Advertisement
ಅಂಕಣ

ಹಣವನ್ನೇನು ಮಾಡುವುದು? ಎಫ್.ಡಿ.ಯಾ? ದೇಣಿಗೆಯಾ?

Share
ಕೆಲವು ಸಮಯದ ಹಿಂದೆ ಗೋವಾದಿಂದ ಒಂದು ವಾರ್ತೆ ಕೇಳಿ ಬಂತು. ಅತಿಶಯೋಕ್ತಿಯೇನೋ ಎನ್ನಿಸುವಂತಹ ವಾರ್ತೆ ಅದು. ಒಬ್ಬ ಸ್ಥಿತಿವಂತನ ಕುಟುಂಬದ ಕತೆ. ಅವನ ಗಂಡು ಮಕ್ಕಳಿಬ್ಬರೂ ಅಮೇರಿಕಾದಲ್ಲಿ ದುಡಿದು ಸಂಪಾದಿಸುತ್ತಿದ್ದರು. ಆದರೆ ರಜೆಗಳಲ್ಲಿಯೂ ಮನೆಗೆ ಬರುತ್ತಿರಲಿಲ್ಲ. ವೃದ್ಧ ದಂಪತಿಗಳು ಗೋವಾದಲ್ಲೇ ಇದ್ದರು. ಅವರು ಅಮೇರಿಕಾಕ್ಕೆ ಹೋಗಿರಲಿಲ್ಲ. ಕಾಲ ಸರಿದಂತೆ ಒಂದು ದಿನ ಅಮ್ಮ ಸತ್ತರು. ಮಕ್ಕಳು ಅಲ್ಲಿಂದಲೇ ಸಂತಾಪ ವ್ಯಕ್ತಪಡಿಸಿದರು. ಆ ಬಳಿಕ ಅಪ್ಪ ಒಬ್ಬನೇ ಉಳಿದಿದ್ದರು. ಅವರೂ ಒಂದು ದಿನ ಸತ್ತರು. ಆಗಲೂ ಆ ಮಕ್ಕಳು ಬಂಧುಗಳಿಗೆ  ತಿಳಿಸಿ ಅಂತ್ಯಸಂಸ್ಕಾರ ಮಾಡಿಸಿದರು. ಇದಾಗಿ ಒಂದೆರಡು ವರ್ಷಗಳ ಬಳಿಕ ಯಾವುದೋ ಹಣ ವಿಲೆವಾರಿಗೆ ಸಂಬಂಧಿಸಿ ಆ ಮಕ್ಕಳಿಗೆ ಕಂದಾಯ ಇಲಾಖೆಯಿಂದ  ಒಂದು ನೋಟೀಸು ಹೋಯಿತು. ಆಗ ಅಣ್ಣ ತಮ್ಮಂದಿರಿಬ್ಬರೂ ಊರಿಗೆ ಬಂದರು. ಇವರು ಉತ್ತರಾಧಿಕಾರಿಗಳೆಂಬ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಯಿಂದ ಪಡೆದು ಬೇಂಕಿಗೆ ಹೋಗಿ ವಿಚಾರಿಸಿದರೆ ಅಪ್ಪನ ಸುಪರ್ದಿಯಲ್ಲಿ ಮೂರು ಲಾಕರ್‌ ಗಳಿದ್ದುವು. ತೆರೆದು ನೋಡಿದಾಗ ಅವುಗಳಲ್ಲಿ 30 ಕೋಟಿ ನಗದು ಹಣ ಮತ್ತು ಚಿನ್ನವನ್ನು ಇಟ್ಟಿದ್ದರು. ಆದರೆ ಆ ಕರೆನ್ಸಿಯು Note Ban ಮೊದಲಿನದ್ದು. ಹಾಗಾಗಿ ಅಷ್ಟೂ ಹಣ ಮೌಲ್ಯರಹಿತ ಕಾಗದದ ತುಂಡುಗಳಾಗಿಯೇ ಕಂಡುವು. ತಂದೆ-ತಾಯಿ -ಮಕ್ಕಳಲ್ಲಿ ಉತ್ತಮ ಸಂಬಂಧವಿರುತ್ತಿದ್ದರೆ ಈ ನಷ್ಟ ಆಗುತ್ತಿರಲಿಲ್ಲ. ಅಥವಾ “ಬೇಕಾದಷ್ಟು ಸಂಪಾದಿಸುವ ಮಕ್ಕಳಿಗೇಕೆ ಹಣ?” ಎಂದು ಯೋಚಿಸಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಅಪ್ಪ ದಾನ ನೀಡಿದ್ದರೆ ಆ ಸಂಗ್ರಹ ವ್ಯರ್ಥವಾಗುತ್ತಿರಲಿಲ್ಲ. ಈಗ ಯಾರಿಗೂ ಇಲ್ಲದಾಗಿ ಹೋಯಿತು. ಏಕೆಂದರೆ ಹಣವನ್ನೇನು ಮಾಡುವುದು ಎಂಬ ಬಗ್ಗೆ ಅವರು ಯೋಚಿಸಲೇ ಇಲ್ಲ. ಆ ಮಕ್ಕಳು ಲಾಕರ್ ನಲ್ಲಿದ್ದ ಚಿನ್ನವನ್ನಷ್ಟೇ ಕೊಂಡೊಯ್ದರು.
ಇತ್ತೀಚೆಗೆ ಒಬ್ಬ ಭಾರೀ ಶ್ರೀಮಂತರೊಬ್ಬರ ಸಾವಿನ ಸುದ್ದಿ ಕೇಳಿದೆ. ಬೆಂಗಳೂರಲ್ಲಿ ದೊಡ್ಡ ಮನೆ ಕಟ್ಟಿಸಿದ್ದಾರೆ. ನಗದು, ಚಿನ್ನ, ನಿರಖು ಠೇವಣಿಗಳ ಸಂಗ್ರಹ ಸಾಕಷ್ಟಿದೆ. ಇನ್ನೀಗ ಅಲ್ಲಿ ಹೆಂಡತಿ ಒಬ್ಬರೇ ಉಳಿದಿದ್ದಾರೆ. ಅವರಿಗೂ ಆರೋಗ್ಯ ಸರಿ ಇಲ್ಲ. ಮಕ್ಕಳಿಬ್ಬರೂ ಅಮೇರಿಕಾದಲ್ಲಿ ದೊಡ್ಡ ಆದಾಯದ ಹುದ್ದೆಗಳಲ್ಲಿ ಇದ್ದಾರೆ. ಅವರಿಗೆ ಈ ಅಪ್ಪನ ಹಣದ ಅವಶ್ಯಕತೆ ಇಲ್ಲ. ಅಲ್ಲಿ ಗಂಡಹೆಂಡತಿ ಇಬ್ಬರೂ ಕೆಲಸದಲ್ಲಿದ್ದು ಹಣ ಸಂಗ್ರ್ರಹಿಸುತ್ತಲೇ ಇದ್ದಾರೆ. ಅಪ್ಪ ಸತ್ತ ಬಳಿಕ ಈಗ ಅಮ್ಮನನ್ನು ನೋಡಿಕೊಳ್ಳಲು ಒಂದು ವ್ಯವಸ್ಥೆ ಮಾಡುವುದಕ್ಕಿಂತ ಹೆಚ್ಚು ಅವರೇನೂ ಮಾಡಲಾರರು. ಅಮೇರಿಕಾಕ್ಕೆ ಅಮ್ಮನನ್ನು ಕರೆದೊಯ್ದರೂ ಅಲ್ಲಿ ವೃದ್ಧಾಶ್ರಮದಲ್ಲಿ ಇರಿಸಬೇಕಷ್ಟೇ. ಏಕೆಂದರೆ ಅಲ್ಲಿ ಮನೆಯಲ್ಲಿ (ಮನದಲ್ಲಿಯೂ) ಜಾಗ ಇಲ್ಲ. ಹಾಗಾಗಿ ಇನ್ನೇನು ಮಾಡುವುದು ಎಂಬ ಚಿಂತನೆ ನಡೆದಿದೆ. ಎಷ್ಟೇ ಹಣವಿದ್ದರೂ ಅದನ್ನು ಉಳಿಸಿಕೊಳ್ಳಬೇಕಾದ ಚಿಂತೆ ಕಾಡುತ್ತಿದೆ. ಏಕೆಂದರೆ ಗಂಡನ ಮರಣಾನಂತರ ಬೆಂಗಳೂರಿನಂತಹ ನಗರದಲ್ಲಿ ದೊಡ್ಡ ಬಂಗ್ಲೆಯಲ್ಲಿ ಒಬ್ಬಳೇ ಉಳಿಯಬೇಕಾದ ಪರಿಸ್ಥಿತಿ ಸಹನೀಯ ಎನ್ನುವಂತಿಲ್ಲ. ಅಮೇರಿಕಾದಿಂದ ಮಕ್ಕಳು ಊರಿಗೆ ಬರುವ ಆಲೋಚನೆಯಲ್ಲಿ ಇಲ್ಲದಿರುವಾಗ ಒಂಟಿ ಹೆಂಗಸಿನ ಸಂರಕ್ಷಣೆಯ ಆತಂಕ ಖಾಯಂ ಆಗಿರುತ್ತದೆ. ಹಣ ಮತ್ತು ಚಿನ್ನ ಜೀವನ ಭದ್ರತೆಗೆ ಒದಗಿದರೂ ಅವೆರಡೂ ಬದುಕಿನ ಭದ್ರತೆಗೆ ಅಪಾಯಕಾರಿಯಾಗಿವೆ.
ಇಂದು ಹಣವಂತರು ತುಂಬಾ ಮಂದಿ ಇದ್ದಾರೆ. ಬೇಂಕ್‍ಗಳಲ್ಲಿ ಅವರ ಠೇವಣಿಗಳು ಬಡ್ಡಿ ತುಂಬಿಸಿಕೊಂಡು ಮುಂದಿನ ವಾಯಿದೆಗೆ ಹಾರುತ್ತಿರುತ್ತವೆ. ವಾಯಿದೆ ಮುಗಿದ ಸರ್ಟಿಫಿಕೇಟುಗಳನ್ನು ಬೇಂಕಿಗೆ ತಂದು renew ಮಾಡಿಸಿ ಮತ್ತೆ ಮನೆಯ ತಿಜೋರಿಯಲ್ಲಿ ಇರಿಸುವುದಷ್ಟೇ ಇವರ ಕೆಲಸ. ಬಾಡಿಗೆಗೆ ಕೊಟ್ಟ ಮನೆಗಳು, ಶೇರುಗಳು ಉದ್ಯಮಗಳಲ್ಲಿ ಪಾಲುದಾರಿಕೆ, ಕೃಷಿ, ಆದಾಯ ಮುಂತಾಗಿ ಹಣ ಹರಿದು ಬರುವ ಇನ್‍ವೆಸ್ಟ್ಮೆಂಟ್ ಮಾಡಿರುತ್ತಾರೆ. ಇನ್ನು ಇವರ ಮಕ್ಕಳೂ ಉನ್ನತ ಶಿಕ್ಷಣ ಪಡೆದು ದುಡಿದು ಸಂಪಾದಿಸುತ್ತಿರುತ್ತಾರೆ. ಹಾಗಾಗಿ “ನಾಳೆಗೆ ಏನು?” ಎಂಬ ಚಿಂತೆ ಇಲ್ಲದೆ ವರ್ಷಗಳೇ ಕಳೆದಿವೆ. ತಿಂಗಳು ತಿಂಗಳೂ ಉಳಿತಾಯವೇ! ಆದರೆ ತಾನು ಸಂಗ್ರಹಿಸಿದ ಹಣದ ಅಂತಿಮ ವೆಚ್ಚವೆಲ್ಲಿ ಎಂದು ಅವರು ಚಿಂತಿಸುವುದಿಲ್ಲ. ಎಲ್ಲವನ್ನು ತನ್ನ ಮಕ್ಕಳಿಗಾಗಿ ಮತ್ತು ವೃದ್ಧಾಪ್ಯದಲ್ಲಿ ತಮಗೆ ಅನಾರೋಗ್ಯ ಬಾಧಿಸಿದರೆ ಚಿಕಿತ್ಸೆಗಾಗಿ ಇರಲಿ ಎಂಬ ಮುಖ್ಯ ಗುರಿಗಳಾಚೆಗೆ ಸಮಾಜದ ಅಭಿವೃದ್ಧಿಯ ಕಡೆಗೆ ಅವರ ಯೋಚನೆ ವಿಸ್ತರಿಸುವುದಿಲ್ಲ. ಈ ಗುರಿಗಳಿಗಾಗಿ ಅನೇಕರು ಅಗತ್ಯಕ್ಕಿಂತ ಹೆಚ್ಚು ಹಣವನ್ನು ಸೇರಿಸಿ  ಇಟ್ಟಿರುತ್ತಾರೆ. ಇವರ ಮಕ್ಕಳು ದುಡಿಯುವ ಕಂಪನಿಗಳಿಂದ ದೊರಕುವ Heath Insurance   ಅಗತ್ಯವಿದ್ದಾಗ ಆಸ್ಪತ್ರೆಯ ಖರ್ಚುಗಳನ್ನು ನಿಭಾಯಿಸಲು ಸಿಗುತ್ತದೆ. ಹಾಗಾಗಿ ಅವರು ಸಂಗ್ರಹಿಸಿಟ್ಟ ಹಣವು ಕಟ್ಟಿಟ್ಟದ್ದೇ ಆಗಿ ಬಿಡುತ್ತದೆ. ಅದು ಗೊತ್ತೇ ಆಗದಂತೆ  ಪರರ ಕೈ ಸೇರುವ ಅಪಾಯ ಇರುತ್ತದೆ. ಇನ್ನೊಬ್ಬರ ಉಪಕಾರಕ್ಕೆ ಕೊಟ್ಟದ್ದಾದರೆ ಆಗ ಅದು ಅವರ ಹೆಸರಲ್ಲಿ ದಾಖಲಾಗಿರುತ್ತದೆ. ಜನರ ಬಾಯಲ್ಲೂ ಇವರ ಗುಣಗಾನ ಇರುತ್ತದೆ. ಮನಸ್ಸಿನಲ್ಲಿಯೂ ಇವರ ಸ್ಮರಣೆ ಇರುತ್ತದೆ.
ಸಾಯುವಾಗ ಏನನ್ನೂ ಕೊಂಡೊಯ್ಯಲಾಗುವುದಿಲ್ಲ. ಎಷ್ಟೇ ಹಣವನ್ನು ಸಂಗ್ರಹಿಸಿದ್ದರೂ ಅದನ್ನು ಬಿಟ್ಟು ಹೋಗಬೇಕಷ್ಟೇ. ಹಿರಿಯ ಪೇಜಾವರ ಸ್ವಾಮಿಗಳು ಒಂದು ಭಾಷಣದಲ್ಲಿ ಹೇಳಿದ್ದರು, ಪ್ರಪಂಚದ ಯಾವುದೇ ದೇಶದ ಕರೆನ್ಸಿಗೂ ಮೋಕ್ಷದ ದಾರಿಯಲ್ಲಿ ಬೆಲೆಯಿಲ್ಲ. ಜೀವನದಲ್ಲಿ ಇನ್ನೊಬ್ಬರಿಗೆ ಉಪಕಾರ ಮಾಡಿ ಸಂಪಾದಿಸಿದ ಪುಣ್ಯಕ್ಕೆ ಮಾತ್ರ ಮೋಕ್ಷದಲ್ಲಿ ಚಲಾವಣೆ ಇದೆ.
ದೇವ ಋಣ, ಪಿತೃ ಋಣ ಹಾಗೂ ಸಮಾಜದ ಋಣ ಎಂಬ ಮೂರು ಸಾಲಗಳು ನಮ್ಮ ಮೇಲಿರುತ್ತವೆ. ಪೂಜೆ ಮತ್ತು ದೈವಾರಾಧನೆಗಳು ದೇವಋಣವನ್ನು ಸಂದಾಯ ಮಾಡುವ ವಿಧಾನಗಳೆಂದು ಹೇಳಲಾಗುತ್ತದೆ. ಪೂಜೆ ಮತ್ತು ಪ್ರದಕ್ಷಿಣೆಗಳು ಧರ್ಮ ಚಿಂತನೆಯೊಂದಿಗೆ ಆಗಬೇಕಾದ್ದು ಅಪೇಕ್ಷಣೀಯ. ಇನ್ನು ಪಿತೃ ಋಣವನ್ನು ಸಂತಾನ ಪಡೆದು ಸಾಮಾಜಿಕ ಜವಾಬ್ದಾರಿಯ ಅರಿವುಳ್ಳ ಪ್ರಜೆಗಳನ್ನು ಬೆಳೆಸುವ ಮೂಲಕ ಸಲ್ಲಿಸುವುದಾಗಿದೆ. ಇನ್ನೊಂದು ಯಾವುದೆಂದರೆ ಋಷಿ ಋಣ. ಅಂದರೆ ಕಲಿತಿರುವ ವಿದ್ಯೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಸಾಲ. ಇದನ್ನು ಇಂದು ಶಿಕ್ಷಣದ ವಿಸ್ತರಣೆಯ ಮೂಲಕ ಮಾಡಬಹುದಾಗಿದೆ. ಅದು ಸಮಾಜದ ಋಣದ ಸಲ್ಲಿಕೆಯೂ ಆಗುತ್ತದೆ. ಈ ದೃಷ್ಠಿಯಿಂದ ಹಣವಂತರು ಋಣ ಸಂದಾಯಕ್ಕೆ ಮನಸ್ಸು ಮಾಡಿದರೆ ಸಮಾಜದ ಅಭಿವೃದ್ಧಿಯೂ ಆಗುತ್ತದೆ, ಬದುಕಿಗೊಂದು ಸಾರ್ಥಕತೆಯೂ ಸಿಗುತ್ತದೆ. ನಮ್ಮ ದೇಶದಲ್ಲಿ ಜ್ಞಾನವಂತ ಯುವ ಜನರನ್ನು ಸೃಷ್ಟಿಸುವುದು ದೇಶವನ್ನು ಬಲಿಷ್ಟಗೊಳಿಸುವ ಕಾರ್ಯವಾಗಿದೆ. ಈ ಕಾರ್ಯದಲ್ಲಿ ತೊಡಗುವ ಶ್ರೀಮಂತರನ್ನೇ ಗಾಂಧೀಜಿಯವರು “ಸಮಾಜದ ಟ್ರಸ್ಟಿ” ಗಳೆಂದು ಕರೆದರು. ನಮಗಿಂದು ಅಂತಹ ಟ್ರಸ್ಟಿಗಳ ಅಗತ್ಯವಿದೆ.
ಕೈತುಂಬಾ  ಹಣವೆಂಬುದು ಒಂದು ಮಾದಕ  ದ್ರವ್ಯದಂತೆ  ಋಣಾತ್ಮಕ  ಪರಿಣಾಮಗಳನ್ನು ಹೊಂದಿದೆ. ಆಗ ಹಣವೂ ವ್ರಣವಾಗಿ ಕಾಡುತ್ತದೆ. ಅದು ಮಿತವ್ಯಯ ಮತ್ತು ಸರಳತೆಯನ್ನು ಮರೆಯಾಗಿಸುತ್ತದೆ. ಹಣದ ಅಹಂಕಾರವು ವ್ಯಕ್ತಿಯ ವರ್ತನೆಗಳನ್ನು ಬದಲಾಯಿಸುತ್ತದೆ. ಊಟ, ತಿಂಡಿ-ಕುಡಿತಗಳ ಆಯ್ಕೆಯನ್ನು ಬದಲಾಯಿಸುತ್ತದೆ. ಉಪಯೋಗಿಸುವ ಭಾಷೆ ಮತ್ತು ಮಾತಿನ ಧಾಟಿ ಬದಲಾಗುತ್ತದೆ.  ಈ ಬದಲಾವಣೆಗಳು ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಭಾವನೆಗಳ ಆರೋಗ್ಯದ ಮೇಲೂ ಪರಿಣಾಮ ಉಂಟು ಮಾಡುತ್ತವೆ. ಅರ್ಥಾತ್ ಖಾಯಿಲೆಗಳ ರೂಪದಲ್ಲಿ ಹಣದ ಇರುವಿಕೆಯು ಪ್ರಕಟಗೊಳ್ಳುತ್ತದೆ. ದೇಹದ ಖಾಯಿಲೆಗಳ ನಿವಾರಣೆಗಾಗಿ ಕೈಯಲ್ಲಿದ್ದ ಹಣವನ್ನೆಲ್ಲ ಮುಗಿಸುತ್ತಾರೆ. ಹಾಗೆ ಹಣ ಖಾಲಿಯಾಗುವ ವೇಗವು ಅವರನ್ನು ಕಂಗೆಡಿಸುತ್ತದೆ.  ಔಷಧಿಯಿಂದ ರೋಗವನ್ನು ಗೆಲ್ಲಬಲ್ಲೆ ಎಂಬ ಅಹಮಿಕೆಗೆ ರೋಗದ ನೋವು ಸವಾಲೆಸೆಯುತ್ತದೆ. ಹೀಗಾಗಿ “ಆರೋಗ್ಯವೇ ಭಾಗ್ಯ” ವೆಂಬ ಸತ್ಯವನ್ನು ಅರಿತುಕೊಳ್ಳುವ ವೇಳೆಗೆ ತಡವಾಗಿರುತ್ತದೆ.
ತಡವಾಗಿಯಾದರೂ ಇಂತಹ ಸತ್ಯವನ್ನು ಅರಿತು ತನ್ನ ಸಂಪತ್ತನ್ನು ಹಂಚಿ ಆರೋಗ್ಯವನ್ನು ಸಂಪಾದಿಸಿದ ಪ್ರಕರಣವೊಂದು ಅಮೇರಿಕಾದಲ್ಲಿ ನಡೆದಿದೆ. ಅಲ್ಲಿನ ಪ್ರಪ್ರಥಮ ಬಿಲಿಯನೇರ್ ಎಂತ ಗುರುತಿಸಿಕೊಂಡಿದ್ದ ರಾಕ್‍ಫೆಲ್ಲರ್ ಎಂಬಾತ ಯಶಸ್ವಿ ಉದ್ಯಮ, ಆಸ್ತಿ, ಹಣ, ಆಳುಗಳು ಹೀಗೆ  “ಇನ್ನು ತನಗೆ ಇದಿರಿಲ್ಲ” ಎಂಬ ಎತ್ತರಕ್ಕೆ ಏರಿದ್ದ.  ಈತ ತನ್ನ 54ನೇ ವಯಸ್ಸಿನಲ್ಲಿ  ಖಾಯಿಲೆಗೆ ಪಕ್ಕಾಗಿ ಬಿಟ್ಟ. ಬೇಕಾದ್ದೆಲ್ಲವನ್ನು ಖರೀದಿಸಬಲ್ಲ ಶಕ್ತಿಯಿದ್ದರೂ ಆತನಿಗೆ ಏನನ್ನು ತಿಂದರೂ ಶರೀರಕ್ಕೆ ಸೇರದ ಕಾಯಿಲೆ ಬಂತು. ಇಷ್ಟು ಸಣ್ಣ ಪ್ರಾಯದಲ್ಲಿ ಸಾವು ಬಂದು ಬಾಗಿಲು ತಟ್ಟಿದ ಅನುಭವವಾದ ಆತನಿಗೆ ತನ್ನ ಆಗಾಧ ಸಂಪತ್ತಿನ ಗತಿಯೇನು ಎಂಬ ಪ್ರಶ್ನೆ ಮೂಡಿತು. ತಕ್ಷಣವೇ ತನ್ನ ಕಂಪನಿಯ ಮುಖ್ಯಸ್ಥರೆಲ್ಲರನ್ನು ಕರೆದು ಒಂದು ಸಭೆ ನಡೆಸಿ ಅಪಾರ ಮೊತ್ತದ ಠೇವಣಿಯನ್ನು ಇಟ್ಟು ರಾಕ್‍ಫೆಲ್ಲರ್ ಫೌಂಡೇಶನ್‍ನ್ನು ಹುಟ್ಟುಹಾಕಿದ. ಅದರ ಮೊತ್ತದಿಂದ ಶಿಕ್ಷಣಕ್ಕೆ ಮತ್ತು ವೈದ್ಯಕೀಯ ಸಂಶೋಧನೆಗೆ ಸ್ಕಾಲರ್ಷಿಪ್‍ಗಳನ್ನು ನೀಡುವ ವ್ಯವಸ್ಥೆ ಮಾಡಿದ. ಹೀಗೆ ಆತ ತನ್ನ ಅಪಾರ ಹಣವನ್ನು ದಾನರೂಪದಲ್ಲಿ ತೊಡಗಿಸಿದ ಬಳಿಕ ಒಂದು ಹೊಸ ವಿದ್ಯಮಾನ ಸಂಭವಿಸಿತು. ರಾಕ್‍ಫೆಲ್ಲರ್‍ನ ಆರೋಗ್ಯದಲ್ಲಿ ಸುಧಾರಣೆ ಕಾಣತೊಡಗಿತು. ಆತನ ಮನಸ್ಸಿಗೆ ಮತ್ತು ಭಾವನೆಗಳಿಗೆ ಹಿತವೆನಿಸುವ ಕೃತಜ್ಞತೆಯ ಸ್ಪಂದನೆಗಳ ಅನುಭವವಾಯಿತು. ಇಂತಹ ಪುಳಕಗಳು ಹೆಚ್ಚಾದಂತೆ ರಾಕ್‍ಫೆಲ್ಲರ್ ತಾನು ಬದುಕಿ ಉಳಿಯುವ ಬಗ್ಗೆ ಆಶಾವಾದಿಯಾದ. ಇದು ಹುಸಿಯಾಗಲಿಲ್ಲ. ಮುಂದಿನ ನಲುವತ್ತು ವರ್ಷಗಳ ಕಾಲ ಬದುಕಿದ ರಾಕ್‍ಫೆಲ್ಲರ್ ತನ್ನ ಉಳಿವಿಗೆ ತಾನು ಮಾಡಿದ ದಾನವೇ ಕಾರಣವೆಂದು ತಿಳಿದ.
ನಮ್ಮ ದೇಶದ ಶ್ರೀಮಂತ ಉದ್ಯಮಿಯಾಗಿ ದೇಶದ ಬಡ ಜನರ ಅಗತ್ಯಗಳಿಗೆ ಸ್ಪಂದಿಸಿ ಆತಂಕದ ಕಾಲದಲ್ಲಿ ಲಕ್ಷ ಕೋಟಿಗಳಲ್ಲಿ ಹಣದ ನೆರವನ್ನು ನೀಡಿದ ರತನ್ ಟಾಟಾರವರು ತಮ್ಮ 86 ನೇ ವಯಸ್ಸಿನಲ್ಲಿ ಗತಿಸಿದರು. ಆವರೆಗೂ ಅವರು ಅರೋಗ್ಯವಂತರಾಗಿದ್ದು ಕ್ರಿಯಾಶೀಲರಾಗಿದ್ದರು. ಅವರು ದೇಶದ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗರಲ್ಲದಿದ್ದರೂ ದಾನಿಗಳ ಪಟ್ಟಿಯಲ್ಲಿ ಮೊದಲಿಗರೇ ಆಗಿದ್ದರು. ಅವರ ಅರೋಗ್ಯದ ಹಿಂದೆ ಅವರ ಸಂಪತ್ತನ್ನು ದಾನ ನೀಡಿದ ಪುಣ್ಯದ  ಪ್ರಭಾವ ಇದೆ ಎಂಬುದರಲ್ಲಿ ಅನುಮಾನವಿಲ್ಲ.
ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

22 hours ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

22 hours ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

1 day ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

2 days ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

2 days ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

4 days ago