ಪಾಂಡವರು ವನವಾಸದಲ್ಲಿದ್ದಾಗ, ಕೃಷ್ಣ ಒಮ್ಮೆ ಅವರಿದ್ದೆಡೆಗೆ ಅವರನ್ನು ವಿಚಾರಿಸಲೆಂದು ಬಂದ…! ಆಮೇಲೆ ಏನಾಯ್ತು..?

December 29, 2023
2:34 PM

ಪಾಂಡವರು(Pandavas) ವನವಾಸದಲ್ಲಿದ್ದಾಗ, ಕೃಷ್ಣ(Krishna) ಒಮ್ಮೆ ಅವರಿದ್ದೆಡೆಗೆ ಅವರನ್ನು ವಿಚಾರಿಸಲೆಂದು ಬಂದ..! ಎಲ್ಲರಿಗೂ ಅವನನ್ನು ನೋಡಿ ಬಹಳ ಸಂತೋಷವಾಯಿತು. ಅವನನ್ನು ‌ನೋಡಿ‌ ದ್ರೌಪದಿಯ(Drupadi) ‌ಕಣ್ಣಲ್ಲಿ ನೀರು ಹರಿಯಲಾರಂಭಿಸಿತು! ಚಿಂತಿಸಬೇಡ ಸಹೋದರಿ, ಶೀಘ್ರದಲ್ಲೇ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿ, ಆಕೆಯನ್ನು ಸಮಾಧಾನಪಡಿಸಿದ. ಇರಲಿ ಬಿಡು ಅಣ್ಣಾ…ಅದು ಬಂದಾಗ ಬರಲಿ, ನೀನು ಬಂದಿದ್ದೇ ನನಗೆ ಬಹಳ ಸಂತೋಷ. ಈಗ ನೀನು ಸ್ನಾನ ಮಾಡಿ ನಿನ್ನ ಆಯಾಸವನ್ನು ಪರಿಹರಿಸಿಕೋ, ನಂತರ ಭೋಜನ ಮಾಡುವೆಯಂತೆ ಎಂದು ಹೇಳಿ, ದ್ರೌಪದಿ ಕೃಷ್ಣನ ಸ್ನಾನಕ್ಕಾಗಿ ಬಿಸಿ ನೀರನ್ನು ಸಿದ್ಧಪಡಿಸಲು ಹೊರಟಳು.

Advertisement
Advertisement

ಭೀಮ ಒಣಗಿದ ಸೌದೆಯನ್ನು ದ್ರೌಪದಿಗೆ ತಂದುಕೊಟ್ಟು, ಒಲೆ ಉರಿಸಲು ಸಹಾಯ ಮಾಡಿದ. ದ್ರೌಪದಿ ಕೃಷ್ಣನ ಸ್ನಾನಕ್ಕಾಗಿ ಒಲೆ ಉರಿಸತೊಡಗಿದಳು. ಆಗ ಎಲ್ಲರೂ ಗುಡಿಸಲ ಹೊರಗೆ ಕುಳಿತು ಮಾತನಾಡುತ್ತಿದ್ದರು. ಆಗ ಕೃಷ್ಣ, ಅರ್ಜುನನನ್ನು ಕುರಿತು, ವನವಾಸದ ಜೀವನ ಹೇಗನಿಸುತ್ತಿದೆ? ಎಂದು ಕೇಳಿದ. ನೀನು ನಮ್ಮನ್ನೆಲ್ಲಾ ರಕ್ಷಿಸುತ್ತಿರುವಾಗ, ನಮಗೆ ಯಾವುದರ ಚಿಂತೆಯೂ ಇಲ್ಲ ಕೃಷ್ಣಾ… ಎಲ್ಲರೂ ಚೆನ್ನಾಗಿಯೇ ಇದ್ದೇವೆ, ಎಂದ ಅರ್ಜುನ. ಯುಧಿಷ್ಟಿರಾ…ಇವನ ಮಾತನ್ನು ಕೇಳಿದೆಯಾ? ನಿನ್ನ ತಮ್ಮನಿಗೆ ಇಲ್ಲೇ ಹೆಚ್ಚು ಸಂತೋಷವಂತೆ, ಎಂದು ಹೇಳಿದ ಕೃಷ್ಣ. ಅವನು ಹೇಳುವುದು ನಿಜ ತಾನೇ? ಪ್ರಕೃತಿಯ ಸೌಂದರ್ಯದ ಜೊತೆಗಿರುವುದಕ್ಕಿಂತ, ಬೇರೆ ಇನ್ನೇನು ಬೇಕು ಕೃಷ್ಣಾ? ಎಂದ ಯುಧಿಷ್ಠಿರ.

ನಿನಗೇನನಿಸುತ್ತೆ ತಂಗಿ ದ್ರೌಪದಿ? ಎಂದ ಕೃಷ್ಣ. ನನ್ನ ಗಂಡಂದಿರು ಎಲ್ಲಿರುತ್ತಾರೆಯೋ, ಅಲ್ಲೇ ನನಗೆ ಸಂತೋಷ ಕೃಷ್ಣ…ಅದು ಕಾಡಾದರೇನು? ಅರಮನೆ ಯಾದರೇನು? ಎಂದಳು ದ್ರೌಪದಿ. ಒಟ್ಟಿನಲ್ಲಿ ನೀವೆಲ್ಲಾ ಸಂತೋಷವಾಗಿರುವುದೇ ನನಗೆ ಮುಖ್ಯ, ನೀರು ಸಿದ್ಧವಾಯಿತೇ? ನಾನು ಸ್ನಾನಕ್ಕೆ ಹೋಗುತ್ತೇನೆ ಎಂದ ಕೃಷ್ಣ. ಇಷ್ಟೊತ್ತಿಗೆ ಅದು ಕಾದಿರಬೇಕು, ನೋಡಿ ಬರುತ್ತೇನೆ ಎಂದಳು ದ್ರೌಪದಿ.

ಏನಾಶ್ಚರ್ಯ? ಒಲೆ ಜೋರಾಗಿ ಉರಿಯುತ್ತಿದೆ! ಆದರೆ ನೀರು ಸ್ವಲ್ಪವೂ ಬೆಚ್ಚಗೆ ಆಗಿಲ್ಲ ಎಂದಳು ದ್ರೌಪದಿ. ಭೀಮ ಬಂದು ನೋಡಿದ, ಅರೆ, ಇದೇನು? ಇಷ್ಟು ಜೋರಾಗಿ ಒಲೆ ಉರಿಯುತ್ತಿದೆ, ಆದರೆ ಸ್ವಲ್ಪ ಬೆಚ್ಚಗೂ ಆಗಿಲ್ಲವಲ್ಲ? ನೀರು ಇದ್ದ ಹಾಗೆ ಇದೆಯಲ್ಲಾ? ಎನ್ನುತ್ತಾ ಕೃಷ್ಣನ ಬಳಿಗೆ ಹೋದ. ಯಾಕೆ ಏನಾಯ್ತು ಎಂದು ಕೃಷ್ಣನೂ ಒಲೆಯ ಹತ್ತಿರ ಬಂದು, ಹಂಡೆಯೊಳಗೆ ಕೈಹಾಕಿ ನೋಡಿ, ಹೌದು…ನೀರು ತಣ್ಣಗಿದೆಯಲ್ಲಾ? ಆ ನೀರನ್ನು ಪೂರ್ತಿ ಹೊರಗೆ ಸುರಿಯಿರಿ, ಯಾಕೆ ಬಿಸಿಯಾಗುತ್ತಿಲ್ಲ, ಎಂದು ನೋಡೇ ಬಿಡೋಣ ಎಂದ.

ಭೀಮ ಹಂಡೆಯಲ್ಲಿದ್ದ ನೀರನ್ನೆಲ್ಲಾ ಹೊರಗೆ ಸುರಿದ. ಆಗ ಅದರೊಳಗೆ ಇದ್ದ ಕಪ್ಪೆ ಹಾರಿ ಹೊರಗೆ ಬಂದಿತು. ‌ಇದು ಹೇಗೆ ಅದರೊಳಗೆ ಹೋಯಿತು ಎಂದು, ಎಲ್ಲರೂ ಆಶ್ಚರ್ಯಗೊಂಡರು! ಆಶ್ಚರ್ಯ ಪಡುವುದೇನಿಲ್ಲ, ಹಂಡೆಯೊಳಗೆ ಅದು ಹೋಗಿ ಸೇರಿಕೊಂಡಿತ್ತು ಅಷ್ಟೇ. ನೀವು ಬೆಂಕಿ ಹಚ್ಚಿದಾಗ, ಕಪ್ಪೆ ನನಗೆ ಶರಣಾಯಿತು. ಅದನ್ನು ರಕ್ಷಿಸುವುದು ನನ್ನ ಕರ್ತವ್ಯ, ಆದ್ದರಿಂದ ನೀರು ಬಿಸಿಯಾಗಲೇ ಇಲ್ಲ. ನಾನು ಅದನ್ನು ಕಾಪಾಡಿದೆಯೆಂದ ಕೃಷ್ಣ.

ಎಲ್ಲರೂ ಭಕ್ತಿಯಿಂದ ಕೃಷ್ಣನಿಗೆ ನಮಸ್ಕರಿಸಿ, ನಾವು ಕೂಡ ನಿನಗೆ ಶರಣಾಗಿದ್ದೇವೆ, ನಮ್ಮನ್ನೂ ರಕ್ಷಿಸು ದೇವಾ ಎಂದು ಬೇಡಿಕೊಂಡರು. ನನ್ನ ಹಾರೈಕೆ ಸದಾ ನಿಮ್ಮ ಮೇಲೆ ಇದ್ದೇ ಇರುತ್ತದೆ, ಖಂಡಿತ ನಿಮಗೆಲ್ಲರಿಗೂ ಒಳ್ಳೆಯ ಕಾಲ ಬಂದೇ ಬರುತ್ತದೆಯೆಂದು ಎಲ್ಲರನ್ನೂ ಹರಸಿದ ಕೃಷ್ಣ! ಅಣ್ಣಾ…ನನಗೆ ಗೊತ್ತಿಲ್ಲದೇ, ನನ್ನಿಂದ ಎಂತಹ ಪಾಪಕೃತ್ಯ ನಡೆಯುತ್ತಿತ್ತು? ಅದನ್ನು ನೀನು ತಪ್ಪಿಸಿದೆ! ನೀನು ಎಂಥಾ ಕರುಣಾಮಯಿ, ಎಂಥಾ ದಯಾಳು! ನಾನು ಕೂಡಾ, ಸದಾಕಾಲ ನಿನ್ನನ್ನು ಸ್ಮರಿಸುವಂತೆ ನನ್ನನ್ನು ಅನುಗ್ರಹಿಸು ಎಂದು ದ್ರೌಪದಿ ಕೃಷ್ಣನನ್ನು ಬೇಡಿಕೊಂಡಳು. ನೀವೆಲ್ಲರೂ ಚಿರಕಾಲ ಬಾಳಿ, ಸ್ವಲ್ಪ ದಿನದಲ್ಲಿ ಎಲ್ಲವೂ ಸರಿಹೋಗುತ್ತದೆಯೆಂದು ಹರಸಿ, ಕೃಷ್ಣ ಅಲ್ಲಿಂದ ಹೊರಟ!

ಅದಕ್ಕೇ ದಾಸರು ಹೇಳಿರುವುದು… ತಲ್ಲಣಿಸದಿರು ಕಂಡ್ಯ, ತಾಳು ಮನವೇ, ಎಲ್ಲರನೂ ಸಲಹುವನು ಇದಕ್ಕೆ ಸಂಶಯ ಬೇಡ…ಎಂದು! ಪರಮಾತ್ಮನ ದೃಷ್ಟಿಯಲ್ಲಿ ಎಲ್ಲಾ ಜೀವಿಗಳು ಒಂದೇ, ಶರಣಾರ್ಥಿಯಾಗಿ ಬಂದವರನ್ನು, ಅವರು ಎಲ್ಲೇ ಇರಲಿ, ಹೇಗೇ ಇರಲಿ, ಅಲ್ಲಿಗೇ ಬಂದು ರಕ್ಷಣೆ ಮಾಡಿಯೇ ಮಾಡುತ್ತಾನೆ ಆ ಭಗವಂತ…!!!

ಬರಹದ ಮೂಲ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror