ಗೋಸಂರಕ್ಷಣೆ ಎಲ್ಲಾಯಿತು….? | ಗೋವು ಲಾಭ-ನಷ್ಟದ ಲೆಕ್ಕಾಚಾರ ಏನು ? | ಕೃಷಿ ಹಾಗೂ ಗೋವು ಪ್ರತ್ಯೇಕವಲ್ಲ.. |

November 16, 2023
10:09 PM
ಗೋವನ್ನು ಮತ್ತು ಮಣ್ಣನ್ನು ಉಸಿರಾಗಿಸಿಕೊಂಡ ರೈತರು ಆರ್ಥಿಕ ದೃಷ್ಟಿಕೋನದ ಗೋವಿನಿಂದ ಹೊರಬಂದು ಪಾರಂಪರಿಕ ದೇಶೀ ಗೋವಿನತ್ತ ಮುಖ ಮಾಡಿದರು. ಇಂದೇನಾದರೂ ಗೋವು ಉಳಿದಿದ್ದರೆ ಅಂತಹ ಕೃಷಿಕರಿಂದಲೇ ಎಂಬುದು ಒಪ್ಪಿಕೊಳ್ಳಲೇ ಬೇಕಾದ ಸತ್ಯ.

ಪ್ರಪಂಚದಲ್ಲಿ ಹಲವರ ದೃಷ್ಟಿಕೋನಗಳು ಹಲವು ಬಗೆ. ಪ್ರತಿಯೊಬ್ಬರಿಗೂ ಅವರವರದೇ ದೃಷ್ಟಿಕೋನಗಳಿವೆ. ಇನ್ನೊಬ್ಬರ ತಪ್ಪು ಒಪ್ಪುಗಳನ್ನು ವಿಮರ್ಷಿಸುವ ಹಕ್ಕು ನಮಗಾರಿಗೂ ಇಲ್ಲ. ಈ ದೃಷ್ಟಿ ಕೋನದಿಂದ ಕಳೆದ 40ಕ್ಕೂ ಹೆಚ್ಚುವರ್ಷಗಳಿಂದ 20ಕ್ಕಿಂತಲೂ ಹೆಚ್ಚು ದನಗಳನ್ನು ಇಂದಿನವರೆಗೂ ಸಾಕಿಕೊಂಡು ಬಂದ ನನ್ನ ಅನುಭವದಲ್ಲಿ ಒಂದಷ್ಟು ವಿಚಾರ ವಿಮರ್ಶೆ…..

Advertisement
Advertisement

ಇತ್ತೀಚಿಗಿನ ವರ್ಷಗಳಲ್ಲಿ ಅವ್ಯಾಹತವಾಗಿ ಕೇಳಿಬರುವ ಗೋ ರಕ್ಷಣೆ, ಸಂವರ್ಧನೆಯ ಹೆಸರಿನಲ್ಲಿ ನಡೆಯುವ ಚಳುವಳಿ, ಭಾಷಣಗಳು ಪ್ರಚಾರಗಳು ಎಲ್ಲಿಯೋ ದಾರಿ ತಪ್ಪುತ್ತಿದೆ ಎಂದೇ ನನಗೆ ಭಾಸವಾಗುತ್ತಿದೆ. ಒಬ್ಬೊಬ್ಬರ ಗೋಸಾಕಣೆಯ ಉದ್ದೇಶ ಒಂದೊಂದು. ಸಂರಕ್ಷಣೆ ಸಂವರ್ಧನೆಯ ಉದ್ದೇಶ ಒಂದು ಬಗೆಯಾದರೆ, ಪ್ರೀತಿಗೋಸ್ಕರ ಸಾಕಣೆ ಇನ್ನೊಂದು ಬಗೆ. ಗೋಮಾತೆ ಎಂದು ಪ್ರತ್ಯಕ್ಷ ತಾಯಿಯನ್ನು ಕಂಡು ಸಾಕುವವರು ಮತ್ತೊಬ್ಬರು. ಕೃಷಿ ಮತ್ತು ಭೂಮಿ ಮಣ್ಣು ಪರಿಸರದ ಕಾಳಜಿಯಿಂದ ಸಾಕುವವರು ಮಗದೊಬ್ಬರು. ಆರ್ಥಿಕ ದೃಷ್ಟಿಕೋನದಿಂದ ಗೋವನ್ನು ಸಾಕುವವರು ಹಲವರು.

ಇದರಲ್ಲಿ ಆರ್ಥಿಕ ದೃಷ್ಟಿಕೋನದಿಂದ ಸಾಕುವವರು ಲೆಕ್ಕಾಚಾರದ ಏರುಪೇರಿನಲ್ಲಿ ನಷ್ಟದಾಯಕ ಎಂದೇ ಗೋವಿನಿಂದ ವಿಮುಖರಾಗಿದ್ದಾರೆ. ಸಂರಕ್ಷಣೆಯ ಸಂವರ್ಧನೆಯ ಉದ್ದೇಶದಲ್ಲಿ ಸಾಕುವವರು ಹೆಚ್ಚಾಗಿ ಗೋಶಾಲೆಗಳನ್ನು ನಡೆಸುತ್ತಾರೆ. ಆರ್ಥಿಕವಾಗಿ ಸದಾ ಬಳಲಿಕೊಂಡು ಸಮಾಜದ ಸಹಾಯಕ್ಕಾಗಿ ನಿರೀಕ್ಷಿಸುತ್ತಲೇ ಇರುತ್ತಾರೆ. ಪ್ರೀತಿಗಾಗಿ ಮತ್ತು ಸಾಕ್ಷಾತ್ ಮಾತೇಯನ್ನೇ ಕಾಣುವ ಮಂದಿ ಒಂದೆರಡು ಗೋವಿಗೆ ಸೀಮಿತಗೊಳಿಸಿ ಸಂಖ್ಯೆ ವೃದ್ದಿಸಿದಂತೆ ಹೆಚ್ಚಾದ ಸಂಖ್ಯೆಯನ್ನು ಯಾವುದಾದರೂ ಗೋಶಾಲೆಗೆ ದಾನವಾಗಿ ನೀಡಿ ಕೈ ತೊಳೆದುಕೊಳ್ಳುತ್ತಾರೆ.

ಅಷ್ಟೂ ವರ್ಷಗಳಿಂದ ಕೃಷಿಗಾಗಿ ಮತ್ತು ಮಣ್ಣು ಪರಿಸರದ ಕಾಳಜಿಯಿಂದ, ಗೃಹೋಪಯೋಗದ ದೃಷ್ಟಿಯಿಂದ ಗೋವನ್ನು ಸಾಕಿಕೊಂಡು ಬಂದ ವರ್ಗ ಬಹಳ ದೊಡ್ಡದು. ಈ ದೊಡ್ಡವರ್ಗ ಆರ್ಥಿಕವಾಗಿ ಎಂದೂ ಪ್ರಭಲರಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ಸದಾ ಗೋವು ಮತ್ತು ಕೃಷಿ ಕೆಲಸದಲ್ಲಿ ಮುಳುಗಿ ಸದಾ ಗೋ ಸಂತತಿಯನ್ನು ಬೆಳೆಸಿ ಪೋಷಿಸುತ್ತಲೇ ಬಂದಿದ್ದಾರೆ. ಅವರೆಂದೂ ಯಾವುದೇ ಉದ್ರೇಕಕಾರಿ ಭಾಷಣಗಳನ್ನೂ ಮಾಡಿಲ್ಲ. ಗೋವನ್ನು ಉಳಿಸುತ್ತೇನೆ ಬೆಳೆಸುತ್ತೇನೆ ಎಂದೂ ಹೇಳಿಕೊಂಡಿಲ್ಲ. ಹೆಚ್ಚಾದ ಸಂಖ್ಯೆಯನ್ನು ಯಾರು ಕೊಂಡು ಹೋಗುತ್ತಾರೋ ಅವರಿಗೆ ಪ್ರತಿಫಲದ ನಿರೀಕ್ಷೆಯಲ್ಲಿಯೇ ಕೊಡುತ್ತಾ ಬಂದಿರುತ್ತಾರೆ. ನಮ್ಮ ಕೈ ಜಾರಿದ ಮೇಲೆ ಅದು ಎಲ್ಲಿ ಹೋಯಿತು ಯಾಕಾಗಿ ಹೋಯಿತು ಎಂಬ ಚಿಂತೆ ಕೃಷಿಕರ ಮನದಲ್ಲಿ ಎಂದೂ ಮೂಡಿರಲಿಲ್ಲ. ಕೃಷಿ ಮತ್ತು ಗೋವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕಂಡಿರಲಿಲ್ಲ.

ಆರ್ಥಿಕ ಲೆಕ್ಕಾಚಾರದ ಮತ್ತು ಸುಲಭ ಕೃಷಿಯ ಬೆನ್ನು ಹತ್ತಿದ ಕೃಷಿಕ ಸಮಸ್ಯೆಗಳ ತಾಕಲಾಟದಿಂದ ಹೊರಬರಲು ಗೋವಾಧಾರಿತ ಕೃಷಿಯಿಂದ ಹೊರಬಂದು ರಾಸಾಯನಿಕ ಮತ್ತು ಯಾವುದೋ ಕಂಪೆನಿಗಳು ನೀಡುವ ಗೊಬ್ಬರದ ಕೃಷಿಯತ್ತ ಮುಖ ಮಾಡಿ ಗೋಸಾಕಣೆಯಿಂದ ವಿಮುಖರಾದರು. ಗೋವನ್ನು ಮತ್ತು ಮಣ್ಣನ್ನು ಉಸಿರಾಗಿಸಿಕೊಂಡ ನನ್ನಂತ ರೈತರು ಆರ್ಥಿಕ ದೃಷ್ಟಿಕೋನದ ಗೋವಿನಿಂದ ಹೊರಬಂದು ಪಾರಂಪರಿಕ ದೇಶೀ ಗೋವಿನತ್ತ ಮುಖ ಮಾಡಿದರು. ಇಂದೇನಾದರೂ ಗೋವು ಉಳಿದಿದ್ದರೆ ಅಂತಹ ಕೃಷಿಕರಿಂದಲೇ ಎಂಬುದು ಒಪ್ಪಿಕೊಳ್ಳಲೇ ಬೇಕಾದ ಸತ್ಯ.

Advertisement

ನಾನು ಮೊದಲೇ ತಿಳಿಸಿದಂತೆ ಒಬ್ಬ ಗೋಪಾಲಕನಾಗಿ ನನ್ನ 20 ದನ ಕರುಗಳ ಆದಾಯ ಮತ್ತು ವೆಚ್ಚದ ಪಟ್ಟಿಯನ್ನು ಸ್ಥೂಲವಾಗಿ ಈ ರೀತಿ ಚಿತ್ರಿಸಬಹುದು.

ಆದಾಯ : ದಿನವೊಂದರ 10 ಬುಟ್ಟಿ ಸಗಣಿಯಂತೆ ಬುಟ್ಟಿಯೊಂದರ ಐವತ್ತು ರೂನಂತೆ ವರುಷವೊಂದಕ್ಕೆ 1,82,500, ಹಾಲು ಸರಾಸರಿ ದಿನಕ್ಕೆ 5 ಲೀಟರ್ನಂತೆ ಲೀಟರ್ ಒಂದರ ೮೦ ರುನಂತೆ ವರುಷಕ್ಕೆ 146000, ಗೊಬ್ಬರದ ಅನಿಲ :ಅನಿಲ ಜಾಡಿ ಒಂದಕ್ಕೆ 900ರಂತೆ ವರ್ಷವೊಂದಕ್ಕೆ 18 ಜಾಡಿ ( ಜಾಡಿಯನ್ನೇ ಸಂಪೂರ್ಣವಾಗಿ ಬಳಕೆ ಮಾಡುತ್ತಿದ್ದರೆ ನಮ್ಮ ಅಗತ್ಯ )16200, ದನಗಳನ್ನು ತೋಟಕ್ಕೆ ಬಿಟ್ಟು ಮೇಯಿಸುವುದರಿಂದಾಗಿ ಹುಲ್ಲು ತೆಗೆಯುವ ಖರ್ಚಿನ ಉಳಿತಾಯ ರೂ.50,000, ಅಲ್ಲಿಗೆ ವರ್ಷವೊಂದರ ಆದಾಯ 3,94,700 ರೂಗಳು.

ಖರ್ಚು: ಸರಾಸರಿ ಎರಡು ಆಳು ಆಳೊಂದರ 400 ರಂತೆ ವಾರ್ಷಿಕ 2,92,000, ಹಿಂಡಿ ವಾರಕ್ಕೆ ರೂ 3000 ದಂತೆ 50 ವಾರ 1,50,000,( ಎರಡು ವಾರ ಬಿಟ್ಟಿರುತ್ತೇನೆ ) ಒಣ ಮೇವು ಹೆಚ್ಚು ರೂ 50,000. ನಾಲ್ಕು ಲಕ್ಷದ 92 ಸಾವಿರ ಒಟ್ಟು ಖರ್ಚು.
ಅಲ್ಲಿಗೆ ಆದಾಯ ಖೋತ 97,300ಗಳು.

ನಾವು ಮನೆಯವರೆ ಹೆಚ್ಚಿನ ಕೆಲಸ ಮಾಡುವ ಕಾರಣ ಒಂದಾಳಿನ ಮಜೂರಿ ಉಳಿಸಿದರೆ 1,46,000 ಉಳಿತಾಯವಾಗಿ ಖೋತ ಬಜೆಟ್ ಸರಿಸಮವಾಗಿಬಿಡುತ್ತದೆ

ಪ್ರಕೃತಿಯನ್ನು ಮಣ್ಣನ್ನು ಜೀವಧಾರಕವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ ಪುಣ್ಯ ಮತ್ತು ಸಂತೃಪ್ತಿ ಒಂದು ಕಡೆಯಾದರೆ, ಗೋ ಸಂತತಿಯನ್ನು ಸಂವರ್ಧನೆ ಮಾಡುವಲ್ಲಿ ಕೈಜೋಡಿಸಿದ ತೃಪ್ತಿ ಇನ್ನೊಂದು ಕಡೆ.

Advertisement

ಸಹಸ್ರಮಾನಗಳಿಂದ ಇದೇ ಮನೋಭಾವದಲ್ಲಿ ಗೋವನ್ನು ರಕ್ಷಿಸಿಕೊಂಡ ಬಂದ ಕೃಷಿಕನಿಗೆ ದಾನವಾಗಿ ಕೊಡು, ಹುಟ್ಟಿದ್ದೆಲ್ಲವನ್ನು ನೀನೇ ಸಾಕು ಮತ್ತು ನಿನ್ನ ಜವಾಬ್ದಾರಿ ಎಂದು ಒತ್ತಾಯ ಹೇರುತ್ತಾ ಬಂದಲ್ಲಿ ಆರ್ಥಿಕವಾಗಿ ಎಂದೂ ಪ್ರಬಲರಲ್ಲದ ರೈತರು ಹೇರಿದ ಜವಾಬ್ದಾರಿಯನ್ನು ಇಳಿಸಿ ಕೈ ತೊಳೆದುಕೊಂಡಾರು.

ಮುಂದೇನೋ ಮತ್ತೇನೋ ಇಂದಿಗಾಮಾತೇಕೆ?!
ಸಂದರ್ಭ ಬರಲಿ ಬಂದಾಗಳಾ ಚಿಂತೆ
ಹೊಂದಿಸುವನಾರೋ ನಿನ್ನಾಳಲ್ಲ ಬೇರಿಹನು,
ಇಂದಿಗಿಂದಿನ ಬದುಕು -ಮಂಕುತಿಮ್ಮ .

ತಿಮ್ಮ ಕವಿಯ ನುಡಿಯಂತೆ ಇಂದಿಗಿಂದಿನ ಸರಳ ಬದುಕನ್ನು ಕಾಣುವ ರೈತರನ್ನು ರೈತರಷ್ಟಕ್ಕೆ ಬಿಡಿ. ಉಪದೇಶದ ಬೆನ್ನು ಹತ್ತದಿರಿ.

ಬರಹ :
ಎ.ಪಿ. ಸದಾಶಿವ ಮರಿಕೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಕಾಡಿನಲ್ಲಿ ಶೇಖರಿಸಿದ್ದ ಅಡಿಕೆ ವಶ | 327 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌ |
May 20, 2025
4:17 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಭಾರಿ ಮಳೆ | ಬೆಂಗಳೂರು ಮಹಾನಗರ ಪಾಲಿಕೆ, SDRFನಿಂದ ರಕ್ಷಣಾ ಕಾರ್ಯ
May 20, 2025
3:59 PM
by: The Rural Mirror ಸುದ್ದಿಜಾಲ
ಕೇರಳದಲ್ಲಿ ಭಾರೀ ಮಳೆ ಸಾಧ್ಯತೆ | ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲೂ ಉತ್ತಮ ಮಳೆ ನಿರೀಕ್ಷೆ |
May 20, 2025
8:03 AM
by: The Rural Mirror ಸುದ್ದಿಜಾಲ
1954 ರಿಂದ 2025 | ಅಡಿಕೆ ಮೇಲೆ ಆಪಾದನೆಗಳು ಬಂದ ದಾರಿ ಯಾವುದೆಲ್ಲಾ…?
May 20, 2025
7:32 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group