ನೀವೆಂದಾದರೂ ಅಮ್ಮ ಒಳಗೇನು ಮಾಡುತ್ತಿದ್ದಾರೆ ಎಂದು ಗಮನಿಸಿದ್ದೀರಾ..?. “ಅಮ್ಮ” ಎಂಬ ಗೃಹಿಣಿ ಮನೆಯೊಳಗಿದ್ದರೆ ಯಾವ ಸಂಕಟವೂ ಅರಿವಿಗಿಲ್ಲ. ಕೆಲಸ ಹೇಗೆ ನಡೆಯುತ್ತದೆ, ಹೇಗೆ ಕೆಲಸವಾಗುತ್ತದೆ ಎನ್ನುವ ಅರಿವು ಇಲ್ಲದಾಗಿರುತ್ತದೆ. ಹಾಗಿದ್ದರೆ “ಅಮ್ಮ”ನ ಶಕ್ತಿ ಎಂತಹದ್ದು. ಒಂದು ಮನೆ ಬೆಳಗಲು, ಬೆಳೆಯಲು ಕಾರಣವೂ ಗೃಹಿಣಿ ಎಂಬ ಅಮ್ಮ. ಭಾರತೀಯ ಪರಂಪರೆಯಲ್ಲಿ ಮಹಿಳೆಗೇ ಮೊದಲ ಸ್ಥಾನ ಅದಕ್ಕೆ. ಆಕೆಯೇ ಶಕ್ತಿ.……..ಮುಂದೆ ಓದಿ…..
ಒಂದು ದಿನ ನೀವು ಒಂಟಿಯಾಗಿ. ಅಡುಗೆಯಿಂದ ತೊಡಗಿ ಇಡೀ ಮನೆಯ ಜವಾಬ್ದಾರಿ ನಿಮ್ಮದಾಗಲಿ.ಬೆಳಗಿನಿಂದ ಸಂಜೆಯವರೆಗೆ ಬ್ಯುಸಿ ಬ್ಯುಸಿ..!. ತಡಕಾಡುವುದೇ ಕೆಲಸ. ಅನೇಕರಿಗೆ ಅಂದು ಊಟವಿಲ್ಲ..!. ಪಕ್ಕದ ಹೋಟೆಲ್ ಅಡುಗೆ ಮನೆಯಾಗಿರುತ್ತದೆ. ಇನ್ನೂ ಕೆಲವು ಕಡೆ ಸಿದ್ಧ ಅಡುಗೆಯೇ ಹೊಟ್ಟೆ ತುಂಬಿಸುತ್ತದೆ ಮತ್ತೂ ಕೆಲವು ಕಡೆ ಫ್ರಿಡ್ಜ್ ತುಂಬಿರುತ್ತದೆ..!. ಅಷ್ಟೇ ಅಲ್ಲ ಅಂದಿನ ಇಡೀ ವ್ಯವಹಾರವೇ ಸ್ಥಗಿತವಾಗಿರುತ್ತದೆ.
ಸುಮ್ಮನೆ ಗಮನಿಸಿ, ಇಡೀ ದಿನ ಮನೆಯ ಮಹಿಳೆಯ ಕೆಲಸ ಹಾಗೂ ಓಡಾಟ ಮತ್ತು ಜವಾಬ್ದಾರಿ. ಹಳ್ಳಿಯಲ್ಲಿ, ಗ್ರಾಮೀಣ ಭಾಗದಲ್ಲಿ ಸ್ವಲ್ಪ ಹೆಚ್ಚು. ನಗರದಲ್ಲೂ ಕಡಿಮೆ ಏನಿಲ್ಲ. ಮನೆ-ಕುಟುಂಬ ಎಂದಾಗ ಜವಾಬ್ದಾರಿ ಹೆಚ್ಚೇ. ಇನ್ನೂ ವಿಭಕ್ತ ಕುಟುಂಬವಾದರೆ ಕತೆಯೇ ಬೇರೆ. ಬೆಳಗ್ಗೆ 4.30- 5 ಗಂಟೆಗೆ “ಅಮ್ಮ”ನ ಕೆಲಸ ಆರಂಭವಾಗುತ್ತದೆ. ಬೆಳಗ್ಗೆ ತಿಂಡಿಗೆ ಸಿದ್ಧತೆ, ಮಕ್ಕಳಿಗೆ ಶಾಲೆಗೆ ಸಿದ್ಧತೆ, ನೌಕರಿಗೆ ತೆರಳುವ ಗಂಡನಿಗೆ ಸಿದ್ಧತೆ… ಇಷ್ಟರಲ್ಲೇ ಮುಂಜಾನೆಯಾಗಿರುತ್ತದೆ. ಹಾಸಿಗೆಯಿಂದ ಏಳದ ಮಕ್ಕಳನ್ನು ಎಬ್ಬಿಸಿ ಶಾಲೆಗೆ ಹೊರಡಿಸಿ, ತಿಂಡಿ ತಿನ್ನಿಸಿ ಸ್ಕೂಲ್ ವ್ಯಾನಿಗೋ… ವಾಹನದಲ್ಲೋ ಮಕ್ಕಳನ್ನು ಬಿಟ್ಟು ಬರುವಾಗ ಸಮಯ 8 ಆಗಿರುತ್ತದೆ. ಆಗಷ್ಟೇ ಗಂಡ ಹಾಸಿಗೆಯಿಂದ ಎದ್ದು ಟಿವಿ ನೋಡುತ್ತಿರುತ್ತಾನೆ..!. ಅದಾಗಿ ಮತ್ತೆ ಸಿದ್ಧತೆ ಗಂಡನಿಗೆ, ತಿಂಡಿ-ಚಹಾ ಎಲ್ಲವೂ ಸಿದ್ಧವಾಗಿಐರನ್ ಮಾಡುವವರೆಗೆ ಆಗಿ ಮನೆ ಯಜಮಾನ ಕಚೇರಿಗೆ ತೆರಳುವವರೆಗೆ ಸಿದ್ಧತೆ ನಡೆಯುತ್ತದೆ. ಅಷ್ಟರಲ್ಲಿ ಸಮಯ 9 ಅಗಿರುತ್ತದೆ. ಸ್ವಲ್ಪ ವಿರಾಮದ ನಂತರ ಮತ್ತೆ ಮಧ್ಯಾಹ್ನದ ಊಟ, ಚಹಾದ ಸಮಯ. ಸಂಜೆ ಮತ್ತೆ ಅದೇ ಡ್ಯೂಟಿ.. ಹೀಗೇ ನಡೆಯುತ್ತದೆ ದಿನಚರಿ.
ಗ್ರಾಮೀಣ ಭಾಗದಲ್ಲಾದರೆ ಇನ್ನಷ್ಟು ತುರ್ತು. ಬೆಳಗಿನ ಸಮಯವೇ ತುರ್ತು. ತೋಟದ ಕೆಲಸಕ್ಕೆ ಜನ, ಅವರಿಗೆ ತಿಂಡಿ, ಅವರಿಗೆ ಚಹಾ, ತೋಟದ ಸುತ್ತು ಇದೆಲ್ಲಾ ಆಗಿಯೂ ಮಧ್ಯಾಹ್ನ ನಿಗದಿತ ಸಮಯಕ್ಕೆ ಊಟ..!. ಸಂಜೆಯವರೆಗೂ ಇದೇ ಕೆಲಸ. ದೂರದಿಂದ ನೋಡುವುದಕ್ಕೆ ಬಹಳ ಸಣ್ಣ ಕೆಲಸ. ಚಹಾ ಆದೇಶವಾದರೆ ಕುಳಿತಲ್ಲಿಗೆ ತಲಪುತ್ತದೆ..!, ಅಲ್ಲೊಂದು ಪ್ರೀತಿ..!. ಒಂದು ದಿನ ನೀವು ಒಂಟಿಯಾಗಿ, ಎಲ್ಲಾ ಕೆಲಸ ಮಾಡಿ ನೋಡಿ. ಅರ್ಧಕ್ಕೇ ಎಲ್ಲವೂ ನಿಲ್ಲುತ್ತದೆ..!. ಸಕ್ಕರೆ ಕಡಿಮೆಯಾಗಿರುವ ಚಹಾವಾದರೂ ಸೂಪರ್, ಉಪ್ಪುಕಡಿಮೆಯಾದ ಚಟ್ನಿಯಾದರೂ ಚಂದ..!. ಬಿಡುವಿಲ್ಲದ ಕೆಲಸಗಳು ಸಾಕುಸಾಕಾಗಿಸುತ್ತದೆ. ಆಗ “ಅಮ್ಮ”ನ ಕೆಲಸ ಏನು ಅಂತ ಅರಿವಾಗುತ್ತದೆ.
ಎಷ್ಟೋ ಸಲ ಮನೆಯಾತ ದುಡಿದು ಮನೆಗೆ ತರುವ ಸಂಬಳ ಸಾಲುವುದಿಲ್ಲ. ಇಡೀ ಬದುಕು ಪೂರ್ತಿ ಸಾಲವೇ ಸಾಲ. ಆದಾಯ-ಖರ್ಚು ಸರಿದೂಗುವುದೇ ಇಲ್ಲ. ಮತೆಯಾತನಿಗೆ ಚಟಗಳಿದ್ದರೆ ಮುಗಿದೇ ಹೋಯ್ತು ಆ ಕುಟುಂಬದ ಕತೆ. ಹಾಗಿದ್ದರೆ ಇದ್ದ ವೇತನದಲ್ಲಿ, ಇರುವ ಆದಾಯದಲ್ಲಿ ಖುಷಿಯಿಂದ ಬದುಕುವ, ಸುಂದರ ಕುಟುಂಬ ಕಟ್ಟುವ ಕೆಲಸ ಹೇಗೆ ನಡೆಯುತ್ತದೆ..? ಯಾರು ಕಟ್ಟುತ್ತಾರೆ..?. ಯಾವುದೇ ಉದಾಹರಣೆ ತೆಗೆದುಕೊಳ್ಳಿ ಅತ್ಯಂತ ಕನಿಷ್ಟ ಮೂಲಸೌಕರ್ಯ ಇರುವಾಗಲೂ ಮನೆಯೊಳಗೆ ಖುಷಿ ಇರಬೇಕು, ಮಕ್ಕಳು-ಮನೆಯವರು ಖುಷಿಯಾಗಿರಬೇಕು ಎಂದರೆ ಅಮ್ಮನೇ ಕಾರಣ. ಅನೇಕ ಉದಾಹರಣೆ ತೆಗೆದುಕೊಳ್ಳಿ, ಈ ದೇಶದ ಯಾವುದೇ ಸಾಧನೆಯ ಹಿಂದೆ ತೆರೆಯಲ್ಲಿ ಅಮ್ಮನಿದ್ದಾಳೆ. ಅಮ್ಮ ಬಡತನ ಎನ್ನುವುದನ್ನು ಶ್ರೀಮಂತಿಕೆ ಎನ್ನುವ ಮನಸ್ಥಿತಿಯನ್ನು ಮನೆಯಲ್ಲಿ ತಂಬಿರುತ್ತಾಳೆ, ಧನಾತ್ಮಕ ಮನಸ್ಥಿತಿಯನ್ನು ತಂದಿರುತ್ತಾಳೆ. ಯಾವತ್ತೂ “ಅಮ್ಮ” ಸವಾಲು ಸ್ವೀಕರಿಸಿದರೆ ಆ ಕುಟುಂಬ ಗೆದ್ದಂತೆಯೇ. ಹಾಗಂತ ಅದೇ ಮಹಿಳೆಯಿಂದಾಗಿ ಇಡೀ ಕುಟುಂಬ, ಸಮಾಜವೂ ಅಧ್ವಾನವಾದ, ಹೀನಾಯವಾದ, ನಾಶವಾದ ಉದಾಹರಣೆಗಳೂ ಸಾಕಷ್ಟು ಇದೆ. ಅದಕ್ಕೇ “ಅಮ್ಮ” ಎನ್ನುವ ಭಾವವು ಹೆಚ್ಚು ಜಾಗೃತವಾಗಿರಬೇಕು.
ಈ ದೇಶದಲ್ಲಿ ಮಹಿಳೆ ಎಂದರೆ ಸಾಮಾನ್ಯ ಸಂಗತಿಯಲ್ಲ. ಅದೊಂದು ಪಾಸಿಟಿವ್ ಶಕ್ತಿ. ಯಾವ ಮನೆಯಲ್ಲಿ, ಯಾವ ಕುಟುಂಬದಲ್ಲಿ ಮಹಿಳೆ ಕುಟುಂಬ ನಿರ್ವಹಣೆಯ ಪ್ರಮುಖ ಪಾತ್ರ ವಹಿಸುವುದಿಲ್ಲವೋ ಆ ಮನೆಯೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಪುರುಷನೊಬ್ಬ ಎಷ್ಟೇ ದುಡಿದು ಸಂಪಾದಿಸಲಿ, ಮನೆಯ ಗೃಹಿಣಿಯ ಮನೆ ನಿರ್ವಹಣೆ ಸರಿಯಾಗಿಲ್ಲದೇ ಇದ್ದರೆ ಆ ಮನೆಯ ಅಭಿವೃದ್ಧಿ ಅಷ್ಟೇ. ಖರ್ಚು ವೆಚ್ಚಗಳ ನಿರ್ವಹಣೆ ಹಾಗೂ ಅನಗತ್ಯವಾದ ವೆಚ್ಚಗಳ ನಿರ್ವಹಣೆಯಲ್ಲಿಯೂ ಅವಳದೇ ಪಾತ್ರ. ಗಂಡ-ಹೆಂಡತಿ ಇಬ್ಬರಲ್ಲೂ ಖರ್ಚುಗಳಲ್ಲಿ ಮಿತಿ ಇಲ್ಲದೇ ಇದ್ದರೆ ಆದಾಯವೇ ಸಾಕಾಗದು. ಇಡೀ ಜಗತ್ತಿನಲ್ಲಿ ಇರುವ ವಸ್ತುಗಳೆಲ್ಲವೂ ಮನುಷ್ಯರಿಗೆ ಬೇಕಾಗಿಯೇ ಮಾಡಲಾಗಿದೆ, ಆದರೆ ಅದರಲ್ಲಿ ನಮಗೆ ಯಾವುದು ಈಗ ಅಗತ್ಯ ಎನ್ನುವುದು ನಮ್ಮ ಆಯ್ಕೆ. ಅಂತಹ ಆಯ್ಕೆಯಲ್ಲಿ ಮನೆಯ “ಅಮ್ಮ”ನ ಪಾತ್ರವೇ ಮುಖ್ಯ. ಈಗ ಅದು ಅಗತ್ಯವಿಲ್ಲ ಎಂದು ಅಮ್ಮ ಮಕ್ಕಳಿಗೆ ಹೇಳಿದರೆ ಮುಗಿದೇ ಹೋಯ್ತು. ಮತ್ತೆ ಮರುಪ್ರಶ್ನೆ ಇರುವುದು ಕೆಲವು ಕಡೆ ಮಾತ್ರಾ.
ಗ್ರಾಮೀಣ ಭಾಗದಲ್ಲಿ ಅನೇಕ ಸಂಕಷ್ಟ ಹೊಂದಿರುವ ಮನೆಗಳು ಇವೆ. ಆ ಮನೆಗಳಿಗೆಲ್ಲಾ ಹೋದರೆ ಸತ್ಯದ ಅರಿವಾಗುತ್ತದೆ. ಇಡೀ ಮನೆಯ ಜವಾಬ್ದಾರಿಯನ್ನು ಆ ಮನೆಯ”ಅಮ್ಮ” ವಹಿಸಿಕೊಂಡಿರುತ್ತಾಳೆ. ಬೆಳಗಿನಿಂದ ಅವಳ ಓಡಾಟ, ಉದ್ಯೋಗ ಆರಂಭವಾಗಿರುತ್ತದೆ. ತುಂಬಾ ಕಡೆ ಕೃಷಿಯ ಅಭಿವೃದ್ಧಿಯ ಹಿಂದೆ ಆ ಮನೆಯ “ಅಮ್ಮ” ಅನುಭವ ಹೆಚ್ಚಿರುತ್ತದೆ. ಕಾಲಕಾಲಕ್ಕೆ ಅಗತ್ಯವಾದ ಕೃಷಿ, ಲೆಕ್ಕಾಚಾರಗಳು ಪಕ್ಕಾ ಇರುತ್ತದೆ. ಹೀಗಾಗಿಯೇ ಕೃಷಿ-ಮನೆ ಎರಡೂ ಬೆಳವಣಿಗೆಯಾಗಿರುತ್ತದೆ, ಉಳಿತಾಯವೂ ಆಗಿರುತ್ತದೆ.
ಇನ್ನು ಕುಡಿತದ ಚಟ ಹೊಂದಿರುವ ಮನೆಯಲ್ಲಿ ಆ ಅಮ್ಮನ ಪಾಡು ಹೇಳತೀರದು. ಸಮಾಜದ ಅವಮಾನದ ನಡುವೆ ಕೆಲಸ ಮಾಡಿ ಮನೆಯ ಖರ್ಚು ವೆಚ್ಚಗಳ ನಿಭಾಯಿಸಿ, ಗಂಡನಿಗೂ ಮತ್ತೆ ಕುಡಿತಕ್ಕೆ ಜಗಳ ಮಾಡಿ ಹಣ ಪಡೆದುಕೊಂಡು ಹೋದಾಗಲೂ, ರಾತ್ರಿ ಬಂದು ಜಗಳವಾದಲೂ ಧೈರ್ಯಗೆಡದೆ ಕುಟುಂಬವನ್ನು ಕಟ್ಟುವ, ಬೆಳೆಸುವ ರೀತಿ ಆ “ಅಮ್ಮ”ನಿಗೆ ಮಾತ್ರಾ ಸಾಧ್ಯ.
ಹೀಗೇ ಒಂದಲ್ಲ ಒಂದು ಕಡೆ ಒಂದು ಕುಟುಂಬದ ಅನಿವಾರ್ಯವಾಗಿರುವ ಅಮ್ಮ ಒಬ್ಬಳೇ ಎಷ್ಟೆಲ್ಲಾ ಪಾತ್ರ ವಹಿಸುತ್ತಾಳೆ..?. ಇದಕ್ಕಾಗಿಯೇ ಮಹಿಳೆ ಎನ್ನುವ ಶಕ್ತಿಗೆ ಇಂದಿಗೂ ಗೌರವ, ಅವಳಿಗೆ ಮಾತ್ರಾ ಇದೆಲ್ಲಾ ನಿಭಾಯಿಸಲು ಸಾಧ್ಯವಷ್ಟೇ.ಅನೇಕ ಸಲ ಸಮಸ್ಯೆಗಳು ಉಂಟಾದಾಗ, ಮನೆಯೊಳಗೆ ಸಮಾಧಾನ ಹೇಳುವ, ದಾರಿಯ ಬದಲಾವಣೆಗೂ ಅವಳೇ ಕಾರಣಳಾಗುತ್ತಾಳೆ. ಸಮಾಧಾನವೇ ಪರಿಹಾರವಾಗುತ್ತದೆ. ಇಂತಹ ಅಮ್ಮನ ಬಗ್ಗೆ ಒಮ್ಮೆ ಯೋಚಿಸಿ… ಅದೂ ನೀವು ಒಂಟಿಯಾಗಿರುವಾಗ ಅವಳ ಪಾತ್ರದ ಬಗ್ಗೆ ಯೋಚಿಸಿ.
ಅದಕ್ಕಾಗಿಯೇ ಅಮ್ಮ ಇಡೀ ದಿನ ಮನೆಯೊಳಗೆ ಮಾತ್ರವಲ್ಲ ಅವಳಿಗೂ ಬಿಡುವು ನೀಡಿ. ಸ್ವಲ್ಪ ವಿರಾಮ ಇರಲಿ. ದೇಹದ ಸುಸ್ತಿಗಿಂತಲೂ ಮನಸ್ಸಿನ ಸುಸ್ತು ದೂರವಾಗಿಸಲು ಯಾವಾಗಲಾದರೊಮ್ಮೆ “ಅಮ್ಮ” ಎಂಬ ಮನೆಯೊಡತಿಯ ಜೊತೆಗೆ ಸುತ್ತಾಡಿ. ಎಂತಹದೊಂದು ಬದಲಾವಣೆ ಆರಂಭವಾಗುತ್ತದೆ ಮನೆಯೊಳಗೆ, ಹೊಸದಾದ ತಿರುವೊಂದು ಮನೆಯಲ್ಲಿ ಕಾಣುತ್ತದೆ. ಅದಕ್ಕೇ ಮನೆಯ “ಅಮ್ಮ” ಯಾವತ್ತೂ ಶಕ್ತಿ.
ಯಾವುದೇ ಕಾರಣಕ್ಕೂ ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೇಂದ್ರ…
ದ್ವೀತಿಯ ಪಿಯುಸಿ ಪರೀಕ್ಷೆ 2 ರ ವೇಳಾಪಟ್ಟಿ ಪ್ರಕಟಗೊಂಡಿದೆ. ಇದೇ 24 ರಿಂದ…
ಕರ್ನಾಟಕದ ಒಳನಾಡಿನಲ್ಲಿ ಮುಂದಿನ 5 ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ 2 ರಿಂದ 3…
ಸುಳ್ಯ ಪ್ರದೇಶದ ಕೆಲವು ಕಡೆ ಮಂಗಳವಾರ ಸಂಜೆ ಮೋಡದ ಅಪರೂಪದ ವಿದ್ಯಮಾನ ಆಗಸ…
ಈಗಿನಂತೆ ವಾತಾವರಣದಲ್ಲಿ ಅಧಿಕ ತೇವಾಂಶ ಹಾಗೂ ವಿಪರೀತ ಸೆಕೆಯ ಕಾರಣ ಕರಾವಳಿಯ ಕೆಲವು…
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ.ಉಡುಪಿ ಜಿಲ್ಲೆ 93.90% ರಷ್ಟು ಅತಿ ಹೆಚ್ಚು ಉತ್ತೀರ್ಣರಾಗಿದ್ದರೆ,…