#agriculture| ರೈತರಿಗೆ ಸಾಲ ಮಾಡುವ ಅನಿವಾರ್ಯತೆ ಯಾಕೆ ಸೃಷ್ಟಿಯಾಗಿದೆ..? | ಅದನ್ನು ಸೃಷ್ಟಿಸಿದ್ದು ಯಾರು? ಉತ್ತೇಜನ ಕೊಟ್ಟವರು, ಈಗಲೂ ಕೊಡುತ್ತಿರುವವರು ಯಾರು? ಸರ್ಕಾರವೇ..? |

July 31, 2023
5:09 PM
ರೈತನಿಗೆ ಸಾಲ ಅನಿವಾರ್ಯ ಆದದ್ದು ಆಧುನಿಕ ಬೇಸಾಯ ಕ್ರಮದಿಂದ. ಯಾಂತ್ರೀಕರಣಗೊಂಡ ಬೇಸಾಯದಲ್ಲಿ ರೈತ ಯಂತ್ರಗಳನ್ನು ಬಳಸಲೇ ಬೇಕಾದ ಅಗತ್ಯವಿದೆ. ಉದಾಹರಣೆಗೆ ಕೀಟನಾಶಕ ಸಿಂಪರಿಸಲು ಸ್ಪ್ರೇಯರ್ ಪಂಪ್, ಆಳ ಉಳುಮೆಗೆ ಟ್ರ್ಯಾಕ್ಟರ್, ಒಕ್ಕಣೆಗೆ ಕೂಡ ಈಗ ಕೃಷಿಕರು ಯಂತ್ರಗಳನ್ನೇ ಅವಲಂಬಿಸಿದ್ದಾರೆ

ರೈತರಿಗೆ ಸಾಲ ಮಾಡುವ ಅನಿವಾರ್ಯತೆ ಯಾಕೆ ಸೃಷ್ಟಿಯಾಗಿದೆ. ಅದನ್ನು ಸೃಷ್ಟಿಸಿದ್ದು ಯಾರು? ಉತ್ತೇಜನ ಕೊಟ್ಟವರು, ಈಗಲೂ ಕೊಡುತ್ತಿರುವವರು ಯಾರು? ಸೌಲಭ್ಯದ ದೃಷ್ಟಿಕೋನದಲ್ಲಿ ಸರ್ಕಾರವೆ ಈ ಪರಿಪಾಠವನ್ನು ಹಾಕಿಕೊಟ್ಟಿದ್ದು. ಸಾಲದ ಮಿತಿಯನ್ನು ಹೆಚ್ಚಿಸುತ್ತ ಹೊರಟಿರುವುದು ಈ ಸರ್ಕಾರಗ‌ಳೇ….!

Advertisement
Advertisement

ಹೆಚ್ಚು ಸಾಲ ಎನ್ನುವುದು ಒಂದು ರೀತಿ ಉತ್ತೇಜನವೆ ಸರಿ. ವಿವಿಧ ಸೌಲಭ್ಯಗಳಿಗಾಗಿ ಕೊಡುವ ಸಹಾಯಧನ ಕೂಡ ಉತ್ತೇಜನವೆ ಹೊರತು ಸಂಪೂರ್ಣ ಸಹಾಯವೆ ಅಲ್ಲ! ರೈತನಿಗೆ ಸಾಲ ಅನಿವಾರ್ಯ ಆದದ್ದು ಆಧುನಿಕ ಬೇಸಾಯ ಕ್ರಮದಿಂದ. ಯಾಂತ್ರೀಕರಣಗೊಂಡ ಬೇಸಾಯದಲ್ಲಿ ರೈತ ಯಂತ್ರಗಳನ್ನು ಬಳಸಲೇ ಬೇಕಾದ ಅಗತ್ಯವಿದೆ. ಉದಾಹರಣೆಗೆ ಕೀಟನಾಶಕ ಸಿಂಪರಿಸಲು ಸ್ಪ್ರೇಯರ್ ಪಂಪ್, ಆಳ ಉಳುಮೆಗೆ ಟ್ರ್ಯಾಕ್ಟರ್, ಒಕ್ಕಣೆಗೆ ಕೂಡ ಈಗ ಕೃಷಿಕರು ಯಂತ್ರಗಳನ್ನೇ ಅವಲಂಬಿಸಿದ್ದಾರೆ. ಇನ್ನೊಂದೆಡೆ ಬೀಜಸ್ವಾಮಿತ್ವವನ್ನು ರೈತ ಕಳೆದುಕೊಂಡಿದ್ದಾನೆ. ಹೀಗಾಗಿ ಬೀಜ, ಗೊಬ್ಬರದ ಸಹಾಯಧನ ಕಡಿಮೆಗೊಳಿಸಲಾಗುತ್ತಿದೆ.

Advertisement

ಬೀಜಕ್ಕೆ ಸಹಾಯಧನ ಘೋಷಿಸಿದ ಬೆನ್ನಲ್ಲೆ ಕಂಪನಿಗಳು ಬೀಜದ ಬೆಲೆಯನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸುತ್ತವೆ. ಲಾಭ ಕಂಪನಿಗಳಿಗೆ ಹೋಗುತ್ತದೆ ಸರ್ಕಾರ ಸಹಾಯಧನ ನೀಡಿಯೂ ಕೂಡ ರೈತ ಬೀಜಕ್ಕೆ ಹೆಚ್ಚು ಬೆಲೆ ತೆರುತ್ತಿರುವುದು ಹೀಗೆ) ಮತ್ತು ಕೀಟ ನಾಶಕಗಳ ಬಳಕೆ ಅನಿವಾರ್ಯವಾಗಿರುವ ಈ ಸಂದರ್ಭದಲ್ಲಿ ಅವನು ಈ ಎಲ್ಲವಕ್ಕು ಹಣ ಖರ್ಚು ಮಾಡಲೇಬೇಕು. ಪ್ರತಿವರ್ಷವೂ ಇದಕ್ಕೆ ಪೂರಕವಾಗಿ ಅವನು ಬೀಜಗೊಬ್ಬರ ಕೀಟನಾಶಕಗಳನ್ನ ಕೊಳ್ಳಲೇ ಬೇಕಿದೆ‌.

ಯಾವುದೇ ಫೀಕಿನ ಇಳುವರಿ ಚೆನ್ನಾಗಿಯೇ ಬರಬಹುದು, ಅತಿವೃಷ್ಟಿ/ ಅನಾವೃಷ್ಟಿಗಳ ಪರಿಣಾಮ ಕನಿಷ್ಠ ವೂ ಆಗಬಹುದು. ಇದೆಲ್ಲರ ಹೊರತಾಗಿ ಬೆಳೆದ ಬೆಳೆಗೆ ಸೂಕ್ತ ಬೆಲೆಯೂ ಸಿಗದಿದ್ದರೆ ಈ ಎಲ್ಲದಕ್ಕೂ ಬಂಡವಾಳ ಹಾಕಿದ ರೈತ ಸಹಜವಾಗಿಯೆ ಸಾಲಗಾರನಾಗುತ್ತಾನೆ. ಏನೇ ಬೆಳೆದರೂ ರೈತ ಇವತ್ತು ಸಾಲಗಾರನಾಗಿಯೆ ಉಳಿಯುವಂಥ ಪರಸ್ಥಿತಿ ಇದೆ. ಅದರಲ್ಲೂ ದವಸ ಧಾನ್ಯಗಳನ್ನು ಬೆಳೆವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅಪ್ರಯೋಜಕವಾಗಿರುವ ಬೆಂಬಲಬೆಲೆ, ಅವೈಜ್ಞಾನಿಕ, ಅಸಮಾನ ಹಾಗೂ ಅನಿಯಮಿತವಾಗಿರುವ ಬೆಳೆವಿಮೆ ಎಲ್ಲ ಬೋಗಸ್ ಯೋಜನೆಗಳೆಂಬುದು ಸಾಬೀತಾಗಿದೆ. ಕೃಷಿಯ ಖರ್ಚುವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ ಅದೇ ಪ್ರಮಾಣದಲ್ಲಿ ಅವನ ಬೆಳೆಗಳಿಗೆ ನ್ಯಾಯಯುತ , ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ.

Advertisement

ಹೀಗೆ ನಿರಂತರ ನಷ್ಟದಲ್ಲೆ ಕೃಷಿಯನ್ನು ಸಂಭಾಳಿಸುತ್ತಿರುವ ಸಾವಿರಾರು ರೈತರು ತಮ್ಮ ಬದುಕನ್ನು ತಾವೇ ಶಪಿಸಿಕೊಳ್ಳುವಂತಾಗಿದೆ. ರೈತರ ಇಂಥ ನೂರಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊಂಡು ಕಾರ್ಯೋನ್ಮುಖವಾಗದ ಸರ್ಕಾರಗಳು ರೈತರ ಸಂಕಷ್ಟ ಹಾಗೂ ಸಾಲಮನ್ನಾದಂತಹ ವಿಷಯಗಳನ್ನು ಅಗ್ಗದ ಜನಪ್ರಿಯತೆ ಮತ್ತು ಚುನಾವಣೆಯ ಗಿಮಿಕ್ಕಿನ ಸಂಗತಿಯಾಗಿ ಪರಿಗಣಿಸಿರುವ ಪರಿಣಾಮ ರೈತರ ಆತ್ಮಹತ್ಯಾ ಸರಣಿ ನಿರಂತರವಾಗಿ ಮುಂದುವರೆದಿದೆ. ಇದು ಸಾಲಮನ್ನಾ ವನ್ನು ಅನಿವಾರ್ಯವಾಗಿಸಿದೆ. ಇಂಥ ಸಂದರ್ಭದಲ್ಲಿ ಸಾಲಮನ್ನಾ ಸರಿ ಎಂದಾದರೂ ಅದರ ಫಲ ಸಂಕಷ್ಟದಲ್ಲಿರುವ ನಿಜವಾದ ಅರ್ಹ ರೈತರಿಗೆ ತಲುಪುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಇದಕ್ಕೂ ಮುನ್ನ ರೈತ ಯಾರು ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮಲ್ಲಿ ಭೂಮಾಲಿಕ ರೈತರು ಇರುವಂತೆಯೆ ಭೂರಹಿತ ರೈತರು ಇದ್ದಾರೆ. ಸರ್ಕಾರದ ದೃಷ್ಟಿಯಲ್ಲಿ ಭೂಮಾಲಿಕರಷ್ಟೆ ರೈತರು. ಸರ್ಕಾರದ ಸೌಲಭ್ಯಗಳು ಹೆಚ್ಚಾಗಿ ದೊರಕುವುದೂ ಇವರಿಗೆ‌. ಸಣ್ಣ, ಅತಿ ಸಣ್ಣ ಹಿಡುವಳಿದಾರರು, ಮಧ್ಯಮ ಹಾಗೂ ದೊಡ್ಡ ಹಿಡುವಳಿದಾರರೆಂದು ರೈತರನ್ನು ವರ್ಗೀಕರಿಸಲಾಗಿದೆ. ಅತಿ ಸಣ್ಣ ರೈತರು ರೈತರಾಗಿರುವುದೇ ಅಪರೂಪ. ಅದೂ ನೀರಾವರಿ ಸೌಲಭ್ಯವಿದ್ದಲ್ಲಿ ಮಾತ್ರ ಇವರು ರೈತರಾಗಿರುತ್ತಾರೆ.

Advertisement

ಏಕೆಂದರೆ, ಜೀವನೋಪಾಯಕ್ಕಾಗಿ ಎರಡ್ಮೂರು ಎಕರೆ ಜಮೀನನ್ನು ನೆಚ್ಚುವ ಕಾಲಘಟ್ಟ ಕಳೆದು ಹೋಗಿದೆ. ಇಂಥವರು ಹೊಲವನ್ನು ಬೇರೆ ಯಾರಿಗೋ ಲಾವಣಿ/ ಕೋರಿಗೆ ಹಾಕಿರುತ್ತಾರೆ. ಇವರು ಕೂಲಿಕಾರರೂ ಆಗಿರಬಹುದು, ಬೇರೆ ಯಾವುದೇ ಉದ್ಯೋಗದಲ್ಲೂ ಇರಬಹುದು. ಆ ಜಮೀನಿನ ಮೇಲೆ ಸಾಲಸೌಲಭ್ಯ, ವಿಮೆ, ಸಹಾಯಧನ ಏನೇ ಬಂದರೂ ಅದಕ್ಕೆ ಇವರೆ ಹಕ್ಕುದಾರರು. ಲಾವಣಿ ಅಥವಾ ಕೋರು ಮಾಡುವ ರೈತ ಆ ವರ್ಷ ಅವನು ಬೆಳೆದ ಬೆಳೆಗೆ ಮಾತ್ರ ಹಕ್ಕುದಾರನಾಗಿರುತ್ತಾನೆ.

 

Advertisement

ಸರ್ಕಾರ ಮುಖ್ಯವಾಗಿ ಸಣ್ಣ ಮತ್ತು ಅತಿಸಣ್ಣ ರೈತರನ್ನೇ ತನ್ನ ಗಮನದಲ್ಲಿರಿಸಿಕೊಳ್ಳುವುದು ಸರಿಯೆ, ಆದರೆ ವಾಸ್ತವದಲ್ಲಿ ರೈತರೆ ಆಗಿರದ ಇಂಥ ಭೂಮಾಲಿಕರು ಅದರ ಫಲಾನುಭವಿಗಳಾಗಿರುತ್ತಾರೆ. ಮಕ್ಕಳ ಮದುವೆಗೊ ಮತ್ತೊಂದಕ್ಕೋ ಅವರು ಕೂಡ ಬ್ಯಾಂಕಿನಲ್ಲಿ ಸಾಲಮಾಡಿರುವ ಸಾಧ್ಯತೆಗಳು ಇದ್ದೇ ಇರುತ್ತವೆ. ಅಥವಾ ಕಡಿಮೆ ಬಡ್ಡಿದರದ ಕಾರಣ ಬ್ಯಾಂಕಿನಲ್ಲಿ ಸಾಲ ಪಡೆದು ಹೆಚ್ಚು ಬಡ್ಡಿದರದಲ್ಲಿ ಅದನ್ನು ಬೇರೆಯವರಿಗೆ ಕೊಡುವವರೂ ಇದ್ದಾರೆ. ಸಾಲ ಮಾಡಿ ನೀರಾವರಿಗಿಳಿದು ನಿರೀಕ್ಷಿತ ಆದಾಯ ಪಡೆಯದ ಇಂಥ ಅತಿಸಣ್ಣ ರೈತರೂ ಇವತ್ತು ಸಂಕಷ್ಟದಲ್ಲಿದ್ದಾರೆ.

ಇನ್ನು ನಾಲ್ಕೈದು ಎಕರೆ ಜಮೀನು ಉಳ್ಳವರೂ ಕೂಡ ಇವತ್ತು ರೈತರಾಗಿ ಉಳಿದಿಲ್ಲ. ಅಷ್ಟರಲ್ಲೂ ಜೀವನ ನಿರ್ವಹಣೆ ಕಷ್ಟದಾಯಕವೇ. ಆದರೆ, ಇವರಲ್ಲಿ ಕೆಲವರು ಬೇರೆಯವರ ಐದಾರು ಎಕರೆ ಜಮೀನನ್ನು ಲಾವಣಿಗೋ, ಕೋರಿಗೋ, ಹಣವಂತರಿದ್ದರೆ ಬಡ್ಡಿಯಲ್ಲೊ ಹಾಕಿಸಿಕೊಂಡು ಎರಡು ಎತ್ತಿಗೆ ಹೊಡೆಯಬಹುದಾದಷ್ಟು ಹೊಲಗಳನ್ನು ಉಳುಮೆ ಮಾಡುತ್ತಿರುತ್ತಾರೆ. ನಿಜಕ್ಕೂ ಸಂಕಷ್ಟದಲ್ಲಿ ಇರುವ ರೈತರು ಎಂದರೆ ಇವರೆ.

Advertisement

ಮಧ್ಯಮ ರೈತರದು ನಿಜಕ್ಕೂ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿ. ಸರ್ಕಾರದ ಸೌಲಭ್ಯಗಳು ಇವರಿಗೆ ಮುಟ್ಟುವುದು ಅಷ್ಟಕ್ಕಷ್ಟೇ. ಏನೇ ಮಾಡಿದರೂ ಸಾಲ ಮಾಡಿಯೇ ಮಾಡಬೇಕು. ಅದೊಂದು ಸಾಹಸವೇ ಸರಿ. ಹದಿನೈದು ಎಕರೆಯೊಳಗಿನ ಈ ರೈತರು ತಮ್ಮ ಅಸಹಾಯಕತೆಯ ಪರಿಣಾಮ ಎಲ್ಲವನ್ನೂ ಅನುಮಾನದಿಂದಲೇ ನೋಡುತ್ತಾರೆ. ಹೆಚ್ಚು ಬಂಡವಾಳ ಬೇಡುವ ಆಧುನಿಕ ಕೃಷಿಗಿಳಿದು ಟ್ರ್ಯಾಕ್ಟರ್ ಸೇರಿದಂತೆ ಯಾಂತ್ರೀಕರಣದ ಅನುಕೂಲಗಳನ್ನೂ ಪಡೆಯಲಾಗದೆ, ಪರಂಪರಾಗತ ಕೃಷಿಯನ್ನು ಕೈಬಿಡಲೂ ಆಗದೆ ಒಂದು ರೀತಿಯಲ್ಲಿ ಇವರದು ತ್ರಿಶಂಕು ಸ್ಥಿತಿ. ಆದರೂ ಇವರಲ್ಲಿ ಸೋತವರು ಇರುವಂತೆ ಗೆದ್ದವರೂ ಇದ್ದಾರೆ. ಹತ್ತು ಎಕರೆ ಜಮೀನು ಇರುವ ಇಷ್ಟಕ್ಕೆ ಏಕೆ ಹಂಚಿಕೆ ಮಾಡಿಕೊಳ್ಳುವುದು ಎಂದು ಸರ್ಕಾರದ ಸೌಲಭ್ಯಗಳಿಂದ ವಂಚಿತರಾದವರೆ ಹೆಚ್ಚು.

ಕಳೆದೆರಡು ದಶಕಗಳಿಂದ ನಿರಂತರ ನಡೆದಿರುವ ರೈತರ ಆತ್ಮಹತ್ಯಾ ಸರಣಿಯಲ್ಲಿ ಬಹುಶಃ ದೊಡ್ಡ ಹಿಡುವಳಿದಾರರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆಯೋ ಇಲ್ಲವೋ. ಏಕೆಂದರೆ ದೊಡ್ಡ ಹಿಡುವಳಿದಾರರಿಗೆ ಆಧುನಿಕ ಕೃಷಿ ಪದ್ಧತಿ ವರದಾನವೆ ಆಗಿದೆ‌. ಇವರು ಸಾಕಷ್ಟು ಸ್ಥಿತಿವಂತರೆ ಆಗಿರುವುದರಿಂದ ಟ್ರ್ಯಾಕ್ಟರ್, ಒಕ್ಕಣೆ ಯಂತ್ರ ಎಲ್ಲವನ್ನೂ ಹೊಂದಿರುತ್ತಾರೆ. ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಬೇರೆ ರೈತರಿಗಾಗಿ ಈ ಯಂತ್ರಗಳನ್ನು ದುಡಿಸಿ ಬಾಡಿಗೆ ಪಡೆಯುತ್ತಾರೆ.

Advertisement

ಎಲ್ಲ ಅನುಕೂಲತೆಗಳನ್ನೂ ಹೊಂದಿರುವ ಇವರ ಕೃಷಿ ಚಟುವಟಿಕೆಗಳು ಸಮಯಾನುಸಾರ ಸಂಪೂರ್ಣಗೊಂಡು ಅದು ಉತ್ತಮ ಬೆಳೆಗೆ ಕಾರಣವಾಗುತ್ತದೆ. ದೊಡ್ಡ ಹಿಡುವಳಿದಾರರು ಅವಿಭಕ್ತ ಕುಟುಂಬವಾಗಿರುವುದೇ ಹೆಚ್ಚು. ಈ ಕುಟುಂಬದಲ್ಲಿ ಯಂತ್ರಗಳ ಸಹಾಯದೊಂದಿಗೆ ಕೆಲವರು ಕೃಷಿ ಕಾಯಕ ಮಾಡಿದರೆ, ಇನ್ನೂ ಅನೇಕ ಸದಸ್ಯರು ಬೇರೆ ಬೇರೆ ಉದ್ಯೋಗ, ಹುದ್ದೆಗಳಲ್ಲೂ ಇರುತ್ತಾರೆ. ಆದಾಗ್ಯೂ ಭೂಮಿಯನ್ನು ಮಕ್ಕಳು ಮೊಮ್ಮಕ್ಕಳಿಗೂ ಹಂಚಿಕೆ ಮಾಡಿ ಸಣ್ಢ, ಅತಿ ಸಣ್ಣ ಹಿಡುವಳಿದಾರರೆಂದು ಗುರುತಿಸಿಕೊಂಡು ಸರ್ಕಾರದ ಎಲ್ಲ ಸೌಲಭ್ಯಗಳ ಫಲಾನುಭವಿಗಳಾಗಿರುತ್ತಾರೆ. ಇತ್ತೀಚಿನ ಬೆಳೆವಿಮೆಯಂತಹ ಯೋಜನೆಯ ಗರಿಷ್ಟ ಫಲಾನುಭವಿಗಳೂ ಇವರೆ ಎಂದರೆ ತಪ್ಪಾಗಲಾರದು!

ಬೇರೆ ರಾಜ್ಯಗಳಿಂದ ಬಂದ ವಲಸೆ ವ್ಯಾಪಾರಿಗಳು, ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿ ಅಪಾರ ಹಣ ಗಳಿಸಿ, ಪಟ್ಟಣಗಳಲ್ಲಿ ನೆಲಸಿದವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇತ್ತೀಚೆಗೆ ಭೂಮಿಯನ್ನು ಖರೀದಿಸುತಿದ್ದಾರೆ. ಈ ಭೂಮಿಗಳ ಸಾಗುವಳಿ ಮಾಡುವವರು ಹಳ್ಳಿಯಲ್ಲಿನ ಸಣ್ಣ ರೈತರು ಇಲ್ಲವೇ ಭೂರಹಿತ ರೈತರು! ಆದರೆ ಸರ್ಕಾರದ ದೃಷ್ಟಿಯಲ್ಲಿ ಇಂಥ ಭೂಮಾಲಿಕರೇ ರೈತರು. ಅವರೂ ಸರ್ಕಾರದ ಎಲ್ಲ ಸೌಲಭ್ಯಗಳ ಫಲಾನುಭವಿಗಳೇ!

Advertisement

ಇದೆಲ್ಲ ಸಂಗತಿಗಳನ್ನು ಪರ್ಯಾಲೋಚಿಸದೆ ಸೌಲಭ್ಯಗಳನ್ನು ಬೇಕಾಬಿಟ್ಟಿ ನೀಡುವ ನಮ್ಮ ಸರ್ಕಾರಗಳ ಕಣ್ಣು ಕುರುಡೋ ಅಥವಾ ಅದು ಜಾಣ ಕುರುಡೊ ತಿಳಿಯಬೇಕಾಗಿದೆ. ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬ ಗ್ರಾಮ ಲೆಕ್ಕಾಧಿಕಾರಿಯನ್ನು ನೇಮಿಸುವುದು, ಅವನು ಆಯಾ ಗ್ರಾಮದಲ್ಲೇ ವಾಸಿಸುವಂತೆ ನೋಡಿಕೊಳ್ಳುವುದು ಸಾಧ್ಯವಾಗಬೇಕು. ಗ್ರಾಮಲೆಕ್ಕಾಧಿಕಾರಿ ಅಥವಾ ಇಂಥ ಗ್ರಾಮಾಧಿಕಾರಿ ಕೆಲಸ ಒಬ್ಬ ತಹಶೀಲ್ದಾರರ ಕೆಲಸದಷ್ಟೆ ಮಹತ್ವದ್ದು ಎಂದು ಪರಿಗಣಿಸಿ ಅದಕ್ಕನುಗುಣವಾಗಿಯೆ ಅವರಿಗೆ ವೇತನ ನೀಡಬೇಕು. ಇವರು ಆಗಿಂದಾಗ್ಗೆ ವಾಸ್ತವಕ್ಕೆ ಹತ್ತಿರವಾದ ಸಂಗತಿಗಳನ್ನು ದಾಖಲಿಸುತ್ತಿರಬೇಕು. ಆಗ ಮಾತ್ರ ಸರ್ಕಾರದ ಸೌಲಭ್ಯಗಳು ಅರ್ಹ, ಯೋಗ್ಯ ಫಲಾನುಭವಿಗಳಿಗೆ ತಲುಪಲು ಸಾಧ್ಯ.

ಸಧ್ಯದ ಸ್ಥಿತಿ ಹೀಗಿಲ್ಲ. ಎಲ್ಲೋ ಪಟ್ಟಣ, ನಗರ, ತಾಲೂಕು ಕೇಂದ್ರದಲ್ಲೇ ವಾಸಿಸುವ ಗ್ರಾಮಲೆಕ್ಕಾಧಿಕಾರಿಗಳನ್ನು ಭ್ರಷ್ಟಾಚಾರದ ಕಳ್ಳಗಿಂಡಿ ಎಂದು ಕರೆಯಬೇಕಾದಂತಹ ಸ್ಥಿತಿ ಇದೆ. ಜನರೆ ಇವರನ್ನು ಹುಡುಕಿಕೊಂಡು ಹೋಗಿ ಇವರ ಕೈ ಬೆಚ್ಚಗೆ ಮಾಡಿದರೆ ಅವರು ಹೇಳಿದ್ದನ್ನೇ ಇವರು ಬರೆದು ಬಿಡುತ್ತಾರೆ. ಇಂಥ ವಿಷಮ ಸನ್ನಿವೇಶದಲ್ಲಿ ರೈತರಿಗೆ ನೀಡುವ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸರಿಯಾಗಿ, ಸಮರ್ಪಕವಾಗಿ ಸರಿಸಮವಾಗಿ ದೊರಕುತ್ತದೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ.

Advertisement

– ಚಂಸು ಪಾಟೀಲ, ವ್ಯಾಟ್ಸಪ್ ಸಂಗ್ರಹ

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |
May 4, 2024
10:32 AM
by: ದ ರೂರಲ್ ಮಿರರ್.ಕಾಂ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror