ಕೇರಳದ ವಯನಾಡಿನಲ್ಲಿನಡೆದ ದುರಂತ ನಿಜಕ್ಕೂ ಇಡೀ ಮನಕುಲವನ್ನೇ ಬೆಚ್ಚಿ ಬೀಳಿಸುವಂತದ್ದು. ಯಾರೂ, ಎಲ್ಲಿ, ಯಾವಾಗ ಏನಾಯ್ತು ಅನ್ನೋದನ್ನು ತಿಳಿಯುವಷ್ಟರಲ್ಲಿ ಎಲ್ಲವೂ ಮಣ್ಣು ಪಾಲಾಗಿತ್ತು. ಇಂತಹ ದುರಂತದ ನಡುವೆಯೂ ಕುಟುಂಬವೊಂದು ತಪ್ಪಿಸಿಕೊಂಡು ದೀಪದ ಬೆಳಕಿನಲ್ಲಿ ಗುಡ್ಡ ಹತ್ತಿದೆ. ಅಲ್ಲಿ ಹೋದರೆ ಬೆಂಕಿಯಿಂದ ತಪ್ಪಿಸಿಕೊಂಡು ಬಂದವರಿಗೆ ಬಾಣಲೆಗೆ ಬಿದ್ದ ಪರಿಸ್ಥಿತಿ ಎದುರಾಗಿದೆ. ಆದರೆ ಅವರನ್ನು ಕೈ ಹಿಡಿದು ಕಾಪಾಡಿದ್ದು ಅದೇ.
ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ಆ ಕರಾಳ ರಾತ್ರಿ ಬೆಟ್ಟದಲ್ಲಿ ಎದುರಾಗಿದ್ದು ಒಂದು ದೈತ್ಯ ಕಾಡಾನೆ. ಆದರೆ ಅವರನ್ನು ಕಾಪಾಡಿ ಅವರಿಗೆ ಬೆಳಗಾಗುವ ತನಕ ಕಾವಾಲಾಗಿ ನಿಂತಿದ್ದು ಇದೇ ಗಜರಾಜ. ಸಾವಿನ ದವಡೆಯಿಂದ ಪಾರಾಗಿ ಬಂದ ವೃದ್ಧೆ ಸುಜಾತ ಈ ಕುರಿತು ಸ್ಥಳೀಯರೊಬ್ಬರಿಗೆ ಮಾಹಿತಿ ಕೊಟ್ಟಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಏಶಿಯಾನೆಟ್ ನ್ಯೂಸ್ ಸಹಿತ ಕೇರಳದ ವಿವಿಧ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ.ಮಹಿಳೆಯ ಜೊತೆ ಮಾತನಾಡಿದ್ದಾರೆ. ಅವರು ಹೇಳಿದ್ದು ಹೀಗೆ….
ರಾತ್ರಿ ಭಾರೀ ಮಳೆಯಾಗುತ್ತಿದ್ದರಿಂದ, ಮಧ್ಯರಾತ್ರಿ 1:15ಕ್ಕೆ ಎಚ್ಚರವಾಯಿತು. ದೊಡ್ಡ ಶಬ್ದ ಕೇಳಿಸಿದ ಬೆನ್ನಲ್ಲೇ ನಮ್ಮ ಮನೆಗೆ ನೀರು ನುಗ್ಗಿತು. ನಾವೆಲ್ಲರೂ ಹಾಸಿಗೆಯ ಮೇಲೆ ಕುಳಿತೆವು. ಆಗ ನಮ್ಮ ನೆರೆಹೊರೆಯವರ ಮನೆಗಳ ಅವಶೇಷಗಳ ಜೊತೆಗೆ ದೊಡ್ಡ ಮರದ ದಿಮ್ಮಿಗಳು ಮನೆಯ ಮೇಲೆ ಬಡಿಯುತ್ತಿದ್ದವು. ನಮ್ಮ ಮನೆಯ ಮೇಲ್ಛಾವಣಿ ನಮ್ಮ ಮೇಲೆ ಕುಸಿದು ಬಿದ್ದಿದ್ದು, ನನ್ನ ಮಗಳು ಗಂಭೀರವಾಗಿ ಗಾಯಗೊಂಡಿದ್ದಳು. ಗುಡ್ಡ ಜರಿದು ಮನೆ ಉರುಳಿ ಬಿದ್ದಾಗ ಮನೆಯ ಚಿಮಿಣಿಯಲ್ಲಿ ಸ್ವಲ್ಪ ಜಾಗ ಕಾಣಿಸಿತು. ನಾನು ಇಟ್ಟಿಗೆ ರಾಶಿಯನ್ನು ಸರಿಸಿ ಜಾಗ ಮಾಡಿಕೊಂಡು ಮಗಳು, ಮೊಮ್ಮಗಳು, ಅಳಿಯ ಎಲ್ಲರೂ ಹೊರ ಬಂದು ಬೆಟ್ಟದ ಬಳಿ ಓಡಿದೆವು.
ಹೇಗೋ ಒದ್ದಾಡಿ ಬೆಟ್ಟದ ಬಳಿಗೆ ಬಂದಾಗ ಅಲ್ಲಿ ದೊಡ್ಡ ಕಾಡಾನೆ ನಿಂತಿತ್ತು. ಆಗ ಆನೆ ಬಳಿ ನಿಂತು ಪ್ರಾರ್ಥನೆ ಮಾಡಿದೆವು. ಒಂದು ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೇವೆ. ನೀನು ನಮಗೇನೂ ಮಾಡಬೇಡಪ್ಪಾ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ. ಆನೆಯ ಕಣ್ಣಿನಿಂದಲೂ ನೀರು ಬಂತು. ರಾತ್ರಿ ಬೆಳಗಾಗುವವರೆಗೆ ನಾವು ಆನೆಯ ಕಾಲಿನ ಹತ್ತಿರವೇ ಸಮಯ ಕಳೆದೆವು. ರಾತ್ರಿ ಪೂರ್ತಿ ಮಳೆ, ಸರಿಯಾಗಿ ನಿಂತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಯಾದಾಗ ಎಲ್ಲಿಂದಲೋ ಜನರು ಬಂದರು. ನಮ್ಮನ್ನು ಕಾಪಾಡಲು ನಮ್ಮ ಊರಿನವರು ಯಾರೂ ಬದುಕುಳಿದಿರಲಿಲ್ಲ. ಆಮೇಲೆ ದೂರದೂರಿನಿಂದ ಬಂದ ಜನರು ನಮ್ಮನ್ನು ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದರು ಎಂದು ಸುಜಾತ ತಿಳಿಸಿದರು.