ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಇನ್ನೂ ಬಿಡುಗಡೆಯಾಗಿಲ್ಲ. ವಿಮೆಯ ಅವಧಿ ಈ ಬಾರಿ ಜುಲೈಗೆ ಮುಗಿಯುತ್ತದೆ. ಹಾಗಿದ್ದರೂ ಇದುವರೆಗೂ ಹವಾಮಾನದ ಲೆಕ್ಕಾಚಾರ ನಡೆದಿಲ್ಲವೇ..? ತಾಂತ್ರಿಕವಾಗಿ ಮುಂದುವರಿದಿರುವಾಗ ಹವಾಮಾನ ಲೆಕ್ಕಾಚಾರ ಅಟೋಮ್ಯಾಟಿಕ್ ಆಗಿರುವಾಗ ತಡವಾದ್ದು ಏಕೆ..? ತಡವಾಗುವುದು ಏಕೆ..? ಇದು ಈಗ ಇರುವ ಪ್ರಶ್ನೆ.
ಕಳೆದ ಸಾಲಿನಲ್ಲಿ ಅಂದರೆ, 2024 ಜುಲೈ ತಿಂಗಳಿನಿಂದ 2025 ಜುಲೈವರೆಗೆ ಈ ಬಾರಿಯ ಹವಾಮಾನ ಗಮನಿಸಿದೆ, ಜುಲೈ-ನವೆಂಬರ್‌ವರೆಗೂ ಉತ್ತಮ ಮಳೆಯಾಗಿದೆ. ಮಾರ್ಚ್-ಮೇ ಅವಧಿಯಲ್ಲಿ ತಾಪಮಾನವೂ 40 ಡಿಗ್ರಿ ದಾಟಿದೆ. ಇದೆರಡೂ ಕೃಷಿಯ ಮೇಲೆ ಪರಿಣಾಮ ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಅಡಿಕೆ ಬೆಳೆಯುವ ಎಲ್ಲಾ ಪ್ರದೇಶದಲ್ಲೂ ತಾಪಮಾನದ ಕಾರಣದಿಂದ ಅಡಿಕೆ ಇಳುವರಿ ಕುಸಿತವಾಗಿದೆ, ಮಳೆಗಾಲದಲ್ಲಿ ನಿರಂತರ ಮಳೆಯ ಕಾರಣದಿಂದ ಕೊಳೆರೋಗ ಬಾಧಿಸಿ ಇಳುವರಿಯೂ ನಷ್ಟವಾಗಿದೆ. ಹೀಗಾಗಿ ಈ ಬಾರಿ ಫಸಲ್ ಭಿಮಾ ಯೋಜನೆಯ ಅಡಿಕೆಯಲ್ಲಿ ಬೆಳೆ ವಿಮೆಯು ಅಡಿಕೆ ಬೆಳೆಗಾರರಿಗೆ ಲಭ್ಯವಾಗಲೇ ಬೇಕಿದೆ. ಇಲಾಖೆಗಳು ವಿವಿಧ ನೆಪ ಹೇಳಿದರೆ ವಿಮಾ ಕಂಪನಿಯು ವಿಮಾ ಮೊತ್ತ ಕಡಿಮೆಯಾಗುವಂತೆ ಕಾರಣ ಹುಡುಕುವಂತೆ ಕಾಣುತ್ತಿದೆ. ಹೀಗಾಗಿ ಕೃಷಿಕರು ಸಂಕಷ್ಟ ಅನುಭವಿಸಬೇಕಾಗಿದೆ.
ಕಳೆದ ಜುಲೈ ತಿಂಗಳಲ್ಲಿ ಅಂದರೆ 2024 ಜುಲೈ ತಿಂಗಳಲ್ಲಿ ಸುಮಾರು 1770 ಮಿಮೀ ಮಳೆಯಾಗಿದ್ದರೆ, ಆಗಸ್ಟ್ ತಿಂಗಳಲ್ಲಿ ಸುಮಾರು 936 ಮಿಮೀ, ಸೆಪ್ಟಂಬರ್ ತಿಂಗಳಲ್ಲಿ ಸುಮಾರು 584 ಮಿಮೀ, ಅಕ್ಟೋಬರ್ ತಿಂಗಳಲ್ಲಿ 369 ಮಿಮೀ, ನವೆಂಬರ್‌ನಲ್ಲಿ 154 ಮಿಮೀ, ಡಿಸೆಂಬರ್‌ನಲ್ಲಿ 92 ಮಿಮೀ ಮಳೆಯಾಗಿದೆ. 2025 ಮೇ ತಿಂಗಳಲ್ಲಿ 990 ಮಿಮೀ, ಜೂನ್ ತಿಂಗಳಲ್ಲಿ 1089 ಮಿಮೀ ಮಳೆಯಾಗಿದೆ. ಇದು ಒಂದು ಗ್ರಾಮದಲ್ಲಿ ಬಿದ್ದಿರುವ ಮಳೆ. ಬೇರೆ ಬೇರೆ ಗ್ರಾಮದಲ್ಲಿ ಮಳೆಯ ಪ್ರಮಾಣ ವ್ಯತ್ಯಾಸ ಇರುತ್ತದೆ. ಇದೇ ವೇಳೆ ತಾಪಮಾನದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. 2025 ಮಾರ್ಚ್ ತಿಂಗಳಲ್ಲಿ ತಾಪಮಾನ ಏರಿಕೆಗೆ ಆರಂಭವಾಗಿದೆ. ತಿಂಗಳ ಸರಾಸರಿ ತಾಪಮಾನ 39 ಡಿಗ್ರಿ ಗರಿಷ್ಟವಾಗಿದೆ. ಮಾರ್ಚ್ 12 ರಿಂದ 14 ನಡುವೆ 39 ಡಿಗ್ರಿ ಇದ್ದರೆ, ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಸತತ 6 ದಿನ ತಾಪಮಾನ 40 ಡಿಗ್ರಿಗಿಂತ ಅಧಿಕವಾಗಿತ್ತು. ಇದೇ ವೇಳೆ ತೇವಾಂಶವೂ ಗಣನೀಯವಾಗಿ ಕಡಿಮೆಯಾಗಿತ್ತು. ಎಪ್ರಿಲ್ ತಿಂಗಳಹಾಗೂ ಮೇ ತಿಂಗಳ ಸರಾಸರಿ ತಾಪಮಾನವು ಕೂಡಾ 39 ಡಿಗ್ರಿಯಾಗಿತ್ತು. ಕೆಲವು ದಿನಗಳು 40 ಡಿಗ್ರಿಗಿಂತ ಅಧಿಕವಾಗಿದ್ದು ತೇವಾಂಶ ಗಣನೀಯವಾಗಿ ಇಳಿಕೆಯಾಗಿತ್ತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಅಡಿಕೆ ಬೆಳೆಗೆ ತಾಪಮಾನ ಏರಿಕೆಯ ಜೊತೆಗೆ ತೇವಾಂಶವು ಇಳಿಕೆಯಾದರೆ ಅಡಿಕೆ ಫಸಲಿನ ಮೇಳೆ ಹೊಡೆತ ಬೀಳುತ್ತದೆ. ಎಳೆ ಅಡಿಕೆ ಬೀಳುತ್ತದೆ. ಯಾವುದೇ ಔಷಧಿಗಳಿಗೆ ನಿಯಂತ್ರಣವಾಗುವುದಿಲ್ಲ. ಹೀಗಾಗಿ ಈ ಬಾರಿ ಬಹುತೇಕ ಕಡೆ ಇಳುವರಿಯ ಮೇಲೆ ಹೊಡೆತ ಬಿದ್ದಿತ್ತು. ಅದಾಗಿ ಮೇ ತಿಂಗಳ ಮಧ್ಯದಿಂದಲೇ ಮಳೆ ಆರಂಭವಾಗಿತ್ತು. ಹೀಗೆ ಆರಂಭವಾದ ಮಳೆ ಬಿಡುವು ನೀಡದೆ ಕೊಳೆರೋಗವೂ ವ್ಯಾಪಿಸಿದೆ. ಇದು ಇಷ್ಟು ಈ ಬಾರಿಯ ಬೆಳೆ ವಿಮಾ ಸಾಲಿನ ಹಿನ್ನೋಟ. ಈ ಕಾರಣದಿಂದ ಅಡಿಕೆ ಬೆಳೆಗಾರರಿಗೆ ಈ ಬಾರಿ ಸರಿಯಾದ ಪ್ರಮಾಣದಲ್ಲಿ ವಿಮೆ ಪಾವತಿಯಾಗಬೇಕು. ಒಂದು ವೇಳೆ ಬೆಳೆ ವಿಮೆ ಪಾವತಿಯಾಗದೇ ಇದ್ದರೆ ಸರ್ಕಾರ ಪರಿಹಾರ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಏಕೆಂದರೆ ಅನೇಕ ಅಡಿಕೆ ಬೆಳೆಗಾರರು ಇಂದು ಸಂಕಷ್ಟದಲ್ಲಿದ್ದಾರೆ, ಮುಂದಿನ ತಿಂಗಳಿನಿಂದ ಸಾಲ ಮರುಪಾವತಿಯ ಅವಧಿಯಾಗುತ್ತದೆ, ಧಾರಣೆ ಇದ್ದರೂ ಅಡಿಕೆ ಇಳುವರಿಯೇ ಇಲ್ಲದ ಕಾರಣ, ಅಡಿಕೆ ಬೆಳೆ ನಷ್ಟವಾಗಿರುವ ಕಾರಣ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸರ್ಕಾರಗಳು ತಕ್ಷಣ ಗಮನಹರಿಸಬೇಕಾದ ಅಗತ್ಯ ಇದೆ.


