ಸಣ್ಣಪ್ಪ ಕೆಲವು ವರ್ಷಗಳು ಅಲಸಂಡೆ ಮತ್ತಿತರ ಕೃಷಿ ಮಾಡಿದ. ಬ್ಯಾಂಕಿಗೆ ಬೆಳೆ ಸಾಲ ಮತ್ತು ಬಡ್ಡಿ ಕಟ್ಟಿದ ಬಳಿಕ ಆತನಲ್ಲಿ ಸಾಕಷ್ಟು ಹಣ ಉಳಿದುಕೊಂಡಿತ್ತು.ಹಾಗಾಗಿ ಒಂದಷ್ಟು ಉಳಿತಾಯವೂ ಈಗ ಸಣ್ಣಪ್ಪನ ಬಳಿ ಇದೆ. ಆದರೆ ಜಮೀನಿನಲ್ಲಿ ವ್ಯವಸ್ಥಿತವಾದ ನೀರಿನ ಸೌಕರ್ಯ ಇಲ್ಲದ್ದರಿಂದ ವರ್ಷಪೂರ್ತಿ ಕೃಷಿ ಮಾಡಲು ಸಾಧ್ಯವಾಗ್ತಾ ಇಲ್ಲ.ಜೊತೆಗೆ ಅತ್ಯಾಧುನಿಕ ನೀರಾವರಿ ಸೌಲಭ್ಯ ಅಳವಡಿಸಿದರೆ ಒಳ್ಳೆಯದು ಅಂತಲೂ ಸಣ್ಣಪ್ಪನಿಗೆ ಅನಿಸ್ತಾ ಇದೆ.
ಸಣ್ಣಪ್ಪ ಬ್ಯಾಂಕಿಗೆ ಹೋಗಿ ಈ ಬಗ್ಗೆ ವಿಚಾರಿಸಿದ.ಬ್ಯಾಂಕಿನವರಿಗೂ ಸಣ್ಣಪ್ಪನ ಜೊತೆಗಿನ ವ್ಯವಹಾರ ಖುಷಿ ಕೊಟ್ಟಿದೆ.ನಂಬಿಕೆಯೂ ಬಂದಿದೆ.
ನೀರಿಗಾಗಿ ಬಾವಿ ತೆಗೆಯುವುದು, ಅದಕ್ಕೊಂದು ವಿದ್ಯುತ್ ಪಂಪ್ ಅಳವಡಿಸುವುದು ಮತ್ತು ನೀರಾವರಿಗಾಗಿ ಸ್ಪ್ರಿಂಕ್ಲರ್ ಪದ್ದತಿ ಅಳವಡಿಸುವುದು ಸಣ್ಣಪ್ಪನ ಚಿಂತನೆ. ಇದಕ್ಕೆ ಬಂಡವಾಳ ಹೆಚ್ಚು ಬೇಕು. ಜೊತೆಗೆ ಒಂದೇ ವರ್ಷದಲ್ಲಿ ಪಡಕೊಂಡ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸಲು ಸಾಧ್ಯವೂ ಇಲ್ಲ.ಪ್ರತಿ ವರ್ಷವೂ ಕಂತು ಕಂತಿನಲ್ಲಿ ಸಾಲ ತೀರಿಸುವ ವ್ಯವಸ್ಥೆ ಸಣ್ಣಪ್ಪನಿಗೆ ಬೇಕಾಗಿದೆ.
ಬ್ಯಾಂಕು ಸಣ್ಣಪ್ಪನ ಬಳಿ ಇದಕ್ಕಾಗಿ ಒಂದು ಯೋಜನಾ ಪಟ್ಟಿಯನ್ನು ( project report) ತಯಾರಿಸಲು ಹೇಳಿದೆ.ಯಾವ್ಯಾವ ಯೋಜನೆಗೆ ಎಷ್ಟೆಷ್ಟು ಖರ್ಚು ಬರುತ್ತದೆ ಎಂದು ಅಂದಾಜಿಸಲು ಹೇಳಿದೆ.ಯೋಜನಾ ವರದಿಯ ಆಧಾರದಲ್ಲಿ ಬ್ಯಾಂಕ್ ಸಣ್ಣಪ್ಪನಿಗೆ ಎಷ್ಟು ಸಾಲ ಕೊಡಬಹುದು ಅಂತ ನಿರ್ಧರಿಸುತ್ತದೆ.
ಸಾಲದ ಒಟ್ಟು ಮೊತ್ತ, ಸಣ್ಣಪ್ಪನಿಗೆ ಆಗಬಹುದಾದ ವಾರ್ಷಿಕ ಉಳಿತಾಯದ ಪ್ರಮಾಣ ಇತ್ಯಾದಿಗಳನ್ನು ಗಮನಿಸಿ ಮರುಪಾವತಿಯ ಅವಧಿಯನ್ನು ಬ್ಯಾಂಕ್ ನಿರ್ಧರಿಸುತ್ತದೆ. ಪ್ರತಿ ಕಂತಿನಲ್ಲೂ ಆ ವರ್ಷದ ಬಡ್ಡಿಯ ಹಣ ಮತ್ತು ಅಸಲಿನ ಒಂದು ಭಾಗ ಇರುವಂತೆ ಅವಧಿಯನ್ನು ವಿಭಾಗಿಸಲಾಗುತ್ತದೆ. ಸಾಮಾನ್ಯವಾಗಿ ಮೂರು/ ಐದು/ಹತ್ತು ವರ್ಷಗಳ ಅವಧಿಯಲ್ಲಿ ಸಾಲ ತೀರುವಳಿಯಾಗುವಂತೆ ಮರು ಪಾವತಿ ನಿರ್ಧರಿಸಲಾಗುತ್ತದೆ .
ಗಮನಿಸಿ ,ಈ ಸಾಲ ಇರುವುದು ವಾರ್ಷಿಕ ಖರ್ಚಿನ ನಿಭಾವಣೆಗಾಗಿ ಅಲ್ಲ.ಜಮೀನಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ. ತೋಟಗಾರಿಕಾ ಬೆಳೆಗಳಲ್ಲಿ ಫಸಲು ಬರಲು ಹಲವು ವರ್ಷಗಳು ಕಾಯ ಬೇಕಾಗ್ತದೆ.ಅಂತಹ ಸಂದರ್ಭದಲ್ಲಿ ಸಾಲಗಾರ ವಾರ್ಷಿಕ ನೆಲೆಯಲ್ಲಿ ಕಂತು ಕಟ್ಟುವುದು ಹೇಗೆ? ಅದಕ್ಕಾಗಿ ಫಸಲು ಆರಂಭವಾಗಲು ಇಂತಿಷ್ಟು ವರ್ಷ ಬೇಕು ಅಂತ ಮೊದಲೇ ನಿರ್ಧರಿಸಿ ಆ ಬಳಿಕವೇ ಕಂತು ಕಟ್ಟಲು ಹೇಳುವ ಕ್ರಮವೂ ಇತ್ತು. ವಿಶೇಷವಾಗಿ ರಬ್ಬರ್ ಕೃಷಿಯಲ್ಲಿ ಹಿಂದೆ ಈ ಮಾದರಿ ಸಾಲ ತೀರುವಳಿಯ ಅವಕಾಶ ಕೃಷಿಕರುಗಳಿಗೆ ಇತ್ತು.
ಬ್ಯಾಂಕುಗಳು ದೀರ್ಘಾವಧಿ ಸಾಲವನ್ನು ಕೃಷಿಕರಿಗೆ ಕೊಡ್ತದೆ.ಆದರೆ ಸಹಕಾರಿ ಸಂಘಗಳಿಗೆ ಈ ಅವಕಾಶ ಇದೆಯಾ? ಇತ್ತೀಚೆಗಿನ ತನಕವೂ ಸಹಕಾರಿ ಸಂಘಗಳೂ ಕೃಷಿಕರುಗಳಿಗೆ ದೀರ್ಘಾವಧಿ ಸಾಲ ಕೊಡ್ತಾ ಇತ್ತು.ಆದರೆ ವಾಸ್ತವದಲ್ಲಿ ಅದಕ್ಕೆ ಅವಕಾಶ ಇರಲಿಲ್ಲವಂತೆ.ಕೃಷಿಕರು ದೀರ್ಘಾವಧಿ ಕೃಷಿ ಸಾಲ ಬೇಕಿದ್ದರೆ ಸಂಬಂಧಿತ ಭೂ ಅಭಿವೃದ್ಧಿ ಬ್ಯಾಂಕಿನಿಂದ (L.D.Bank) ಪಡಕೊಳ್ಳ ತಕ್ಕದ್ದು ಎಂಬುದು ನಿಯಮವಂತೆ.
ಕಾಲಾನುಕ್ರಮದಲ್ಲಿ L.D.Bank ಗಳು ಒಂದಿಷ್ಟು ದುರ್ಬಲವಾಗಿ ತನ್ನ ಪರಿಧಿಯ ಕೃಷಿಕರುಗಳ ಆವಶ್ಯಕತೆ ಪೂರೈಸುವ ಸಾಮರ್ಥ್ಯ ಕಳಕೊಂಡದ್ದು ಮತ್ತು ಅದೇ ಸಮಯದಲ್ಲಿ ಸ್ಥಳೀಯ ಸಹಕಾರಿ ಸಂಘಗಳು ಬಲಿಷ್ಟವಾಗಿ ಸದಸ್ಯರುಗಳಿಗೆ ಹೆಚ್ಚಿನ ಸಾಲ ಕೊಡುವಷ್ಟು ಶಕ್ತಿ ಗಳಿಸಿಕೊಂಡದ್ದರಿಂದ ,ನಿಯಮಗಳಲ್ಲಿ ಅವಕಾಶ ಇಲ್ಲದೇ ಹೋದರೂ,ವಾಸ್ತವದಲ್ಲಿ ದೀರ್ಘಾವಧಿ ಸಾಲ ಕೊಡುವುದು ರೂಢಿಗೆ ಬಂದದ್ದು ಅಂತ ಕೇಳಿದ್ದೆ.
ಇತ್ತೀಚೆಗೆ ಸಹಕಾರಿ ಸಂಸ್ಥೆಗಳಿಗೆ ಸಂಬಂಧ ಪಟ್ಟಂತೆ ದೇಶಕ್ಕೊಂದೇ ಬೈಲಾ ಎಂಬ ತತ್ವದಡಿಯಲ್ಲಿ ಪುನಹ ಸಹಕಾರಿ ಸಂಸ್ಥೆಗಳಿಗೆ ದೀರ್ಘಾವಧಿ ಸಾಲ ಕೊಡುವ ಅವಕಾಶ ಇಲ್ಲ ಅಂತ ಹೇಳಲಾಯ್ತು.ಜೊತೆಗೆ ಅಸ್ತಿತ್ವದಲ್ಲಿ ಇರುವ ಕಾರ್ಯಕ್ರಮಗಳನ್ನು ಮುಂದುವರೆಸಲೂ ಹೇಳಲಾಯ್ತು.ಗೊಂದಲಕ್ಕೆ ಒಳಗಾದ ಹಲವು ಸಂಘಗಳು ದೀರ್ಘಾವಧಿ ಸಾಲ ಕೊಡುವುದನ್ನು ಸ್ಥಗಿತಗೊಳಿಸಿದವು. ಇನ್ನೊಂದಷ್ಟು ಸಂಸ್ಥೆಗಳು ದೀರ್ಘಾವಧಿ ಸಾಲ ಕೊಡುವುದನ್ನು ಮುಂದುವರೆಸಿವೆ.