ಮೊನ್ನೆ ಪಶ್ಚಿಮ ಘಟ್ಟಗಳ ಜಿಲ್ಲಗಳ ಕೆಲವು ಭಾಗದ ಶಾಲೆಗಳಿಗೆ ಆಯಾ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ರಜೆ ಕೊಟ್ಟ ತಕ್ಷಣ ಹಲವಾರು ಜನರು “ಇನ್ಮೇಲೆ ಮಳೆ ಕೈದಾಗುತ್ತದೆ ” ಎಂದು ಗೇಲಿ ಮಾಡಿದರು. ಈ ಗೇಲಿಗೆ ಯಾರೋ ಒಬ್ಬರು ಮಾನ್ಯ ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ಅಸಹಾಯಕರು ಎಂದು ಜಿಲ್ಲಾಧಿಕಾರಿಗಳ ಸಮರ್ಥನೆ ಮಾಡಿದರು.
ಮಲೆನಾಡಿನಲ್ಲಿ ಮಳೆಗಾಲದ ಸಮಯದಲ್ಲಿ ಶಾಲೆ ಮಕ್ಕಳು ಶಾಲೆ ಗೆ ಹೋಗಿ ಬರುವ ವಿಚಾರದಲ್ಲಿ ಪೋಷಕರು ಮತ್ತು ಶಾಲೆ ಮೇಷ್ಟ್ರು ಇಬ್ಬರೂ ಜಾಗ್ರತೆ ಯಾಗಿರಬೇಕು. ಮೊದಲು ಮಗುವಿನ ಸುರಕ್ಷತೆಗೆ ಆದ್ಯತೆ ನೀಡಬೇಕು. ಇವತ್ತು ಪ್ರತಿ ಶಾಲೆಯ ಪ್ರತಿ ಮಗುವೂ ಇಂತಹ ಭಾಗದಿಂದ ಬರುತ್ತದೆ ಎಂಬ ಮಾಹಿತಿ ಆಯಾ ಶಾಲೆಯ ಮೇಷ್ಟ್ರುಗಳಿಗೆ ಇರುತ್ತದೆ. ಅಪಾಯಕಾರಿ ಹಾದಿಯಲ್ಲಿ ಶಾಲೆಗೆ ಬರುವ ಮಕ್ಕಳ ವಿಚಾರದಲ್ಲಿ ಶಿಕ್ಷಣ ಇಲಾಖೆ ಮಳೆಗಾಲದ ದಿನಗಳಲ್ಲಿ ವಿನಾಯಿತಿ ತೋರಬೇಕಾಗುತ್ತದೆ. ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ.
ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ಮಳೆ ಬೀಳುವ ವಿಶೇಷವಾಗಿ ಹೆಚ್ಚು ಅಪಾಯಕಾರಿ ಸ್ಥಳಗಳ ಶಾಲೆ ಮುಖ್ಯೋಪಾಧ್ಯಾಯರಿಗೇ ಶಾಲೆಗೆ “ರಜೆ” ನೀಡುವ ಅಧಿಕಾರ ನೀಡಬೇಕು. ತಾಲ್ಲೂಕು ಶಿಕ್ಷಣಾಧಿಕಾರಿಯೋ , ಜಿಲ್ಲಾಧಿಕಾರಿಯೋ ಈ ತುರ್ತು ಗಮನಿಸಿ ರಜೆ ಘೋಷಣೆ ಮಾಡುವಾಗ ಖಂಡಿತವಾಗಿಯೂ ಮಳೆಯ ತೀವ್ರತೆ ಮುಗಿದಿರುತ್ತದೆ. ಈ ತೀವ್ರ ಮಳೆಯಲ್ಲೇ ಶಾಲೆಗೆ ಬರುವ ಮಗುವಿಗೆ ರಿಸ್ಕಿರುತ್ತದೆ. ಆದ್ದರಿಂದ ಮಳೆ ತೀವ್ರವಾಗಿ ಬಂದು ಬಿಟ್ಟ ಮೇಲೆ ರಜೆ ಕೊಟ್ಟರೆ ಮಕ್ಕಳಿಗೇನೂ ಪ್ರಯೋಜನ ಇಲ್ಲ.
ನಮ್ಮ ಮಲೆನಾಡು ಕರಾವಳಿಯ ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ ಎರಡು ಶಾಲೆಯಾದರೂ ” ಕನಿಷ್ಠ ಸಂಖ್ಯೆಯ ಮಕ್ಕಳ ಶಾಲೆ ” ಯಾಗಿರುತ್ತದೆ. ಒಂದು ಕಾಲದಲ್ಲಿ ಸರ್ಕಾರಿ ಶಾಲೆಯನ್ನು “ದನದ ದೊಡ್ಡಿ” ಅಂತ ವಿಶ್ಲೇಷಣೆ ಮಾಡುತ್ತಿದ್ದರು. ಒಬ್ಬರು ಮೇಷ್ಟ್ರು ನಾಲ್ಕು ಕ್ಲಾಸು ಐವತ್ತು ಅರವತ್ತು ವಿದ್ಯಾರ್ಥಿಗಳು…!
ಈಗ ಅದೇ ಶಾಲೆಗಳಲ್ಲಿ “ಎರಡು ಮೂರು ಮಕ್ಕಳು.. ಒಬ್ಬರು ಮೇಷ್ಟ್ರು” ಮತ್ತು ಒಬ್ಬರು ಅಡಿಗೆ ಸಹಾಯಕರು…! ಕಾಲ ಚಕ್ರ ಉಲ್ಟಾ ತಿರುಗುತ್ತಿದೆಯೇನೋ ಅನಿಸುತ್ತಿದೆ…! ಮಲೆನಾಡಿನ ಊರೂರಿನಲ್ಲಿ ಈಗ ಪಾಳು ಬಿದ್ದ ಪುರಾತನ ಸ್ಮಾರಕದಂತಹ ಶಾಲೆಗಳು ಮತ್ತು ಇನ್ನೂ ಕೆಲವು ಶಾಲೆಗಳು ಒಂದು ಎರಡು ಮೂರು ಮಕ್ಕಳಿಂದ ಕುಟುಕು ಜೀವ ಹಿಡಿದು ಉಳಿದಿವೆ…!
ಹಾಗಾದರೆ ಜನಸಂಖ್ಯೆ ಕಡಿಮೆ ಆಯಿತಾ…?, ಇಲ್ಲ… ಇದು ಜನಸಂಖ್ಯೆ ಕಡಿಮೆ ಆದ ಎಫೆಕ್ಟ್ ಅಲ್ಲ….!
ಉಳ್ಳವರ ಮಕ್ಕಳು ಖಾಸಗಿ ಶಾಲೆಗಳ ಬಸ್ ಹತ್ತಿ ದೂರದೂರದ ಖಾಸಗಿ ಶಾಲೆ ಗೆ ಹೋಗುತ್ತಿವೆ. ಉಳ್ಳವರು ತಮ್ಮ ಮಕ್ಕಳ ಶಾಲಾ ಬ್ಯಾಗ್ ಹೊತ್ತು ಮಕ್ಕಳನ್ನ ಶಾಲೆಯ ಬಸ್ ಗೆ ಹತ್ತಿಸಿ ಮನೆಗೆ ಮರಳಿ ಮತ್ತೆ ಸಂಜೆ ಶಾಲೆ ಬಸ್ ಬರುವ ಸಮಯದಲ್ಲಿ ಕಾದು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ…
ಕೂಲಿ ಕಾರ್ಮಿಕ ಬಡವರು “ಸಹಸ್ರ” “ಲಕ್ಷ ರೂಪಾಯಿ” ಡೊನೇಷನ್ , ಬಸ್ ಚಾರ್ಜ್ ಕೊಟ್ಟು ಖಾಸಗಿ ಶಾಲೆಗೆ ಕಳಿಸುವಷ್ಟು ಶಕ್ತರಲ್ಲ….!. ಅವರು ಬೆಳಗೆದ್ದು ಕಂಡವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿ ಹೊಟ್ಟೆ ಹೊರೆಯುವುದು ಅನಿವಾರ್ಯ . ಸರ್ಕಾರಿ ಶಾಲೆ ಸಮಯಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಅವರಿಗೆ ಸಮಯಾವಕಾಶ ಇರುವುದಿಲ್ಲ. ಆ ಸಮಯಕ್ಕೆ ಅವರು ಕೂಲಿ ಕೆಲಸಕ್ಕೆ ಹೋಗಲೇಬೇಕಾಗಿರುತ್ತದೆ. ಹಾಗಾಗಿ ಮಲೆನಾಡು ಕರಾವಳಿಯ ಪ್ರದೇಶದ ಸರ್ಕಾರಿ ಶಾಲೆಗೆ ಹೋಗುವ ಅನೇಕ ಮಕ್ಕಳು ಹಳ್ಳ-ಹೊಳೆ ದಾಟಬೇಕು, ಸಾರದಲ್ಲಿ ದಾಟಿ ಹೋಗಬೇಕು, ಕಾಡಿನಲ್ಲಿ ಒಂಟಿಯಾಗಿ ಸಾಗಬೇಕು.
ನಮ್ಮ ಮಲೆನಾಡು ಕರಾವಳಿಯ “ಕನಿಷ್ಠ ಸಂಖ್ಯೆಯ ಮಕ್ಕಳ ಶಾಲೆ” ಯನ್ನು ಮುಚ್ಚಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ “ಕೇಂದ್ರೀಕೃತ ಶಾಲೆ” ಯನ್ನು ಅಭಿವೃದ್ಧಿ ಪಡಿಸಿ ಗ್ರಾಮ ದ ಪ್ರತಿ ಮನೆಯ ಪ್ರತಿ ಮಗುವನ್ನೂ ಶಾಲೆಗೆ ಕರೆದೊಯ್ಯುಲು ಸಹಾಯಕರನ್ನು ಮತ್ತು ಪ್ರತಿ ಊರಿನಲ್ಲಿ ಇರುವ ರಿಕ್ಷಾ ಮತ್ತು ಖಾಸಗಿ ಕಾರಿನವರಿಗೆ ವರ್ಷಕ್ಕೆ ಇಂತಿಷ್ಟು ಎಂದು ಬಾಡಿಗೆ ಕಂಟ್ರಾಕ್ಟ್ ಮಾಡಿ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದೊಯ್ದು ನಂತರ ಶಾಲೆಯಿಂದ ಮನೆಗೆ ಮರಳಿ ಬಿಡುವ ವ್ಯವಸ್ಥೆ ಮಾಡಬಹುದು. ಹೀಗೆ ಮಾಡಿದರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ ಪೋಷಕರಿಗೂ ಒಳ್ಳೆಯ ಅನುಕೂಲ ಆಗುತ್ತದೆ. ಗ್ರಾಮ ಪಂಚಾಯತಿ ಗೆ ಕನಿಷ್ಠ ಎರಡಂತೂ “ಕನಿಷ್ಠ ಸಂಖ್ಯೆಯ ಮಕ್ಕಳ ಶಾಲೆ ” ಇರುತ್ತದೆ. ಈ ಕನಿಷ್ಠ ಸಂಖ್ಯೆಯ ಮಕ್ಕಳ ಶಾಲೆಗೆ ಸರ್ಕಾರ ವ್ಯಯ ಮಾಡುವ ಸಂಬಳ ಸಾರಿಗೆಯ ಹತ್ತು ಪ್ರತಿಶತ ಹಣದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಸಾರಿಗೆ ವ್ಯವಸ್ಥೆ ಗೆ ಹಣ ಹೊಂದಿಸಬಹುದು.
ಪ್ರತಿ ಮಳೆಗಾಲದಲ್ಲೂ ಮಲೆನಾಡು ಕರಾವಳಿಯ ಪ್ರದೇಶದ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗೆ ಹೋಗುವ ಬಡವರ ಮಕ್ಕಳು ಬಹಳ ಅಪಾಯವನ್ನು ಎದುರಿಸುವುದನ್ನ ಪೋಷಕರು ಅಸಾಹಾಯಕರಾಗುವುದನ್ನ ಸರ್ಕಾರ , ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವರು , ಜಿಲ್ಲಾಧಿಕಾರಿಗಳು, ಮಲೆನಾಡು ಕರಾವಳಿಯ ಜಿಲ್ಲೆಯ ಸಂಸದರು, ಶಾಸಕರು ಗಮನ ಹರಿಸಬೇಕಿದೆ.
ಆಕಸ್ಮಾತ್ತಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡಿದ್ದಲ್ಲಿ ಸರ್ಕಾರಿ ಶಾಲೆಗಳು ಮಕ್ಕಳಿಂದ ತುಂಬಿ ಕಲರವ ಮೂಡುತ್ತದೆ.
ಈಗ ಸರ್ಕಾರದ ಶಾಲೆಗಳು ಖಾಸಗಿ ಶಾಲೆ ಗಳನ್ನು ಎಲ್ಲಾ ಬಗೆಯಲ್ಲೂ ಅನುಕರಿಸುತ್ತಿದೆ. ಆದರೆ ಮಕ್ಕಳನ್ನು ಶಾಲೆಗೆ ಕರೆ ತರುವ “ಸಾರಿಗೆ ವ್ಯವಸ್ಥೆ” ಒಂದು ವಿಚಾರದಲ್ಲಿ ಹಿಂದುಳಿದು ಗ್ರಾಮೀಣ ಪ್ರದೇಶದ ಮಕ್ಕಳು , ಬಡವರ ಮಕ್ಕಳು, ಖಾಸಗಿ ಶಾಲೆಗೆ ಹೋಗುವ ಉಳ್ಳವರ ಮಕ್ಕಳು, ಉಳ್ಳವರನ್ನ ಅನುಕರಿಸಲು ಹೋಗಿ ಮಕ್ಕಳ ವಿಧ್ಯಾಭ್ಯಾಸ ಕ್ಕಾಗಿ ಸಾಲಗಾರರಾಗುವ ಬಡಬಗ್ಗರು..!. ಗ್ರಾಮೀಣ ಪ್ರದೇಶದ ಶಾಲೆಗೆ ಹೋಗುವ ಮಕ್ಕಳು ಪಟ್ಟಣದ ಶಾಲೆಗೆ ಹೋಗುವ ಮಕ್ಕಳ ಎದುರು “ದ್ವಿತೀಯ ದರ್ಜೆ “ಯಾಗುವಂತಾಗಲು ಸರ್ಕಾರವೇ ಕಾರಣವಾಗುತ್ತಿದೆ. ಅದಕ್ಕೆ ಮೂಲ “ಸಾರಿಗೆ “…. ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಲಿ…..
ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…
ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…