ಜಗತ್ತಿನ ಎಲ್ಲ ಜೀವಿಗಳ(creature)ಆಸ್ತಿತ್ವಕ್ಕೆ ಕಾರಣವೇ ಮಣ್ಣು(Soil). ಆದರೆ ಅತ್ಯಂತ ಹೆಚ್ಚು ಪೆಟ್ಟು ತಿನ್ನುವ ವಸ್ತು ಜಗತ್ತಿನಲ್ಲಿ “ಮಣ್ಣು” ಮಾತ್ರ. ಅಗೆಯುತ್ತೇವೆ, ಕೊಚ್ಚುತ್ತೇವೆ, ಗೀರುತ್ತೇವೆ , ತೋಡುತ್ತೇವೆ, ತಳ್ಳುತ್ತೇವೆ, ಸುಡುತ್ತೇವೆ, ಗಣಿಗಾರಿಕೆ ಮಾಡುತ್ತೇವೆ. ಅದರ ಮೇಲೆ ಕಸ(Waste) ಸುರಿಯುತ್ತೇವೆ. ಬಿಸಿ(Heat) ಸುರಿಯುತ್ತೇವೆ, ವಿಕಿರಣ ಸುರಿಯುತ್ತೇವೆ ವಿಷ(Poisson) ತುಂಬುತ್ತೇವೆ. ಆದರೆ ಜೀವ ತುಂಬುವವರು ಬಹಳ ಕಡಿಮೆ.
ಜೀವ ತುಂಬುವುದು ಹೇಗೆ?: ಕಲ್ಲು ಮಣ್ಣಾಗಲು ಕೊಟ್ಯಾಂತರ ವರ್ಷಗಳು ಬೇಕು. ಮಣ್ಣು ಎಂದರೆ ಅದು ನಿರ್ಜೀವ ವಸ್ತು ಅಲ್ಲ. ಜೀವ ಖಜಾನೆ. ಮಣ್ಣಿದ್ದಲ್ಲಿ ಜೀವ ಸೃಷ್ಟಿ. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಬದುಕಿದ್ದರೆ ಮಾತ್ರ ನಮ್ಮ ಬದುಕು .ಆರೋಗ್ಯವಂತ ಮಣ್ಣಿನಲ್ಲಿ ಮಾತ್ರ ನಮ್ಮ ಆಹಾರ, ಜೀವದ್ರವ ಶುದ್ದ ನೀರು ಲಭ್ಯ. ನಾವು ಅಭಿವೃದ್ಧಿ ಕಾರ್ಯಗಳ ನಿಮಿತ್ತ ಅರಣ್ಯ ನಾಶ, ಗಣಿಗಾರಿಕೆ, ರಾಸಾಯನಿಕ ಗೊಬ್ಬರ ಉಪಯೋಗ, ಕೆಮಿಕಲ್ ಉತ್ಪಾದನಾ ಘಟಕಗಳು, ಗೊಮಾಳಗಳ ನಾಶ, ತೈಲ ಸಂಸ್ಕರಣೆ ಘಟಕಗಳು, ಇನ್ನಿತರ ನೂರಾರು ಚಟುವಟಿಕೆಗಳಿಂದ ಮಣ್ಣಿನ ಸಾರಸತ್ವ ನಿಸ್ಸಾರವಾಗಿದ್ದು ನಮ್ಮ ಭವಿಷ್ಯ ಸಂಕಟಕ್ಕೆ ಸಿಲುಕಿದೆ.
ಜಲಚಕ್ರ, ಇಂಗಾಲಚಕ್ರ , ಸಾರಜನಕ ಚಕ್ರ , ಜೀವಚಕ್ರ ಸಂಕಟಕ್ಕೆ ಸಿಲುಕುತ್ತಿದೆ. ಹಾಗಾಗಿ ಮಣ್ಣಿನ ರಕ್ಷಣೆ ಇಂದಿನ , ಮುಂದಿನ, ಎಂದೆಂದಿನ ಆದ್ಯತೆ. ಮಣ್ಣು ಆರೋಗ್ಯವಾಗಿದ್ದರಷ್ಟೆ ಜೀವ ಜಗತ್ತು ಸಮೃದ್ಧವಾಗಿರಲು ಸಾಧ್ಯ. ಮಣ್ಣು ತೀರ ಕ್ಷುಲ್ಲಕ, ಅದರಲ್ಲೇನಿದೆ ಮಣ್ಣು, ಅವನಿಗೇನು ಗೊತ್ತು ” ಮಣ್ಣಾಂಗಟ್ಟಿ ” ಎಂಬ ಉಡಾಫೆಯಿಂದ ಸಂರಕ್ಷಣೆ ಮಾಡದಿದ್ದರೆ ಜೀವಸಂಕುಲ ಮಣ್ಣಿನಲ್ಲಿ ಲೀನವಾಗುವುದು ಅಷ್ಟೇ ಸತ್ಯ
ನಾಗೇಶ್ ಹೆಗಡೆಯವರ ” ಮಣ್ಣೆಂಬ ಪುಣ್ಯ ಕಾಲ್ಕೆಳಗೆ” ಲೇಖನ ಆಧರಿಸಿದ ಸಂಕ್ಷಿಪ್ತ ರೂಪ.