ಯಾರೇ ಕೂಗಾಡಲಿ ಊರೇ ಹೋರಾಡಲಿ —- ಎಮ್ಮೆ ನಿನಗೆ ಸಾಟಿ ಇಲ್ಲ….. ವರನಟ ದಿವಂಗತ ಡಾ ರಾಜಕುಮಾರ್ ರವರು ಹಾಡಿ ನಟಿಸಿದ “ಎಮ್ಮೆ” ಯ ಸ್ಟ್ರೆಂಥ್ ನೆಸ್ ಬಗ್ಗೆ ಉತ್ತಮ ಗುಣದ ಬಗ್ಗೆ ವಿಶ್ಲೇಷಿಸುವ ಸಾಹಿತ್ಯ ಇರುವ ಹಾಡಿದು. ಎಮ್ಮೆ ಎಂದಾಕ್ಷಣ ನನಗೆ ನೆನಪಾಗುವ ಹಾಡಿದು…
ನನ್ನದು ಶಿವಮೊಗ್ಗ ಜಿಲ್ಲೆಯ ಅಚ್ಚ ಮಲೆನಾಡಿನ ತೀರ್ಥಹಳ್ಳಿಯ ಒಂದು ಹಳ್ಳಿ. ನನ್ನ ನಾಲ್ಕು ದಶಕಗಳ ಜೀವನದಲ್ಲಿ ನಾನು ಎಂದೂ ಕಾಣದಷ್ಟು ಕಾಡು ಪ್ರಾಣಿಗಳು ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ ನಮ್ಮ ಸುತ್ತಲಿನ ಪ್ರದೇಶದಲ್ಲಿ ಕಾಣುತ್ತಿದ್ದೇನೆ. ನಮ್ಮ ಭಾಗದಲ್ಲಿ ಎಂದೂ ಕಾಣದ ಜಿಂಕೆ ಗಳು , ಅತಿ ಎನಿಸುವ ನವಿಲುಗಳು , ಇವುಗಳ ಸಹವಾಸವೇ ಸಾಕು ಎನ್ನುವಷ್ಟು ಹಾವಳಿ ಮಾಡುವ ಮಂಗಗಳು ಮತ್ತು ತೋಟ ಗದ್ದೆಯಲ್ಲಿ ಸಲೀಸಾಗಿ ಕಾಣಸಿಗುವ ಕಾಡೆಮ್ಮೆ ಕಾಡು ಕೋಣಗಳು..!!! ಇವಾವ ಪ್ರಾಣಿಗಳು ಹಿಂದೆ ಇಷ್ಟು ಪ್ರಮಾಣದಲ್ಲಿ ಇರಲಿಲ್ಲ.
ವಿಪರ್ಯಾಸವೆಂದರೆ ಇದೀಗ ನಲವತ್ತು ವರ್ಷಗಳ ಹಿಂದಿನ ಅರಣ್ಯ ದ ಹತ್ತು ಅಂಶವೂ ಈಗ ನಮ್ಮಲ್ಲಿ ಇಲ್ಲ…!! ಇದೇ ಸಮಯದಲ್ಲಿ ಗದ್ದೆ ಬೇಸಾಯ ಕಡಿಮೆಯಾಗಿ ಅಡಿಕೆ ತೋಟಗಳು ಗಮನಾರ್ಹವಾಗಿ ಏರಿಕೆಯಾಗಿದೆ. ಇದೇ ಕಾರಣಕ್ಕೆ ಜಾನುವಾರುಗಳಿಗೆ ಮೇವು ಕಡಿಮೆಯಾಗಿ ದೇಸಿ ತಳಿ ನಮ್ಮ ಭಾಗದ ಮಲೆನಾಡು ಗಿಡ್ಡ ತಳಿ ಹಸುಗಳು ಮತ್ತು ದೇಸಿ ಎಮ್ಮೆ ಗಳು ಗಣನೀಯ ವಾಗಿ ಕಾಣೆಯಾಗಿದೆ. ಈ ದೇಸಿ ಹಸುಗಳು ತಮ್ಮ ಕಡಿಮೆ ಹಾಲಿನ ಇಳುವರಿಯ ಕಾರಣ ಮತ್ತು ದೇಸಿ ತಳಿ ಹಸುಗಳಿಗೆ ಎಮ್ಮೆ ಗಳಿಗೆ ಪರ್ಯಾಯವಾಗಿ ಹೆಚ್ ಎಫ್ ಜೆರ್ಸಿ ಸಿಂಧಿ ಜಾನುವಾರುಗಳು ಬಂದದ್ದು ದೇಸಿ ಹಸು ಎಮ್ಮೆಗಳ ನಾಶಕ್ಕೆ ದೊಡ್ಡ ಕಾರಣ.
ಎಮ್ಮೆ ಗಳು “ಹಂದಿಗಳಿದ್ದಂತೆ” . ನಮ್ಮ ದೇಸಿ ಹಸುಗಳು ಸ್ವಲ್ಪ sophisticated ಸೂಕ್ಷ್ಮ ಜಾತಿಯವು ಆದರೆ ಎಮ್ಮೆ ಗಳು ತುಂಬಾ ರಫ್ ಅಂಡ್ ಟಫ್ ಮತ್ತು ಏನನ್ನೂ ತಿಂದು ಬಾಳುತ್ತಿದ್ದವು.
ಎಮ್ಮೆ ಹಾಲಿನಷ್ಟು ದಪ್ಪ “ಬನಿ” ದನದ ಹಾಲಲ್ಲ.
ಎಮ್ಮೆ “ದನಗಳಷ್ಟು “ಹರಾಮಿ” ಗಳಲ್ಲ…!!
ಎಮ್ಮೆ ಗಳು ಮಹೀಂದ್ರಾ 4×4 ಜೀಪ್ ಇದ್ದಂತೆ…
ಎಮ್ಮೆ ಗೋವಿನಷ್ಟೇ ಸಾಕಿದ ಯಜಮಾನರನ್ನ ಪ್ರೀತಿಸುವ ಜೀವಿ. ಆದರೆ ಎಮ್ಮೆ ಗೋವಿನಷ್ಟು ಚುರುಕಲ್ಲ. ಬಿಟ್ಟರೆ ಎಮ್ಮೆ ಗೂ ಗೋವಿಗೂ ಯಾವುದೇ ವ್ಯತ್ಯಾಸ ವಿಲ್ಲ. ಹೆಚ್ಚಿನ ಎಮ್ಮೆ ಗಳು ಅತ್ಯಂತ ನಿರುಪದ್ರವಿಗಳು. ಸಾಕಿದ ತನ್ನ ಯಜಮಾನರಿಗೆ ಹೊರೆಯಾಗದಂತವು. ಸ್ವಾಭಿಮಾನಿ ಎಮ್ಮೆ ಗಳು.
ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ , ಚಕ್ರ ಮುಂತಾದ ಕಡೆಯ ಊರಿನ ಅನೇಕ ರೈತರ ಎಮ್ಮೆಗಳು ಮೇಯಲು ಶರಾವತಿ ನದಿ ಹಿನ್ನೀರಿನ ನಡುವಿನ ದ್ವೀಪಕ್ಕೆ ಈಜಿಕೊಂಡು ಹೋಗಿ ಅಲ್ಲಿ ಕಾಡುಕೋಣ ಕಾಡೆಮ್ಮೆ ಮತ್ತು ಇತರೆ ರೈತರ ಎಮ್ಮೆಗಳ ಜೊತೆಗೆ ಮೇಯ್ದು ಬರುತ್ತವೆ. ಅಲ್ಲೇ ಎಮ್ಮೆ ಗಳು ಬೆದೆಗೆ ಬಂದು ಗರ್ಭಧಾರಣೆ ಮಾಡಿಕೊಂಡು ಬರುತ್ತವೆ. ಮಳೆಗಾಲ ಚಳಿಗಾಲದ ಸಂಧರ್ಭದಲ್ಲಿ ಒಂದು ಎರಡು ತಿಂಗಳು ಈ ಪ್ರವಾಸ ಮುಗಿಸಿ ಮತ್ತೆ ಮನೆಗೆ ಮರಳುತ್ತವೆ. ಇದು ನಮ್ಮ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಮೇಗರವಳ್ಳಿ ಭಾಗದಲ್ಲೂ ನಡೆಯುತ್ತದೆ. ಒಮ್ಮೊಮ್ಮೆ ಎಮ್ಮೆ ಮಾಲಿಕರು ಈ ಎಮ್ಮೆ ಗಳನ್ನು ಹುಡುಕಿಕೊಂಡು ಹೋಗುವ ಸಂಧರ್ಭವೂ ಇರುತ್ತದೆ. ಕೆಲವೊಮ್ಮೆ ಹೀಗೆ ಮೇಯಲು ಹೋದ ಎಮ್ಮೆ ಗಳನ್ನು ಕೆಲವು ಗೋ ಕಳ್ಳರು ಕದಿಯುವುದೂ ಇರುತ್ತದೆ.
ಎಷ್ಟೋ ಸಂಧರ್ಭದಲ್ಲಿ ಈ ಎಮ್ಮೆ ಗಳು ಹೀಗೆ ಹೋಗಿ ಬಂದು ಕರು ಹಾಕಿದಾಗ ಎಮ್ಮೆಕರ ಕಪ್ಪು ಕಪ್ಪು “ಕಾಡು ಕೋಣ” ನಿಗೆ ಹುಟ್ಟಿದಂತಿರುತ್ತವೆ. ಆದರೆ ಪಶು ವೈದ್ಯರು ಈ ಕಾಡುಕೋಣನ ಜೊತೆಗೆ ಊರ ಎಮ್ಮೆ ಕ್ರಾಸ್ ಆಗಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಎಮ್ಮೆ ಕರ ಕಾಡುಕೋಣನ ಮರಿ ಇದ್ದಂತೆ ಇರುವುದನ್ನು ನಾನು ನನ್ನ ಬಂಧುಗಳ ಮನೆಯಲ್ಲಿ ನೋಡಿದ್ದೇನೆ.
ಬಹಳಷ್ಟು ಸರ್ತಿ ಈ ಎಮ್ಮೆ ಗಳ ಹಿಂಡಿನಲ್ಲಿ ಯಾವುದೋ ಒಂದು ಎಮ್ಮೆ ಹೀಟಿಗೆ ಬಂದು ಕೋಣನ ಹುಡುಕಿ ಕೊಂಡು ತನ್ನ ಗುಂಪು ಸಮೇತ ಹೋಗಿ ದಿಕ್ಕು ತಪ್ಪಿ ಹೋಗಿ ಹಿಂದುರುಗಿ ಬಾರದೇ ಇದ್ದದ್ದು ಇದೆ. ಕೆಲವು ಗೋಪಾಲಕರ ಐದು ಹತ್ತು ಎಮ್ಮೆ ಗಳು ಹೀಗೆ ಕಳೆದು ಹೋದದ್ದೂ ಇದೆ. ಎಮ್ಮೆ ಕಳೆದು ಹೋದಾಗ ಹುಡುಕುವುದು ಬಹಳ ಕಷ್ಟ. ಯಾವುದೋ ಊರಿಗೆ ನಾವು ಕಳೆದು ಹೋದ ಎಮ್ಮೆ ಹುಡುಕಿ ಕೊಂಡು ಹೋದಾಗ ಅಲ್ಲಿನ ಜನ “ಬಗ್ಗರು ಗೋಡಿನ ಎಮ್ಮೆಯ…??? ಈಗ ಇಲ್ಲಿತ್ತು… ಅಲ್ಲಿ ಹೋಯಿತು ” ಅಂತ ಸುಳ್ಳು ಮಾಹಿತಿ ನೀಡಿ ಹುಡುಕುವ ನಮ್ಮ ಇನ್ನಷ್ಟು ಅಲೆಸುತ್ತಿದ್ದರು. ಎಮ್ಮೆ ಕಳೆದು ಹೋಗುವುದು ಮತ್ತು ಎಮ್ಮೆ ಹುಡುಕಿ ಹೈರಾಣಾದ ಅನುಭವ ನೂರಕ್ಕೆ ನೂರರಷ್ಟು ಎಮ್ಮೆ ಸಾಕಿದ ಎಲ್ಲರ ಅನುಭವ… ಈ ಎಮ್ಮೆ ಕಳೆದು ಹೋಗುವುದೂ, ಎಮ್ಮೆ ಹೀಟಿಗೆ ಬಾರದಿರುವುದು ಸೇರಿದಂತೆ ಯಾವಾಗ ನಮ್ಮ ಮಲೆನಾಡಿನಲ್ಲಿ ಗದ್ದೆ ಬೇಸಾಯ ಕಡಿಮೆಯಾತೋ ದೇಸಿ ಹಸುಗಳಿಗಿಂತ ಮೊದಲು ನಾಡ ಎಮ್ಮೆ ಗಳು ನಾಶವಾದವು.
ಬಹಳಷ್ಟು ಜನ ಎಮ್ಮೆ ಕಟ್ಟಿ ಸಾಕುವುದನ್ನ ಬಿಡಲು ಅತಿ ಮುಖ್ಯ ಕಾರಣಗಳಲ್ಲಿ ಒಂದು ಏನೆಂದರೆ ಮನೆಯಲ್ಲಿ ಕಟ್ಟಿ ಸಾಕುವ ಎಮ್ಮೆಗಳು ಬೆದೆಗೆ ಬರುವುದು ಅಂದಾಜು ಆಗುವುದಿಲ್ಲ. ಇದನ್ನು “ಸೈಲೆಂಟ್ ಹೀಟ್ ” ಎನ್ನುತ್ತಾರೆ. ಈ ಎಮ್ಮೆ ಗಳು ಗುಂಪಾಗಿ ಇರುವ ಪ್ರಾಣಿಗಳು. ಐದು ಎಮ್ಮೆ ಗೆ ಒಂದು ಕೋಣ ಇರಲೇ ಬೇಕು. ಎಮ್ಮೆ ಗೆ ಕೃತಕ ಗರ್ಭಧಾರಣೆ ಅಷ್ಟು ಸೆಕ್ಸೆಸ್ ಅಲ್ಲ. ಕೋಣ ಸಾಕುವವರು ಮಾತ್ರ ಎಮ್ಮೆ ಸಾಕಲು ಸಾಧ್ಯ. ಕೋಣ ಎಮ್ಮೆ ಸಾಕಾಣಿಕೆ ಬಹಳ ಕಷ್ಟ ನಷ್ಟ.
ನಮ್ಮದೇ ಒಂದು ಒಂಬತ್ತು ವರ್ಷ ವಯಸ್ಸಿನ ಸದೃಡ ಕಾಯದ ಎಮ್ಮೆ ತಪ್ಪದೇ ತಿಂಗಳಿಗೊಮ್ಮೆ ಬೆದೆಗೆ ಬರುತ್ತದೆ. ನಾವು ವೈದ್ಯರ ಬಳಿ ಕಳೆದ ಎರಡು ವರ್ಷಗಳ ಕೈಲಿ ಕೃತಕ ಗರ್ಭಧಾರಣೆ ಮಾಡಿಸಿದೆವು.
ನಮ್ಮ ತೀರ್ಥಹಳ್ಳಿ ತಾಲ್ಲೂಕಿನ ಕೋಡ್ಲು ಎಂಬ ಊರಿನಲ್ಲಿ “ರಾಜು” ಎಂಬುವವರೊಬ್ಬರು ಒಂದು ದಷ್ಟಪುಷ್ಠ ಕೋಣವೊಂದನ್ನ ಸಾಕಿದ್ದು ಅವರು ಆ ಕೋಣವನ್ನು ತಮ್ಮ “ಪಿಕ್ ಅಪ್ ವಾಹನದಲ್ಲಿ” ಎಮ್ಮೆ ಬೆದೆಗೆ ಬಂದವರು ಕರೆ ಮಾಡಿದರೆ ಅವರ ಮನೆಗೇ ಹೋಗಿ ತಮ್ಮ ಕೋಣನ ಬಳಿ ಕ್ರಾಸ್ ಮಾಡಿಸಿ ಕೊಡುತ್ತಾರೆ. ನಾನು ನಮ್ಮ ಎಮ್ಮೆ ಮಣಕನಿಗೆ ಶ್ರೀ ರಾಜುರವರ ಕೋಣನ ಬಳಿ ಕ್ರಾಸ್ ಮಾಡಿಸಿಯೂ ಎಮ್ಮೆ ಗರ್ಭ ಧರಿಸಲಿಲ್ಲ. ಆದರೆ ನಮ್ಮ ಭಾಗದ ಬಹಳಷ್ಟು ಮಂದಿ ಎಮ್ಮೆ ಸಾಕಣಿಕೆದಾರರಿಗೆ ಶ್ರೀ ರಾಜು ರವರ ಸಂಚಾರಿ ಕೋಣನ ವ್ಯವಸ್ಥೆ ಅನುಕೂಲವಾಗಿದೆ.
ಎಮ್ಮೆ ಗಳು ಬೆದೆಗೆ ಬರುವುದು, ಬೆದೆಗೆ ಬಂದದ್ದು ಮಾಲಿಕರಿಗೆ ಗೊತ್ತಾಗುವುದು ಮತ್ತು ಎಮ್ಮೆ ಬೆದೆಗೆ ಬಂದು ಗರ್ಭಧಾರಣೆ ಯಾಗುವಷ್ಟು ಎಮ್ಮೆ ಯನ್ನು ಸುಫುಷ್ಟಿಯಾಗುವಂತೆ ಹೊಟ್ಟೆಗೆ ಹಾಕುವುದು ಈ ಕಾಲದಲ್ಲಿ ಕಷ್ಟ ಕಷ್ಟ…. ಎಮ್ಮೆಗಳನ್ನ ಸೊಪ್ಪಿನ ಕೊಟ್ಟಿಗೆಯಲ್ಲಿ ಕಟ್ಟಿದರೆ ಅವು ಆ ಸೊಪ್ಪನ್ನು ಚೆನ್ನಾಗಿ ಮೆಟ್ಟಿ ತುಳಿದು ನುರುದು ಅತ್ಯುತ್ತಮ ತುಳುಕಲು ಸೊಪ್ಪಿನ ಗೊಬ್ಬರ ಮಾಡುತ್ತವೆ. ಎಮ್ಮೆ ಸಗಣಿ ಗೊಬ್ಬರ ದನದ ಗೊಬ್ಬರಕ್ಕಿಂತ ಒಂದು ತೂಕ ಮೇಲೆ ಎನ್ನಬಹುದೇನೋ…!! ಎಮ್ಮೆ ಸಗಣಿ ಗೊಬ್ಬರ ಎರಡು ಬುಟ್ಟಿ ಹಾಕಿ ಬಸಳ ಬಳ್ಳಿ ನೆಟ್ಟರೆ ಅದ್ಭುತವಾಗಿ ಬರುತ್ತದೆ ಎನ್ನುವ ಮಾತಿದೆ. ಒಂದು ಕಾಲದಲ್ಲಿ ನಮ್ಮ ಮಲೆನಾಡಿನಲ್ಲಿ ದನಗಳಿಗೆ ಸಮ ಪ್ರಮಾಣದಲ್ಲಿ ಎಮ್ಮೆ ಗಳೂ ಇದ್ದಾಗ ಮಾರುಕಟ್ಟೆಯಲ್ಲಿ ದನದ ಗೊಬ್ಬರಕ್ಕಿಂತ ಎಮ್ಮೆ ತುಳುಕಲು ಗೊಬ್ಬರಕ್ಕೆ ಬೆಲೆ ಹೆಚ್ಚಿತ್ತು…!!
ಎಮ್ಮೆ ಗಳಲ್ಲಿ ದಕ್ಷಿಣ ಕನ್ನಡ ಭಾಗದ ಎಮ್ಮೆ ಗಳೂ, ಧಾರವಾಡ ಭಾಗದ ಎಮ್ಮೆ ಗಳೂ, ಜಾಫರಬಾದಿ, ಸುರ್ಟಿ ಎಮ್ಮೆ ಗಳು ಒಂದು ಕಾಲದಲ್ಲಿ ಬಹಳ ಪ್ರಸಿದ್ಧವಾಗಿದ್ದವು. ಈ ಹೈನುಗಾರಿಕೆಯಲ್ಲಿ ದೇಸಿ ತಳಿಗಳಲ್ಲಿ ಮೊದಲು ಬಹಳ ಸದ್ದು ಮಾಡಿದ್ದು ಉತ್ತರ ಭಾರತದ “ಮುರ್ರ” ಎಮ್ಮೆ ಗಳು. ಇವು ಒಂದು ಸರ್ತಿಗೆ ಎಂಟು ತಿಂಗಳ ಕಾಲ ದಿನಕ್ಕೆ ಎರಡು ಹೊತ್ತು ದೋಸೆ ಹಿಟ್ಟಿನಂತಹ ದಪ್ಪ ದ ಹದಿನಾಲ್ಕುರಿಂದ ಹದಿನಾರು ಲೀಟರ್ ಹಾಲು ಕೊಡುತ್ತಿದ್ದವು. ಉತ್ತರದಿಂದ ಒಂದು ಬ್ಯಾಚ್ ಗೆ ಐದು ಎಮ್ಮೆ ಒಂದು ಕೋಣ ಮತ್ತು ಒಬ್ಬ ನೋಡಿಕೊಳ್ಳುವ ಜನ ಅಲ್ಲಿಂದಲೇ ಬರುತ್ತಿದ್ದರು. ಇದು ಮುರ್ರಾ ತಳಿ ಎಮ್ಮೆ ಕೊಳ್ಳುವವರಿಗೆ ಕೂಂಬೋ ಆಫರ್. ನಮ್ಮ ರಾಜ್ಯದ ಧಾರವಾಡದ ಶಾಸಕರಾದ ವಿನಯ ಕುಲಕರ್ಣಿಯವರ ದೊಡ್ಡ ಮುರ್ರ ಎಮ್ಮೆ ಯ ಫಾರ್ಮ್ ಇದೆ. ಆಗ ಮುರ್ರ ಡೈರಿಫಾರ್ಮ್ ಬಹಳ ಪ್ರಸಿದ್ಧ ವಾಗಿತ್ತು. ಈ ಗೀರ್ ಹಸುಗಳ ಡೈರಿಫಾರ್ಮ್ ಟ್ರೆಂಡ್ ಇತ್ತೀಚಿನ ವರ್ಷಗಳಲ್ಲಿ ಬಂದದ್ದು.
ಏನೇ ಆದರೂ ದೇಸಿ ತಳಿ ಹಸುಗಳಿಗೆ ತತ್ಸಮಾನದ ಇಳುವರಿಯ ಹಾಲು ತುಪ್ಪ ನೀಡುವ ದೇಸಿ ಎಮ್ಮೆ ಗಳು ಒಂದು ಬಗೆಯ “ಅಸ್ಪೃಶ್ಯತೆ ಯಿಂದ” ಹಸುಗಳೇ ಶ್ರೇಷ್ಠ ಎಂಬ ತಪ್ಪು ತಿಳುವಳಿಕೆಯಿಂದ ನೋಡ ನೋಡುತ್ತಲೇ ಇನ್ನಿಲ್ಲವಾದವು. ಮೊದಲು ನಮ್ಮೂರಿನಲ್ಲಿ ಇನ್ನೂರು ಎಮ್ಮೆ ಗಳಿದ್ದ ಜಾಗದಲ್ಲಿ ಇದೀಗ ಹತ್ತು ಹದಿನೈದು ಎಮ್ಮೆ ಗಳಿವೆ…!! ಈ ತುಟ್ಟಿ ಕಾಲದಲ್ಲಿ ಮನೆಯಲ್ಲಿ ಜನಗಳಸಂಖ್ಯೆ ಕಡಿಮೆಯಾಗುತ್ತಾ, ಕೊಟ್ಟಿಗೆಯಲ್ಲೂ ಹಸುಗಳ ಸಂಖ್ಯೆ ಕಡಿಮೆ ಯಾಗಿದೆ. ಮಲೆನಾಡು ಕರಾವಳಿಯ ಬಹುತೇಕ ಎಲ್ಲಾ ರೈತ ಕುಟುಂಬಗಳೂ ಈಗ ತಮ್ಮ ಮಕ್ಕಳನ್ನು ಬೆಂಗಳೂರಿನಲ್ಲಿ ಬಿಟ್ಟಿದ್ದಾರೆ. ಯಾರಿಗೂ ಜಾನುವಾರುಗಳನ್ನು ಕಟ್ಟಿಕೊಂಡು ತಿಂಗಳೋ ಎರಡು ತಿಂಗಳಿಗೋ ಬೆಂಗಳೂರು ಮನೆ ಓಡಾಡಲು ಈ “ಜಾನುವಾರುಗಳ ಸಾಕಣೆ” ತಡೆಯಾಗುವುದರ ಜೊತೆಗೆ ಈ ಹುಲ್ಲು ತುಟ್ಟಿ, ಹಿಂಡಿ ತುಟ್ಟಿ ಜೊತೆಗೆ ನಿರ್ವಹಣೆ ಕಷ್ಟ …
ಈಗ ಐವತ್ತು ರೂಪಾಯಿಯ ಪ್ಯಾಕೇಟ್ ಹಾಲೇ ಅಮೃತವಾಗಿದೆ. ಎಮ್ಮೆ ಯೂ ಬೇಡ, ದನವೂ ಬೇಡವಾದ ಕಾಲದಲ್ಲಿ ನಾವಿದ್ದು ಪೂಜನೀಯ ಸ್ಥಾನದಲ್ಲಿರುವ “ಗೋವು” ಗಳನ್ನೇ ಉಳಿಸಲು ಕಷ್ಟ ವಾಗಿರುವಾಗ ಇನ್ನು ಒಂಥರ ದ್ವಿತೀಯ ದರ್ಜೆಯ ವರಂತಿರುವ ಎಮ್ಮೆಗಳನ್ನು ಯಾರು ಉಳಿಸುತ್ತಾರೆ…!?
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…