ಈ ಸಲ ನೈರುತ್ಯ ಮುಂಗಾರು ಅಂತ ಹೆಸರು ಮಾತ್ರ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಬೆರಳೆಣಿಕೆಯಷ್ಟು ದಿನಗಳಲ್ಲಿ ಮಾತ್ರ ಮೋಡ ನೈರುತ್ಯದಿಂದ ಈಶಾನ್ಯಕ್ಕೆ ಸಂಚರಿಸಿದೆ. ಹೆಚ್ಚಿನ ದಿನಗಳಲ್ಲಿ ವಾಯವ್ಯದಿಂದ ಆಗ್ನೇಯಕ್ಕೆ ಚಲಿಸಿದೆ.ಈಗಿನ ಪರಿಸ್ಥಿತಿಗೆ ಈ ವೈಪರೀತ್ಯ ಕಾರಣ ಇರಬಹುದಾದರೂ, ವಾಯವ್ಯ ಮೋಡಗಳಿಂದ ನಿರೀಕ್ಷೆಗಿಂತ ಕಡಿಮೆ ಮಳೆಯಾಗುತ್ತಿದೆ. ಈ ಮೋಡಗಳು ಘಟ್ಟದ ತಪ್ಪಲ ಭಾಗಕ್ಕೆ ತಲುಪಿದಾಗ ಒತ್ತಡ ಹೆಚ್ಚಾಗಿ ಮಳೆಯಾಗುತ್ತಿದೆ. ಸುರಿಯುತ್ತಿದೆ.
ಮೊದಲು ಮುಂಗಾರು ದುರ್ಬಲಗೊಂಡಾಗ ಮೋಡಗಳು ಪಶ್ಚಿಮದಿಂದ ಪೂರ್ವಕ್ಕೆ ಚಲಿಸುತ್ತಿತ್ತು. ಆಗ ಸಾಮಾನ್ಯವಾಗಿ ಮಡಿಕೇರಿಯಿಂದ ಧರ್ಮಸ್ಥಳದ ತನಕ ವಿಶಾಲತೆ ಸಿಕುತ್ತಿತ್ತು. ಪೂರ್ವದಲ್ಲಿ ಶೇಖರಣೆಗೊಂಡ ಮೋಡಗಳ ಒತ್ತಡದಿಂದ ಗಾಳಿ ಬೀಸುತ್ತಿತ್ತು. ಮೋಡಗಳು ಚದುರಿ ಮಳೆ ಹಂಚಿಕೆಯಾಗುತ್ತಿತ್ತು. ವಾಯವ್ಯ ಮೋಡಗಳಿಗೆ ವಿಸ್ತರಣೆಗೆ ಅವಕಾಶ ಕಡಿಮೆಯಾದಂತಿದೆ. ಇನ್ನು ಮುಂದೆ ಸರಿಯಾಗಲಿ ಎಂದು ನಂಬೋಣ.
ಇದರ ಜೊತೆಗೆ ಶಿರಾಡಿ ಘಾಟಿಯ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಬೃಹತ್ ಯೋಜನೆಗಳ ಫಲವಾಗಿ ಅರಣ್ಯ ಕಡಿಮೆಯಾಗಿದೆ. ಉಷ್ಣಾಂಶ ಏರಿಕೆಯಿಂದ ಬಿಸಿ ಗಾಳಿಯ ಜೊತೆಗೆ ಮೋಡಗಳು ತಂಪಾದ ಅರಣ್ಯದ ಕಡೆಗೆ ಸೆಳೆಯಲ್ಪಡುತ್ತಿದೆ. ಅಂದರೆ ಹರಿಹರ, ಕೊಲ್ಲಮೊಗ್ರ, ಸಂಪಾಜೆ, ಮಡಿಕೇರಿ ಬೆಟ್ಟದ ಸಾಲುಗಳ ಕಡೆಗೆ. ಹೀಗಾದಾಗ ಮೋಡಗಳು ವಾಯವ್ಯದಿಂದ ಆಗ್ನೇಯಕ್ಕೆ ಚಲಿಸಿದೆಂತೆ ಭಾಸವಾಗುತ್ತದೆ. ಮೋಡಗಳ ವಿಸ್ತರಣೆಗೆ ಅವಕಾಶವಿಲ್ಲದ್ದರಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮೇಘಸ್ಪೋಟದಂತಹ ಮಳೆಗೆ ಕಾರಣವಾಗುವಾಗಿರಬಹುದು. ಇದು ಈಗಿನ ಸ್ಥಿತಿಗೆ ಕಾರಣವಿರಲೂಬಹುದು.