ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಹೆಚ್ಚು ತಾಪಮಾನವು ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಡಾ ಎಂ ಮೊಹಾಪಾತ್ರ ಎಚ್ಚರಿಸಿದ್ದಾರೆ. ಹರಿಯಾಣ, ಪಂಜಾಬ್, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ವಿದರ್ಭದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಹೀಟ್‌ವೇವ್ ಮೇ 2 ರವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ. ಈ ನಡುವೆ ಪಶ್ಚಿಮ ಬಂಗಾಳದ ವಿವಿದೆಡೆ ಮಳೆಯಾಗಿದ್ದು, ಕೋಲ್ಕತ್ತಾದಲ್ಲಿ 60 ದಿನಗಳ ನಂತರ ಮೊದಲ ಮಳೆಯಾಗಿದ್ದು, ಬಿಸಿಲಿನ ಅಲೆಯಿಂದ ಜನರಿಗೆ ಕೊಂಚ ನಿರಾಳವಾಗಿದೆ.
ದೆಹಲಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ವೀಕ್ಷಣಾಲಯದಲ್ಲಿ ಶುಕ್ರವಾರ ಗರಿಷ್ಠ ತಾಪಮಾನ 46.4 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದರೆ, ರಾಷ್ಟ್ರ ರಾಜಧಾನಿಯ ಮೂಲ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಶನಿವಾರ ಕೊಂಚ ಇಳಿಕೆಯಾಗಿ 43.5 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ನಗರದಲ್ಲಿ 12 ವರ್ಷಗಳಲ್ಲೇ ಏಪ್ರಿಲ್‌ನಲ್ಲಿ ಒಂದು ದಿನದ ಗರಿಷ್ಠ ತಾಪಮಾನ ಇದಾಗಿದೆ. ಏಪ್ರಿಲ್ 18, 2010 ರಂದು ದೆಹಲಿಯಲ್ಲಿ ಗರಿಷ್ಠ ತಾಪಮಾನ 43.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ 47.4 ಡಿಗ್ರಿ ತಲಪಿದೆ. ಕೆಲವು ರಾಜ್ಯಗಳಲ್ಲಿ ಇದೇ ಮಾದರಿಯಲ್ಲಿ ಉಷ್ಣತೆ ಏರಿಕೆ ಕಂಡಿದೆ. ಈ ವರ್ಷ ಏಪ್ರಿಲ್ ತಿಂಗಳ ವಾಯುವ್ಯ ಮತ್ತು ಮಧ್ಯ ಭಾರತದ ಸರಾಸರಿ ಗರಿಷ್ಠ ತಾಪಮಾನವು ಕಳೆದ 122 ವರ್ಷಗಳಲ್ಲಿ ದಾಖಲಾದ ಉಷ್ಣತೆಗಳಲ್ಲಿ ಅತ್ಯಧಿಕವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ನಡುವೆ ಕೋಲ್ಕತ್ತಾದಲ್ಲಿ 60 ದಿನಗಳ ನಂತರ ಮೊದಲ ಮಳೆಯಾಗಿದೆ. ಈಗಿನ ಪ್ರಕಾರ ಮೇ.4 ರವರೆಗೆ ಕೋಲ್ಕತ್ತಾ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮಳೆಯಾಗದಿರುವುದು ಇದೇ ಮೊದಲು” ಎಂದು ಪ್ರಾದೇಶಿಕ ಹವಾಮಾನ ಇಲಾಖೆಯ ನಿರ್ದೇಶಕ ಜಿಕೆ ದಾಸ್ ಹೇಳಿದ್ದಾರೆ.