ಮೇ ಮೊದಲ ವಾರದಲ್ಲಿ ಏರು ಗತಿಯಲ್ಲಿ ಸಾಗಿದ ಅಡಿಕೆ ಧಾರಣೆ ಬಳಿಕ ಯುದ್ಧದ ವಾತಾವರಣದಲ್ಲಿ ಒಮ್ಮೆಲೇ ಇಳಿಕೆಯಾಗಿ ಪುನಃ ಕದನ ವಿರಾಮ ಆದ ಬಳಿಕ ಸ್ವಲ್ಪ ಚೇತರಿಕೆಯನ್ನು ತೋರಿಸಿದರೂ ಇದೀಗ ಇಳಿಕೆಯತ್ತ ಮುಖ ಮಾಡಿದೆ.ಈ ನಿಟ್ಟಿನಲ್ಲಿ ಈ ಏರು ಪೇರು ಯಾಕೆ ಎಂಬುದರ ಬಗ್ಗೆ ಬೆಳೆಗಾರರು ತಿಳಿಯಬೇಕಾದ ಹಲವು ವಿಚಾರಗಳಿವೆ.ಇದರೊಂದಿಗೆ ಮಾರುಕಟ್ಟೆ ಮುಂದೇನಾಗಬಹುದು ಎಂಬುದೂ ಇಲ್ಲಿ ಕುತೂಹಲ ಇದ್ದದೆ. ಈ ನಿಟ್ಟಿನಲ್ಲಿ ಕೆಳಗೆ ಹೆಸರಿಸಿದ ಅಂಶಗಳು ಅದಕ್ಕೆ ಉತ್ತರ ಕೊಡಬಹುದು.…..ಮುಂದೆ ಓದಿ….
ಯಾವುದೇ ಉತ್ಪನ್ನವಾಗಲಿ ಸೇವೆಯಾಗಲಿ ಇವುಗಳ ಮೌಲ್ಯ ನಿರ್ಧಾರವಾಗುವುದು ಅವುಗಳ ಬೇಡಿಕೆ ಮತ್ತು ಪೂರೈಕೆ ಆಧಾರದಲ್ಲಿ.ಇಲ್ಲಿ ಅಡಿಕೆ ಧಾರಣೆ ಕೂಡ ಹೀಗೇ ಆಗುವುದು.ಇಲ್ಲಿ ಬೇಡಿಕೆ ಮತ್ತು ಪೂರೈಕೆಗಳು ಹೇಗೆ ನಿರ್ಧಾರ ಆಗುತ್ತದೆ ಎಂಬುದನ್ನು ನೋಡುವುದಾದರೆ…
ಬೇಡಿಕೆ : ವಿವಿಧ ಗಾತ್ರದ ಉತ್ತಮ ಗುಣಮಟ್ಟದ ಚಾಲಿ, ಕೆಳದರ್ಜೆಯ ವಿವಿಧ ರೂಪದ ಚಾಲಿ ಮತ್ತು ವಿವಿಧ ರೂಪದ ಕೆಂಪಡಿಕೆಗೆ ದೇಶ ವಿದೇಶಗಳಲ್ಲಿ ಇಂದು ಬೇಡಿಕೆ ಇದೆ.ಇವನ್ನು ಮೂಲ ರೂಪದಲ್ಲಿ ಇಲ್ಲವೇ ಹುರಿದ ರೂಪದಲ್ಲಿ ಅಥವಾ ಮೌಲ್ಯವರ್ಧಿತ ರೂಪದಲ್ಲಿ ಗ್ರಾಹಕರು ಬಳಕೆ ಮಾಡುತ್ತಾರೆ. ಉತ್ಪಾದನಾ ಪ್ರದೇಶದಿಂದ ಹೋಗುವ ಅಡಿಕೆ ಗ್ರಾಹಕ ಪ್ರದೇಶದಲ್ಲಿ ಮೌಲ್ಯವರ್ಧನೆಗೆ ಒಳಪಟ್ಟು ವಿವಿಧ ರೂಪದಲ್ಲಿ ಗ್ರಾಹಕರ ಹಂತಕ್ಕೆ ತಲಪುವುದು ಸರ್ವೇ ಸಾಮಾನ್ಯ. ಅಡಿಕೆಗೆ ಬೇಡಿಕೆ ವರ್ಷ ಪೂರ್ತಿ ಇದ್ದು ಇದರಿಂದಾಗಿ ಇದರ ಶೇಖರಣೆ ದರ ಕಡಿಮೆ ಇದ್ದಾಗ ಹೆಚ್ಚಾಗಿ ಇರುತ್ತದೆ.
ಇನ್ನು ಅಡಿಕೆಯ ಬಳಕೆ ಹೆಚ್ಚಾಗಿ ಒಂದು ಚಟವಾಗಿ ಆಗುತ್ತಿದ್ದು ಪರಿಣಾಮವಾಗಿ ಇದರ ಬೆಲೆ ಬಗ್ಗೆ ಗ್ರಾಹಕ ತಲೆ ಕೆಡಿಸಿಕೊಳ್ಳುವುದಿಲ್ಲ.ಆದ್ದರಿಂದ ಇದರ ಖರಿದಾರರು ಇದಕ್ಕೆ ಹೆಚ್ಚಿನ ಬೇಡಿಕೆ ಸಲ್ಲಿಸುತ್ತಾರೆ.ಒಂದೊಮ್ಮೆ ಆಂತರಿಕವಾಗಿ ಇದರ ಲಭ್ಯತೆ ಕಡಿಮೆ ಆದಾಗ ಅವರು ಆಮದಿಗೆ ಮುಂದಾಗುತ್ತಾರೆ. ಇಸ್ಟ್ಟು ಮಾತ್ರವಲ್ಲದೆ ಆಂತರಿಕವಾಗಿ ದರ ಹೆಚ್ಚುತ್ತಿರುವಾಗ ವಿದೇಶದಿಂದ ಕಳಪೆ ಗುಣಮಟ್ಟದ ಅಡಿಕೆ ಆಮದು ಮಾಡಿ ಇಲ್ಲಿ ಕಲಬೆರಕೆ ಮಾಡಲು ಮುಂದಾಗುತ್ತಾರೆ.ಪರಿಣಾಮವಾಗಿ ಆಂತರಿಕವಾಗಿ ದರ ಏರು ಪೇರು ಆಗುವುದು ಸಹಜ.
ವಿಶ್ವದಲ್ಲಿ ಅತೀ ಹೆಚ್ಚು ಅಡಿಕೆ ಬಳಸುವ ದೇಶ ಭಾರತ.ಇದರ ಉತ್ಪಾದನೆ ನಮ್ಮಲ್ಲಿ ಹೆಚ್ಚಾಗುತ್ತಾ ಹೋದಂತೆ ಬಳಕೆಯೂ ಹೆಚ್ಚಾಗಿದೆ.ಆಂತರಿಕವಾಗಿ ಸುಮಾರು ಹದಿನಾರು ಲಕ್ಷ ಟನ್ ಉತ್ಪಾದನೆ ಆಗಿ ಅದೂ ಸಾಲದೆಂಬಂತೆ ಒಂದರಿಂದ ಎರಡು ಲಕ್ಷ ಟನ್ ಆಮದಾದರೂ ಈ ತನಕ ಟೊಮೋಟೊ ಮೆಣಸು ಮತ್ತಿತರ ತರಕಾರಿ ಹಣ್ಣುಗಳಂತೆ ರಸ್ತೆಗೆ ಚೆಲ್ಲಿದ ಉದಾಹರಣೆಗಳಿಲ್ಲ.
ಇನ್ನು ಉತ್ಪಾದನಾ ವೆಚ್ಚ ಹೆಚ್ಚಾಗಿ ನಿರೀಕ್ಷಿತ ಧಾರಣೆ ದೊರಕದೆ ಇದ್ದ ಸಂದರ್ಭಗಳು ಸಾಕಷ್ಟು ಇವೆ. ಆದರೆ ಆಮದು ಹೆಚ್ಚಾದಂತೆ ಉತ್ತಮ ಗುಣಮಟ್ಟದ ಚಾಲಿ ಅಡಿಕೆಯ ಧಾರಣೆಯ ಹೆಚ್ಚಳ ಹಲವು ವರ್ಷಗಳಲ್ಲಿ ಆಗಿದ್ದು ಇನ್ನೊಂದು ಬದಿಯಲ್ಲಿ ಕೆಳ ದರ್ಜೆಯ ಅಡಿಕೆಯ ಧಾರಣೆ ಕುಸಿದದ್ದು ಇದೆ.ಇವೆಲ್ಲಾ ಆಂತರಿಕ ಬೇಡಿಕೆಯಲ್ಲಗುವ ಬದಲಾವಣೆಗೆ ಅನುಗುಣವಾಗಿ ಇರುತ್ತದೆ.
ಪೂರೈಕೆ : ಅಡಿಕೆಯ ಪೂರೈಕೆ ನಿರ್ಧಾರ ಆಗುವುದು ಒಟ್ಟು ಉತ್ಪಾದನೆಯ ಆಧಾರದಲ್ಲಿ.ಇದನ್ನು ಮುಖ್ಯವಾಗಿ ನಿರ್ಧರಿಸುವುದು ಪ್ರಕೃತಿ.ಅತಿವೃಷ್ಟಿ ಮತ್ತು ಅನಾವೃಷ್ಟ್ಟಿಗಳು ಪೂರೈಕೆ ಅನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎರಡನೆಯದಾಗಿ ಬೆಳೆಗಾರರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಪೂರೈಕೆ ಏರು ಪೇರು ಆಗುವುದು ಸಹಜ.ಬೆಳೆಗಾರರ ಸಹನಾ ಶಕ್ತಿ ಮತ್ತು ಇನ್ನಿತರೇ ಆದಾಯ ಇದನ್ನು ನಿರ್ಧರಿಸುತ್ತದೆ.ಇವರ ಸಹನಾ ಶಕ್ತಿ ಹೆಚ್ಚಾದಂತೆ ಮಾರುಕಟ್ಟೆಗೆ ಬರುವ ಅಡಿಕೆ ಪ್ರಮಾಣ ಕಡಿಮೆ ಆಗುತ್ತದೆ.ಇದು ಧಾರಣೆ ಏರಿಕೆಗೆ ಅವಕಾಶ ಕಲ್ಪಿಸುತ್ತದೆ.
ಇನ್ನು ಧಾರಣೆಯ ಪ್ರವೃತ್ತಿಗೆ ಅನುಗುಣವಾಗಿ ಪೂರೈಕೆಯೂ ಬದಲಾಗುತ್ತದೆ.ಸಾಮಾನ್ಯವಾಗಿ ಧಾರಣೆ ಏರು ಪೇರು ಯಾವಾಗ ಯಾವ ಸಂದರ್ಭದಲ್ಲಿ ಆಗುತ್ತದೆ ಎಂಬ ಮಾಹಿತಿ ಬೆಳೆಗಾರರಿಗೆ ಇದ್ದಾಗ ಮಾರುಕಟ್ಟೆಗೆ ಬಿಡುವ ಪ್ರಮಾಣ ಬದಲಾಗುತ್ತದೆ.
ಇದರೊಂದಿಗೆ ದರ ಕುಸಿತದ ವಾತಾವರಣ ಕಂಡು ಬಂದಾಗ ಒತ್ತಡದಿಂದಾಗಿ ಮಾರುಕಟ್ಟೆಗೆ ಅಡಿಕೆ ರಾಶಿ ಬೀಳುವುದು ಸಾಮಾನ್ಯ ಸಂಗತಿ ಆಗಿದೆ.
ಬೇಡಿಕೆ ಮತ್ತು ಪೂರೈಕೆಯನ್ನು ಬದಲಾಯಿಸಬಹುದಾದ ಇತರ ಅಂಶಗಳು. ಬೇಡಿಕೆಯಲ್ಲಿ ಬದಲಾವಣೆಗಳನ್ನು ತರಬಹುದಾದ ಇತರ ಅಂಶಗಳೆಂದರೆ ಯುದ್ಧದ ಭೀತಿ, ಸರಕಾರದ ಮತ್ತು ಅಂತರಾಷ್ಟ್ರೀಯ ನೀತಿಗಳು, ಗೊಂದಲಗಳು,ಅಪರಿಪೂರ್ಣ ಮಾಹಿತಿಗಳು,ಹಣಕಾಸಿನ ಸಮಸ್ಯೆಗಳು, ಷೇರು ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳು ಗುಣ ಮಟ್ಟದಲ್ಲಾಗುವ ಏರು ಪೇರು ಇತ್ಯಾದಿಗಳು.
ಇನ್ನು ಪೂರೈಕೆಯಲ್ಲಿ ಆಗುವ ಬದಲಾವಣೆಗಳು ಮಾಹಿತಿಯ ಕೊರತೆ,ಮಾರುಕಟ್ಟೆಯಲ್ಲಿ ಆಗುವ ಏರು ಪೇರು ಇದರ ಭೀತಿ ಮತ್ತಿತರ ಒತ್ತಡಗಳು.
ಯುದ್ಧದ ವಾತಾವರಣ, ಭೂಕಂಪ, ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು, ಪ್ರಾಕೃತಿಕ ಅಸಮತೋಲನ ಅಡಿಕೆಯ ಮೇಲೆ ಅಪವಾದಗಳು ಇತ್ಯಾದಿಗಳು 1947ರಿಂದ ಹಿಡಿದು ಈ ತನಕ ಆಗಿಂದಾಗ್ಗೆ ಕಂಡು ಬಂದ ಕಾರಣ ಅಡಿಕೆ ಧಾರಣೆ ಕೂಡ ಏರಿಳಿತಗಳನ್ನು ಕಂಡಿದೆ.ಆದರೆ ಇವೆಲ್ಲಾ ತಾತ್ಕಾಲಿಕ ಆಗಿದ್ಧವೇ ಹೊರತು ದೀರ್ಘ ಕಾಲ ಕಂಡು ಬಂದಿಲ್ಲ.
ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ ಬೇಡಿಕೆ ಇದೆ.ಇಲ್ಲಿ ಧಾರಣೆ ಏರು ಪೇರು ಆಗುವುದು ಒಂದು ಸಹಜ ಪ್ರಕ್ರಿಯೆ.ಇಲ್ಲಿ ಮಾರುಕಟ್ಟೆಯಲ್ಲಿ ಭಾವನೆಗಳು, ಊಹೆಗಳು ಇತ್ಯಾದಿಗಳು ದರ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು. ಅಡಿಕೆ ಒಂದು ದೀರ್ಘ ಕಾಲ ಉಳಿಯಬಹುದಾದ ಉತ್ಪನ್ನ ಆದ್ದರಿಂದ ಬೆಳೆಗಾರರು ದರ ಇಳಿಕೆ ಆದಾಗ ಆತುರದಿಂದ ಮಾರುಕಟ್ಟೆಗೆ ಲಗ್ಗೆ ಇಡುವುದರ ಬದಲು ಅಗತ್ಯಕ್ಕೆ ಅನುಗುಣವಾಗಿ ಪೂರೈಕೆ ಮಾಡುವ ಮೂಲಕ ನಿರೀಕ್ಷಿತ ಪ್ರತಿಫಲ ಗಳಿಸಿಕೊಳ್ಳಬಹುದು.ಇದರೊಂದಿಗೆ ಧಾರಣೆ ಏರುಗತಿ ತೋರಿಸುವಾಗ ಅತಿಯಾದ ಆಸೆಯನ್ನು ಇಟ್ಟುಕೊಳ್ಳದೆ ಹಂತ ಹಂತವಾಗಿ ಮಾರುಕಟ್ಟೆ ಪ್ರವೇಶಿಸಿಕೊಳ್ಳುವುದು ಒಳಿತು.
ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತದ ಪ್ರವೃತ್ತಿ 2020ರ ತನಕ ಒಂದರಿಂದ ಒಂದೂವರೆ ತಿಂಗಳುಗಳದ್ದಾಗಿದ್ದಾರೆ ಆ ಬಳಿಕ ಇದು ಹದಿನೈದು ದಿನಗಳಿಂದ ಒಂದು ತಿಂಗಳು ತನಕ ಆಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಇಲ್ಲಿ ಕಂಡು ಬರುತ್ತಿರುವ ಹಣಕಾಸಿನ ಸಮಸ್ಯೆಗಳು ಮತ್ತು ಗೊಂದಲಗಳು ಹೊರತು ಬೇಡಿಕೆಯೇ ಇಲ್ಲವೆಂದಲ್ಲ ಎನ್ನುವುದನ್ನು ಕೃಷಿಕರು ಗಮನಿಸಿಕೊಳ್ಳಬೇಕು.