ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ. ಮಂಡಳಿಯ 7 ರಿಂದ 8 ಪೈಸೆಯಷ್ಟು ಏರಿಸಲು ಪ್ರಸ್ತಾಪ ಸಲ್ಲಿಸಿದ್ದು, ಈ ಬಗ್ಗೆ ಬೆಂಗಳೂರಿನ ಶಾಸಕರ ಬಳಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿ ಗೌಡ ವಿಷಯ ಪ್ರಸ್ತಾಪಿಸಿ, ಬೇಸಿಗೆ ಆರಂಭವಾಗುತ್ತಿದ್ದು, ಬೆಂಗಳೂರಿನ ಪೂರ್ವ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಶೀಘ್ರವೇ ಕಾವೇರಿ ನೀರು ಒದಗಿಸಬೇಕು ಎಂದು ಸದನದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿ ಸಚಿವ ಡಿ.ಕೆ.ಶಿವಕುಮಾರ್, ವಸತಿ ಸಮುಚ್ಛಯಗಳು ಅನುಮತಿ ಪಡೆಯದೆ ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿದ್ದು, ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಏಕಾಏಕಿ ದೊಡ್ಡ ಮಟ್ಟದ ದರ ಹೆಚ್ಚಳ ಮಾಡಬಾರದು ಎನ್ನುವ ಉದ್ದೇಶದಿಂದ ಒಂದು ಪೈಸೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು. 2014ರಿಂದ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಇದರಿಂದಾಗಿ ಬೆಂಗಳೂರು ನೀರು ಸರಬರಾಜು ಮಂಡಳಿಗೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಸಿಬ್ಬಂದಿಗೂ ವೇತನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ನೀರಿನ ದರ ಪರಿಷ್ಕರಣೆ ಅನಿವಾರ್ಯ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.