ಮುಂಗಾರು ಮಳೆ ಚುರುಕುಗೊಂಡರು, ಈ ಬಾರಿ ಮಳೆಯ ಪ್ರಮಾಣ ಕಡಿಮೆ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಆದರೆ ಕಳೆದ ಎರಡು ದಿನದಿಂದ ಕೊಡಗು (Kodagu) ಜಿಲ್ಲೆಯಲ್ಲಿ ಭಾರೀ ಮಳೆ (Rain) ಸುರಿಯುತ್ತಿರುವುದರಿಂದ ಕುಶಾಲನಗರದ ಹಾರಂಗಿ ಜಲಾಶಯದ (Harangi Dam) ಒಳಹರಿವಿನ ಪ್ರಮಾಣ 20 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕ್ಷಣ ಕ್ಷಣಕ್ಕೂ ಒಳಹರಿವು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದರಿಂದ ರಾತ್ರಿ 12 ಗಂಟೆ ಸುಮಾರಿಗೆ ಜಲಾಶಯದಿಂದ ಸುಮಾರು 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿತ್ತು. ಇದೀಗ ನೀರಿನ ಒಳಹರಿವು ಹೆಚ್ಚಾಗಿದ್ದು, ಇನ್ನಷ್ಟು ನೀರನ್ನು ಹೊರಬಿಡುವ ಸಾಧ್ಯತೆ ಇದೆ. ಇದರಿಂದ ಕಾವೇರಿ ಮತ್ತು ಹಾರಂಗಿ ನದಿ ದಂಡೆಯಲ್ಲಿ ಪ್ರವಾಹದ (Flood) ಭೀತಿ ಸೃಷ್ಟಿಯಾಗಿದೆ.
ರಾಜ್ಯದಾದ್ಯಂತ ಮುಂದಿನ 5 ದಿನ ಭಾರೀ ಮಳೆಯ (Rain) ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಮೂರು ಜಿಲ್ಲೆಗಳಿಗೂ ಇಂದು ಹಾಗೂ ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ನಂತರದ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಿದೆ. ಉತ್ತರ ಒಳನಾಡಿಗೆ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಿದ್ದು, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಸಾಧಾರಣ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
- ಅಂತರ್ಜಾಲ ಮಾಹಿತಿ