ಹೋಲ್ ಸೇಲ್ ಡ್ರೈ ಫ್ರೂಟ್ ಮರ್ಚೆಂಟ್ | ಪಾಲಿಗೆ ಬಂದಿದ್ದು ಪಂಚಾಮೃತ |

June 11, 2024
1:43 PM

ಸುಷ್ಮಳಿಗೆ ಹೊನ್ನಗದ್ದೆ ಹಾಲಪ್ಪನ ಮದುವೆ(Marriage) ಸೆಟಲು ಮೆಂಟಲು ಬಂದಿತ್ತು. ಆದರೆ ಮೊದಲಿಗೆ ಸುಷ್ಮ ಹಾಲಪ್ಪನ ಮದುವೆ ಮಾಡಕಣಕೆ ಒಪ್ಪಗೆಂಡಿರಲಿಲ್ಲ..! ಸುಷ್ಮ ಬೆಂಗಳೂರು ಪ್ಯಾಟೆಲಿ ಜಾಬ್ ಲ್ಲಿ ಇದ್ದ ಹುಡುಗಿ. ಅಪ್ಪಟ ಹಳ್ಳಿ(Village) ಮನೆಗೆ ಮದುವೆ ಮಾಡಿಕಂಡ್ ಬರೋಕೆ ಹೆಂಗ್ ಒಪ್ತಾಳೆ ಹೇಳಿ…? ಹಳ್ಳಿ ಮನೇಲಿ ಅದೆಷ್ಟೇ ಲಕ್ಸ ವರಮಾನ, ಅದೆಷ್ಟೇ ಕಾರು ಗೀರು ಇದ್ದರೂ ಈಗಿನ ಹುಡುಗೀರು ಹಳ್ಳಿ ಹುಡುಗರನ್ನು ಮದುವೆ ಆಗೋಕ್ಕೆ ಒಪ್ಪಲ್ಲ.. ಅಂತದ್ದರಲ್ಲಿ ಸುಷ್ಮಾ ಹಾಲಪ್ಪನ ಮದುವೆ ಆಗಲು ಒಪ್ಪಿದ್ದು ಹಾಲಪ್ಪ ತನ್ನ ಮ್ಯಾರೇಜ್ ಫ್ರೋಫೈಲ್(Marriage Profile) ನಲ್ಲಿ ತಾನೊಬ್ಬ ಡ್ರೈ ಫ್ರೂಟ್(Dry fruits) ಹೋಲ್ ಸೇಲ್ ವ್ಯಾಪಾರಿ(Whole sale Merchant) ಅಂತ ಹಾಕ್ಯಂಡಿದ್ದನ್ನ ನೋಡಿ.

Advertisement

ಸುಷ್ಮನಿಗೆ ಗೋಡಂಬಿ, ಬಾದಾಮಿ, ದ್ರಾಕ್ಷಿ, ಅಂಜೂರ ಸೇರಿದಂತೆ ಎಲ್ಲಾ ಬಗೆಯ ಡ್ರೈ ಫ್ರೂಟೂ ಪಂಚಪ್ರಾಣ.. ಹಾಲಪ್ಪನ ಮದುವೆ ಮಾಡಿಕೊಂಡರೆ ಅನ್ನದ ಬದಲಿಗೆ ಡ್ರೈ ಫ್ರೂಟನ್ನೇ ತಿಂದುಂಡು ಆರಾಮವಾಗಿ ಇರಬಹುದು ಅಂತ ಆಸೆ ಮಾಡಿಕೊಂಡು ಹಾಲಪ್ಪನ ಮದುವೆ ಆಗಕೆ ಒಪ್ಪಿಕೊಂಡಳು. ಬೆಳಿಗ್ಗೆ ಪಿಸ್ತಾ, ಮದ್ಯಾನ ಬಾದಾಮ್, ಸಂಜೆ ಗೋಡಂಬಿ, ರಾತ್ರಿ ಅಂಜೂರ ತಿನ್ನಬೇಕು ಅಂತ ಕನಸು ಕಾಣ್ತಾ ಹಾಲಪ್ಪನ ಮದುವೆ ಆಗೇ ಬಿಟ್ಟಳು. ಮದುವೆ ಆಗಿ ಚಪ್ಪರ ಸ್ಲಾಬು ನೆಂಟ್ರೂಟ ಪಂಟ್ರೂಟ ಪ್ರಸ್ತ ಗಿಸ್ತ ಎಲ್ಲಾ ಮುಗಿದರ ಮೇಲೆ ” ಪಿಸ್ತಾ ” ಎಲ್ಲಿ‌ ? ! ಅಂತ ಗಂಡನ ಮನೆಯಲ್ಲಿ ಸುಷ್ಮಾ ಹುಡುಕಿಕೊಂಡು ಹೊರಟಳು…

ಗಂಡ ಹಾಲಪ್ಪನನ್ನು ಪ್ರೀತಿಯಿಂದ “ರೀ ನಿಮ್ಮ ಡ್ರೈ ಫ್ರೂಟ್ ಗೋಡನ್ ಎಲ್ಲಿ ?” ಅಂತ ಕೇಳಿದಳು.. ಅದಕ್ಕೆ ಹಾಲಪ್ಪ ಮನೆ ಹಿಂದುಗಡೆ ಕಡಿಮಾಡಿಗೆ ಕರಕು ಹೋಗಿ ಮೋಟೆಗಳ ರಾಶಿ ನಿಟ್ಟನ್ನ ತೋರಿಸಿದ. ಸುಷ್ಮಳಿಗೆ ಆ ಮೋಟೆಗಳನ್ನ ನೋಡಿ ಅಚ್ಚರಿಯಾತು.. ಅವಳು ಗಂಡನ್ನ “ಇದೇನ್ರಿ ಅಷ್ಟು ಕ್ಯಾಸ್ಟ್ಲಿಯ ಡ್ರೈ ಫ್ರೂಟ್ ನ್ನ ಹಿಂಗೆ ದೂಳ್ ತಿನ್ನಿಸುತ್ತಾ ಇಟ್ಟಿದೀರಲ್ಲ‌.‌..!! ಇದರಲ್ಲಿ ಗೋಡಂಬಿ, ಬಾದಾಮಿ, ಪಿಸ್ತಾ, ಅಂಜೂರದ ಚೀಲ ಎಲ್ಲಿದೆ..? ಅಂತ ಕೇಳಿದಳು. ಅದಕ್ಕೆ ಹಾಲಪ್ಪ ” ಅಯ್ಯೋ ಮರೆಗಿತ್ತಿ ನೀ ಅಗಾವಲೇ ಕೇಂಡಿದ್ದರೆ ನಾ ಹೇಳ್ತಿದ್ದೆ .. ನಾ ಮೊದಲಿಗೆ ಸ್ವಲ್ಪ ದಿನ ಗೇರು ಬೀಜ ಯಾಪಾರ ಮಾಡ್ತಿದ್ದೆ.. ಆಮೇಲೆ ಗೇರು ಬೀಜದ ಯಾಪಾರ ಲಾಸಾಗಿ ಸಿಪ್ಪೆ ಗೋಟು ಯಾಪಾರ ಮಾಡೋಕೆ ಸುರು ಮಾಡದೇ … ನೋಡು ಸಿಪ್ಪೆ ಗೋಟೂ ಡ್ರೈ ಫ್ರೂಟೇ ಕಣೆ… ಅಡಿಕೆ ಹಣ್ಣು ಅಡಿಕೆ ಆಗಿ ಒಣಗಿದರೆ ಅಡಿಕೆ ಫ್ರೂಟು ಡ್ರೈ ಆಗಿ‌
ಡ್ರೈ ಫ್ರೂಟ್ ಆದಂಗೆ.

ಅಡಿಕೆ ಸಿಪ್ಪೆ ಗೋಟು ಲೆಕ್ಕಾಚಾರ ಹಾಕಿದರೆ ಕೆಂಪು ಅಡಿಕೆಗಿಂತ ಲಾಭ. ‌ಹೊಸನಗರ ಸಾಗರದಲ್ಲಿ ಒಳ್ಳೆಯ ಮಾರ್ಕೇಟ್ ಇರುತ್ತೆ..‌ ಆಷಾಡ ಕಳದು ಗೌರಿ ಹಬ್ಬ ಬರೋ ಷ್ಟೊತ್ತಿಗೆ ಸಿಪ್ಪೆಗೋಟು ಚಾಲಿಗೆ ಒಳ್ಳೆಯ ಬೆಲೆ ಬರುತ್ತದೆ. ಒಳ್ಳೆಯ ಸಿಪ್ಪೆಗೋಟು ಸೊಲಸಿ ಚಾಲಿ ಮಾಡಿ ಮಾರಾಟ ಮಾಡಿದರೂ ಲಾಭ. ನಮ್ಮ ಭಾಗದಲ್ಲಿ ಸಾಗರ ಮತ್ತು ಹೊಸನಗರದ ಸಿಪ್ಪೆ ಗೋಟು ಚಾಲಿ ನಂ ಒನ್.. ನಮ್ಮ ತೀರ್ಥಹಳ್ಳಿ ಶೃಂಗೇರಿ ಕೊಪ್ಪ ದ ಚಾಲಿಗಿಂತ ಸಾಗರ ಚಾಲಿ ಸೂಪರ್. ಚಾಲಿನ ಬೀಡಾ ಷಾಪಲ್ಲಿ ಎಲೆ ಅಡಿಕೆ ಹಾಕಕ್ಕೆ ನೇರವಾಗಿ ತಿನ್ನೋಕೆ ಬಳಸ್ತಾರೆ.. ಅಭ್ಯಾಸ ಇಲ್ಲಿದಿರೋರ ಚಾಲಿ ತುಂಡನ್ನ ತಂಬಾಕ್ ಜೊತೆಗೆ ತಿಂದು ತಲೆ ತಿರುಗಿ ಬಿದ್ದವರೂ ಇದ್ದಾರೆ ಅಷ್ಟು ಸ್ಡ್ರಾಂಗು.. ಸಿಪ್ಪೆ ಗೋಟು ಅಥವಾ ಚಾಲಿ ಮಾರ್ಕೇಟ್ ನ ಇತರ ಯಾವುದೇ ಡ್ರೈ ಫ್ರೂಟ್ ಗೆ ಬಿಟ್ಟುಕೊಡೋಲ್ಲ.. ಬ್ಯಾಸಿಗೆಲಿ ಕೆಲ ಅಡಿಕೆ ಕೊನಿ ಮ್ಯಾಲೇ ಕೂತ್ತು ಬರೀ ರಾಶಿ ಇಡಿ ವೆರೈಟಿನೇ ಹದ ನೋಡಿ ಕೊನೆ ತೆಗಸೋ ಅಡಿಕೆ ಎಕ್ಸಪರ್ಟ್ಸ್ ಬೆಳೆಗಾರರು ಅಪರೂಪಕ್ಕೆ ಅಪ್ಪಿತಪ್ಪಿ ಬಂದ ಸಿಪ್ಪೆ ಗೋಟನ್ನ ಒಣಗಿಸಿ ಮನೇಲಿ ಇಟ್ಟುಕೊಂಡರೆ ಹಸರಣೆ ಅಂತ ಆ ಟೈಮಲ್ಲೇ ಇದ್ದ ರೇಟಿಗೆ ಮಾರೋರಿಂದ ಸ್ವಲ್ಪ ಕಮ್ಮಿ ಬೆಲೆಗೆ ಅಡಿಕೆ ನ ಖರೀದಿಸಿ ಇಟ್ಟುಕೊಣ್ತೀವಿ .

ಕೆಲ ಅಡಿಕೆ ಬೆಳೆಗಾರರು ಟೊರ್ರ ಸೌಂಡ್ ಮಾಡ್ತಾ ಗೊರಬಲು ಪಾಲಿಷರ್ ನಲ್ಲಿ ಒಂದೇ ಒಂದು ಚಾಲಿ ಅಡಿಕೆನೂ ಬಿಡದಿತೇ ಗಿರಿಗಿಟ್ಲೇ ತರ ತಿರುಗಿಸಿ ಅದನ್ನು ಕೆಂಪು ಅಡಿಕೆ ಮಾಡಿ ಮಾರೋರು ಇದ್ದಾರೆ. ಆದರೆ ಇದನ್ನು ನಮ್ಮ ಸಿಪ್ಪೆ ಗೋಟಿಗೆ ಹೋಲಿಸಿದರೆ ಬೆಳೆಗಾರರು ಲಾಭ ಅಂದುಕೊಂಡಿದ್ದಾರೆ. ಆದರೆ ಈ ಗೊರಬಲು ಪಾಲಿಷರ್ ಕೆಂಪಡಿಕೆಗಿಂತ ಸಿಪ್ಪೆ ಗೋಟೇ ಲಾಭ ..‌ ಅಂತ ಬಾಳ ಅಡಿಕೆ ಬೆಳೆಗಾರರಿಗೆ ಇದು ಗೊತ್ತಿಲ್ಲ.. ಇರಲಿ ; ಅಲ್ಲಿ ಇಲ್ಲಿ ತ್ವಾಟದಲ್ಲಿ ಬಿದ್ದ ಅಡಿಕೆನ ಎಣ್ಣೆ ಕುಡಿಯೋ ರಾಜಕುಡುಕರಿಂದ ಕಮ್ಮಿ ಬೆಲೆಗೆ ಸಿಪ್ಪೆಗೋಟು ಖರೀದಿಸಿ, ಗೌರಿ ಹಬ್ಬದ ತಂಕ ಕಾದು ಹೈಯಸ್ಟ್ ರೇಟಿಗೆ ಮಾರೋ ಕಾಗದಿತೆ ಇರೋರ ಸಿಪ್ಪೆ ಗೋಟನ್ನ‌ ಕಮ್ಮಿ ರೇಟಿಗೆ ಖರೀದಿಸಿ ಹೀಗೆ ಸ್ಟಾಕ್ ಹೊಡದು ರೇಟ್ ಬಂದ್ ತಕ್ಷಣ ವ್ಯಾಪಾರಕ್ಕೆ ಬಿಟ್ಟು ಬಿಡೋದು… ಕೆಲ ಒಳ್ಳೆಯ ಸಿಪ್ಪೆ ಗೋಟು ಲಾಟನ್ನ ಸಾಗರದಲ್ಲಿ ಕೈ ಸುಲತದಲ್ಲಿ ಸುಲಿಸಿ ಸಾಗರದ ಅಡಿಕೆ ಜೊತೆಯಲ್ಲಿ ನಮ್ಮ ಭಾಗದ ಅಡಿಕೆ ಬೆರೆಸಿ ಮಾರಾಟವನ್ನೂ ಮಾಡ್ತೀಂವಿ.. ದೊಡ್ಡ ದೊಡ್ಡ ಲಾಟಿನವರ ಬಳಿ ನೂರಾರು ಸಿಪ್ಪೆ ಗೋಟಿನ ಚೀಲನ ಗೋಟು ಓನರ್ ಗಳಿಗೆ ಕನ್ ಫ್ಯೂಸ್ ಮಾಡಿ ತೂಕ ಮಾಡದಿತೆ “ಕೆಲ” ಖರೀದಿದಾರರು ಎತ್ತಿ ಮೋಸ ಮಾಡೋದೂ ಇದೆ..!! ದೊಡ್ಡ ದೊಡ್ಡ ನಿಟ್ಟು ಖರೀದಿ ಮಾಡುವಾಗ ಅಡಿಕೆ ಬೆಳೆಗಾರರಿಗೆ ” ಅರ್ಧಮರ್ಧ ದುಡ್ಡು” ಕೊಟ್ಟು ಉಳಿದ ದುಡ್ಡಿಗೆ ಟೋಪಿ ಹಾಕೋ ವ್ಯಾಪಾರಿಗಳೂ ಹೆಚ್ಚಿಧ್ದಾರೆ… ಮಾರುಕಟ್ಟೆ ಗಿಂತ ಜಾಸ್ತಿ ದುಡ್ಡು ಕಣ್ಣು ಮುಚ್ಚಿ ಕೊಂಡು ಯಾರಾದರೂ ಕೊಡ್ತಾರೆ ಅಂದರೆ ಅವರು ಟೋಪಿ ಗಿರಾಕಿಗಳೂ ಅಂತಲೇ ಅರ್ಥ..

ಆದರೆ ನಾನು ಚಾಲಿ ಯಾಪಾರದಲ್ಲಿ ಮೋಸ ಮಾಡೋಲ್ಲ.. ಬಾಳ ಜನ ಅಡಿಕೆ ಬೆಳೆಗಾರರು ಒಳ್ಳೆ ರೇಟು ಬಂದಾಗ ಚಾಲಿ ಮಾರದೇ ಇಟ್ಟುಕೊಂಡು ಕಡೀಕೆ ರೇಟು ಕಮ್ಮಿ ಯಾದಮೇಲೆ ಮಾರೋಕೆ ಹೋದರೆ ಅಡಿಕೆ ಮಳೆಗಾಲದ ಥಂಡಿ ತಗೊಂಡು ಅಡಿಕೆ ಡೊಂಕು ಬಿದ್ದು ಲಡ್ಡು ಆಗಿ ಪೂರಾ ಚಾಲಿ ದಂಡಾ ಆಗೋದು ಇದೆ… ಚಾಲಿ ಒಣಗಿದ ಮೇಲೆ ಮೂರು ತಿಂಗಳ ಕಾಲ ಒಳ್ಳೆಯ ಚೀಲದಲ್ಲಿ ಬೆಚ್ಚಗಿನ ಜಾಗದಲ್ಲಿ ಇಟ್ಟರೆ ಇಡಬೌದು.. ನಮ್ಮ ಗೋಡನ್ನು ಸುರಕ್ಷಿತವಾಗಿದೆ ನೋಡು‌.. ಬಾಳ ದಿನ ಸಿಪ್ಪೆ ಗೋಟು ಇಡೋರು ಎರಡೆರಡು ಚೀಲ ಪ್ಲಾಸ್ಟಿಕ್ ಕವರ್ ಹಾಕಿ ಸ್ಟಾಕ್ ಇಡೋದೂ ಇದೆ.. ಅದು ಫಂಗಸ್ ವಿಚಾರ.. ಮೂರು ತಿಂಗಳ ನಂತರ ಸಿಪ್ಪೆ ಗೋಟು ಇಡೋದು ರಿಸ್ಕು..
ಹಿಂದೆ ನಮ್ಮ ತೀರ್ಥಹಳ್ಳಿ ಭಾಗದಲ್ಲೂ ಸಿಪ್ಪೆ ಗೋಟನ್ನ ಮನೆಯಲ್ಲೇ ಕೈ ಸುಲಿತ ಮಾಡಿ ಸಾಗರ ಹೊಸನಗರ ದ ಮಾರುಕಟ್ಟೆ ಗೆ ಕೊಂಡೊಯ್ದು ಮಾರಾಟ ಮಾಡ್ತಿದ್ದರು. ಇದು ಮೈ ತುಂಬಾ ಕೆಲಸ ಆತದೆ. ಈ ಸಿಪ್ಪೆ ಗೋಟು ಸುಲಿದರೆ ಮೂವತ್ತು ಮವತ್ತೈದು ಕೆಜಿ ಒಳ್ಳೆಯ ಅಡಿಕೆ ಬಂದರೆ ಲಾಭ. ಆದರೆ ಕೆಲ ಸತಿ ಮಳೆಗಾಲದ ಮುಂಗೋಟು ಈ ಬ್ಯಾಸಿಗೆ ಹಣ್ಣಡಿಕೆ ಜೊತೆಯಲ್ಲಿ ಸೇರಿದರೆ ಮಳೆಗಾಲದ ಸಮಯದ ಮುಂಗೋಟಿನ ಅಡಿಕೆ ಹೆಚ್ಚು ಪುಡಿಯಾಗೋದು ಹಾಳಾಗೋದು ಹೆಚ್ಚು.. ರಿಸ್ಕ್ ಇದು…!! ಈಗ ನಮ್ಮ ತೀರ್ಥಹಳ್ಳಿ ಶೃಂಗೇರಿ ಕೊಪ್ಪದ ತೊಂಬತ್ತು ಭಾಗ ಯಾವುದೇ ಅಡಿಕೆ ಬೆಳೆಗಾರರೂ ಸಿಪ್ಪೆ ಗೋಟು ಕೈ ಸುಲಿತ ಮಾಡೋಲ್ಲ. ಮಿಷಿನ್ ನಲ್ಲೂ ಸಿಪ್ಪೆ ಗೋಟು ಸುಲಿಯೋಕ್ಕೆ ಸಾದ್ಯ ಇದೆ. ಆದರೆ ಮಿಷನ್ ನಲ್ಲಿ ಸುಲಿದಾಗ ಅಡಿಕೆ ಗೆ ಪೆಟ್ಟು ಬೀಳೋದರಿಂದ ಅಡಿಕೆ ಡ್ಯಾಮೇಜಾಗಿ ವೇಸ್ಟ್ ಆಗೋದು, ಬೇಗ ಕುಂಬಾಗೋ ಸಾದ್ಯತೆ ಹೆಚ್ಚು… ಹಾಗಾಗಿ ನಮ್ಮ ಭಾಗದಲ್ಲಿ ಸಿಪ್ಪೆ ಗೋಟನ್ನ ಹಾಗೇ ಕೊಡೇದೇ ಲಾಭ ಅಂತ ಹೇಳಿ ರೈತರು ಸಿಪ್ಪೆ ಗೋಟನ್ನೇ ಮಾರಾಟ ಮಾಡ್ತಾರೆ..

ಕಮ್ಮಿ ಕೆಲಸದ ಲಾಭ ದ ಉತ್ಪನ್ನ ಸಿಪ್ಪೆ ಗೋಟು‌. ಅಡಿಕೆ ಸುಲಸು ಬೇಸು ಒಣಗಿಸು ಆರಿಸು ಇವ್ಯಾಯವ ಕೆಲಸನೂ ಇಲ್ಲದ ಪರಮ ಆರಾಮಿನ ಉತ್ಪನ್ನ ಸಿಪ್ಪೆ ಗೋಟು.‌. ಈ ಅಡಿಕೆ ಬೀಡಾ ಬಳಕೆ ಉದ್ದೇಶಕ್ಕೆ ಹೋಗುತ್ತದೆ. ಈ ಸಿಪ್ಪೆ ಗೋಟು ಅಥವಾ ಚಾಲಿ ಕರ್ಜೂರ, ದ್ರಾಕ್ಷಿ , ಅಂಜೂರದ ತರನೇ ಉತ್ತರ ಭಾರತದಲ್ಲಿ ಉತ್ತಮ ಬೇಡಿಕೆ ಇರೋ ಡ್ರೈ ಫ್ರೂಟು.. ” ಅಂತೆಲ್ಲಾ ಊದ್ದ ಕತೆ ಹೇಳಿದವನೇ ಹಾಲಪ್ಪ ಅಲ್ಲೇ ಗೋಡನ್ ನಲ್ಲಿ ಬಿದ್ದಿದ್ದ ಒಂದು ಸಿಪ್ಪೆ ಗೋಟನ್ನ ಕೈಯಲ್ಲೇ ಬಿಡಿಸಿ ಕತ್ತಿಲಿ ಜೆಜ್ಜಿ ಒಡೆದು ಆ ಚಾಲಿ ಚೂರನ್ನ ಹೊಸ ಹೆಂಡತಿ ಸುಷ್ಮನ ಮೃದುವಾದ ಅಂಗೈ ಬಿಡಿಸಿ ಇಟ್ಟು “ನಿಧಾನವಾಗಿ ಒಂದೊಂದೇ ಚೂರು ತಿನ್ನು .. ಒಂದೇ ಸತಿ ಅಷ್ಟು ತಿನ್ನಬೇಡ..‌ ನಿಂಗೆ ಬೇಕಾದಾಗಲೆಲ್ಲ ಬೇಕಾದಷ್ಟು ತಿನ್ನು…” ಅಂತ ಹೇಳಿ ಹಾಲಪ್ಪ ಗೋಡನ್ ನಿಂದ ಹೊರಹೋದ… ಸುಷ್ಮಾ ಅಂಗೈಯಲ್ಲಿದ್ದ ಚಾಲಿ ಚೂರನ್ನ ದಿಜ್ಞೂಡಳಾಗಿ ನೋಡುತ್ತಲೇ ಇದ್ದಳು.. ಒಂದು ಕ್ಷಣಕ್ಕೆ ಆ ಚಾಲಿ ಚೂರು ಪಿಸ್ತಾ ಚೂರಿನಂತೆಯೂ ಮತ್ತೊಂದು ಕ್ಷಣಕ್ಕೆ ಗೋಡಂಬಿ ಚೂರಿನಂತೆಯೂ ಕಾಣಿಸಿ ಗೋಡನ್ ತುಂಬಾ ಇರುವ ಸಿಪ್ಪೆ ಗೋಟಿನ ಚೀಲವೆಲ್ಲಾ ಬಗೆ ಬಗೆಯ ಡ್ರೈ ಫ್ರೂಟ್ ನ ಮೂಟೆಯಂತೆ ಕಾಣಿಸಿ “ಪಾಲಿಗೆ ಬಂದದ್ದು ಪಂಚಾಮೃತ” ವೆನಿಸಿ ಅಲ್ಲೇ ಸಮಾಧಾನ ಮಾಡಿಕೊಂಡು ಗೋಡನ್ ಬಾಗಿಲು ಸರಸಿ ಮನೆಯತ್ತ ಹೋಗತೊಡಗಿದಳು..

ಬರಹ :
ಪ್ರಬಂಧ ಅಂಬುತೀರ್ಥ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಕೃಷಿ ಸಖಿಯರ ಪ್ರಥಮ ಪ್ರಗತಿ ಪರಿಶೀಲನಾ ಸಭೆ | ವಿವಿಧ ತರಕಾರಿ ಬೀಜಗಳ ವಿತರಣೆ | ತರಕಾರಿ ಬೆಳೆಸುವ ವಿಧಾನಗಳ ಬಗ್ಗೆ ಮಾಹಿತಿ |
April 4, 2025
12:17 AM
by: ದ ರೂರಲ್ ಮಿರರ್.ಕಾಂ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಎರಡು ದಿನ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
April 3, 2025
8:17 PM
by: The Rural Mirror ಸುದ್ದಿಜಾಲ
ಹೆಚ್ಚಿದ ತಾಪಮಾನ | ರಾಜ್ಯದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿ ಬದಲಾವಣೆ ಆದೇಶ
April 3, 2025
8:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 03-04-2025 | ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ | ಎ.4 ರಿಂದ ಮಳೆ ಪ್ರಮಾಣ ಕಡಿಮೆ
April 3, 2025
5:50 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group