ಮಲೆನಾಡು- ಕರಾವಳಿಯ ರೈತ ಬಾಂಧವರೇ ಬನ್ನಿ…, ಅಡಿಕೆ ಕೃಷಿ ಮಾಡುವುದು , ಹಸು ಸಾಕಣೆ ಮಾಡುವುದು ಹೇಗೆಂದು ಬಯಲು ಪ್ರದೇಶದ ಯೂಟ್ಯೂಬ್ ಪ್ರಗತಿ ಪರ ಕೃಷಿಕರಿಂದ ಕಲಿಯಿರಿ…!
ಹೌದು.…, ಇತ್ತೀಚಿನ ವರ್ಷಗಳಲ್ಲಿ ಯೂಟ್ಯೂಬ್ ನಲ್ಲಿ ಹೈಟೆಕ್ ಗೋ ಸಾಕಣಿಕೆದಾರರು ಮತ್ತು ಬಯಲು ಸೀಮೆಯ ಅಡಿಕೆ ಬೆಳೆಗಾರರು ಹುಟ್ಟು, ಅಡಿಕೆ ಬೆಳೆಗಾರರಿಗೆ ಅಡಿಕೆ ಕೃಷಿ ಮತ್ತು ಹೈನುಗಾರಿಕೆಯನ್ನು ಯೂಟ್ಯೂಬ್ ನಲ್ಲಿ ಕಲಿಸುತ್ತಿದ್ದಾರೆ.
ಮಲೆನಾಡು ಕರಾವಳಿಯಲ್ಲಿ ಮುಂದೊಮ್ಮೆ ಎಲೆಚುಕ್ಕಿ ಹಳದಿ ಎಲೆ ರೋಗ ಬಂದು ಅಡಿಕೆ ತೋಟವೆ ಸರ್ವ ನಾಶವಾದರೆ ಈ ಬಯಲು ಸೀಮೆಯ ಅಡಿಕೆ ಬೆಳೆಗಾರ ಜಮೀನಿಗೆ ಹೋಗಿ ರೈಟರ್ ಆಗಿ ಜೀವನ ನಡೆಸಬಹುದು…!. ಇಲ್ಲ… ಈ ಯೂಟ್ಯೂಬ್ ಗೋಪಾಲಕರ ಡೈರಿ ಫಾರ್ಮ್ನಲ್ಲಿ ಸಗಣಿ ಬಾಚುವ ಕೆಲಸ ಮಾಡಬಹುದು…!
ಎಲ್ಲಿತ್ತು ಇಷ್ಟು ದಿನ ಈ ಹಸುಗಳು…?, ನಮ್ಮ ರಾಜ್ಯಕ್ಕೆ ಮೊದಲು ಬಂದಿದ್ದು, “ಮುರ್ರಾ” ಎಮ್ಮೆ ತಳಿ. ನಂತರ ಇತ್ತೀಚಿನ ವರ್ಷಗಳಲ್ಲಿ ಬಂದಿದ್ದು ಗೀರ್ ಹಸುಗಳು.
ಎರಡೇ ಎರಡು ಮಲೆನಾಡು ಗಿಡ್ಡ ತಳಿ ಸಾಕಿಕೊಂಡು ಐವತ್ತು ಗಿರ್ ತಳಿ ಹಸುಗಳನ್ನು ಸಾಕಿ ಹಾಲು ತುಪ್ಪ ಮಾರಿ ಕೊಂಡು ತಮ್ಮ ಕೊಟ್ಟಿಗೆಗೆ “ಗೋಶಾಲೆ “ಅಂತ ಹೆಸರಿಟ್ಟುಕೊಂಡು ಸಕಲ ಬಗೆಯಲ್ಲೂ ಹಣ ಗಳಿಸುವ ದೊಡ್ಡ ಕೂಟ ಇಂದಿನ ವ್ಯವಸ್ಥೆಯಲ್ಲಿದೆ.
ಯಾವುದೇ ತಳಿಯ ಹಸುಗಳಿಗೂ ಅವುಗಳ ಹುಟ್ಟು ಪ್ರದೇಶ ಅಂತಿರುತ್ತದೆ. ಅವಕ್ಕೆ ಅಲ್ಲಿನ ವಾತಾವರಣ ಮೇವು ಬೇಕು.
ಮುರ್ರಾ ಗೀರ್ ತಳಿ ಜಾನುವಾರುಗಳಿಗೆ ಗುಜರಾತ್ ರಾಜಸ್ಥಾನ ಉತ್ತರ ಪ್ರದೇಶ ರಾಜ್ಯದಲ್ಲಿ ಕಬ್ಬು , ಕ್ಯಾರೇಟ್ , ಬೀಟರ್ ರೋಟ್ ಮುಂತಾದ ತರಕಾರಿ ಗಳನ್ನು ಹಾಗೆಯೇ ನೀಡುತ್ತಾರೆ. ಅದು ಯಥೇಚ್ಛವಾಗಿ ಮೇವು ಸಿಗುವ ಮುಖಜ ಭೂಮಿ.
ನಮ್ಮ ರೈತರು ಯೂಟ್ಯೂಬ್ ನಲ್ಲಿ ನೋಡಿಕೊಂಡು ಅದರಲ್ಲಿನ ಗೋವುಗಳ ಕೆಚ್ಚಲು ನೋಡಿ , ಅಲ್ಲಿನ ಗೋಪಾಲಕರ ಭಾಷಣ ಕೇಳಿ ಹೈಟೆಕ್ ಡೈರಿ ಫಾರ್ಮ್ ಮಾಡಿ ಕೈ ಸುಟ್ಟುಕೊಳ್ತಾರೆ. ಹೆಚ್ಎಫ್ ,ಜೆರ್ಸಿ ಗೀರು ಓಂಗೋಲ್ ಸೇರಿದಂತೆ ಎಲ್ಲಾ ತಳಿ ಹಸುಗಳಿಗೂ ಅವುಗಳ ಹೊಟ್ಟೆಯ ಬಗ್ಗೆ ತೀವ್ರ ಗಮನ ಕೊಡಬೇಕು. ಹಸು ಗರ್ಭ ಕಟ್ಟಿ ಹಾಲು ನಿಲ್ಲಿಸಿದ ಮೇಲೆ ಗೋಪಾಲಕರು ಇನ್ನೂ ಹೆಚ್ಚಿನ ಫೀಡಿಂಗ್ ನ್ನ ಹಸುಗಳಿಗೆ ಮಾಡಬೇಕು.
ಯಥೇಚ್ಛವಾಗಿ ಹಸಿ ಹುಲ್ಲಿನ ಮೇವು, ಪೌಷ್ಟಿಕ ಆಹಾರ ದೊರೆಯದೇ ಬರೀ ಅಂಗಡಿಯಿಂದ ತಂದ ಹಿಂಡಿ , ಸಾರವಿಲ್ಲದ ಒಣ ಹುಲ್ಲು ಹಾಕಿ ಹಸು ಹಾಲು ಕೊಡದಾದಾಗ ಡೈರಿ ಫಾರ್ಮ್ ಲಾಸು, ಎಂದು ಷರಾ ಬರೆಯುತ್ತಾರೆ.
ಖಂಡಿತವಾಗಿಯೂ ಡೈರಿ ಫಾರ್ಮ್ ಲಾಸೇ… ಹಾಲಿಗೆ ಡೈರಿ ಬೆಲೆ ಲೆಕ್ಕಾಚಾರ ಹಾಕಿದರೆ ಖಂಡಿತವಾಗಿಯೂ ನಷ್ಟ.
ಹಾಗೆಯೇ, ಈ ಬಯಲು ಸೀಮೆಯ ಪ್ರಗತಿ ಪರ ಅಡಿಕೆ ಬೆಳೆಗಾರರ ಕಥೆಯೂ ಅಷ್ಟೇ. ಈ ವರ್ಷದ ಮಳೆಗಾಲದ ಲೆಕ್ಕಾಚಾರ ನೋಡಿದರೆ ಮಲೆನಾಡು ಕರಾವಳಿಯಲ್ಲೇ ಅಡಿಕೆ ತೋಟಗಳು ಬೇಸಿಗೆಯಲ್ಲಿ ಉಳಿಯುವುದು ಕಷ್ಟವಿದೆ.
ಅಕಸ್ಮಾತ್ತಾಗಿ ಕಳೆದ ಕೆಲವು ವರ್ಷಗಳಿಂದ ಅಕ್ಟೋಬರ್ ನಂತರ ಜೂನ್ ತನಕ ಮಳೆ ಬರದಂತೆ ಈ ವರ್ಷವೂ ಮದ್ಯ ಮಳೆ ಬರಲಿಲ್ಲ ವಾದರೆ ಹಳೆಯ ಕೆರೆ ತಗ್ಗಿನ ಹದದ ನೀರಾವರಿ ಇಲ್ಲದ ಕಂದಕದ “ಸಾಂಪ್ರದಾಯಿಕ ಅಡಿಕೆ ತೋಟ” ಮಾತ್ರ ಉಳಿಯುತ್ತದೆ. ಈ ಚಾನಲ್ಲೂ , ಬೋರು ಈ ವರ್ಷ ಕೆಲಸ ಮಾಡೋದು ಅನುಮಾನ. ಚಿಕ್ಕ ಪುಟ್ಟ ನದಿ ಹಳ್ಳಗಳು ಇನ್ನೆರಡು ತಿಂಗಳಲ್ಲಿ ಹರಿವು ನಿಲ್ಲಿಸಲಿದೆ.
ಈ ವರ್ಷ ಕೊನೆ (ಏಪ್ರಿಲ್ ಮೇ ) ತಿಂಗಳಲ್ಲಿ ಈ ಬಯಲು ಸೀಮೆಯ ಪ್ರದೇಶದ ಪ್ರಗತಿಪರ ಪ್ರಯೋಗಶೀಲ ಅಡಿಕೆ ಬೆಳೆಗಾರರ ಮಾರ್ಗದರ್ಶನ ಹೇಗಿರುತ್ತದೆ…?
ನಾನು ಖಂಡಿತವಾಗಿಯೂ ಕೇಡು ಬಯಸುತ್ತಿಲ್ಲ, ಜಗತ್ತಿನ ಪ್ರತಿ ಜೀವಿಗೂ ಅದರದ್ದೇ ಆದ ಹೊಂದಿಕೊಳ್ಳುವ ನಿಸರ್ಗ ಪ್ರದೇಶ ಇರುತ್ತದೆ. ಮನುಷ್ಯ ಇವತ್ತಿನ ತಂತ್ರಜ್ಞಾನ ಬಳಸಿ ಹಠ ಕಟ್ಟಿ ನಿಸರ್ಗಕ್ಕೆ ಸವಾಲೆಸೆದು ಕೃಷಿ ಮಾಡಬಹುದು.ಆದರೆ ಅದು ಯಶಸ್ವಿಯಾಗದು. ಅದಕ್ಕೇ ಮನುಷ್ಯ ಏನೇ ಮಾಡಿ ಸಾದಿಸಿದರೂ ನಿಸರ್ಗದ ವಿರುದ್ಧ ಗೆಲ್ಲಲಾರ. ನಾವು ನಿಸರ್ಗದೊಂದಿಗೆ ಸಹಬಾಳ್ವೆ ಮಾಡುವುದನ್ನ ಕಲಿಯಬೇಕು. ಮನುಷ್ಯ ಮಾಡಿದ ವನ್ಯ ನಾಶ ಸೇರಿದಂತೆ ನಿಸರ್ಗ ದ್ರೋಹಕ್ಕೆ ನಿಸರ್ಗ ಇದೀಗ ಅನಾವೃಷ್ಟಿಯ ಮೂಲಕ ಉತ್ತರ ನೀಡುತ್ತಿದೆ. ನಾವು ಅನುಭವಿಸಬೇಕು…ಅಷ್ಟೇ…!
ನಾವು ಮಲೆನಾಡು ಕರಾವಳಿಯ ರೈತರು ನಮ್ಮ ತಲೆಮಾರಿನಿಂದ ಬಂದ ಕೃಷಿ ಪದ್ದತಿ-ಹೈನುಗಾರಿಕೆಯನ್ನು ಉಳಿಸಿ ಬಳಸಿ ಬೆಳಸಿಕೊಂಡು ಹೋದರೆ ಸಾಕು ಅಷ್ಟೇ…