ಕಳೆದ ಕೆಲವು ದಿನಗಳಿಂದ ಅಡಿಕೆ ಬೆಳೆಗಾರರಿಗೆ ನಿರೀಕ್ಷೆಯ ಮೇಲೆ ನಿರೀಕ್ಷೆ.ಚಾಲಿ ಅಡಿಕೆ ಧಾರಣೆ ಕೆಜಿಗೆ 500 ರೂಪಾಯಿ ತಲುಪಿಯೇ ಬಿಟ್ಟಿತು ಎಂದು ನಿರೀಕ್ಷೆಯಲ್ಲಿದ್ದರು. ಆದರೆ ಜುಲೈ15 ಕಳೆದರೂ ಧಾರಣೆ 500 ತಲುಪಲಿಲ್ಲ. ಸದ್ಯಕ್ಕೆ ಈ ಧಾರಣೆ ತಲಪುವುದೂ ಕಷ್ಟವೇ. ಆದರೆ ಈಗ ಇರುವ ಧಾರಣೆಯ ಆಸುಪಾಸಿನಲ್ಲಿ ಸ್ಥಿರತೆ ಇರುವ ಸಾಧ್ಯತೆಯೇ ಹೆಚ್ಚು. ಸದ್ಯ ಚಾಲಿ ಅಡಿಕೆಯಲ್ಲಿ ಹೊಸ ಅಡಿಕೆ 475-485 ರೂಪಾಯಿ ಹಾಗೂ ಹಳೆ ಅಡಿಕೆಗೆ 525-530 ಆಸುಪಾಸಿನಲ್ಲಿದೆ.
ಅಡಿಕೆ ಮಾರುಕಟ್ಟೆಯನ್ನು ಗಮನಿಸಿ, ಕಳೆದ ಕೆಲವು ದಿನಗಳಿಂದ ಅಡಿಕೆಯನ್ನು ಮಾರುಕಟ್ಟೆಗೆ ಬಿಡಬೇಡಿ, ಧಾರಣೆ ಏರುತ್ತದೆ, ದಾಸ್ತಾನುದಾರರ ಆಟ, ವ್ಯಾಪಾರಿಗಳ ಆಟ, ಸದ್ಯವೇ 500 ರೂಪಾಯಿ ತಲಪುತ್ತದೆ, ಅಂತೆಲ್ಲಾ ವಿಶ್ಲೇಷಣೆ ಮಾಡಲಾಯಿತು. ಈ ಮಾತನ್ನು ನಂಬಿ ಕೆಲವು ಅಡಿಕೆ ಬೆಳೆಗಾರರು ಅಡಿಕೆ ಮಾರಾಟ ಮಾಡದೆಯೇ ಇರಿಸಿದ್ದಾರೆ. ಸದ್ಯ ಅಡಿಕೆಯ ಕೊರತೆ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿದೆ, ನಿಜ. ಈಗ ಪರಿಣಾಮ ಏನಾಯ್ತು..? ಅಡಿಕೆ ಆಮದು ಕಳ್ಳದಾರಿಯಲ್ಲಿ ನಡೆಯುತ್ತಿದೆ. ಗ್ರಾಮೀಣ ಭಾಗದವರೆಗೂ ಇಡೀ ಅಡಿಕೆ ತಲಪಿದೆ. ಹೀಗೆ ಬಂದಿರುವ ಅಡಿಕೆಯಲ್ಲಿ ಭಾರತದ್ದೇ ಅಡಿಕೆಯೂ ಅದರಲ್ಲಿದೆ, ವಿದೇಶದ್ದೂ ಅಡಿಕೆ ಇದೆ. ಭಾರತದ ಹಲವು ಕಡೆ ಬೆಳೆಯುವ ಅಡಿಕೆಯಲ್ಲಿ ಗುಣಮಟ್ಟದ ಕೊರತೆ ಇದೆ. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕಡೆಯಲ್ಲಿ ಬೆಳೆಯುವ ಚಾಲಿ ಅಡಿಕೆ ಗುಣಮಟ್ಟದಿಂದ ಕೂಡಿದೆ.
ಯಾವಾಗಲೂ ಕಳಪೆ ಗುಣಮಟ್ಟದ ಅಡಿಕೆಯನ್ನು ಗುಣಮಟ್ಟದ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ಕೆಲವು ಸಮಯಗಳಿಂದ ನಡೆಯುತ್ತಿದೆ. ಇದಕ್ಕಾಗಿ ಪುತ್ತೂರು, ವಿಟ್ಲ ಪ್ರದೇಶದ ಆಯ್ಕೆ ನಡೆಯುತ್ತದೆ. ಇಲ್ಲಿನ ಅಡಿಕೆಯ ಜೊತೆಗೆ ಕಳಪೆ ಗುಣಮಟ್ಟದ ಅಡಿಕೆ ಮಿಶ್ರಣ ಮಾಡಿ ಮಾರಾಟ ಮಾಡುವ ದಂಧೆ ಅಥವಾ ದೂರದ ಊರಿನ ಅಡಿಕೆಯನ್ನು ಇಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಸಾಮಾನ್ಯವಾಗಿ ಚಾಲಿ ಅಡಿಕೆ ಮಾರುಕಟ್ಟೆ ಪುತ್ತೂರಿನದ್ದೇ ಅಂತಿಮವಾಗುತ್ತದೆ. ಅಡಿಕೆ ಮಾರುಕಟ್ಟೆ ಎಂದರೆ ಪುತ್ತೂರು ಎನ್ನುವ ಕಾರಣವೂ ಅದೇ. ಏಕೆಂದರೆ ಇಲ್ಲಿ ಗುಣಮಟ್ಟದ ಅಡಿಕೆ ಇದೆ ಎನ್ನುವ ಕಾರಣ.ಉಳಿದೆಲ್ಲಾ ಕಡೆಯ ಚಾಲಿ ಅಡಿಕೆ ಮಾರುಕಟ್ಟೆ ಪುತ್ತೂರು ಮಾರುಕಟ್ಟೆಯನ್ನು ಫಾಲೋ ಮಾಡುತ್ತವೆ. ಆದರೆ ಈಚೆಗೆ ಇಲ್ಲಿನ ಮಾರುಕಟಟೆ ಅಸ್ಥಿರ ಮಾಡುವ ಪ್ರಯತ್ನ ನಡೆಯುತ್ತಿದೆ. ಬೇರೆ ಕಡೆಯ ಅಡಿಕೆ ಮಿಶ್ರಣ ಮಾಡಿ ಮಾರಾಟ ಮಾಡುವ ದಂಧೆ ನಡೆಯುತ್ತದೆ. ಇಡೀ ಅಡಿಕೆಯನ್ನು ತಂದು ಅದನ್ನು ಇಲ್ಲಿಯೇ ಸುಲಿಸಿ ಮಾರಾಟ ಮಾಡುವುದು ಈಗಿನ ಹೊಸ ಟ್ರೆಂಡ್.
ಅಡಿಕೆ ಮಾರುಕಟ್ಟೆಗೆ ಬೇಕಾದ ಪ್ರಮಾಣದಲ್ಲಿ ಲಭ್ಯ ಆಗದೇ ಇದ್ದಾಗ ಧಾರಣೆ ಏರಿಕೆ ಆಗುತ್ತದೆ ಎನ್ನುವುದು ಒಂದು ವಾದವಾದರೆ, ಈಚೆಗೆ ಕಳಪೆ ಅಡಿಕೆಯನ್ನು ಆಮದು ಮಾಡುವುದೂ ಕೂಡಾ ಇನ್ನೊಂದು ದಾರಿ. ಇಲ್ಲಿ ಗುಣಮಟ್ಟದ ಅಡಿಕೆಯು ಮಾರುಕಟ್ಟೆಯಲ್ಲಿ ಲಭ್ಯ ಗದೇ ಇದ್ದಾಗ, ಉದ್ಯಮಿಗಳು ಕಾರ್ಮಿಕರ ನಿರ್ವಹಣೆ, ಉದ್ಯಮದ ಉಳಿವು ಹಾಗೂ ವ್ಯಾಪಾರದ ಪ್ರಶ್ನೆಯಾದ್ದರಿಂದ ಎಲ್ಲಿ ಅಡಿಕೆ ಲಭ್ಯವಾಗುತ್ತದೆಯೋ ಅಲ್ಲಿಂದ ಅಡಿಕೆ ತರುತ್ತಾರೆ. ಇದು ಯಾವುದೇ ಉದ್ಯಮದಲ್ಲೂ ಅಷ್ಟೇ. ಕೃಷಿಯಲ್ಲೂ ಅಷ್ಟೇ. ಕಾರ್ಮಿಕರ ಕೊರತೆ ಉಂಟಾದಾಗ ಜಾರ್ಖಂಡ್, ಉತ್ತರ ಭಾರತದ ಕಾರ್ಮಿಕರನ್ನು ಹೇಗೆ ಬಳಸಿಕೊಳ್ಳಲಾಗುತ್ತದೆಯೋ ಹಾಗೆಯೇ ಉದ್ಯಮ ಉಳಿಸಿಕೊಳ್ಳಲು ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಯ ಆವಕವೇ ಇಲ್ಲವಾದಾಗ ಸಿಕ್ಕಿದ ಅಡಿಕೆ ಖರೀದಿ ನಡೆಸುತ್ತಾರೆ. ಇದರಿಂದ ದೇಶದ ಅಡಿಕೆಯ ಧಾರಣೆ ಮತ್ತಷ್ಟು ಅಸ್ಥಿರವಾಗುತ್ತದೆ. ಇದು ಬೆಳೆಗಾರರಿಗೇ ಮತ್ತೆ ಸಮಸ್ಯೆಯಾಗುತ್ತದೆ.
ಕಳೆದ ಅನೇ ವರ್ಷಗಳ ಹಿಂದಿನಿಂದ ಕೃಷಿ ಆರ್ಥಿಕ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರು ಅಡಿಕೆ ಮಾರುಕಟ್ಟೆ ಬಗ್ಗೆ ಸರಿಯಾಗಿ ವಿಶ್ಲೇಷಣೆ ಮಾಡಿ ಈ ಬಗ್ಗೆ ಹೇಳಿದ್ದಾರೆ ಕೂಡಾ. ಅಡಿಕೆಯನ್ನು ಸಂಪೂರ್ಣ ಹಿಡಿತ ಮಾಡುವುದರಿಂದ ಮಾರುಕಟ್ಟೆ ಅಸ್ಥಿರವಾಗುತ್ತದೆ. ಅದಕ್ಕಾಗಿ ಕೃಷಿಕನಿಗೆ ಅಗತ್ಯ ಇರುವಷ್ಟು ಮಾತ್ರವೇ ಅಡಿಕೆ ಮಾರಾಟ ಮಾಡಬೇಕು. ಒಮ್ಮೆಲೇ ಅಡಿಕೆಯನ್ನು ಮಾರಾಟ ಮಾಡುವುದು ಅಪಾಯಕಾರಿ. ಅಗತ್ಯಕ್ಕೆ ತಕ್ಕಷ್ಟು ಅಡಿಕೆಯನ್ನು ಮಾರುಕಟ್ಟೆಗೆ ಬಿಟ್ಟರೆ ಮಾರುಕಟ್ಟೆ ಸ್ಥಿರತೆ ಬರುತ್ತದೆ, ಎಲ್ಲಾ ಅಡಿಕೆ ಬೆಳೆಗಾರರಿಗೂ ಪ್ರಯೋಜನವಾಗುತ್ತದೆ ಎಂದು ಹೇಳಿದ್ದರು, ಹೇಳುತ್ತಲೇ ಇದ್ದಾರೆ ಡಾ.ವಿಘ್ನೇಶ್ವರ ಭಟ್ ವರ್ಮುಡಿ. ಆದರೆ ಧಾರಣೆ ಕುಸಿತವಾದಾಗ “ಅವರು ಹೇಳಿದಂತೆ” ಆಗಲಿಲ್ಲ ಎನ್ನುವ ಕೃಷಿಕರು, ಮಾರುಕಟ್ಟೆ ತಂತ್ರಗಳನ್ನು ಅನುಸರಿಸದೆ, 500 ಆಗುತ್ತದೆ ಎಂದು ಕಾದು, ಕಡಿಮೆ ಧಾರಣೆಯಾದಾಗ ಒಮ್ಮೆಲೇ ಮಾರುಕಟ್ಟೆಗೆ ಅಡಿಕೆಯನ್ನು ಮಾರಾಟ ಮಾಡಿ ಇಡೀ ಮಾರುಕಟ್ಟೆಯನ್ನು ಅಸ್ಥಿರವಾಗುವಂತಾಗಲು ಕಾರಣವಾಗುತ್ತದೆ. ಇಲ್ಲಿ ಅಡಿಕೆ ವ್ಯಾಪಾರಿಗಳಿಗೆ ನಷ್ಟವಾಗುವ ಯಾವ ಸನ್ನಿವೇಶವೂ ಇರುವುದಿಲ್ಲ. ಅಡಿಕೆ ಬೆಳೆಗಾರರಿಗೆ ಧಾರಣೆ ಕಡಿಮೆಯಾಗಿ ಶ್ರಮದ ಬೆಲೆ ಕಡಿಮೆಯಾಗುತ್ತದೆ ಅಷ್ಟೇ.
ಕಳೆದ ಕೆಲವು ಸಮಯಗಳಿಂದ ಗಮನಿಸಿ,ಮಾರುಕಟ್ಟೆಯಲ್ಲಿ ಅಡಿಕೆ ಇಲ್ಲ, 500 ತಲಪುತ್ತದೆ ಎನ್ನಲಾಗಿತ್ತು. ಆದರೆ ಆ ಧಾರಣೆ ತಲುಪಲಿಲ್ಲ. ಸದ್ಯ ತಲಪುವುದೂ ಇಲ್ಲ. ಅತಿಯಾದ ನಿರೀಕ್ಷೆ ಬೆಳೆಗಾರರಿಗೆ ನಷ್ಟ ಹಾಗೂ ಮಾರುಕಟ್ಟೆಗೂ ಅಸ್ಥಿರ. ವಿಪರೀತ ಧಾರಣೆ ಏರಿಕೆಯಾದರೆ ಇಡೀ ಮಾರುಕಟ್ಟೆಯ ಚೈನ್ ಮೇಲೆ ಸಮಸ್ಯೆಯಾಗುತ್ತದೆ. ಅಂತಿಮ ಹಂತದ ಗ್ರಾಹಕನೂ ಖರೀದಿ ಮಾಡುವಾಗ ಯೋಚಿಸುತ್ತಾನೆ. ಹೀಗಾಗಿ ಸೇಲ್ ಮಾಡುವಲ್ಲಿ ಸಮಸ್ಯೆಯಾಗುತ್ತದೆ. ಇದಕ್ಕಾಗಿ ಸ್ಥಿರವಾದ ಧಾರಣೆ ಇದ್ದು ನಿಧಾನವಾದ ಏರಿಕೆಯು ಹೆಚ್ಚು ದೃಢವಾಗಿರುತ್ತದೆ. ಸದ್ಯ ಹಳೆ ಅಡಿಕೆ 500 ರೂಪಾಯಿ ದಾಟಿರುವುದರಿಂದ ಹಾಗೂ ಆ ಅಡಿಕೆ ದಾಸ್ತಾನು ಕಡಿಮೆಯಾಗುವವರೆಗೆ ಹೊಸ ಅಡಿಕೆ ಧಾರಣೆಯು 500 ರೂಪಾಯಿ ಗಡಿ ದಾಟುವುದು ಕಷ್ಟ. ಈಗಾಗಲೇ ಅಡಿಕೆ ದಾಸ್ತಾನು ಮಾಡುವ ಮಂದಿ ಜೂನ್ ಅಂತ್ಯದ ಒಳಗೆ ದಾಸ್ತಾನು ಮಾಡಿರುತ್ತಾರೆ. ಮುಂದೆ ಆಗಸ್ಟ್ ತಿಂಗಳ ನಂತರವೇ ಯಾವಾಗಲೂ ಹೊಸ ಅಡಿಕೆ ಧಾರಣೆ ಏರಿಕೆಯಾಗುತ್ತದೆ. ಅದರ ನಡುವೆ ವಿದೇಶಿ ಅಡಿಕೆ, ಕಳಪೆ ಅಡಿಕೆಗಳು ಸಿದ್ಧವಾಗಿರುತ್ತದೆ. ಧಾರಣೆ ಏರಿಕೆಯ ವೇಳೆ ಇದೆಲ್ಲಾ ಮಾರುಕಟ್ಟೆ ಪ್ರವೇಶವಾಗುತ್ತದೆ. ಯಾವಾಗಲೂ ವಿದೇಶಿ ಅಡಿಕೆ ಆಮದಾಗುವ ವೇಳೆಗೆ ಇಲ್ಲಿಯ ಧಾರಣೆಯೂ ಕುಸಿತವಾಗುತ್ತದೆ. ಈ ಬಾರಿಯೂ ಅದೇ ಆಗಿದೆ.
ಹೀಗಾಗಿ ಅಡಿಕೆ ಬೆಳೆಗಾರರು ಏನು ಮಾಡಬಹುದು ಎನ್ನುವುದನ್ನು ಬೆಳೆಗಾರರು ಯೋಚಿಸಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ಅಡಿಕೆಯನ್ನು ಮಾರುಕಟ್ಟೆ ನೀಡುವುದು ಸೂಕ್ತ. ಈ ಮೂಲಕ ಅಡಿಕೆ ಮಾರುಕಟ್ಟೆ ಸ್ಥಿರತೆಯತ್ತ ಗಮನಿಸಬಹುದು. ಇದರಿಂದ ಬೆಳೆಗಾರ-ವ್ಯಾಪಾರಿ-ಕೃಷಿ ಪರ ಸಂಸ್ಥೆಗಳೂ ಉಳಿದು ಬೆಳೆಯಲು ಸಾಧ್ಯವಾಗುತ್ತದೆ.