ಪ್ರಪಂಚದಾದ್ಯಂತ ವ್ಯವಸಾಯ ಆಗುತ್ತಿರುವ ಬೆಳೆಯೇ ಗೋಧಿ. ಇತರ ಯಾವುದೇ ಬೆಳೆಗಳಿಗಿಂತ ಹೆಚ್ಚಿನ ಪ್ರದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತಿದೆ. ಕಾರ್ಬೋಹೈಡ್ರೇಟ್,ಪ್ರೊಟೀನ್ ಮತ್ತು ನಾರಿನ ಅಂಶಗಳು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇದಕ್ಕೆ ಜಾಗತಿಕವಾಗಿ ಅಧಿಕ ಬೇಡಿಕೆ ಇದೆ.
ಜಾಗತಿಕವಾಗಿ ಭಾರತಕ್ಕೆ ಎರಡನೇ ಸ್ಥಾನ : ಜಾಗತಿಕವಾಗಿ ಗೋದಿಯ ಉತ್ಪಾದನೆಯಲ್ಲಿ ಚೀನಾ 140.1 ಟನ್ ಮತ್ತು ಒಟ್ಟು ಉತ್ಪಾದನೆಯ ಶೇಕಡಾ 18 ಹೊಂದಿ ಮೊದಲನೇ ಸ್ಥಾನದಲ್ಲಿದೆ.ಭಾರತ 113.29 ಟನ್ ಮತ್ತು ಶೇಕಡಾ 14 ರೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ರಷ್ಯಾ 81.6 ಟನ್ ಮತ್ತು ಶೇಕಡಾ 10,ಅಮೇರಿಕಾ 53.65 ಟನ್ ಮತ್ತು ಶೇಕಡಾ 7, ಕೆನಡಾ 34.96 ಟನ್ ಮತ್ತು ಶೇಕಡಾ 4 ಹಾಗೂ ಆಸ್ಟ್ರೇಲಿಯ 34.11 ಟನ್ ಮತ್ತು ಶೇಕಡಾ 4 ಹೊಂದಿರುತ್ತದೆ.
ಭಾರತದಲ್ಲಿ ಗೋಧಿ ಕೃಷಿ : ನಮ್ಮಲ್ಲಿ ಇದರ ಕೃಷಿಯನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಮಾಡಲಾಗುತ್ತಿದೆ. ದೇಶದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಉತ್ಪಾದನೆಯ ಪ್ರಮಾಣದ ಶೇಕಡಾ 31.77 ಉತ್ತರ ಪ್ರದೇಶದಲ್ಲಿ ಉತ್ಪಾದನೆ ಆಗಿ ಇದು ಮೊದಲನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಶೇಕಡಾ 20.98 ಮದ್ಯ ಪ್ರದೇಶ,ಶೇಕಡಾ 13.87 ಪಂಜಾಬ್, ಶೇಕಡಾ 11.63 ಹರ್ಯಾಣ,ಶೇಕಡಾ 9.36 ರಾಜಸ್ತಾನ, ಶೇಕಡಾ 8 ಬಿಹಾರ ಮತ್ತು ಶೇಕಡಾ 7.12 ಗುಜರಾತ್ ರಾಜ್ಯಗಳಾದ್ದಾಗಿದೆ.
ಕರ್ನಾಟಕದಲ್ಲಿ ಗೋಧಿ ಬೆಳೆಯ ಉತ್ಪಾದನೆಯಲ್ಲಿ ಬೆಳಗಾವಿ ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಬಾಗಲಕೋಟೆ,ವಿಜಯಪುರ, ಧಾರವಾಡ ಮತ್ತು ಬೀದರ್ ಜಿಲ್ಲೆಗಳಿವೆ. ರಾಜ್ಯದಲ್ಲಿ ಇದರ ವಿಸ್ತೀರ್ಣ ಸುಮಾರು 1,48,538 ಹೆಕ್ಟೇರ್ ಆಗಿ ಉತ್ಪಾದನೆ ಸುಮಾರು 2,08,344 ಟನ್ ಆಗಿದೆ. ದೇಶದಲ್ಲಿ ಒಟ್ಟಾಗಿ ಇದರ ವ್ಯವಸಾಯದ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2023-2024 ರ ಸಾಲಿನಲ್ಲಿ ಈ ವಿಸ್ತೀರ್ಣ ಸುಮಾರು 314.4 ಲಕ್ಷ ಹೆಕ್ಟೇರ್ ಇದ್ದುದು ಈಗ 330.8 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದೆ. ಇಸ್ರೋದ ಸಮೀಕ್ಷೆ ಪ್ರಕಾರ ಉತ್ಪಾದನೆ ಸುಮಾರು 122.72 ಟನ್ ಆಗಲಿದೆ.
ಗೋಧಿಯ ಬಳಕೆ : ಇದರ ಬಳಕೆಯಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿದ್ದರೆ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಭಾರತ,ಅಮೇರಿಕಾ,ಪಾಕಿಸ್ತಾನ ಮತ್ತು ರಷ್ಯಾ ಗಳು ಇವೆ. ತಲಾ ಬಳಕೆಯಲ್ಲಿ ಈ ಐದು ರಾಷ್ಟ್ರಗಳ ಪೈಕಿ ರಷ್ಯಾ ಮೊದಲನೇ ಸ್ಥಾನದಲ್ಲಿದ್ದರೆ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಪಾಕಿಸ್ತಾನ,ಅಮೇರಿಕಾ,ಚೀನಾ ಮತ್ತು ಭಾರತ ಇದೆ. ಭಾರತದಲ್ಲಿ ಸಂಸ್ಕರಿಸಿದ ಆಹಾರ ಮತ್ತಿತರ ಆಹಾರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿ ಗೋದಿಗಿರುವ ಬೇಡಿಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.ನಮ್ಮಲ್ಲಿ ವಾರ್ಷಿಕವಾಗಿ ತಲಾ 67 ಕಿಲೋ ಗೋಧಿ ಬಳಕೆ ಆಗುತ್ತಿದ್ದು,ಇಲ್ಲಿ ನಗರ ಪ್ರದೇಶಗಳಲ್ಲಿ 57.3 ಕಿಲೋ ಮತ್ತು ಗ್ರಾಮೀಣ ಭಾಗದಲ್ಲಿ 47.5 ಕಿಲೋ ಗೋಧಿ ವಾರ್ಷಿಕವಾಗಿ ತಲಾ ಬಳಕೆ ಆಗುತ್ತಿದೆ. …… ಮುಂದೆ ಓದಿ……
ಗೋಧಿ ಒಂದು ಪ್ರಮುಖ ಆಹಾರ ಧಾನ್ಯ ಆಗಿರುವ ಕಾರಣ ಕೇಂದ್ರ ಸರ್ಕಾರ ಇದರ ರಫ್ತಿನ ಮೇಲೆ 2022 ರ ಸಮಯದಲ್ಲಿ ನಿಷೇಧ ಹೇರಿದ್ದು, ಆದರೂ ಕೆಲವು ರಾಷ್ಟ್ರಗಳಿಗೆ ಸರಕಾರಗಳ ನಡುವಿನ ಒಪ್ಪಂದಕ್ಕನುಗುಣವಾಗಿ ಅಲ್ಪ ಪ್ರಮಾಣದ ರಫ್ತು ಮಾಡಲಾಗುತ್ತಿದೆ. ಭಾರತ ಈ ರಫ್ತನ್ನು ಮುಖ್ಯವಾಗಿ ನೇಪಾಳ, ಇರಾಕ್, ಇಟಲಿ, ಟರ್ಕಿ ಥಾಯ್ಲೆಂಡ್ ಮುಂತಾದ ರಾಷ್ಟ್ರಗಳಿಗೆ ಮಾಡುತ್ತಿದೆ. 2023-2024 ರ ಸಮಯದಲ್ಲಿ ನಮ್ಮ ರಫ್ತಿನ ಪ್ರಮಾಣ 1,88,287.99 ಟನ್ ಆಗಿ ಅದರ ಮೌಲ್ಯ 56.66 ಮಿಲಿಯ ಅಮೇರಿಕಾದ ಡಾಲರ್ ಆಗಿತ್ತು. ಆಂತರಿಕವಾಗಿ ಇದರ ಬೆಳೆಗಾರರಿಗೆ ತೊಂದರೆ ಆಗುವುದರಿಂದ ಇದರ ಆಮದಿನ ಮೇಲೆ ಶೇಕಡಾ 44 ರ ಸುಂಕ ವಿಧಿಸಲಾಗಿದ್ದರೂ,ದೇಶ ಅಗತ್ಯಕ್ಕನುಗುಣವಾಗಿ ಆಸ್ಟ್ರೇಲಿಯ ಮತ್ತು ರಷ್ಯಾ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ.
ಹವಾಮಾನದಲ್ಲಿ ಆಗುವ ಬದಲಾವಣೆಗಳು,ನಾನಾ ರೀತಿಯ ರೋಗಗಳು ಮತ್ತು ಕೀಟ ಬಾದೆಗಳಿಂದ ಇದರ ಕೃಷಿಗೆ ತೊಡಕಾಗುತ್ತಿರುವುದರಿಂದ ಇಲ್ಲಿನ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಏರು ಪೇರು ಆಗುತ್ತಿದೆ. ಹೀಗಿದ್ದರೂ ಸರ್ಕಾರ ಒದಗಿಸುವ ಬೆಂಬಲ ಬೆಲೆ, ವಿಮೆ ಇತ್ಯಾದಿಗಳು ಇದರ ಕೃಷಿಕರಿಗೆ ಪೂರಕ ವಾತಾವರಣ ಸೃಷ್ಟಿಸುತ್ತಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..


