ದತ್ತಾತ್ರೇಯ ಜಯಂತಿ(Dattatreya Jayanti).. ಮಾರ್ಗಶಿರ ಮಾಸದ ಪೂರ್ಣಿಮೆಯಂದು ದತ್ತರ ಜನ್ಮವಾದ ಕಾರಣ, ಈ ದಿನ ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ,(Brahma, Vistnu, Maheshwara) ಈ ಮೂರೂ ದೇವರ ಶಕ್ತಿಯು ಕೇಂದ್ರಿತವಾಗಿ ದತ್ತಾತ್ರೇಯರಲ್ಲಿ ಸಮ್ಮಿಲಿತವಾಗಿದೆ ಎಂದು ಹೇಳಲಾಗುತ್ತದೆ. ಶ್ರೀ ಗುರುದೇವ ದತ್ತರ ಸ್ಮರಣೆ ಮಾತ್ರದಿಂದ ಕಷ್ಟಗಳು ನಾಶವಾಗುತ್ತವೆ. ಈ ದಿನ ಶ್ರದ್ಧೆಯಿಂದ ಶ್ರೀ ಗುರು ದತ್ತಾತ್ರೇಯರನ್ನು ಪೂಜಿಸಿದಲ್ಲಿ ಶಿವ ಮತ್ತು ವಿಷ್ಣುವಿನ ಕೃಪೆ ಪ್ರಾಪ್ತವಾಗುವುದಲ್ಲದೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ.
ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ರೂಪವಾದ ದತ್ತಾತ್ರೇಯ ಮಹಿಮೆ ಅಪಾರ. ದತ್ತಾತ್ರೇಯರು ಶ್ರೀಮಹಾವಿಷ್ಣುವಿನ ಅವತಾರವೆಂದು ಹೇಳಲಾಗುತ್ತದೆ. ಹಾಗೆಯೇ ಶಿವನ ಸ್ವರೂಪವೆಂಬ ನಂಬಿಕೆ ಸಹ ಇದೆ. ಮಾರ್ಗಶಿರ ಮಾಸದ ಹುಣ್ಣಿಮೆಯಂದು ದತ್ತಾತ್ರೇಯರು ಜನ್ಮತಾಳಿದ ದಿನವಾಗಿದ್ದು, ಈ ದಿನವನ್ನು ದತ್ತಾತ್ರೇಯ ಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಇದೇ ಡಿಸೆಂಬರ್ 26 ರಂದು ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ವಿಶೇಷ ಮಹತ್ವವಿರುವುದಲ್ಲದೇ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಮೂರೂ ದೇವರ ಶಕ್ತಿಯು ದತ್ತಾತ್ರೇಯರಲ್ಲಿ ಸಮಾಹಿತವಾಗಿರುತ್ತದೆ. ಹಾಗಾಗಿ ಈ ದಿನ ದತ್ತಾತ್ರೇಯರ ಆರಾಧನೆ ಮಾಡುವುದರಿಂದ ಸಕಲ ಪಾಪ ನಷ್ಟವಾಗುವುದಲ್ಲದೆ, ಮನೋಕಾಮನೆಗಳು ಈಡೇರುತ್ತವೆ.
ಔದುಂಬರ ವೃಕ್ಷ : ಔದುಂಬರ ವೃಕ್ಷವನ್ನು ದತ್ತಾತ್ರೇಯರ ಸ್ವರೂಪವೆಂದು ಪೂಜಿಸಲಾಗುತ್ತದೆ. ಈ ವೃಕ್ಷದಲ್ಲಿ ದತ್ತ ತತ್ವವು ಅಧಿಕವಾಗಿರುತ್ತದೆ ಎಂದು ಹೇಳಲಾಗುತ್ತದೆ. ತ್ರಿಮೂರ್ತಿ ರೂಪವನ್ನು, ಶಕ್ತಿಯನ್ನು ಹೊಂದಿರುವ ದತ್ತಾತ್ರೇಯರ ಆರಾಧನೆಯು ಬೇಗ ಫಲ ನೀಡುವ, ಇಷ್ಟಾರ್ಥಗಳನ್ನು ಈಡೇರಿಸುತ್ತದೆಂದು ಹೇಳಲಾಗುತ್ತದೆ. ಗುರು ದತ್ತಾತ್ರೇಯರನ್ನು ಆರಾಧಿಸುವ ಎಲ್ಲ ಭಕ್ತರ ಸಂಕಟವನ್ನು ಬಹು ಬೇಗ ಪರಿಹರಿಸಿ, ಆಶೀರ್ವದಿಸುವ ಗುರುದೇವ ಎಂಬ ಪ್ರತೀತಿ ಇದೆ. ಭಕ್ತಿಯಿಂದ ಔದುಂಬರ ವೃಕ್ಷವನ್ನು ಪೂಜಿಸಿ ಪ್ರದಕ್ಷಿಣೆ ಹಾಕುವುದರಿಂದ ಜನ್ಮಗಳ ಪಾಪ ಪರಿಹಾರವಾಗುತ್ತದೆ ಮತ್ತು ಸಕಲ ಸುಖ ಪ್ರಾಪ್ತವಾಗುತ್ತದೆ.
ಮಂದಿರಗಳಲ್ಲಿ ಭಜನೆ ಮತ್ತು ಆರತಿ : ದತ್ತ ಜಯಂತಿಯಂದು ದತ್ತ ಮಂದಿರಗಳಲ್ಲಿ ಅನೇಕ ರೀತಿಯಿಂದ ಭಗವಾನ್ ದತ್ತಾತ್ರೇಯರ ಸೇವೆಯನ್ನು ಕೈಗೊಳ್ಳಲಾಗುತ್ತದೆ. ಈ ದಿನ ಬ್ರಾಹ್ಮೀ ಮುಹೂರ್ತದಲ್ಲಿ ದತ್ತಾತ್ರೇಯರಿಗೆ ಮತ್ತು ಔದುಂಬರ ವೃಕ್ಷಕ್ಕೆ ಆರತಿಯನ್ನು ಮಾಡಲಾಗುತ್ತದೆ. ಈ ಆರತಿಗೆ ಕಾಕಡಾರತಿ ಎಂದು ಕರೆಯಲಾಗುತ್ತದೆ. ಬಳಿಕ ಪೂಜೆ, ಆರತಿ, ಭಜನೆ, ಸ್ತೋತ್ರಗಳನ್ನು ಮಾಡಲಾಗುತ್ತದೆ. ಈ ವಿಶೇಷ ದಿನದಂದು ಗುರು ದತ್ತಾತ್ರೇಯರನ್ನು ಶ್ರದ್ಧೆಯಿಂದ ಆರಾಧಿಸಿ, ಮಂತ್ರ ಮತ್ತು ಭಜನೆಗಳನ್ನು ಮಾಡುವುದರ ಜೊತೆಗೆ ಮನೋ ವಾಂಛಿತವನ್ನು ಬೇಡಿಕೊಂಡಲ್ಲಿ ಈಡೇರುವುದು ಖಚಿತವಾಗಿರುತ್ತದೆ.
ಪೂಜಾ ವಿಧಾನ : ಮನೆಯಲ್ಲಿ ದತ್ತಾತ್ರೇಯರನ್ನು ಆರಾಧಿಸುವ ಸಂದರ್ಭದಲ್ಲಿ ದೇವರ ಕೋಣೆಯಲ್ಲಿ ಅಥವಾ ಪವಿತ್ರ ಜಾಗದಲ್ಲಿ ದತ್ತ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ದತ್ತಾತ್ರೇಯರ ಮೂರ್ತಿಗೆ ಹಳದಿ ಬಣ್ಣದ ವಸ್ತ್ರ, ಪುಷ್ಪಗಳನ್ನು ಅರ್ಪಿಸಬೇಕು. ವಿಷ್ಣುವಿನ ಅವತಾರವೆಂದು ಹೇಳಲಾಗುವ ದತ್ತಾತ್ರೇಯರಿಗೆ ಹಳದಿ ವರ್ಣದ ವಸ್ತುಗಳನ್ನು ಅರ್ಪಿಸಬೇಕು. ದತ್ತ ಸ್ತೋತ್ರವನ್ನು ಮತ್ತು ಮಂತ್ರವನ್ನು ಪಠಿಸಬೇಕು. ಅಷ್ಟೇ ಅಲ್ಲದೆ ದತ್ತಾತ್ರೇಯರ ಅವತಾರದ ಬಗ್ಗೆ ತಿಳಿಸಿರುವ ಗುರು ಚರಿತ್ರೆಯನ್ನು ಪಠಿಸಬೇಕು.
ಈ ಮಂತ್ರಗಳನ್ನು ಪಠಿಸಬಹುದಾಗಿದೆ : “ಓಂ ದ್ರಾಂ ದತ್ತಾತ್ತೇಯಾಯ ಸ್ವಾಹಾ”, “ಓಂ ಮಹಾನಾಥಾಯ ನಮಃ” ಮತ್ತು “ಓಂ ಶ್ರೀ ಗುರುದೇವ ದತ್ತ” ಎಂಬ ಮಂತ್ರವನ್ನು ಪಠಿಸುವುದರಿಂದ ಸಕಲ ಪಾಪಗಳು ಪರಿಹಾರವಾಗಿ, ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಮಂತ್ರಗಳನ್ನು ಪಠಿಸಿದ ನಂತರ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಳ್ಳಬೇಕು. ಈ ದಿನ ಉಪವಾಸವನ್ನು ಸಹ ಆಚರಿಸಬಹುದಾಗಿದೆ. ಅಷ್ಟೇ ಅಲ್ಲದೆ ನಿತ್ಯ ಶ್ರೀ ಗುರು ಚರಿತ್ರೆಯನ್ನು ಪಠಿಸುವುದರಿಂದ ಸಕಲ ಸುಖ-ಸಂಪತ್ತು ಲಭಿಸುತ್ತದೆ.
ಶ್ರೀ ಗುರು ದೇವ ದತ್ತನ ಕೃಪೆ ಪಡೆಯಲು ಹೀಗೆ ಮಾಡಿ : ಗುರುವಾರ ಮತ್ತು ಪ್ರತಿ ಹುಣ್ಣಿಮೆಯಂದು ದತ್ತಾತ್ರೇಯರ ಮಂತ್ರವನ್ನು ಪಠಿಸುವುದರಿಂದ ಶುಭವುಂಟಾಗುತ್ತದೆ ಎಂದು ಹೇಳಲಾಗುತ್ತದೆ. ಶ್ರದ್ಧೆಯಿಂದ ಸ್ಪಟಿಕ ಮಾಲೆಯನ್ನು ಉಪಯೋಗಿಸಿ ದತ್ತ ಮಂತ್ರವನ್ನು ಪಠಿಸುವುದರಿಂದ ಜ್ಞಾನ, ಬಲ, ವೃದ್ಧಿ, ಪ್ರಾಧಾನವಾಗುವುದಲ್ಲದೆ ಶತ್ರು ಬಾಧೆ, ಕಾರ್ಯಗಳಲ್ಲಿ ಸಫಲತೆಯು ದೊರೆಯುತ್ತದೆ. ದತ್ತಾರಾಧನೆಯಿಂದ ಮನೆಯಲ್ಲಿ ಕಲಹ, ಪರಸ್ಪರ ದ್ವೇಷ ಭಾವನೆ ನಿವಾರಣೆಯಾಗುತ್ತದೆ, ವಿದ್ಯಾರ್ಜನೆಯಲ್ಲಿ ಸಫಲತೆ ದೊರೆಯುತ್ತದೆ ಮತ್ತು ಮನೆಯಲ್ಲಿ ಧನ-ಸಂಪತ್ತು ಮತ್ತು ಶಾಂತಿ ನೆಲೆಸುತ್ತದೆ.
- ಮೂಲ : ಸನಾತನ