ಕಬ್ಬು-ಕತ್ತಾಳೆಯಲ್ಲಿ ಒಳ್ಳೆಯದು ಯಾವುದು? | ಇದಲ್ಲವೆ ನಿಸರ್ಗದ ನಿಜವಾದ ನೀತಿಕಥೆ.?

March 1, 2024
2:44 PM
ವಿಕಾಸಪಥದಲ್ಲಿ ಯಾವುದು ಹೆಚ್ಚು ಯಶಸ್ವಿ ಆಗಬೇಕಿತ್ತು? ಕತ್ತಾಳೆ ತಾನೆ? ಈ ಬಗ್ಗೆ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಅವರು ಬರೆದಿರುವ ಬರಹ ಇಲ್ಲಿದೆ..

ಈ ಕಡೆ ಕಬ್ಬು(Sugarcane), ಆ ಕಡೆ ಕತ್ತಾಳೆಯನ್ನು(Agave) ಇಟ್ಟು ಎರಡನ್ನೂ ಹೋಲಿಸಿ ನೋಡೋಣ. ಆಮೇಲೆ ಹಸು-ಹುಲಿಯ ಹೋಲಿಕೆಗೆ ಹೋಗೋಣ. ಕಬ್ಬು ಮೈತುಂಬಾ ಸಿಹಿಯನ್ನು(Sweet) ತುಂಬಿಕೊಂಡಿದೆ. ಅದನ್ನು ತಿನ್ನಲೆಂದು ಆನೆ, ಕಾಡೆಮ್ಮೆ, ಕಾಡುಕೋಣ, ಮೇಕೆ, ಹಸು, ಹೆಬ್ಬಳಿಲು ಏನೆಲ್ಲವೂ ದಾಳಿ ಇಡುತ್ತವೆ. ಜಲ್ಲೆ ಸಿಗದಿದ್ದರೆ ಅದರ ಎಲೆಗಳನ್ನೇ ಮೇಯ್ದು ಹೋಗುತ್ತವೆ. ಅಂಥ ಆಕ್ರಮಣಕಾರೀ ಜೀವಿಗಳನ್ನು ದೂರ ಇಡಬಲ್ಲ ಯಾವ ಆಯುಧವೂ ಕಬ್ಬಿನ ಸಸ್ಯದ ಬಳಿ ಇಲ್ಲ.

Advertisement

ಮುಳ್ಳಿಲ್ಲ, ತುರಿಕೆಯ ಕೆಮಿಕಲ್‌ ಇಲ್ಲ. ದೇಹದಲ್ಲಿ ಕಹಿ ರಸ ಇಲ್ಲ. ಏನೂ ಇಲ್ಲ. ಹೋಗಲಿ, ಕಬ್ಬನ್ನು ತಿಂದು ಹೋದ ಆ ಪ್ರಾಣಿಗಳು ಬೀಜ ಪ್ರಸಾರವನ್ನಾದರೂ ಮಾಡುತ್ತವೊ ಅದೂ ಇಲ್ಲ! ಎಂಥಾ ನತದೃಷ್ಟ ಸಸ್ಯ ಇದು, ಪಾಪ. ಈಗ ಆಚೆ ಪಕ್ಕದ ಕತ್ತಾಳೆಯನ್ನು ನೋಡಿ. ಸಮೀಪಕ್ಕೆ ಹೋಗಲೂ ಸಾಧ್ಯವಿಲ್ಲದಷ್ಟು ಮುಳ್ಳು! ಕಷ್ಟಪಟ್ಟು ಮೂತಿಯನ್ನು ಒತ್ತಿ ಎಲೆಯನ್ನು ಜಗಿದರೆ ಒಗರು, ಕಹಿ. ಅದನ್ನು ಜಗಿದರೆ ನಾರು ನಾರು. ಅದರ ದಿಂಡಂತೂ ತಿನ್ನಲು ಸಾಧ್ಯವಿಲ್ಲದಷ್ಟು ಒರಟು. ರುಚಿ ಇಲ್ಲ, ಸತ್ವ ಇಲ್ಲ.

ಇನ್ನು ಅದರ ದಿಂಡಿನ ಮೇಲೆ ಅರಳಿದ ಹೂಗಳಿಂದ ಮಕರಂದವನ್ನು ಹೀರುವುದೂ ಕಷ್ಟಸಾಧ್ಯ. ಕೆಲವೇ ವಿಶಿಷ್ಟ ಕೊಕ್ಕುಗಳಿರುವ ಪಕ್ಷಿ ಅಥವಾ ಬಾವಲಿ ಬರಬೇಕು. ಹೀಗೆ ತನ್ನ ಸುತ್ತ ಎಷ್ಟೆಲ್ಲ ಭದ್ರ ಕೋಟೆಯನ್ನು ಕಟ್ಟಿಕೊಂಡಿದ್ದಾಳೆ ಈ ಕತ್ತಾಳೆ. ಇದರ ಮೇಲೆ ಆಕ್ರಮಣಕ್ಕೆ ಬರುವವರೇ ಇಲ್ಲ. ತನ್ನ ಹೂಗೊಂಚಲಿನಲ್ಲೇ ನೂರಾರು ಹೊಸ ಸಸ್ಯಗಳ ಮೊಳಕೆಯನ್ನು ಹೊಮ್ಮಿಸಿ ಎಂಥ ಒಣ ಮರಳುಗಾಡಿನಲ್ಲೂ ಹಾಯಾಗಿ ತನ್ನ ಉತ್ತರೋತ್ತರಾಭಿವೃದ್ಧಿಯನ್ನು ಮಾಡಿಕೊಳ್ಳುತ್ತಿರುತ್ತದೆ. ಮಳೆ ಬಂದರೂ ಸರಿ, ಬಾರದಿದ್ದರೂ ಸರಿ.

ಈಗ ಹೇಳಿ: ವಿಕಾಸಪಥದಲ್ಲಿ ಯಾವುದು ಹೆಚ್ಚು ಯಶಸ್ವಿ ಆಗಬೇಕಿತ್ತು? ಕತ್ತಾಳೆ ತಾನೆ?: ವಾಸ್ತವ ಮಾತ್ರ ತೀರ ಉಲ್ಟಾ! ಜಗತ್ತಿನ ಎಷ್ಟೊಂದು ದೇಶಗಳಿಗೆ ಕಬ್ಬು ವ್ಯಾಪಿಸಿದೆ. ಕಬ್ಬಿಗಾಗಿ ಎಷ್ಟೆಲ್ಲ ದಟ್ಟ ಅರಣ್ಯಗಳನ್ನು ನೆಲಸಮ ಮಾಡಿ, ಕಬ್ಬಿಗೆ ನೀರೊದಗಿಸಲೆಂದು ಎಷ್ಟೊಂದು ವಿಶಾಲ ನಿಸರ್ಗವನ್ನು ಜಲಾಶಯಗಳಲ್ಲಿ ಮುಳುಗಿಸಿ, ಕಬ್ಬಿಗೆ ಬೇಕಾದ ಪೋಷಕಾಂಶಗಳನ್ನು ತಯಾರಿಸಲೆಂದು ಎಷ್ಟೆಲ್ಲ ಬಗೆಯ ರಸಗೊಬ್ಬರ ಫ್ಯಾಕ್ಟರಿಗಳನ್ನು ಸ್ಥಾಪಿಸಿ, ಅಹಾ ಕಬ್ಬಿಗೆ ಎಲ್ಲೆಲ್ಲೂ ರಾಜೋಪಚಾರ.

ಇತ್ತ ಕತ್ತಾಳೆಗೆ ಯಾರೂ ಕ್ಯಾರೇ ಅನ್ನುವವರಿಲ್ಲ ಅದನ್ನು ಯಾರೂ ನೆಟ್ಟು ಬೆಳೆಸಲೆಂದು ಯಾವ ಪೋಷಕದ್ರವ್ಯಗಳನ್ನೂ ಕೊಡುವವರಿಲ್ಲ, ಪೋಷಣೆಗೆ ಸಹಕರಿಸಬಲ್ಲ ಯಾರೂ ಇಲ್ಲ. ರಕ್ಷಣೆಯ ಪ್ರಶ್ನೆ ಬಂದಾಗ ಪಾಪ, . ಅಲ್ಲಷ್ಟು ಇಲ್ಲಷ್ಟು ಸಾಲುಗಳಲ್ಲಿ, ಬೇರೆ ಬೆಳೆಗಳ ರಕ್ಷಣೆಗೆ ಜೈವಿಕ ಬೇಲಿಯಾಗಲಷ್ಟೇ ಅದರ ಬಳಕೆ. ಕಬ್ಬು-ಕತ್ತಾಳೆಯ ಹೋಲಿಕೆಯ ನೀತಿಪಾಠ ಇಷ್ಟೆ: ಬೇರೆಯವರಿಗೆ ಒಳ್ಳೆಯದಾಗಲಿ ಎಂದು ತ್ಯಾಗಕ್ಕೆ ಸಿದ್ಧವಾದರೆ ತನಗೂ ಒಳ್ಳೆಯದೇ ಆಗುತ್ತದೆ.

ಇದನ್ನು ನಾವು ಪುಣ್ಯಕೋಟಿಯ ಕಾಲ್ಪನಿಕ ಕಥೆಯಲ್ಲೇ ಅರಿತಿದ್ದೇವೆ. ಕಾಲ್ಪನಿಕ ಏನು, ವಾಸ್ತವದಲ್ಲೂ ಈ ಹುಲಿ-ಹಸುಗಳ ಕತೆ ಅಷ್ಟೇ ಕುತೂಹಲಕಾರಿಯಾಗಿದೆ. ಹಸು (ಆಕಳು, ಎಮ್ಮೆ, ದನ)ಗಳು ಅತ್ಯಂತ ಸಭ್ಯ. ಎರಡು ಕೊಂಬು ಬಿಟ್ಟರೆ ಬೇರೆ ಯಾವ ರಕ್ಷಣಾ ಸಾಧನವೂ ಇಲ್ಲ. ದಾಳಿಗೆ ತುತ್ತಾದರೆ ಕುದುರೆಯಂತೆ ಓಡುವುದೂ ಪಾಪ, ಅವಕ್ಕೆ ಸಾಧ್ಯವಿಲ್ಲ. ಹುಲಿಗಳಿಗೆ ಏನೆಲ್ಲ ಇವೆ. ಚುರುಕಿನ ದೇಹ, ಚೂಪು ಹಲ್ಲು ಮತ್ತು ಉಗುರುಗಳು. ಹೆಣ್ಣು ಹುಲಿ ಗರ್ಭ ಧರಿಸಿ ಕೇವಲ ಮೂರುವರೆ ತಿಂಗಳಲ್ಲಿ ಎರಡು ಮೂರು ಮರಿಗಳಿಗೆ ಜನ್ಮ ನೀಡುತ್ತದೆ. ಹಸುಗಳಿಗೋ ಸುಮಾರು ಒಂಭತ್ತು ತಿಂಗಳ ನಂತರ ಒಂದೇ ಒಂದು ಮರಿ ಜನಿಸುತ್ತದೆ.

ಹೀಗೆ ಯಾವುದೇ ತರ್ಕದಿಂದ ನೋಡಿದರೂ ಹಸುಗಳೆಲ್ಲ ಹುಲಿಗಳ ಬಾಯಿಗೆ ಸಿಕ್ಕು ಎಂದೋ ಕಣ್ಮರೆ ಆಗಬೇಕಿತ್ತು. ಆದರೆ ಆಗಿದ್ದೇನು, ಉಲ್ಟಾ! ಹುಲಿಗಳೇ ವಿನಾಶದ ಅಂಚಿಗೆ ಬಂದಿವೆ. ಹೇಗೋ ಸರಕಾರಿ ಕೃಪೆಯಿಂದ ಬಚಾವಾಗಿ ಉಳಿದುಕೊಂಡಿವೆ. ಹಸುಗಳು ಜಗತ್ತಿನ ಎಲ್ಲ ದೇಶಗಳಲ್ಲೂ ವಿಜೃಂಭಿಸುತ್ತಿವೆ. ಅವಕ್ಕೆ ಏನೆಲ್ಲ ಸುಖ, ಸವಲತ್ತು. ʻಖಂಡವಿದಕೋ ಮಾಂಸವಿದಕೋʼ ಎನ್ನುತ್ತ ತನ್ನದೆಲ್ಲವನ್ನೂ ಬೇರೆಯವರಿಗೆ ಮುಡಿಪಾಗಿ ಇಟ್ಟ ಜೀವಿಯೇ ಬದುಕಿ ಬಾಳುತ್ತದೆ. ಹಾಯಾಗಿ ಸಂತಾನವೃದ್ಧಿ ಮಾಡಿಕೊಳ್ಳುತ್ತಿದೆ.

ಇದಲ್ಲವೆ ನಿಸರ್ಗದ ನಿಜವಾದ ನೀತಿಕಥೆ? ಇನ್ನೂ ಚಂದದ ಉದಾಹರಣೆ ಬೇಕಿದ್ದರೆ ಸಸ್ಯಲೋಕಕ್ಕೆ ಮತ್ತೆ ಹೋಗೋಣ. ಭತ್ತದ ಸಸ್ಯವನ್ನೇ ನೋಡಿ. ಅದಕ್ಕೂ ಆತ್ಮರಕ್ಷಣೆಯ ಯಾವ ಆಯುಧವೂ ಇಲ್ಲ. ಬಾಯಾರಿಕೆ ಆದರೆ ನೀರಿದ್ದಲ್ಲಿಗೆ ಹೋಗುವಂತಿಲ್ಲ. ಬೇರುಗಳನ್ನೂ ದೂರ ಚಾಚಲು ಸಾಧ್ಯವಿಲ್ಲ. ಬಿರುಗಾಳಿ, ಆಲಿಕಲ್ಲುಗಳ ಜಡಿಮಳೆ ಬಂದರೆ ತಲೆತಗ್ಗಿಸಿ ಸಹಿಸಿಕೊಳ್ಳುವುದೇ ವಿನಾ ಬೇರೆ ದಾರಿ ಇಲ್ಲ. ಅದರ ಎಲೆಗಳು ರುಚಿಕರವಾಗಿದ್ದು, ಪೌಷ್ಟಿಕಾಂಶಗಳ ಆಗರವೇ ಹೌದು. ಅದು ತನ್ನ ಈ ಸದ್ಗುಣಗಳಿಂದಾಗಿಯೇ ಪೃಥ್ವಿಯ ಎಷ್ಟೊಂದು ಭೂಭಾಗವನ್ನು ಆಕ್ರಮಿಸಿದೆ.

ಸೃಷ್ಟಿಯ ಇನ್ನೊಂದು ವಿಚಿತ್ರವನ್ನು ನೀವು ಗಮನಿಸಿದಿರಾ? ಮನುಷ್ಯನೆಂಬ ಪ್ರಾಣಿ ಮಹಾಕ್ರೂರಿ ಎಂದು ನಾವು ನಮ್ಮ ಬಗ್ಗೆಯೇ ಹೇಳಿಕೊಳ್ಳುತ್ತಿರುತ್ತೇವೆ. ಆದರೆ ಇದೇ ಮನುಷ್ಯನ ಆಗಮನಕ್ಕಾಗಿ ಈ ಎಲ್ಲ ಸದ್ಗುಣಗಳಿರುವ ಸಸ್ಯ ಮತ್ತು ಪ್ರಾಣಿಗಳು ಕೋಟಿಗಟ್ಟಲೆ ವರ್ಷದಿಂದ ಕಾಯುತ್ತಿದ್ದುವೇನೊ. ಮನುಷ್ಯನ ಸಹಾಯ ಹಸ್ತದಿಂದಾಗಿಯೇ ಕಬ್ಬು, ಭತ್ತ, ಬಾಳೆ, ಸೌತೆ, ಹಸು, ಕುರಿ, ಕೋಳಿ, ಕುದುರೆ ಹಂದಿ ಎಲ್ಲವೂ ಹಾಯಾಗಿ ತಂತಮ್ಮ ವಂಶಾಭಿವೃದ್ಧಿ ಮಾಡಿಕೊಂಡು, ಜಗದ್ವ್ಯಾಪಿಯಾಗಿ ಹರಡಿಕೊಂಡಿವೆ.

ಅವೆಲ್ಲವೂ ಒಳ್ಳೆಯತನವನ್ನೇ ಮೈಗೂಡಿಸಿಕೊಂಡಿದ್ದರಿಂದಾಗಿ ಇಂದು ಯಶಸ್ವೀ ಜೀವಿಗಳೆನಿಸಿವೆ. ಹೌದು ತಾನೆ? ಮೇಲ್ನೋಟಕ್ಕೆ ಹಾಗೇ ಅನ್ನಿಸುತ್ತದೆ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗಿ, ಇದರ ವಿರುದ್ಧವಾಗಿರಲೂ ಸಾಧ್ಯ…. ಈ ನಿಟ್ಟಿನಲ್ಲಿ ನಿಮ್ಮ ಲಹರಿ ಏನಾದರೂ ಇದ್ದರೆ ಇಲ್ಲಿ ಅದನ್ನು ಹರಿಬಿಡಬಹುದು.

ಬರಹ
ನಾಗೇಶ್ ಹೆಗಡೆ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು
May 8, 2025
7:21 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ
May 8, 2025
6:54 AM
by: ದ ರೂರಲ್ ಮಿರರ್.ಕಾಂ
ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group