೇ ಮರೆಯುತ್ತಿದ್ದೇವೆ. ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನೇ ಬಳಸಿಕೊಳ್ಳುವ ನೀಚ ಪ್ರಕ್ರಿಯೆಗೆ ಇಳಿದಿದ್ದೇವೆ; ವಿಪರ್ಯಾಸವೆಂದರೆ ಪ್ರಕೃತಿ ನಮ್ಮ ಆವಶ್ಯಕತೆಗಳನ್ನು ಪೂರೈಸಬಲ್ಲುದೇ ಹೊರತು ಸ್ವಾರ್ಥವನ್ನಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತಿಲ್ಲ.

Advertisement

ಪ್ರಕೃತಿಯೊಂದಿಗಿನ ನಮ್ಮ ನಿರಂತರ ಸಂಘರ್ಷದ ಫಲವಾಗಿ ಒಂದೊಂದೇ ಅನಾಹುತ ಪ್ರಕ್ರಿಯೆಗಳಿಗೆ ನಾವು ಸಾಕ್ಷಿಗಳಾಗುತ್ತಿದ್ದೇವೆ. ‘ನಮ್ಮತನ’ಕ್ಕಾಗಿ ಸ್ವಾರ್ಥದಿಂದ ಬದುಕಿದ್ದ ‘ನಮಗೆ’ ‘ನಮ್ಮದೇ ಹಿರಿಮೆ’ ಎಂಬ ಅಹಂಕಾರವನ್ನು ಪ್ರಕೃತಿಯು ಸಲೀಸಾಗಿ ನಮ್ಮ ಮುಂದೆಯೇ ಮುರಿದುಹಾಕುತ್ತಿದೆ. ಹಾಗೆ ನೋಡಿದರೆ ಇದು ಅನಿವಾರ್ಯವೂ ಹೌದು; ಎಚ್ಚರಿಕೆಯ ಕರೆಗಂಟೆಯೂ ಹೌದು! ಇಂತಹ ಪ್ರಾಕೃತಿಕ ಮೌಲ್ಯಪಾಠಗಳಲ್ಲಿ ನಮ್ಮ ಮುಂದೆ ಆರಂಭದಲ್ಲಿ ಕಾಣಿಸಿಕೊಳ್ಳುವುದು ನೀರು. ಇರುವ ಜಲಮೂಲಗಳೆಲ್ಲವೂ ಮನುಷ್ಯನ ದುರಾಸೆ ಮತ್ತು ಆಶಿಸ್ತಿನಿಂದ ಕಲುಷಿತಗೊಳ್ಳುತ್ತಿವೆ. ಎಲ್ಲೆಡೆಯೂ ಕುಡಿಯುವ ನೀರಿಗೆ ಹಾಹಾಕಾರ ಏಳುತ್ತಿದೆ.

ಬಿಬಿಸಿ ಸಂಸ್ಥೆಯವರು ಪ್ರಕಟಿಸಿದ ಸಮೀಕ್ಷೆಯ ಪ್ರಕಾರ ವಿಶ್ವದ ಹನ್ನೊಂದು ನಗರಗಳಲ್ಲಿ ನೀರಿನ ಹಾಹಾಕಾರ ಶೀಘ್ರವೇ ಭೀಕರ ಸ್ವರೂಪ ತಾಳಲಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ದಕ್ಷಿಣ ಆಫ್ರಿಕಾದ ಕೇಪ್‍ಟೌನ್‍ನದ್ದು, ಎರಡನೆಯ ಸ್ಥಾನ ನಮ್ಮ ಬೆಂಗಳೂರಿನದು! ಇದು ಕೇವಲ ಬೆಂಗಳೂರಿನ ಕಥೆ ಮಾತ್ರವಲ್ಲ; ದೇಶಾದ್ಯಂತವೂ ಇದೇ ಪರಿಸ್ಥಿತಿ ಇದೆ. ಹಾಗಾದರೆ ಈ ತೆರನಾದ ಪರಿಸ್ಥಿತಿ ಏಕೆ ಎನ್ನುವ ಪ್ರಶ್ನೆಗೆ ಈ ಕೆಳಗಿನ ಕಾರಣಗಳನ್ನು ಪಟ್ಟಿ ಮಾಡಬಹುದು:

Advertisement

1. ಹೆಚ್ಚುತ್ತಿರುವ ಜನಸಂಖ್ಯೆ.

2. ಜಲಮೂಲಗಳ ಅಸಮರ್ಪಕ ನಿರ್ವಹಣೆ.

Advertisement

3. ಪೋಲಾಗುತ್ತಿರುವ ನೀರಿನ ಪ್ರಮಾಣ.

4. ಅಸಮರ್ಪಕ ಮಳೆನೀರು ಕೊಯ್ಲು.

Advertisement

5. ಎಗ್ಗಿಲ್ಲದೆ ತೋಡುತ್ತಿರುವ ಕೊಳವಿ ಬಾವಿಗಳು.

6. ಮಲಿನಗೊಂಡಿರುವ ಕೆರೆ, ನದಿಮೂಲಗಳು.

Advertisement

7. ಶೇ. 85ರಷ್ಟು ಕೆರೆನೀರು ಬಳಸಲು ಯೋಗ್ಯವಲ್ಲದಿರುವುದು.

8. ಕುಡಿಯುವ ನೀರನ್ನು ಮನೆ ಕಟ್ಟಲು ಹಾಗೂ ಇತರ ಕೆಲಸಗಳಿಗೆ ಬಳಸುವುದು.

Advertisement

9. ಕೈಗಾರಿಕಾ ತ್ಯಾಜ್ಯಗಳನ್ನು ಶುದ್ಧನೀರಿನ ಮೂಲಗಳಿಗೆ ಬಿಡುವುದು.

10. ನಾಳಿನ ಅರಿವಿಲ್ಲದೆ ಯಥೇಚ್ಛವಾಗಿ ನೀರನ್ನು ಪೋಲು ಮಾಡುವುದು.

Advertisement

ಸಾಕೇ! ಇನ್ನೆಷ್ಟು ಬೇಕು, ನಾಳಿನ ಕಂಗೆಟ್ಟ ನಾಳೆಗಳನ್ನು ನೋಡಲು? ಇಂದು ಕಾಡು ನಾಶವಾಗುತ್ತಿರುವ ಕಾರಣ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗುತ್ತಿರುವುದೂ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಡನ್ನು ಉಳಿಸುವ, ಹೆಚ್ಚು ಗಿಡ-ಮರಗಳನ್ನು ಬೆಳೆಸುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಸಾಮಾನ್ಯವಾಗಿ ಬೇಸಗೆಯಲ್ಲಿ ಮಾತ್ರ ನೀರಿನ ಕೊರತೆ ಬಗ್ಗೆ ಗಮನ ಹರಿಸುತ್ತೇವೆ. ಮಳೆಗಾಲದಲ್ಲಿಯೇ ಹರಿದುಹೋಗುವ ನೀರನ್ನು ಸಂರಕ್ಷಿಸಿ ಮುಂದಿನ ದಿನಗಳಿಗೆ ಹಿಡಿದಿಟ್ಟುಕೊಳ್ಳುವ ಯೋಜನೆಯ ಜೊತೆಗೆ ಮಳೆಯ ನೀರನ್ನು ಇಂಗಿಸುವ ವಿಧಾನಗಳ ಬಗ್ಗೆಯೂ ಗಂಭೀರವಾಗಿ ಗಮನ ಹರಿಸಬೇಕಾಗಿದೆ. ಭಾರತ ಅಂತರ್ಜಲ ಬಳಕೆಯಲ್ಲಿ ಆರನೇ ಸ್ಥಾನದಲ್ಲಿದೆ. ಕರ್ನಾಟಕದ ಕೋಲಾರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಂದು ಸಾವಿರಕ್ಕಿಂತ ಹೆಚ್ಚು ಅಡಿ ಆಳಕ್ಕೆ ಭೂಮಿಯನ್ನು ಕೊರೆದರೂ ನೀರು ಸಿಗುತ್ತಿಲ್ಲ. ಇದಕ್ಕೆ ಮಳೆನೀರುಕೊಯ್ಲು ಪದ್ಧತಿಯಿಂದ ಸಮಸ್ಯೆ ಒಂದಷ್ಟು ಮಟ್ಟಿಗೆ ಬಗೆಹರಿಯಬಹುದು.

ಕೆರೆಗಳಲ್ಲಿ ಕಟ್ಟಡ..!: ನೀರು ಮತ್ತು ಮಣ್ಣು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜನಜೀವನ ಸುಗಮವಾಗಿರಲು ಭೂಪ್ರದೇಶದ 3ರಲ್ಲಿ 1 ಭಾಗದಷ್ಟಾದರೂ ಅರಣ್ಯವಿರಬೇಕು. ಹುಲ್ಲಿನ ಹಾಸುಗಳಿದ್ದಲ್ಲಿ ಮಣ್ಣಿನ ಸವಕಳಿ ಉಂಟಾಗುವುದಿಲ್ಲ. ಇದನ್ನು ನಾವು ಕಾಪಾಡಿಕೊಂಡು ಬರಬೇಕು. ಇಂದು ರಾಜ್ಯದಲ್ಲಿ ಕೆರೆಗಳಿದ್ದಲ್ಲೇ ಕಟ್ಟಡ ಕಟ್ಟುತ್ತಿರುವಂತಹ ಪ್ರಕ್ರಿಯೆ ನಡೆಯುತ್ತಿರುವುದು ನಮ್ಮ ರಾಜ್ಯದ ದುಃಸ್ಥಿತಿಗೆ ಕಾರಣ. ಕಾಡು ನಾಶವಾದರೆ ಮಣ್ಣಿನ ಸವಕಳಿ ಉಂಟಾಗುತ್ತದೆ. ಮಣ್ಣಿನ ಸವಕಳಿಯಿಂದ ಜಲಮೂಲಗಳು ಬರಿದಾಗುತ್ತಿವೆ.

Advertisement

ನೀರಿನ ಪೋಲು ಸಾಮಾಜಿಕ ಅಪರಾಧ: ನಲ್ಲಿಯಲ್ಲಿ ಒಂದು ಸೆಕೆಂಡಿಗೆ ಒಂದು ಹನಿಯಷ್ಟು ನೀರು ಸೋರಿ ಹೋದರೂ ದಿನಕ್ಕೆ 50 ಲೀ. ನೀರು ವ್ಯಯವಾಗುತ್ತದೆ. ನೀರು ಪೋಲು ಮಾಡುವುದು ಸಾಮಾಜಿಕ ಅಪರಾಧವಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಬೇಕಾಗಿದೆ.

ಕಣ್ಮರೆಯಾದ ಮದಕಗಳು ಮದಕಗಳು ನೀರು ಇಂಗಿಸುವ ಕೆಲಸ ಮಾಡುತ್ತವೆ. ಇವುಗಳ ಪುನರುಜ್ಜೀವನ ಆಗಬೇಕು. ಭತ್ತದ ಬೆಳೆ ಕಣ್ಮರೆಯಾದಂದಿನಿಂದ ಕರಾವಳಿ ಭಾಗದಲ್ಲಿ ಮದಕಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಇದರ ಜೊತೆಗೆ ಲಭ್ಯವಿರುವ ಕೆರೆಗಳಲ್ಲಿ ಹೂಳು ತುಂಬಿದ್ದು ಇವುಗಳನ್ನು ತೆಗೆಯುವಂತಹ ಕೆಲಸವೂ ಆಗಬೇಕು. ಹರಿಯುವ ನೀರಿಗೆ ಮರಳುಚೀಲಗಳಿಂದ ಕಟ್ಟೆಗಳನ್ನು ಮಾಡಬಹುದು. ಇದರಿಂದ ಹದಿನೈದರಿಂದ ಒಂದು ತಿಂಗಳಿನಷ್ಟು ಕಾಲ ನೀರು ಹೆಚ್ಚುವರಿ ಉಳಿತಾಯವಾಗಲು ಸಾಧ್ಯವಾಗುತ್ತದೆ.

Advertisement

ನೀರನ್ನು ಉಳಿಸಲು ನಾವೇನು ಮಾಡಬೇಕು? ನಮ್ಮ ಅನೇಕ ಸುಧಾರಿತ ಜೀವನಕ್ರಮಗಳಿಂದ ನೀರಿನ ಉಳಿತಾಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಬಹುದು. ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು:

1. ನೀರನ್ನು ಮಿತವಾಗಿ ಬಳಸುವುದು. ಮನೆಯಲ್ಲಿ ನಲ್ಲಿ, ಪೈಪ್‍ಗಳು ಕೆಟ್ಟುಹೋಗಿ ನೀರು ಪೋಲಾಗುತ್ತಿದ್ದರೆ ತಕ್ಷಣ ದುರಸ್ತಿ ಮಾಡುವುದು. ಇಂದಿನ ದಿನಗಳಲ್ಲಿ ಒಂದೊಂದು ಹನಿಯೂ ಅತ್ಯಮೂಲ್ಯ.

Advertisement

2. ವಾಹನಗಳನ್ನು ತೊಳೆಯಲು ನೀರಿನ ಪೈಪನ್ನು ಬಳಸದೆ ಬಕೆಟ್ಟಿನಲ್ಲಿ ನೀರು ತೆಗೆದುಕೊಂಡು ತೊಳೆಯುವುದು. ಇದರಿಂದ ನೀರಿನ ಅತಿ ಪೋಲು ಕಡಮೆಯಾಗುತ್ತದೆ.

3. ಕಡ್ಡಾಯವಾಗಿ ಪ್ರತಿ ಕಟ್ಟಡ-ಮನೆಗಳಲ್ಲಿ ಮಳೆನೀರು ಕೊಯ್ಲು ಅಳವಡಿಸುವುದು.

Advertisement

4. ಕೆರೆ, ನದಿಗಳ ಮೂಲ ಮಲಿನವಾಗದಂತೆ ಎಚ್ಚರವಹಿಸುವುದು.

5. ಸಭೆ, ಸಮಾರಂಭಗಳಲ್ಲಿ ಹೆಚ್ಚು ನೀರು ಪೋಲಾಗದಂತೆ ಜಾಗ್ರತೆ ವಹಿಸುವುದು. ಕಾರ್ಯಾಗಾರಗಳನ್ನು ಹಮ್ಮಿಕೊಂಡು ನೀರಿನ ಸದ್ಬಳಕೆ ಬಗ್ಗೆ ತಿಳಿಸುವುದು.

Advertisement

6. ಪ್ರಕೃತಿ, ಪರಿಸರದ ರಕ್ಷಣೆಗೆ ಒತ್ತುನೀಡುವುದು.

7. ಬಟ್ಟೆ ಒಗೆದ ನಂತರ ಆ ನೀರನ್ನು ಚೆಲ್ಲದೆ ಹೂವಿನ ಗಿಡಗಳಿಗೋ, ಅಂಗಳವನ್ನು ತೊಳೆಯಲಿಕ್ಕೋ ಉಪಯೋಗಿಸಬಹುದು.

Advertisement

8. ಮಕ್ಕಳಿಗೆ ಬಾಲ್ಯದಲ್ಲೇ ನೀರಿನ ಸಂರಕ್ಷಣೆ ಮತ್ತು ಮಿತಬಳಕೆಯ ಬಗ್ಗೆ ಅರಿವು ಮೂಡಿಸುವುದು.

9. ವ್ಯರ್ಥವಾಗಿ ಹರಿದುಹೋಗುವ ನೀರನ್ನು ಮರುಸಂಸ್ಕರಿಸಿ ಇತರ ಉಪಯೋಗಗಳಿಗೆ ಬಳಸಿಕೊಳ್ಳುವ ಯೋಜನೆಗಳತ್ತ ಗಮನ ಹರಿಸುವುದು.

Advertisement

10. ನೀರಿನ ಬಳಕೆಯ ಬಗೆಗಿನ ಜಾಗೃತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು.

ನದಿಗಳು ನೀರಿನ ಮೂಲಗಳಲ್ಲ: ಸ್ವಾತಂತ್ರ್ಯಾನಂತರದ ಎಪ್ಪತ್ತು ವರ್ಷಗಳಲ್ಲಿ ಭಾರತದ ಎಲ್ಲ ನದಿಗಳು ಸರಾಸರಿ ಶೇ. 40ರಷ್ಟು ಕ್ಷೀಣಿಸಿವೆ. ಕೃಷ್ಣಾ ಮತ್ತು ನರ್ಮದಾಗಳಂತಹ ಅನೇಕ ನದಿಗಳು ಶೇ. 60ರಷ್ಟು ಕ್ಷೀಣಿಸಿವೆ. ನದಿ, ಕೊಳ ಅಥವಾ ಸರೋವರಗಳೇ ನೀರಿನ ಮೂಲಗಳೆಂದು ಜನರು ತಿಳಿದಿದ್ದಾರೆ. ಉಷ್ಣವಲಯ ಪ್ರದೇಶದಲ್ಲಿ ಇವು ನೀರಿನ ಮೂಲಗಳಲ್ಲ, ನೀರಿನ ಗಮ್ಯಗಳಷ್ಟೆ. ನಮಗಿರುವುದು ಕೇವಲ ಒಂದೇ ಒಂದು ನೀರಿನ ಮೂಲ, ಅದು ಮಳೆ. ಮುಂಗಾರಿನ ಮಳೆಯು ಸುಮಾರು ನಲವತ್ತೈದರಿಂದ ಅರವತ್ತು ದಿನಗಳವರೆಗೆ ಅಗಾಧಪ್ರಮಾಣದ ನೀರನ್ನು ಸುರಿಸುತ್ತದೆ. ಈ ಅಪಾರ ಪ್ರಮಾಣದ ನೀರು ಹರಿದಾಗ, ಅದನ್ನು ಹಿಡಿದಿಡಲು ನಮ್ಮ ಮಣ್ಣಿನ ಸಾಮಥ್ರ್ಯ ಎಷ್ಟಿದೆ ಎಂಬುದರ ಆಧಾರದ ಮೇಲೆ ನದಿಗಳು ವರ್ಷದಲ್ಲಿ ಎಷ್ಟುದಿನ ಹರಿಯುತ್ತವೆ ಎಂಬುದು ನಿರ್ಧಾರವಾಗುತ್ತದೆ. ಭಾರತದಲ್ಲಿನ ನದಿಗಳು ಯೂರೋಪಿನ ಅಥವಾ ಉತ್ತರ ಅಮೆರಿಕದ ನದಿಗಳಂತೆ ಅಲ್ಲ. ಅಲ್ಲಿ ಹಿಮಗಡ್ಡೆಯಿಂದ ಬರುವ ನೀರು ಲಭ್ಯವಿದೆ. ಹಿಮವು ಸುಮಾರು ಎರಡು ತಿಂಗಳ ಕಾಲ ನೆಲದ ಮೇಲಿರುತ್ತದೆ, ನಿಧಾನವಾಗಿ ಕರಗುತ್ತದೆ ಮತ್ತು ಮಣ್ಣಿಗಿಳಿಯುತ್ತದೆ. ಭಾರತದಲ್ಲಿ ನೀರು ಮಳೆಯಿಂದ ಬರುತ್ತದೆ. ನಾವದನ್ನು ಹಿಡಿದಿಟ್ಟರೆ ನದಿಯು 365 ದಿನಗಳ ಕಾಲ ಆಸರೆಯಾಗಬಹುದು. ಇಲ್ಲದಿದ್ದರೆ ಅದು ಮುಂದಿನ ಹದಿನೈದು ಇಪ್ಪತ್ತು ದಿನಗಳಲ್ಲಿ ಹರಿದುಹೋಗಬಹುದು. ಹಾಗಾದರೆ ನೀರನ್ನು ಹಿಡಿದಿಡಲು ಅನುವುಮಾಡಿಕೊಡುವುದು ಯಾವುದು? ಅಣೆಕಟ್ಟು, ಚೆಕ್ ಡ್ಯಾಂ ನೀರಿನ ಬಳಕೆಯಲ್ಲಿ ಪರಿಣಾಮಕಾರಿಯಾಗಿವೆ. ಆದರೆ ಅವು ನೀರು ಪೂರೈಕೆಯನ್ನು ಉತ್ತಮಗೊಳಿಸಲಾರವು. ಸಸ್ಯಸಂಪತ್ತಿನಿಂದ ಮಾತ್ರ ನೀರನ್ನು ನೆಲದಲ್ಲಿ ಹಿಡಿದಿಡಲು ಸಾಧ್ಯ.

Advertisement

ನೀರಿನ ಬವಣೆಗೆ ಅರಣ್ಯಕೃಷಿ ಎಂಬ ಪರಿಹಾರಮಾರ್ಗ: ನಾವು ನೂರಮೂವತ್ತು ಕೋಟಿ ಜನರಿದ್ದೇವೆ. 2030ರ ವೇಳೆಗೆ ನಾವು ನೂರೈವತ್ತು ಕೋಟಿಯಷ್ಟಾಗುತ್ತೇವೆ. ಅತಿಯಾದ ಜನಸಂಖ್ಯಾ ಒತ್ತಡವಿರುವುದರಿಂದ ಕಾಡನ್ನು ಹೆಚ್ಚಿಸಲಾಗದು. ಹಾಗಿದ್ದರೆ ಅರಣ್ಯಕೃಷಿಯನ್ನು ಕೈಗೊಳ್ಳುವುದೊಂದೇ ನಮಗಿರುವ ದಾರಿ. ನಾವು ಜೀವನೋಪಾಯಕ್ಕೆ ಮಾತ್ರ ಮರಗಳನ್ನು ಉಪಯೋಗಿಸಬೇಕು. ಮರಗಳನ್ನು ಆರ್ಥಿಕ ಕಾರಣಗಳಿಗಾಗಿ ಬೆಳೆಯಬಾರದು. ನಾವು ಅರಣ್ಯಕೃಷಿಗೆ ಮರಳಬೇಕು. ಇದೇನೂ ಹೊಸ ಕಲ್ಪನೆಯಲ್ಲ. ಸುಮಾರು ನಲ್ವತ್ತೈವತ್ತು ವರ್ಷಗಳ ಹಿಂದೆಯೆ ಪರಿಕಲ್ಪನೆ ಇತ್ತು. ರಾಸಾಯನಿಕ ಗೊಬ್ಬರದ ಬಳಕೆ ಆರಂಭವಾದಾಗ ಈ ಪದ್ಧತಿಯ ಪಾಲನೆ ಕಡಮೆಯಾಗಿ ಕೋಟ್ಯಂತರ ಮರಗಳನ್ನು ಕಡಿಯಲಾಯಿತು. ಇದರಿಂದಾಗಿ ಕೇವಲ ಎರಡು ತಲೆಮಾರುಗಳಲ್ಲಿ ನಾವು ಎಂತಹ ಪರಿಸ್ಥಿತಿಯನ್ನು ತಲಪಿದ್ದೇವೆ ಎಂದರೆ, ನಮ್ಮ ಅಂತರ್ಜಲ ಕ್ಷೀಣಿಸಿ, ನದಿಯ ನೀರು ಕಡಮೆಯಾಗುತ್ತಿದೆ. ಪ್ರತಿಯೊಂದು ನೀರಿನ ಮೂಲವೂ ಕ್ಷೀಣಿಸುತ್ತಿದೆ. ಮುಂದಿನ ಕೇವಲ ಎರಡು ತಲೆಮಾರುಗಳಲ್ಲಿ ಭಾರತದ ಶೇ. ಇಪ್ಪತ್ತೈದರಷ್ಟು ಭೂಮಿ ಮರುಭೂಮಿಯಾಗುವ ಹಂತದಲ್ಲಿದೆ. ರೈತರು ಅರಣ್ಯಕೃಷಿ ಮಾಡಲು ತೊಡಗಿದರೆ, ಅದು ಕೇವಲ ನದಿ ಮತ್ತು ಮಣ್ಣನ್ನು ಪುನಶ್ಚೇತನ ಮಾಡುವುದಷ್ಟೇ ಅಲ್ಲದೆ, ರೈತರ ಆದಾಯವನ್ನು ಮೂರರಿಂದ ಎಂಟುಪಟ್ಟು ವೃದ್ಧಿಸುತ್ತದೆ. ಮುಂದಿನ ಪೀಳಿಗೆಗಳು ಚೆನ್ನಾಗಿ ಬದುಕಬೇಕೆಂದರೆ ಸಹಜಕೃಷಿಯೊಂದೇ ಯುಕ್ತಮಾರ್ಗ. ಮಣ್ಣು ಶ್ರೀಮಂತವಾಗಿರಬೇಕಾದರೆ ಪ್ರಾಣಿಗಳ ಮಲ-ಮೂತ್ರ ಮತ್ತು ಮರಗಿಡಗಳ ಎಲೆಗಳಿರಬೇಕು. ಉತ್ತಮ ಭವಿಷ್ಯಕ್ಕಾಗಿ ಸಹಜಕೃಷಿಗೆ ಹಿಂದಿರುಗಿ ಮಣ್ಣನ್ನು ಸಂರಕ್ಷಿಸಲೇಬೇಕಾದ ಅನಿವಾರ್ಯತೆ ಈಗಿದೆ.

ಹೀಗೊಂದು ಲೆಕ್ಕಾಚಾರ: ವಾರ್ಷಿಕವಾಗಿ 3,500 ಮಿ.ಮೀ. ಮಳೆ ಸುರಿಯುತ್ತದೆ ಎಂದಾದರೆ ಒಂದು ಚ.ಮೀ. ಮೇಲೆ 3,500 ಲೀ. ನೀರು, ಒಂದು ಎಕರೆ ಜಾಗದ ಮೇಲೆ 1.4 ಕೋ.ಲೀ. ನೀರು ಶೇಖರಣೆ ಮಾಡಲು ಸಾಧ್ಯವಿದೆ. ಆದರೆ ನಮ್ಮ ರಾಜ್ಯದಲ್ಲಿ ಬೀಳುವ ಮಳೆಯಲ್ಲಿ ಶೇ. 8ರಿಂದ 10ರಷ್ಟು ಪ್ರಮಾಣದ ನೀರು ಮಾತ್ರ ಭೂಮಿಗೆ ಸೇರುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ ನೀರನ್ನು ಉಳಿಸುವ, ಸಂಗ್ರಹಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ದಕ್ಷಿಣಕನ್ನಡ ಅಥವಾ ಕರಾವಳಿಯ ನೆರೆಜಿಲ್ಲೆಗಳಲ್ಲಿ ಒಂದು ಹೆಕ್ಟೇರ್ ಜಮೀನಿನ ಮಳೆಕೊಯ್ಲಿನಿಂದ 9000m3 (9000×1000 = 90 ಲಕ್ಷ ಲೀ.) ನೀರನ್ನು ಪಡೆಯಬಹುದು. ಇದನ್ನು ಬೇಸಗೆಯ ಐದು ತಿಂಗಳು ಬಳಸಬಹುದು. ಟ್ಯಾಂಕರ್ ನೀರನ್ನು ಆಶ್ರಯಿಸುವ ಸಂಸ್ಥೆ ಮಳೆಕೊಳದ ವೆಚ್ಚವನ್ನು ಐದು ವರ್ಷಗಳಲ್ಲಿ ಹಿಂಪಡೆಯಬಹುದು. ಮಳೆಕೊಳಗಳ ನಿರ್ಮಾಣವೂ ನೀರಿನ ಸಂಗ್ರಹ ಮತ್ತು ಪುನಶ್ಚೇತನಕ್ಕೆ ಸಹಕಾರಿ. ಬೀಳುವ ಮಳೆಯ ಶೇ. 30 ನೀರನ್ನು ಮಳೆಕೊಳಗಳಲ್ಲಿ ಹಿಡಿದಿಡಬಹುದು. ನಿಮ್ಮೂರಿನ ಮಳೆ 300 ಸೆ.ಮೀ. (200 ಮಿ.ಲೀ.) ಆದರೆ ಒಂದು ಹೆಕ್ಟೇರ್ ಜಾಗದಿಂದ (1000x2x30x/100) 6000 ಮೀ. ಅಂದರೆ 60 ಲಕ್ಷ ಲೀಟರ್ ಕೊಯ್ಲು ಮಾಡಲು ಸಾಧ್ಯ. ನಮ್ಮಲ್ಲಿ ಬೇಸಗೆ ಜನವರಿಯಿಂದ ಮೇ ತನಕ ಎಂದಿಟ್ಟುಕೊಳ್ಳೋಣ. ಈ ಅವಧಿಗೆ ನಾವು ದಿನಾಲೂ 40,000 ಲೀ. ನೀರನ್ನು ಈ ಸಂಗ್ರಹದಿಂದ ಎತ್ತಿಕೊಳ್ಳಬಹುದು. ಕರಾವಳಿ ಕರ್ನಾಟಕದಲ್ಲಿ ಪ್ರತಿ ಚದರ ಅಡಿಯ ಮೇಲೆ 3.5 ಸಾವಿರ ಮಿ.ಮೀ. ಮಳೆ ಸುರಿಯುತ್ತದೆ. ಅಂದರೆ ಚದರ ಮೀ. ಜಾಗದ ಮೇಲೆ 1 ಮಿ.ಮೀ. ಮಳೆ ಬಿದ್ದರೆ 1 ಮೀಟರ್ ಆಗುತ್ತದೆ. ಈ ಎಲ್ಲ ಲೆಕ್ಕಾಚಾರಗಳಿಂದಲೇ ನೀರಿನ ಉಳಿತಾಯದತ್ತ ಗಮನ ಹರಿಸಬೇಕು.

Advertisement

ನೀರಿನ ಬಳಕೆಗೆ ರೂಪರೇಖೆ ಅಗತ್ಯ ಲಭ್ಯವಿರುವ ನೀರನ್ನು ಎಚ್ಚರದಿಂದ ಬಳಸಿಕೊಳ್ಳ ಬೇಕು. ಇಂಗುಬಾವಿ, ಮದಕಗಳು, ಕೆರೆಗಳು, ಚೆಕ್ ಡ್ಯಾಂ, ಮಳೆಕೊಳಗಳು, ಸ್ಟೋರೇಜ್ ವಾಟರ್ ಝೋನ್‍ಗಳಂತಹ ಸಾಕಷ್ಟು ವಿಧಾನಗಳ ಮೂಲಕ ನೀರನ್ನು ದಾಸ್ತಾನು ಇಡಲು ಸಾಧ್ಯವಿದೆ. ಖಾಲಿ ಜಾಗಗಳಲ್ಲಿ ಇಂಗುಬಾವಿಗಳು/ಗುಂಡಿಗಳನ್ನು ನಿರ್ಮಿಸಿ, ನೀರಿಂಗಿಸಬಹುದು. ಓಡುವ ನೀರನ್ನು ನಡೆಯುವ ಹಾಗೆ ಮಾಡಿ; ನಡೆಯುವ ನೀರನ್ನು ತೆವಳುವ ಹಾಗೆ ಮಾಡಿ; ತೆವಳುವ ನೀರನ್ನು ನಿಲ್ಲಿಸಿ; ನಿಂತ ನೀರನ್ನು ಇಂಗಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ನೀರಿನ ವ್ಯವಹಾರ ಬ್ಯಾಂಕಿನಂತಾಗಿದ್ದು, ನಾವು ಶೇಖರಿಸಿಟ್ಟ ಹಾಗೆ ಉಪಯೋಗ ಮಾಡಬಹುದು. ಜಲತಜ್ಞ ಶ್ರೀಪಡ್ರೆಯವರ ಮಾತಿನಂತೆ ‘ಬಡವರು ಉಪಯೋಗಿಸುವ ತುಪ್ಪದ ರೀತಿಯಲ್ಲಿ ನಾವು ನೀರನ್ನು ಉಪಯೋಗಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು.’

ಮುಗಿಸುವ ಮುನ್ನ ಎತ್ತಿನಹೊಳೆ ಯೋಜನೆಗೆ ಸರ್ಕಾರ 13 ಸಾವಿರ ಕೋಟಿ ರೂ. ಮೊತ್ತವನ್ನು ಖರ್ಚು ಮಾಡುತ್ತಿರುವುದನ್ನು ಕಂಡ ದೇಶದ ವಿಜ್ಞಾನಿಗಳ ತಂಡವೊಂದು, ಕೇವಲ ಐದು ಸಾವಿರ ಕೋಟಿ ಮೊತ್ತದಲ್ಲಿ ಇಡೀ ಕರ್ನಾಟಕ ರಾಜ್ಯಕ್ಕೆ ನೀರೊದಗಿಸುತ್ತೇವೆ ಎಂದು ಇತ್ತೀಚೆಗೆ ಹೇಳಿದೆ. ಇಲ್ಲಿ ವಿಜ್ಞಾನಿಗಳ ಆಲೋಚನೆ ಡಿಸಲೈನೇಶನ್ (Desalination) ಆಗಿದೆ. ಜಗತ್ತಿನ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ ನೀರಿನ ಮೂಲಗಳಿಲ್ಲದ ಹಾಗೂ ಅಂತರ್ಜಲವೇ ಇಲ್ಲದ ರಾಷ್ಟ್ರಗಳು ಸಮುದ್ರದ ನೀರನ್ನೇ ಡಿಸಲೈನೇಶನ್ ಮೂಲಕ ಶುದ್ಧೀಕರಿಸಿ ಬಳಸುತ್ತಿವೆ. ಎಷ್ಟೇ ವಿಜ್ಞಾನ-ತಂತ್ರಜ್ಞಾನ ಮುಂದುವರಿದರೂ ನೀರನ್ನು ನಾವು ಪ್ರಯೋಗಾಲಯಗಳಲ್ಲಿ ತಯಾರಿಸಲು ಸಾಧ್ಯವಿಲ್ಲ. ಪ್ರಕೃತಿ ನಮ್ಮ ಮೇಲೆ ಕೃಪೆ ತೋರಿ ಮಳೆ ಸುರಿಸಬೇಕು. ಅದಕ್ಕೆ ಪೂರಕ ವಾತಾವರಣವನ್ನು ನಾವಿಲ್ಲಿ ಕಲ್ಪಿಸಬೇಕಾಗಿದೆ. ನೀರನ್ನು ಮಿತವಾಗಿ ಬಳಸಿ, ಸಂರಕ್ಷಿಸಿ, ಜೀವಸೆಲೆಯನ್ನು ಉಳಿಸುವ ಧ್ಯೇಯ ನಮ್ಮದಾಗಲಿ. ‌‌‌ ‌

Advertisement

Source : ಅಂತರ್ಜಾಲ

(ಮೂಲ ಬರಹಗಾರರ ಮಾಹಿತಿ ಇಲ್ಲ, ಆದರೆ ಇಂದಿನ ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾದ ಮಾಹಿತಿ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror