ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಒಳನಾಡು ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಶನಿವಾರ ಮತ್ತು ಭಾನುವಾರವೂ ಮಳೆಯಾಗಲಿದೆ. ಆದರೆ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಸರಣಿ ರ್ಯಾಲಿ ನಡೆಸಲಿದ್ದು, ಮಳೆರಾಯ ಅಡ್ಡಿಪಡಿಸಲಿದ್ದಾನೆಯೇ ಎಂಬುದು ಪ್ರಶ್ನೆಯಾಗಿದೆ. ಜೊತೆಗೆ ಬಿಜೆಪಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
IMD ಅಧಿಕಾರಿಗಳ ಪ್ರಕಾರ, ನೈಋತ್ಯ ಮಧ್ಯಪ್ರದೇಶದಿಂದ ತಮಿಳುನಾಡಿಗೆ ಒಳನಾಡಿನ ಕರ್ನಾಟಕದಾದ್ಯಂತ ಗಾಳಿಯ ಪ್ರಭಾವ ವಿರಳಗೊಂಡಿದೆ. ಉತ್ತರ ತಮಿಳುನಾಡಿನ ಮೇಲೆ ಚಂಡಮಾರುತದ ಪರಿಚಲನೆಯೂ ಇದೆ. ಈ ವ್ಯವಸ್ಥೆಗಳ ರಚನೆಯಿಂದಾಗಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಹಗಲಿನಲ್ಲಿ ಹಗುರದಿಂದ ಸಾಧಾರಣ ಮಳೆಯಿದ್ದರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಒಳನಾಡಿನ ಬಹುತೇಕ ಭಾಗಗಳಲ್ಲಿ ರಾತ್ರಿಯಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮುಂದಿನ ದಿನಗಳಲ್ಲಿ ಕ್ಯುಮುಲೋನಿಂಬಸ್ ಮೋಡಗಳು ಕೂಡ ರಚನೆಯಾಗಲಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಐಎಂಡಿ ಅಧಿಕಾರಿಗಳು ಬೆಂಗಳೂರಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ. ಸದ್ಯ ಮಳೆಯು ಬೇಸಿಗೆಯ ತಾಪಕ್ಕೆ ಕೊಂಚ ವಿರಾಮ ತಂದಿದೆ. ನಗರದಲ್ಲಿ ಬುಧವಾರ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 29.9 ಡಿಗ್ರಿ ಸೆಲ್ಸಿಯಸ್ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 29.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಈ ವಾರ 14 ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. 5 ರಾಜ್ಯಗಳಲ್ಲಿ ಲಘು ಮಳೆ ಮತ್ತು 10 ರಾಜ್ಯಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತದ ಎಚ್ಚರಿಕೆ ನೀಡಲಾಗಿದೆ.