ಅಡಿಕೆ ಹಳದಿ ಎಲೆರೋಗ ಈಗ ಹಲವು ಕಡೆ ಬಾಧಿಸುತ್ತಿದೆ. ಸುಳ್ಯ, ಶೃಂಗೇರಿ, ಕೊಪ್ಪ ಮೊದಲಾದ ಕಡೆಗಳಲ್ಲಿ ಈಗ ಹೆಚ್ಚಾಗಿ ಚರ್ಚೆಯಾಗುತ್ತಿರುವ ವಿಷಯ. ಅಲ್ಲಿನ ಅಡಿಕೆ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಬೆಳೆ ಬದಲಾವಣೆ ಸೂಕ್ತವೇ ಅಥವಾ ಔಷಧಿ ಸಿಂಪಡಿಸಿ ಉಳಿಸಿಕೊಳ್ಳುವುದೇ..? ಈ ಎಲ್ಲಾ ಗೊಂದಲಗಳ ನಡುವೆ ಈಗ ಸಿಪಿಸಿಆರ್‌ಐ ವಿಜ್ಞಾನಿಗಳೇ ಅಧ್ಯಯನ ಮಾಡಿರುವ “ಆಂಟಿಬಯೋಟಿಕ್” ಸಿಂಪಡಣೆಯ ಸಲಹೆ ಏಕೆ ರೈತರಿಗೆ ನೀಡಲಿಲ್ಲ..? ಎನ್ನುವುದು ಪ್ರಮುಖವಾದ ಚರ್ಚೆಯ ವಿಷಯ.…..ಮುಂದೆ ಓದಿ….
ಅಡಿಕೆ ಹಳದಿ ಎಲೆರೋಗ ಇಂದು ನಿನ್ನೆಯ ಸಮಸ್ಯೆಯಲ್ಲ. ಭಾರತ ಮಾತ್ರವಲ್ಲ ಚೀನಾದಲ್ಲೂ ಅಡಿಕೆಗೆ ಹಳದಿ ಎಲೆರೋಗ ಇದೆ. ಅಲ್ಲಿನ ಯಾವ ತಜ್ಞರಿಗೂ ಹಳದಿ ಎಲೆರೋಗ ನಿಯಂತ್ರಣ ಮಾಡುವುದಕ್ಕೆ ಇಂದಿಗೂ ಸಾಧ್ಯವಾಗಲಿಲ್ಲ. ಒಂದೋ ಕೆಲ ಕಾಲ ಬೆಳೆ ಬದಲಾವಣೆ, ಅಥವಾ ರೋಗ ನಿರೋಧಕವಾದ ಬೇರೊಂದು ಗಿಡಗಳ ಅಭಿವೃದ್ಧಿ. ಹೀಗಾಗಿ ಅಲ್ಲಿನ ಆಯ್ಕೆಯಾಗಿದ್ದು ಬೆಳೆ ಬದಲಾವಣೆ. ಈ ಕಾರಣದಿಂದಲೇ ಇಂದು ಚೀನಾದಲ್ಲಿ ಅಡಿಕೆ ಕೊರತೆ ಕಾಡುತ್ತಿದೆ, ಅಲ್ಲಿನ ಉದ್ಯಮ ಉಳಿಸಿಕೊಳ್ಳಲು ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಆರಂಭಿಸಿದೆ.
ಭಾರತದಲ್ಲೂ ಹಲವು ವರ್ಷಗಳಿಂದ ಅಧ್ಯಯನಗಳು ನಡೆಯುತ್ತಿದೆ. ಸುಮಾರು 60-70 ವರ್ಷಗಳಿಂದ ಹಳದಿ ಎಲೆರೋಗಕ್ಕೆ ಕೇರಳದಿಂದಲೇ ಅಧ್ಯಯನ ಶುರುವಾಗಿದೆ. ಆದರೆ ಫಲಿತಾಂಶ , ಪರಿಹಾರ ಇದುವರೆಗೂ ಆಗಲಿಲ್ಲ. ಇಂತಹ ಸಂದರ್ಭದಲ್ಲಿ ಬೆಳೆ ಉಳಿಸಿಕೊಳ್ಳುವುದೋ ಅಥವಾ ಪರ್ಯಾಯ ಬೆಳೆಯತ್ತ ಸಾಗುವುದೋ..? ಈ ಪ್ರಶ್ನೆಗೆ ಉತ್ತರವಿಲ್ಲ. ಭಾರತದಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಸಿಪಿಸಿಆರ್‌ಐ ಹಲವು ಕೆಲಸ ಮಾಡಿದೆ. ಅದರಲ್ಲಿ ಹಲವು ಪರಿಹಾರಗಳನ್ನೂ ಹೇಳಿದೆ. ಒಂದು ಅಧ್ಯಯನದ ವರದಿಗೆ ಕನಿಷ್ಟ 10 ವರ್ಷಗಳ ಬೇಕಾಗುತ್ತವೆ ಎನ್ನುವುದು ಹಲವು ತಜ್ಞರ ಅಭಿಪ್ರಾಯ. ಸುಮಾರು 40 ವರ್ಷಗಳ ಹಿಂದೆ ಅಡಿಕೆ ಹಳದಿ ಎಲೆರೋಗ ನಿರ್ವಹಣೆಯಲ್ಲಿ “ಆಂಟಿಬಯೋಟಿಕ್” ಪಾತ್ರವನ್ನು ಸಿಪಿಸಿಆರ್‌ಐ ಉಲ್ಲೇಖಿಸಿದೆ. ಈ ಬಗ್ಗೆ 1982 ರಲ್ಲಿ ಪ್ರಕಟಿಸಿದ ARECANUT YELLOW LEAF DISEASE ಟೆಕ್ನಿಕಲ್ ಬುಲೆಟಿನ್ 10 ರ ಪುಟ ಸಂಖ್ಯೆ 4ರಲ್ಲಿ ಉಲ್ಲೇಖಿಸಿದೆ. ಆದರೆ 1982 ರ ನಂತರ ಇಂದಿನವರೆಗೂ ಆಂಟಿಬಯೋಟಿಕ್ ಟ್ರೀಟ್ಮೆಂಟ್ ಗೆ ಒಳಗಾದ ಗಿಡಗಳೇನಾದವು , ಆ ಬಗ್ಗೆ ಏಕೆ ಇಂದಿಗೂ ರೈತರಿಗೆ ಮಾಹಿತಿಯನ್ನು, ಸಲಹೆಯನ್ನು ಸಿಪಿಸಿಆರ್ ಐ ವಿಜ್ಞಾನಿಗಳು ನೀಡುತ್ತಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ಒಂದು ವೇಳೆ ಆಂಟಿಬಯೋಟಿಕ್ ಟ್ರೀಟ್ಮೆಂಟ್ ನಿಂದ ರೋಗಗಳು ನಿಯಂತ್ರಣವಾಗುತ್ತದೆ, ಗುಣಮುಖವಾಗುತ್ತವೆ ಎಂದಾದರೆ ವಿಜ್ಞಾನಿಗಳು, ಸಂಸ್ಥೆ ರೈತರನ್ನು ಇನ್ನೂ ಏಕೆ ಸಂಕಷ್ಟದಲ್ಲಿ ಸಿಲುಕಿಸುತ್ತಿವೆ ಎನ್ನುವ ಪ್ರಶ್ನೆ ಇತ್ತು.
ಈಚೆಗೆ ಸಿಪಿಸಿಆರ್ ಐ ವಿಜ್ಞಾನಿಗಳು ಹಳದಿ ಎಲೆರೋಗ ಪೀಡಿತ ಅಡಿಕೆ ಮರಗಳಿಗೆ ಸೂಕ್ಷ್ಮ ಪೋಷಕಾಂಶಗಳನ್ನು, ಪೋಷಕಾಂಶಗಳನ್ನು, ಸೂಕ್ತ ಗೊಬ್ಬರವನ್ನು ನೀಡುವುದರಿಂದ ಗಿಡಗಳು ಸಶಕ್ತವಾಗುತ್ತದೆ ಎಂದು ಎರಡು ವರ್ಷದ ಹಿಂದೆ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಈ ಬಗ್ಗೆ ಮರ್ಕಂಜ, ಕೊಲ್ಲಮೊಗ್ರ ಸೇರಿದಂತೆ ಕೆಲವು ಕಡೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ಇದಕ್ಕಾಗಿ ಪ್ಲಾಸ್ಟಿಕ್ ಮಲ್ಚಿಂಗ್ ವಿಧಾನದ ಬಗ್ಗೆಯೂ ಅಂದು ಹೇಳಲಾಗಿತ್ತು. ಮಳೆಗಾಲದ ಮೊದಲು ಹಾಗೂ ನಂತರ ಪೋಷಕಾಂಶಗಳನ್ನು ನೀಡುವ ಬಗ್ಗೆ ವಿವರಿಸಲಾಗಿತ್ತು.…..ಮುಂದೆ ಓದಿ….
ಇದೀಗ ಅಡಿಕೆ ಹಳದಿ ಎಲೆರೋಗವು ಆಂಟಿಬಯೋಟಿಕ್ ಟ್ರೀಟ್ಮೆಂಟ್ ನಿಂದ ರೋಗ ನಿಯಂತ್ರಣವಾಗುತ್ತದೆ ಎನ್ನುವ ಚರ್ಚೆ ಆರಂಭವಾಗಿದೆ. ಹಾಗಿದ್ದರೆ ವಿಜ್ಞಾನಿಗಳು, ಸಿಪಿಸಿಆರ್ ಐ ಈ ಬಗ್ಗೆ ಏಕೆ ರೈತರಿಗೆ ಸಲಹೆಯನ್ನು ನೀಡುತ್ತಿಲ್ಲ..?
ಕೇಂದ್ರ ಸರ್ಕಾರವು ಕೃಷಿಯ ಬಗ್ಗೆ ಆಗಾಗ ಹೊಸ ಮಾಹಿತಿಗಳನ್ನು , ಸೂಚನೆಗಳನ್ನು ನೀಡುತ್ತದೆ. ಆಯಾ ಕಾಲದ ಅನುಕೂಲತೆಗಳು ಹಾಗೂ ಸಂದರ್ಭಗಳನ್ನು ಗಮನಿಸಿಕೊಂಡು ತಜ್ಞರ ಸಲಹೆಗಳನ್ನು ಪಡೆದುಕೊಂಡು ಕೃಷಿ ಮಾಹಿತಿಗಳನ್ನು ಐಸಿಎಆರ್ ಮೂಲಕ ನೀಡುತ್ತದೆ. ಅದೇ ರೀತಿ ಸರ್ಕಾರದ ನಿರ್ದೇಶನದ ಪ್ರಕಾರ, ಯಾವುದೇ ಬೆಳೆಗಳಿಗೆ ಆಂಟಿಬಯೋಟಿಕ್ಸ್ ಸಿಂಪಡಣೆಯ ಕಡೆಗೆ ಒತ್ತು ನೀಡಬಾರದು. ಇದರಿಂದ ದೀರ್ಘ ಕಾಲದ ಪರಿಣಾಮಗಳು ಇರುವುದರಿಂದ ಹಾಗೂ ಮನುಷ್ಯರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆಂಟಿಬಯೋಟಿಕ್ಸ್ ಕಡೆಗೆ ಆದ್ಯತೆ ನೀಡಬಾರದು ಎಂದು ಸೂಚಿಸಿದೆ ಎಂದು ಈಚೆಗೆ ಸಿಪಿಸಿಆರ್‌ಐ ವಿಜ್ಞಾನಿಗಳು ಮಾಹಿತಿ ನೀಡಿದರು.
ಈ ಹಿಂದೆ ಆಂಟಿಬಯೋಟಿಕ್ಸ್ ಸಿಂಪಡಣೆಯ ಮೂಲಕ ಹಳದಿ ಎಲೆರೋಗ ಹೌದೋ ಅಲ್ಲವೋ ಎನ್ನುವುದರ ಪತ್ತೆ ಮಾಡುತ್ತಿದ್ದರು. ಈ ಔಷಧಿಗಳ ಸಿಂಪಡಣೆಯಿಂದ ಒಂದು ಬಾರಿ ರೋಗ ನಿಯಂತ್ರಣವಾಗುತ್ತದೆ, ಆದರೆ ಮತ್ತೆ ಪುನಹ ಅದೇ ಮಾದರಿಯಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಹೀಗಿದ್ದರೆ ಹಳದಿ ಎಲೆರೋಗ ಖಚಿತಪಡಿಸಲು ಸಾಧ್ಯವಾಗಿತ್ತು. ಆದರೆ ಅದನ್ನೇ ಔಷಧವಾಗಿ ಹಳದಿಎಲೆರೋಗ ನಿಯಂತ್ರಣಕ್ಕೆ ಬಳಕೆ ಮಾಡಲು ಸಿಪಿಸಿಆರ್ ಐ ಶಿಫಾರಸು ಮಾಡುತ್ತಿಲ್ಲ.
ಅಡಿಕೆ ಹಳದಿ ಎಲೆರೋಗ ನಿವಾರಣೆಯಾಗುವುದು ಕಷ್ಟ ಎಂದು ಚೀನಾದಂತಹ ದೇಶಗಳಲ್ಲಿ ಪರ್ಯಾಯ ಬೆಳೆಯತ್ತ ಸಾಗಿದ್ದಾರೆ. ಹೀಗಿರುವಾಗ ಭಾರತದಲ್ಲಿ ಅಡಿಕೆ ಹಳದಿ ಎಲೆರೋಗ ನಿವಾರಣೆ ಸಾಧ್ಯವೇ ? ಪರಿಹಾರ ಏನು? ಇರುವಷ್ಟು ಕಾಲ ಅಡಿಕೆ ಇಳುವರಿಯನ್ನು ಹೇಗೆ ಪಡೆಯಬಹುದೇ ? ಅಧಿಕ ಇಳುವರಿ ಪಡೆಯಲು ವಿಪರೀತ ರಾಸಾಯನಿಕಗಳ ಸಿಂಪಡಣೆ ಹಾಗೂ ಗೊಬ್ಬರ ಸುರಿದು ಈಗಿನ ಭೂಮಿಯೂ ಬರಡಾದರೆ..? ಮುಂದಿನ ರೈತರ ಭವಿಷ್ಯ ಏನು..? ಇದಕ್ಕಾಗಿಯೇ ಈಗ ಹಳದಿ ಎಲೆರೋಗ ಪೀಡಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆಗಳ ಕಡೆಗೆ ಆದ್ಯತೆ ನೀಡಲಾಗುತ್ತಿದೆ.
The outbreak of Arecanut Yellow Leaf Disease is currently impacting numerous areas, putting Arecanut growers in a vulnerable position. The question arises whether it is advisable to switch to a different crop or to continue treating the affected crop with medicine. Despite the uncertainty, there is a discussion about why farmers were not recommended to use an “antibiotic” spray that has been researched by scientists at CPCRI. This is an important point for consideration.