ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ತಾಲೂಕುವಾರು ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ ಹಾಗೂ ಶಿಗ್ಗಾವಿ ತಾಲೂಕಿನಲ್ಲಿ ಅಡಿಕೆ, ಶುಂಠಿ, ಮಾವು ಮತ್ತು ಹಸಿ ಮೆಣಸಿನಕಾಯಿ ಬೆಳೆ, ಹಾವೇರಿ, ಸವಣೂರ, ರಾಣೆಬೆನ್ನೂರು ತಾಲೂಕುಗಳಲ್ಲಿ ಹಸಿ ಮೆಣಸಿಕಾಯಿ, ಮಾವು ಬೆಳೆಗಳಿಗೆ ವಿಮೆ ಅನುಷ್ಠಾನಗೊಳಿಸಲಾಗುತ್ತಿದೆ. ಬೆಳೆ ಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರು, ತಮ್ಮ ಆಧಾರ್ ಕಾರ್ಡ್ ಪ್ರತಿ, ಪಹಣಿ ಪ್ರತಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕುಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು.
ಜುಲೈ 31 ಕೊನೆಯ ದಿನವಾಗಿದ್ದು, ಹಾವೇರಿ ಜಿಲ್ಲೆಗೆ ವಿಮೆ ಅನುಷ್ಠಾನಗೊಳಿಸಲು ಎಸ್.ಡಿ.ಎಫ್.ಸಿ ಎರಗೊ ಜನರಲ್ ಇನ್ಶುರೆನ್ಸ್ ಕಂಪನಿಗೆ ಜವಾಬ್ದಾರಿ ವಹಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರು, ಕಾಲಕಾಲಕ್ಕೆ ಖುದ್ದಾಗಿ ಅಥವಾ ಗ್ರಾಮ ಲೆಕ್ಕಾಧಿಕಾರಿ ಸಮ್ಮುಖದಲ್ಲಿ ಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಇಲ್ಲವಾದಲ್ಲಿ ಬೆಳೆ ವಿಮೆ ಕ್ಲೇಮ್ ಆಗುವುದಿಲ್ಲ. ವಿಮೆ ಕುರಿತ ಮಾಹಿತಿಗೆ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ತೋಟಗಾರಿಕೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸಿದ್ದರಾಮಯ್ಯ ಬರಗಿಮಠ ಮಾಹಿತಿ ನೀಡಿದ್ದಾರೆ.