20.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಸ್ವಲ್ಪ ಮಟ್ಟಿಗೆ ಚಳಿ ಪ್ರಮಾಣವು ಕಡಿಮೆಯಾಗಿದ್ದು ಒಣ ಹವೆ ಮುಂದುವರಿಯಲಿದೆ. ಈಗಿನಂತೆ ಡಿ. 22ರಿಂದ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಗಳಿದ್ದು, ಸೆಖೆ ಆರಂಭವಾಗುವ ಲಕ್ಷಣಗಳಿವೆ. 25ರಿಂದ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಯೂ ಇದೆ.
ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಈಗಿನಂತೆ ಚಳಿಯ ಪ್ರಮಾಣ ಈಗಾಗಲೇ ಕಡಿಮೆಯಾಗಿದ್ದು, ಡಿ. 22ರಿಂದ ಮೋಡದ ವಾತಾವರಣದ ಜೊತೆಗೆ ತುಂತುರು ಮಳೆಯ ಸಾಧ್ಯತೆ ಇದೆ.
ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದ್ದು, ಚಳಿಯ ಪ್ರಮಾಣ ಹೆಚ್ಚಿರಬಹುದು. ದಕ್ಷಿಣ ಒಳನಾಡಿನ ಚಳಿಯ ಪ್ರಮಾಣವು ಕಡಿಮೆಯಾಗಿದ್ದು ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹಗುರ ಮೋಡದ ವಾತಾವರಣದ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಈಶಾನ್ಯಕ್ಕೆ ಚಲಸುತ್ತಿದ್ದರೂ ನಿಧಾನ ಗತಿಯಲ್ಲಿದೆ. ಶಿಥಿಲಗೊಳ್ಳಲು ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಡಿ. 22ರಿಂದ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯ ಗಾಳಿಯು ಭೂಪ್ರವೇಶಿಸಿ ಜೊತೆಯಾಗಿ ಉತ್ತರ ಭಾರತದ ಕಡೆಗೆ ಚಲಿಸುವುದರಿಂದ ರಾಜ್ಯದಾದ್ಯಂತ ಚಳಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳೊಂದಿಗೆ ಅಲ್ಲಲ್ಲಿ ಮಳೆಯ ವಾತಾವರಣವು ಸೃಷ್ಠಿಯಾಗುವ ಸಾಧ್ಯತೆಗಳಿವೆ.
ಇದರೊಂದಿಗೆ ಉತ್ತರ ರಾಜಸ್ಥಾನದಲ್ಲಿ ತಿರುಗುವಿಕೆ ಆರಂಭವಾಗುವ ಲಕ್ಷಣಗಳಿದ್ದು. ಉತ್ತರ ಭಾರತದ ಹಲವು ಕಡೆ ಡಿ. 24ರ ನಂತರ ಮಳೆಯ ಮುನ್ಸೂಚನೆ ಇದೆ.