MIRROR FOCUS

ಚಾರಣ ಮಾಡುವವರ ಜವಾಬ್ದಾರಿ ಏನು? | ಪ್ರತಿಯೊಬ್ಬ ನಾಗರೀಕನೂ ತಿಳಿದುಕೊಳ್ಳಬೇಕು

Share

ನಗರದ ದಿನನಿತ್ಯದ ಜಂಜಾಟಗಳ ಬದುಕಿಂದ ಬೇಸತ್ತು ಹೋಗಿರುವವರು ಸ್ವಲ್ಪ ವಿರಾಮ(Relax) ಆಗೋಣ ಎಂದು ನಮ್ಮ ಪಶ್ಚಿಮ ಘಟ್ಟಗಳ(Western Ghats) ಗುಡ್ಡ, ಕಣಿವೆ, ಕಾಡುಗಳಿಗೆ(Forest) ಚಾರಣ(Trucking) ಬರುತ್ತಾರೆ. ಅವರ ಹಲವು ಒತ್ತಡಗಳ ಬದುಕು(Life) ಇಲ್ಲಿನ ಹಸಿರು ಸಾಲುಗಳೆಡೆಗೆ ಆಕರ್ಷಿತವಾಗುತ್ತದೆ. ಈ ಪಟ್ಟಣಗಳ(City) ಗದ್ದಲಗಳಿಂದ ದೂರವಾಗಲೆಂದು ಘಟ್ಟಗಳಿಗೆ ಬರುವವರು ಅವರೊಂದಿಗೆ ಅಲ್ಲಿಯ ಗದ್ದಲವೂ ಇಲ್ಲಿಗೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು.

Advertisement

ಟ್ರೆಕ್ಕಿಂಗ್ ಎಂದರೆ ಕಾಡು, ಬೆಟ್ಟ, ಗುಡ್ಡಗಳನ್ನು ಹತ್ತಿಳಿಯುವುದು ಎಂದು ಮಾತ್ರವಲ್ಲ, ನದಿ, ಜಲಪಾತದ ನೀರಿನಲ್ಲಿ ಮಿಂದು ಹೋಗುವುದು ಅಂತ ಕೂಡಾ ಅಲ್ಲ, ಇಲ್ಲಿನ ರಮಣೀಯ ದೃಶ್ಯಗಳ ಜೊತೆ ಜೊತೆಗೆ ಅದರ ಹಿಂದಿರುವ ತಲ್ಲಣಗಳು ಕೂಡಾ ಅವರಿಗೆ ತಿಳಿಯಬೇಕು. ಕಾಡಿನ ಕೂಗು ಅರ್ಥವಾಗಬೇಕು. ಮತ್ತಿದು ಇಂದಿನ ದಿನಗಳಲ್ಲಿ ಪದೇಪದೇ ಕಾಡಬೇಕು! ಕಾಡಿನ ಮೌನದಲ್ಲಿ ಹೊರಹೊಮ್ಮುವ ಜೀವಸರಪಳಿಯ ಭಾಷೆಗಳು ಅವರನ್ನು ಪರಿಸರ ಸಂರಕ್ಷಣಾ ಕಾಯಕಕ್ಕೆ ಪ್ರೇರೇಪಿಸಬೇಕು. ಪ್ರತೀ ಚಾರಣಿಗರಲ್ಲೂ ಈ ಪಶ್ಚಿಮ ಘಟ್ಟಗಳನ್ನು ನಾವು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂಬ ಪ್ರಜ್ಞೆ ಒಡಮೂಡಬೇಕು.

ಆಗುಂಬೆಯ ಮಳೆಕಾಡಿನಲ್ಲಿ ಕಾಳಿಂಗ ಸರ್ಪವೊಂದು ಪ್ರವಾಸಿಗರ ಹೆಸರಿನ ಪುಂಡರು ಕುಡಿದು ಎಸೆದು ಹೋಗಿದ್ದ ಮದ್ಯವನ್ನು ನೀರೆಂದು ಭ್ರಮಿಸಿ ಒಂದೆರಡು ಹನಿ ಕುಡಿದು ಇಡೀ ಒಂದು ದಿನ ಅಸಹಜವಾಗಿ ವರ್ತಿಸಿತ್ತೆಂದು, ಎಲ್ಲಾ ಘಾಟಿ ರಸ್ತೆಗಳಲ್ಲಿರುವ ವಾನರ ಪಡೆಗಳು ಪ್ರವಾಸಿಗರು ಕೊಡುವ ತಿಂಡಿಗಳಿಂದಾಗಿ ತಮ್ಮ ಆಹಾರ ಹುಡುಕುವ ಅಭ್ಯಾಸವನ್ನೇ ಮರೆತು ಸಹಜ ಬದುಕು ಕಳೆದುಕೊಂಡಿವೆಯೆಂದು, ಭದ್ರಾ ಹುಲಿಸಂರಕ್ಷಿತದಲ್ಲಿ ಜಿಂಕೆಯೊಂದರ ಮರಣೋತ್ತರ ಪರೀಕ್ಷೆ ಮಾಡಿದಾಗ ಅದರ ಹೊಟ್ಟೆಯಲ್ಲಿ ಆರು ಕೇಜಿ ಪ್ಲಾಸ್ಟಿಕ್, ಸ್ಕ್ರೂ, ಚಪ್ಪಲಿ ಸಿಕ್ಕಿತ್ತೆಂದು, ಮಾನವರು ಹೆಗ್ಗಾಡುಗಳಲ್ಲಿ ಬೇಯಿಸುವ ಕಳ್ಳಬಟ್ಟಿ ಕುಡಿದು ಆನೆಗಳು ದಾಂಧಲೆ ಮಾಡುತ್ತವೆಂದು, ದೇವರಮನೆ ಕಾಡಿನಲ್ಲಿ ಕಡವೆಯೊಂದರ ಕಾಲಿಗೆ ಬಿಯರ್ ಬಾಟಲಿಯ ಗ್ಲಾಸಿನ ತುಂಡು ಚುಚ್ಚಿ ಅದಕ್ಕೆ ತೀವ್ರ ರಕ್ತಸ್ರಾವವಾಗಿತ್ತೆಂದು, ಘಟ್ಟದ ಉದ್ದಕ್ಕೂ ಎಲ್ಲೆಲ್ಲೂ ಕಾಟಿಹಂತಕ ತಂಡಗಳು ಹುಟ್ಟಿಕೊಂಡಿವೆಯೆಂದು ಇತ್ಯಾದಿ ಇತ್ಯಾದಿ ಇತ್ಯಾದಿ….. ಅರಣ್ಯದ ತಲ್ಲಣಗಳನ್ನು ಇಂದು ಚಾರಣಿಗರಿಗೆ ಒತ್ತಿ ಒತ್ತಿ ಹೇಳಬೇಕಿದೆ. ಆ ಮೂಲಕ ದಯಮಾಡಿ ಇಲ್ಲಿ ಪ್ಲಾಸ್ಟಿಕ್, ಗಾಜಿನ ಬಾಟಲಿ, ಇತರೆ ತ್ಯಾಜ್ಯಗಳನ್ನು ಎಸೆದು ಹೋಗಬೇಡಿ ಎಂದು ಹೊಸ ರೀತಿಯಲ್ಲಿ ಅರಿವು ಮೂಡಿಸಬೇಕಿದೆ.

ಪಶ್ಚಿಮ ಘಟ್ಟಗಳಲ್ಲಿ ಶೇಕಡಾ ಅರವತ್ತೈದರಷ್ಟು ಪ್ರದೇಶದಲ್ಲಿ ಬೋಳುಗುಡ್ಡಗಳೇ ತುಂಬಿಕೊಂಡಿದ್ದರೆ, ಶೇಕಡಾ ಮೂವತ್ತೈದು ಭಾಗದಲ್ಲಿ ಕಾಡಿದೆ. ಗಿಡ ನೆಡುವುದೊಂದೇ ಪರಿಸರ ಸಂರಕ್ಷಣೆ ಎಂದು ಭಾವಿಸಿರುವವರು ಈ ಬೋಳುಗುಡ್ಡಗಳಲೆಲ್ಲಾ ಸಸಿ ನೆಟ್ಟರಾಗಬಹುದೆಂದು ಯೋಚಿಸಿಯಾರು! ಆದರೆ ಹುಲ್ಲುಗಾವಲೆಂದು ಕರೆಯಲ್ಪಡುವ ಈ ಬೋಳುಗುಡ್ಡಗಳು ಮತ್ತು ಎರಡು ಬೆಟ್ಟಗಳು ಸೇರುವ ಕಣಿವೆಯಲ್ಲಿರುವ ಶೋಲಾ ಕಾಡು ಇದ್ದಲ್ಲಿ ಮಾತ್ರ ನದಿ ಮೂಲಗಳು ಉಳಿಯುತ್ತವೆ. ಇಲ್ಲಿರುವ ಸೂಕ್ಷ್ಮ ಜೀವವೈವಿಧ್ಯಕ್ಕೂ ನೀರಲ್ಲಿರುವ ಜಲಜೀವಚರಗಳಿಗೂ ಪರಸ್ಪರ ಸಂಬಂಧವಿದೆ.

ಇಲ್ಲಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿರುವ ಇರುವೆಗಳ ಸಂತತಿ ನಾಶವಾಗುತ್ತಾ ಹೋದಂತೂ ಸಮುದ್ರದ ಮೀನಿನ ಸಂತತಿಯಲ್ಲಿ ಏರುಪೇರುಗಳಾಗುತ್ತದೆ. ಒಂದು ದಿಕ್ಕಿಗೆ ಹರಿಯುತ್ತಿರುವ ನದಿಯನ್ನು ಇನ್ನೊಂದು ದಿಕ್ಕಿಗೆ ತಿರುಗಿಸುವುದು, ಸಮುದ್ರದ ಹಿನ್ನೀರು ಮತ್ತಷ್ಟು ನದಿ ಹರಿವಿನ ದಿಕ್ಕಿಗೆ ನುಗ್ಗಿ ಬಂದು, ಸಿಹಿನೀರು ಉಪ್ಪುನೀರಾಗಿ, ಕಡಲ ತಡಿಯ ಜನರ ಕೃಷಿ, ಮೀನುಗಾರಿಕೆಗೆ ಸಮಸ್ಯೆ ಒಡ್ಡುತ್ತದೆ. ಅವರ ಬದುಕು ಮುಳುಗುತ್ತದೆ. ದಕ್ಷಿಣ ಭಾರತದ ಬಹುಪಾಲು ನದಿಗಳು ಹುಟ್ಟುವುದೇ ಪಶ್ಚಿಮ ಘಟ್ಟದಲ್ಲಿ. ಈ ಪಶ್ಚಿಮ ಘಟ್ಟಗಳು ನಾಶವಾದರೆ ಉಳಿದವರೂ ವಿನಾಶವಾದಂತೆ, ಜಗತ್ತು ಗತಿಸಿ ಹೋದಂತೆ ಅಂತ ಚಾರಣಿಗರಿಗೆ ಬಿಡಿಸಿ ಹೇಳುವುದರಲ್ಲಿ ಟ್ರೆಕ್ಕಿಂಗ್ ನ ಸಾರ್ಥಕತೆ ಇದೆ.

ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಪಶ್ಚಿಮ ಘಟ್ಟಗಳಿಗೆ ಬರುತ್ತಾರೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಕಂಡು ಬೆರಗಾಗುತ್ತಾರೆ. ಅವರಲ್ಲಿ ಬಹುಪಾಲು ಜನರಿಗೆ ಗುಡ್ಡದ ತಪ್ಪಲಿನ ಜನರ ಕೃಷಿ ಬದುಕು ಕಣ್ಮನ ಸೆಳೆಯುವ ಗಿರಿಯ ಸಾಲಿನಷ್ಟೇ ಸುಂದರ ಅಂತನ್ನಿಸುತ್ತದೆ. ‘ವಾವ್!, ಇಲ್ಲಿರುವವರು ಸ್ವರ್ಗದಲ್ಲಿದ್ದಾರೆ’ ಎಂದು ಉದ್ಘಾರ ತೆಗೆಯುತ್ತಾರೆ. ಆದರೆ ವಾಸ್ತವ ಅದಕ್ಕೆ ತದ್ವಿರುದ್ಧವಾಗಿದೆ. ಪ್ರತೀ ಕಾಡಂಚಿನ ಬದುಕುಗಳಲ್ಲೂ ಹೇಳಲಾಗದಷ್ಟು ನಿಟ್ಟುಸಿರುಗಳಿವೆ. ಪರಿಹರಿಸಲಾರದಷ್ಟು ಭೂವಿವಾದದ ಕಗ್ಗಂಟುಗಳಿವೆ. ವನ್ಯಜೀವಿಗಳ ಕಾಟ, ಹವಾಮಾನ ವೈಪರೀತ್ಯ, ಭೂಕುಸಿತದಿಂದ ತಪ್ಪಲಿನ ಬದುಕು ನಲುಗಿದೆ. ಅವರಿಗೆ ಯಾವುದರಿಂದಲೂ ನಿಶ್ಚಿತ ಆದಾಯವಿಲ್ಲ.

ಭೂದಾಹಿಗಳ ನಿರಂತರ ಅರಣ್ಯ ಒತ್ತುವರಿ, ಪ್ರಭಾವಿಗಳ ಕಾಫಿ-ಟೀ-ರಬ್ಬರ್ ತೋಟಗಳ ಬೇಕಾಬಿಟ್ಟಿ ವಿಸ್ತರಣೆ, ಅರಣ್ಯ ಇಲಾಖೆಯ ಅಕೇಶಿಯಾ, ಕ್ಯಾಸುರಿನಾ, ಸಾಗುವಾನಿ ನೆಡುತೋಪುಗಳು, ಅಭಿವೃದ್ಧಿ ಹೆಸರಿನ ಅನಗತ್ಯ ಯೋಜನೆಗಳು, ಸಂಶೋಧನೆ ನೆಪದ ದಂಧೆಗಳು, ಪರಿಸರ ಪ್ರವಾಸೋದ್ಯಮದ ಮುಖವಾಡದ ರೆಸಾರ್ಟ್, ಹೋಮ್ ಸ್ಟೇ ಗಳ ಅಕ್ರಮ ಚಟುವಟಿಕೆಗಳು, ಇಲಾಖೆಯ ಕೃಪಾಕಟಾಕ್ಷದಲ್ಲೇ ಷೋಕಿಗೆ ನಡೆಯುವ ಶಿಕಾರಿಗಳು, ಯಾರ್ಯಾರದ್ದೋ ತೆವಲುಗಳ ಕಳ್ಳಬೇಟೆಗಳು ಕಾಡಂಚಿನ ನಿರುಪದ್ರವಿ ಬದುಕುಗಳ ನೆಮ್ಮದಿ ಗೆಡಿಸಿವೆ. ಪ್ರವಾಸಿಗರಿಗೆ ಈ ಯಾವ ಕರಿ ನೆರಳುಗಳು ಮೇಲ್ನೋಟಕ್ಕೆ ಗೋಚರಿಸಲಾರವು. ಇಲ್ಲಿ ಎಲ್ಲವೂ ನಿಗೂಢ. ರಮ್ಯ ಪರಿಸರದ ಹಿಂದೆ ಊಹಿಸಲಾರದಷ್ಟು ಅಸಹಜವಾದ ರೌದ್ರತೆ ಇದೆ. ಕಾಡು ನಿರಂತರವಾಗಿ ಒತ್ತಡ ಅನುಭವಿಸುತ್ತಿದೆ. ಅಡವಿ ಜನ ನಿಟ್ಟುಸಿರು ಬಿಡುತ್ತಿದ್ದಾರೆ. ಈ ತಳಮಳಗಳು ಕಿಂಚಿತ್ತಾದರೂ ಅರ್ಥವಾದರೆ ನಿಮ್ಮ ಚಾರಣಕ್ಕೂ ಅರ್ಥವಿದೆ.

ಪ್ರತಿ ವರ್ಷವೂ ಕನಿಷ್ಠ ಪಶ್ಚಿಮ ಘಟ್ಟದ ಒಂದಲ್ಲಾ ಒಂದು ಗುಡ್ಡಕ್ಕೆ ಟ್ರಕ್ಕಿಂಗ್ ಹೋಗುವ ಚಾರಣಿಗರಿಗೆ ಅಲ್ಲಿ ಭೂಕುಸಿತಗಳು ಸಂಭವಿಸಿ ತಪ್ಪಲಿನ ಬದುಕು ಸಂತ್ರಸ್ಥವಾದಾಗ ಸ್ಪಂದಿಸಬೇಕಾದ ಮಾನವೀಯತೆಯೂ ಇರಬೇಕು. ಅಡವಿ ಮಕ್ಕಳು ಹೋಗುವ ಶಾಲೆಗಳು ಮೂಲಸೌಲಭ್ಯಗಳಿಂದ ವಂಚಿತವಾಗಿರುವಾಗ ಅವರಿಗೆ ಕಿಂಚಿತ್ತಾದರೂ ಸಹಾಯ ಮಾಡುವ ಮನಸ್ಸು ಮಾಡಬೇಕು. ನಾನಿದನ್ನು ಮಾನವೀಯತೆ ಅನ್ನೋದಕ್ಕಿಂತ ಕರ್ತವ್ಯ ಎನ್ನುತ್ತೇನೆ. ಅಲ್ಲಿನ ವಿಸ್ಮಯಗಳನ್ನು ಬರಹವೋ, ಸಾಕ್ಷ್ಯಚಿತ್ರವೋ, ಫೋಟೋಗ್ರಫಿಯದೋ ಮೂಲಕ ದಾಖಲಿಸಿ ಮುಂದಿನ ತಲೆಮಾರಿನವರಿಗೆ ದಾಟಿಸಬೇಕಾದ್ದೂ ಅವಶ್ಯ. ಹಾಗಂತ ಈ ಕೆಲಸ ಅಲ್ಲಿನ ಯಾವ ಸಹಜತೆಗೂ ಧಕ್ಕೆತರದಂತೆ ಎಚ್ಚರ ವಹಿಸಬೇಕಾದ್ದೂ ಅತೀ ಅವಶ್ಯ.

ತೊಂಭತ್ತಕ್ಕೂ ಹೆಚ್ಚು ಜಾತಿಯ ಮರಗಳ ಚಿಗುರು ತಿನ್ನುತ್ತಾ ಮನುಷ್ಯರಿಂದ ದೂರ ಬದುಕುತ್ತಿದ್ದ ಸಿಂಗಳಿಕಗಳು, ವನ್ಯಜೀವಿ ಛಾಯಾಗ್ರಾಹಕರ ಫೋಟೋ ತೆವಲುಗಳಿಗೆ ಬಲಿಯಾಗಿ, ತಮ್ಮ ಸಹಜ ಜೀವನ ಕಳೆದುಕೊಂಡಂತಹ ದುರಂತ ಸಂಭಂವಿಸಿದೆಯಲ್ಲ, ಎಂದಿಗೂ ಹಾಗಾಗದಂತೆ ನೋಡಿಕೊಳ್ಳುವುದು ಅತೀ ಮುಖ್ಯ. ಪಶ್ಚಿಮ ಘಟ್ಟದುದ್ದಕ್ಕೂ ಅನಾವಶ್ಯಕ ಚತುಷ್ಪಥ ಹೆದ್ದಾರಿ, ರೈಲ್ವೇ ಮಾರ್ಗ, ಅಣುವಿದ್ಯುತ್ ಸ್ಥಾವರ, ಗಣಿಗಾರಿಕೆ, ರೋಪ್ ವೇ, ನದಿ ತಿರುಗಿಸುವುದು, ನೀರು ಸಾಗಿಸುವುದು ಅದು ಇದು ಅಸಂಬದ್ಧ ಯೋಜನೆಗಳ ನೀಲನಕ್ಷೆ ತಯಾರಾದಾಗ ಅದನ್ನು ಖಡಕ್ಕಾಗಿ ಪ್ರತಿಭಟಿಸಬೇಕಾದ್ದು ಅಥವಾ ಪ್ರತಿಭಟಿಸುತ್ತಿರುವ ಸ್ಥಳೀಯರಿಗೆ ವಿವಿಧ ರೂಪದ ಸಹಕಾರ ನೀಡಬೇಕಾದ್ದು ಕೂಡಾ ಚಾರಣಿಗರ ಕರ್ತವ್ಯ. ಘಟ್ಟದ ಹಸಿರು ಸೌಂದರ್ಯಕ್ಕೆ ಪ್ರತಿಸ್ಪಂದಿಸಿದಷ್ಟೇ ಅದರ ನಿಟ್ಟುಸಿರುಗಳಿಗೂ ಪ್ರತಿಕ್ರಿಯಿಸಬೇಕಾದ್ದು ಅಂತಃಕರಣ.

ಇಲ್ಲಿಗೆ ಬಂದು ಕುರುಕಲು ತಿಂಡಿ ತಿಂದು ಕವರ್ ಎಸೆದು ಹೋಗುವುದೋ, ವಿಮಲ್ ಗುಟ್ಕಾ ಪೊಟ್ಟಣ ಬಿಸಾಡುವುದೋ, ಜ್ಯೂಸ್ ಕುಡಿದು ಪ್ಲಾಸ್ಟಿಕ್ ಬಾಟಲಿ ಎಸೆಯುವುದೋ, ಮದ್ಯ ಕುಡಿದು ಗಾಜಿನ ಬಾಟಲಿ ಎಸೆದು ಪರಿಸರ ಹಾಳುಗೆಡುವುದೋ ಟ್ರೆಕ್ಕಿಂಗ್ ಅಲ್ಲ ಅದು ಪರಮ ವಿಕೃತಿ. ಟ್ರೆಕ್ಕಿಂಗ್ ಎಂದರೆ ಗುಡ್ಡಕ್ಕೆ ಹೋಗಿ ಮಜಾ ಮಾಡಿ, ಕಾಡಿನ ಮೌನಕ್ಕೆ ನಿಮ್ಮ ಗದ್ದಲ ಹಚ್ಚಿ, ಸೆಲ್ಫಿ ಹೊಡೆದು ಬರುವುದಲ್ಲ. ಅಲ್ಲಿರಬೇಕಾದ್ದು ಮನರಂಜನೆ, ಮನೋವಿಕೃತಿಯಲ್ಲ.

ಚಾರಣದಲ್ಲಿ ಎಂತಹ ಮನಸ್ಥಿತಿಯವರಿಗೂ ಗುಡ್ಡದ ತುತ್ತ ತುದಿ ತಲುಪಿ, ಅಲ್ಲಿನ ತಂಗಾಳಿಗೆ ಮೈಯೊಡ್ಡಿ, ಹಸಿರು ಸಿರಿಯನ್ನು ಕಣ್ತುಂಬಿಸಿಕೊಂಡಾಗ, ಅಲ್ಲಿಯವರೆಗೆ ಬೆಟ್ಟ ಏರಿದ್ದ ದಣಿವೆಲ್ಲಾ ಹೊರಟು ಹೋಗಿ, ಬೇಸರವೆಲ್ಲಾ ಮಾಯವಾಗಿ, ಪದಗಳಲ್ಲಿ ವಿವರಿಸಲಾರದಷ್ಟು ಸಂತಸವಾಗುತ್ತದೆ. ಆ ಸಂತಸ ಮತ್ತು ಶಾಂತಿಯನ್ನು ಮನಸಾರೆ ಅನುಭವಿಸುವ ಪರಮ ಸುಖ ಚಾರಣಿಗರದಾಗಲಿ. ಪ್ರಾಕೃತಿಕ ಸೌಂದರ್ಯದೆದುರು ಅವರ ಮನಸ್ಸು ಕಳೆದು ಹೋಗಲಿ. ಆ ಮನರಂಜನೆಯ ಜೊತೆ ಜೊತೆಗೆ ಪರಿಸರ ಪ್ರೀತಿ ಹುಟ್ಟಿದರೆ ಅಂತಹ ಚಾರಣದಲ್ಲೊಂದು ನಿಜವಾದ ಸಾರ್ಥಕತೆಯಿದೆ. ಬದಲಾಗಿ ಅಲ್ಲಿ ನಿಮ್ಮ ಯಾವ ವಿಕೃತತೆ ತೋರಿದರೂ ಆ ಪ್ರಕೃತಿ ನಿಮ್ಮನ್ನು ಎಂದಿಗೂ ಕ್ಷಮಿಸಲಾರದು.

ಬರಹ :
ನಾಗರಾಜ ಕೂವೆ
, BEAS Centre ಶೃಂಗೇರಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಶಿವಮೊಗ್ಗ, ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ…

1 hour ago

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ

ಅಕ್ರಮವಾಗಿ ಸುಮಾರು 68 ಟನ್‌ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…

17 hours ago

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…

17 hours ago

2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490

18 hours ago

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |

ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…

1 day ago

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…

1 day ago