ಭಾರತದ ಮಹತ್ವಾಕಾಂಕ್ಷಿಯ ಯೋಜನೆ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್‌ಗೆ ಪ್ರಯತ್ನಿಸಲು ಕೇವಲ ಎರಡು ದಿನಗಳು ಬಾಕಿ ಇರುವ ವೇಳೆ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಆರ್ಬಿಟರ್‌ನೊಂದಿಗೆ ದ್ವಿಮುಖ ಸಂವಹನವನ್ನು ಸ್ಥಾಪಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಹೇಳಿದೆ. ಚಂದ್ರಯಾನ-3 ಮತ್ತು ಚಂದ್ರಯಾನ-2 ಆರ್ಬಿಟರ್ ನಡುವೆ ಸಂವಹನವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಚಂದ್ರಯಾನ-2 ಮಿಷನ್‌ನ ಲ್ಯಾಂಡರ್ ಕಳೆದುಹೋದರೂ, ಪ್ರದಾನ, ಆರ್ಬಿಟರ್, ಪ್ರಸ್ತುತ ಚಂದ್ರನ ಸುತ್ತ 100 ಕಿಮೀ x 100 ಕಿಮೀ ಕಕ್ಷೆಯಲ್ಲಿತ್ತು. ಹೀಗಾಗಿ ಚಂದ್ರಯಾನ-2ನ ಆರ್ಬಿಟರ್ ವಾಹನ-ಚಂದ್ರಯಾನ 3ನ್ನು ಸ್ವಾಗತಿಸಿದೆ. ಇಬ್ಬರ ನಡುವೆ ದ್ವಿಮುಖ ಸಂವಹನ ನಡೆದಿದೆ. ಇಸ್ರೋ ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಇತ್ತೀಚಿನ ಹೊಸ ಅಪ್ಡೇಟ್ ಇದಾಗಿದೆ. ಕಳೆದ 5 ವರ್ಷಗಳಿಂದ ಏಕಾಂಗಿಯಾಗಿ ಚಂದ್ರನ ಕಕ್ಷೆ ಸುತ್ತುತ್ತಿದ್ದ ಈ ಆರ್ಬಿಟರ್ ವಿಕ್ರಮ್ ಲ್ಯಾಂಡರ್‌ನ ಸಂಪರ್ಕ ಸಿಕ್ಕಿದೆ. ಕಳೆದ ಬಾರಿ ಕಳುಹಿಸಿದ್ದ ಆರ್ಬಿಟರ್ ಸುಸ್ಥಿತಿಯಲ್ಲಿದ್ದ ಕಾರಣ ಈ ಬಾರಿ ಕೇವಲ ಲ್ಯಾಂಡರ್ ಮತ್ತು ರೋವರ್ ಅನ್ನು ಕಳುಹಿಸಿತ್ತು.
ಆಗಸ್ಟ್ 21ರಂದು ಚಂದ್ರಯಾನ-3 ಲ್ಯಾಂಡಿಂಗ್ ಕುರಿತು ಇಸ್ರೋ ಇತ್ತೀಚಿನ ನವೀಕರಣವನ್ನು ಬಿಡುಗಡೆ ಮಾಡಿದೆ. ಲ್ಯಾಂಡಿಂಗ್ ಸಮಯವನ್ನು ಆಗಸ್ಟ್ 23ರಂದು ಸಂಜೆ 6.04ಕ್ಕೆ ಇರಿಸಲಾಗಿದೆ. ಈ ಬಾರಿ ಲ್ಯಾಂಡಿಂಗ್ ವೇಳೆ ಯಾವುದೇ ಅಪಾಯವನ್ನು ತಪ್ಪಿಸಲು ಕ್ಯಾಮಾರ ಬಳಸಿ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದೆ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುವ ಈ ಕ್ಯಾಮೆರಾವನ್ನು ಇಸ್ರೋ ಬಳಕೆ ಮಾಡುತ್ತಿದೆ.