ಮತ್ತೆ ಮತ್ತೆ ಅಡಿಕೆಯ ಕ್ಯಾನ್ಸರ್‌ ಸುದ್ದಿ | ಆತಂಕ ಏಕೆಂದರೆ, ಭಾರತದ ಅರ್ಧ ಭಾಗದಲ್ಲಿದೆ ಅಡಿಕೆ ಕೃಷಿ |

March 25, 2025
8:30 AM
ಈ ಬಾರಿ ಮತ್ತೆ ಅಡಿಕೆಯ ಹಾನಿಕಾರಕ ಅಂಶದ ಬಗ್ಗೆ WHO ಉಲ್ಲೇಖಿಸಿದೆ. ಪ್ರತೀ ಬಾರಿ ಅಡಿಕೆ ಹಾನಿಕಾರಕ ಎನ್ನುವುದನ್ನು ದಾಖಲಿಸಲಾಗುತ್ತದೆ. ವಾಸ್ತವದಲ್ಲಿ ಅಡಿಕೆ ಹಾನಿಕಾರಕವಲ್ಲ ಎನ್ನುವ ಅಂಶವನ್ನೂ ಎಲ್ಲೂ ದಾಖಲಿಸಲಾಗುತ್ತಿಲ್ಲ. ಇಂತಹ ಸಮಯದಲ್ಲಿ ಅಡಿಕೆಯ ಬಗ್ಗೆ ಸೂಕ್ತವಾದ ಕ್ರಮ ಆಗಬೇಕಾಗಿದೆ. ಅಡಿಕೆ ಬೆಳೆಯ ಮೇಲಿನ ಆತಂಕ ದೂರವಾಗಬೇಕಿದೆ.

ವಿಶ್ವ ಆರೋಗ್ಯ ಸಂಸ್ಥೆ(WHO)ಯು ಕ್ಯಾನ್ಸರ್‌ ವಿಷಯ ಬಂದಾಗ ಈಚೆಗೆ ಮತ್ತೆ ಅಡಿಕೆಯ ಸುದ್ದಿಯನ್ನು ಎತ್ತಿದೆ.  ಬಾಯಿ ಕ್ಯಾನ್ಸರ್‌ಗೆ ಹೊಗೆರಹಿತ ತಂಬಾಕು ಅಥವಾ ಅಡಿಕೆಯು ಕಾರಣವಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲ, 2030 ರ ವೇಳೆಗೆ  ಬಾಯಿಯ ಆರೋಗ್ಯದ ಪ್ರಗತಿಯನ್ನು ವೇಗಗೊಳಿಸುವಲ್ಲಿ ಎಲ್ಲಾ ದೇಶಗಳು ಗಮನಹರಿಸಬೇಕು ಎಂದಿದೆ.………ಮುಂದೆ ಓದಿ……..

Advertisement

WHOದ ಆಗ್ನೇಯ ಏಷ್ಯಾ ಪ್ರದೇಶವು “ವಿಶ್ವ ಬಾಯಿ ಆರೋಗ್ಯ ದಿನ” ವನ್ನು A Happy Mouth is a Happy Mind ಹೆಸರಿನಲ್ಲಿ ಈಚೆಗೆ ಆಚರಿಸಿತು. ಈ ಸಂದರ್ಭ ಸಾಮಾನ್ಯವಾಗಿ ಆರೋಗ್ಯದ ಮುಖ್ಯ ಸೂಚಕವಾಗಿ, ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾರ್ವಜನಿಕರನ್ನು ಗಮನಸೆಳೆಯುತ್ತದೆ. ಬಾಯಿಯ ಕಾಯಿಲೆಗಳು ಸಾಂಕ್ರಾಮಿಕವಲ್ಲದ ಕಾಯಿಲೆಗಳಾಗಿವೆ. 3.5 ಶತಕೋಟಿ ಜನರು ಬಳಲುತ್ತಿರುವ ಪ್ರಪಂಚದಲ್ಲಿ ಅತ್ಯಂತ ಸಾಮಾನ್ಯ ಕಾಯಿಲೆ ಇದಾಗಿದೆ.  ಅಂದರೆ ಬಾಯಿಯ ಆರೋಗ್ಯವಿಲ್ಲದೆ ಆರೋಗ್ಯವಿಲ್ಲ ಎಂದು ಕಳೆದ ಬಾರಿಯ ಜಾಗತಿಕ ಆರೋಗ್ಯ ಸಭೆಯಲ್ಲಿ WHO ಅಂಗೀಕರಿಸಿತ್ತು. ಹಾಗಾಗಿ ಈ ಬಾರಿ ಬಾಯಿಯ ಆರೋಗ್ಯದ ಬಗ್ಗೆ WHO  ಕಾಳಜಿ ವಹಿಸಿದೆ. ಈ ವೇಳೆ ಬಾಯಿಗೆ ಸಂಬಂಧಿಸಿದ ರೋಗಗಳಲ್ಲಿ ಏಷ್ಯಾವು ಅತೀ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿದೆ ಎಂದು ವರದಿ ಹೇಳಿದೆ. ಅಂದರೆ ಸುಮಾರು 900 ಮಿಲಿಯನ್ ಬಾಯಿಯ ಕಾಯಿಲೆಗಳ ಪ್ರಕರಣಗಳು ಇವೆ.  ಪ್ರಪಂಚದಲ್ಲಿನ ಅತೀ ಹೆಚ್ಚು ಪ್ರಕರಣಗಳು ಇದಾಗಿದ್ದು,  ಅದರಲ್ಲೂ ಪುರುಷರಲ್ಲಿ ಇದು ಪ್ರಮುಖ ಕ್ಯಾನ್ಸರ್ ಆಗಿದ್ದು, ಎಲ್ಲಾ ಬಾಯಿ ಆರೋಗ್ಯ ಪ್ರಕರಣಗಳಲ್ಲಿ ಕ್ಯಾನ್ಸರ್ ಶೇ. 11.2 ರಷ್ಟಿದೆ ಎಂದು ವರದಿ ಹೇಳಿದೆ. ಆಗ್ನೇಯ ಏಷ್ಯಾದಲ್ಲಿ ಬಾಯಿಯ ಕ್ಯಾನ್ಸರ್‌ಗೆ ಹೊಗೆರಹಿತ ತಂಬಾಕು ಅಥವಾ ಅಡಿಕೆ ಕಾರಣವಾಗುತ್ತಿದೆ. ಇತ್ತೀಚಿನ ವಿಶ್ಲೇಷಣೆಯ ಪ್ರಕಾರ, ಬಾಯಿಯ ಕ್ಯಾನ್ಸರ್‌ನ ಎರಡು ಪ್ರಕರಣಗಳಲ್ಲಿ ಒಂದು ಪ್ರಕರಣವು ಹೊಗೆರಹಿತ ತಂಬಾಕು ಅಥವಾ ಅಡಿಕೆ ಸೇವನೆಯಿಂದ ಉಂಟಾಗುತ್ತದೆ. ಅಂದರೆ ಜನರಿಂದ ಹೊಗೆರಹಿತ ತಂಬಾಕು ಅಥವಾ ಅಡಿಕೆ ಸೇವನೆಯನ್ನು ತಡೆಗಟ್ಟಿದರೆ ಈ ಪ್ರಕರಣಗಳನ್ನು ತಡೆಯಬಹುದು ಎನ್ನುವುದನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ WHO ಹೇಳಿದೆ.

ಅಷ್ಟೇ ಅಲ್ಲ, ಹೊಗೆರಹಿತ ತಂಬಾಕು ಮತ್ತು ಅಡಿಕೆ ಸೇವನೆಯಿಂದ ಉಂಟಾಗುವ ಬಾಯಿಯ ಕ್ಯಾನ್ಸರ್  ಪರಿಹರಿಸಲು ತಾಂತ್ರಿಕ ಬೆಂಬಲಕ್ಕಾಗಿ ಸದಸ್ಯ ರಾಷ್ಟ್ರಗಳಿಗೆ WHO ಮನವಿ ಮಾಡಿದೆ, ಅಲ್ಲದೆ, ಏಷ್ಯಾಕ್ಕೆ ಪ್ರಾದೇಶಿಕ ಮಾರ್ಗಸೂಚಿಯನ್ನು ರೂಪಿಸುವ ಪ್ರಕ್ರಿಯೆಯಲ್ಲಿದೆ. ಬಾಯಿಯ ಕ್ಯಾನ್ಸರ್ ಮತ್ತು ಇತರ ಆರೋಗ್ಯದ ಮೇಲೆ ಪರಿಣಾಮ ತಪ್ಪಿಸಲು ಪ್ರಾದೇಶಿಕವಾಗಿ  ಸದಸ್ಯ ರಾಷ್ಟ್ರಗಳಿಗೆ ಮಾರ್ಗದರ್ಶನ ನೀಡುವುದು  ಉದ್ದೇಶವಾಗಿದೆ ಎಂದೂ WHO ಹೇಳಿದೆ.

ಈಗ ಅಡಿಕೆ ಬೆಳೆಗಾರರು ಜಾಗೃತವಾಗಬೇಕು, ದೇಶದ ಎಲ್ಲಾ ರಾಜ್ಯಗಳೂ ಈ ಬಗ್ಗೆ ಗಮನಹರಿಸಬೇಕು. ಏಕೆಂದರೆ, ದೇಶದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ, ಮೇಘಾಲಯ,ಮಿಜೋರಾಂ, ತ್ರಿಪುರಾ ಸೇರಿದಂತೆ 10 ರಾಜ್ಯಗಳಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತದೆ. ದೇಶದಲ್ಲಿ ಸುಮಾರು 9.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 14.11 ಲಕ್ಷ ಟನ್‌ ಅಡಿಕೆ ಉತ್ಪಾದನೆಯಾಗುತ್ತಿದೆ. ಕರ್ನಾಟಕವು ಅಡಿಕೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಸುಮಾರು 6.8 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 10 ಲಕ್ಷ ಟನ್‌ ಅಡಿಕೆ ಬೆಳೆಯಲಾಗುತ್ತಿದೆ. ಅಂದರೆ ಲಕ್ಷಾಂತರ ಕೃಷಿಕರು ಈ ಅಡಿಕೆ ಬೆಳೆಯನ್ನು ನಂಬಿ ಬದುಕು ಸಾಗಿಸುತ್ತಿದ್ದಾರೆ.  ಹೀಗಾಗಿ ಅಡಿಕೆ ಬೆಳೆಯನ್ನು ಏಕಾಏಕಿಯಾಗಿ ಹಾನಿಕಾರಕ, ಕ್ಯಾನ್ಸರ್‌ಕಾರಕ ಎನ್ನುವುದು ಹಾಗೂ ಬೆಳೆಯ ಮೇಲೆ ನಿಯಂತ್ರಣ ಮಾಡುವುದು ಕೂಡಾ ಅಸಾಧ್ಯದ ಮಾತು. ಇದರ ಜೊತೆಗೇ 10 ರಾಜ್ಯಗಳಲ್ಲಿ ಅಂದರೆ ದೇಶದ ಅರ್ಧ ಭಾಗದಲ್ಲಿ ಅಡಿಕೆಯ ಆರ್ಥಿಕ ವಹಿವಾಟು ಪರಿಣಾಮ ಬೀರುತ್ತದೆ. ಹಾಗಾಗಿ ಅಡಿಕೆ ಬೆಳೆಯ ಮೇಲೆ ಯಾವುದೇ ಪರಿಣಾಮವಾದರೂ ದೇಶದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬಿದ್ದಂತೆಯೇ ಆಗಿದೆ. ಹೀಗಾಗಿ ಅಡಿಕೆಯ ಮೇಲೆ ಕ್ಯಾನ್ಸರ್‌ ಗುಮ್ಮನನ್ನು ಇರಿಸಿದರೂ ಈ ಬಗ್ಗೆ ಸರ್ಕಾರವು ಅಧ್ಯಯನ ಹಾಗೂ ಸೂಕ್ತ ಕ್ರಮದ ಬಗ್ಗೆ ಮಹತ್ವದ ಹೆಜ್ಜೆಯನ್ನು ಇಡಬೇಕಿದೆ. ಈಗಾಗಲೇ ಈ ಬಗ್ಗೆ ಸಿಪಿಸಿಆರ್‌ಐಯಂತಹ ಸಂಸ್ಥೆ ಈ ಬಗ್ಗೆ ಅಧ್ಯಯನ ಆರಂಭಿಸಿದೆ. ಇದಕ್ಕೆ ವೇಗವೂ ಸಿಗಬೇಕಿದೆ.

ಅಡಿಕೆಯನ್ನು ಮುಂದಿರಿಸಿ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಅಡಿಕೆ ಬೆಳೆಗಾರರ, ಕೃಷಿಕರನ್ನು ಅಸ್ಥಿರ ಮಾಡುವ ಪ್ರಯತ್ನವೊಂದು ನಡೆಯುತ್ತಿದೆ ಎಂಬ ಆರೋಪ ಇತ್ತು. ಅಡಿಕೆಯ ಬ್ಯಾನ್‌, ಅಡಿಕೆ ಹಾನಿಕಾರಕ ಇತ್ಯಾದಿಗಳು ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರುತ್ತದೆ. ಇದೇ ಸಮಯಕ್ಕೆ ಕೆಲವೊಮ್ಮೆ ಮಾರುಕಟ್ಟೆಯಲ್ಲೂ ಸಂಚಲನವಾಗುತ್ತದೆ. ಆಮದು ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತದೆ, ಧಾರಣೆಯಲ್ಲಿನ ಏರುಪೇರುಗಳೂ ಇರುತ್ತವೆ. ಹೀಗಾಗಿ ಇದೂ ಕೂಡಾ ಆರ್ಥಿಕ ಸ್ಥಿತಿಗತಿಯ ಮೇಲೆ ಪರಿಣಾಮ ಬೀರುವ ಅಂಶವಾಗಿದೆ ಎನ್ನುವುದಕ್ಕೆ ಸಂದೇಹವಷ್ಟೇ. ಅಡಿಕೆಯ ಯಾವುದೇ ಹೇಳಿಕೆಗಳೂ ಧಾರಣೆಯ ಮೇಲೆ ಪರಿಣಾಮ ಇದೆ, ಏಕೆಂದರೆ ಅಡಿಕೆ ಮಾರುಕಟ್ಟೆ ಇರುವುದೇ  ಊಹಾಪೋಹಗಳ ಮೇಲೆ. ಅದಕ್ಕಾಗಿ ಅಡಿಕೆಯ ಮೇಲೆ ಯಾವುದೇ ಅಪವಾದಗಳು ಬಂದರೂ ಒಮ್ಮೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದು ಸತ್ಯವಲ್ಲದೇ ಇದ್ದರೂ ಸದ್ದಾಗುತ್ತದೆ.  ಅದೇ ಕಾರಣದಿಂದಲೂ ಆಗಾಗ ಅಡಿಕೆ ಹಾನಿಕಾರಕ ಸುದ್ದಿಯು ಸದ್ದಾಗುತ್ತದೆ. ವಾಸ್ತವದಲ್ಲಿ ಅಡಿಕೆ ಬೇಡಿಕೆಯಲ್ಲಿ ಇಂದಿಗೂ ಕಡಿಮೆಯಾಗಿಲ್ಲ. ಪ್ರತೀ ವರ್ಷ ಬೇಡಿಕೆ ಹೆಚ್ಚುತ್ತಿದೆ.

ಹಾಗಿದ್ದರೆ, ಅಡಿಕೆಯ ಎಲ್ಲಾ ಅಂಶಗಳೂ ಉತ್ತಮೇ ಎನ್ನುವ ಪ್ರಶ್ನೆ ಇದೆ. ಯಾವುದೇ ಆದರೂ ಅತಿಯಾದರೆ ವಿಷವೇ ಆಗಿದೆ. ಅಡಿಕೆಯಲ್ಲೂ ಅರೆಕೋಲಿನ್‌ ಅಂಶವು ಹಾನಿಕಾರಕ, ಯಾವಾಗ ಎಂದರೆ ಅತಿಯಾದರೆ. ಹಾಗೆಂದು ಇದೇ ಅಂಶವನ್ನು ಔಷಧಿಗಳಲ್ಲೂ ಬಳಕೆ ಮಾಡುತ್ತಾರೆ. ಅರೆಕೋಲಿನ್‌ ಬಗ್ಗೆ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈಚೆಗಿನ ಒಂದು ಅಧ್ಯಯನವು ಅರೆಕೋಲಿನ್‌ ಅಡಿಕೆಯಲ್ಲಿ ಇರುವುದರಿಂದ ಅಡಿಕೆಯಿಂದ ಅರೆಕೋಲಿನ್‌ ಪಡೆಯುವ ಬಗ್ಗೆಯೂ ಚಿಂತನೆ ನಡೆದಿತ್ತು. ಹೀಗಾಗಿ ಅಡಿಕೆಯ ಪರ್ಯಾಯ ಬಳಕೆಯೂ ಇದು ಸಾಧ್ಯವಿದೆ. ಆದ್ದರಿಂದ ಅಡಿಕೆ ಹಾನಿಕಾರಕ ಎನ್ನುವುದು ಅರೆಕೋಲಿನ್‌ ಕಾರಣದಿಂದ, ಅದಕ್ಕಾಗಿ ಅರೆಕೋಲಿನ್‌ ಪಡೆಯುವ ಉದ್ಯಮಗಳು ಆರಂಭವಾಗಬೇಕಿದೆ. ಇದಕ್ಕಾಗಿ ಸರ್ಕಾರಗಳ ಬೆಂಬಲ ಬೇಕಾಗಿರುವುದು.ಸಿಪಿಸಿಆರ್‌ಐಯಂತಹ ಸಂಸ್ಥೆಗಳು ಅರೆಕೋಲಿನ್‌ ಬಳಕೆ ಹಾಗೂ ಅದರ ಪರಿಣಾಮಗಳ ಬಗ್ಗೆ ಅಧಿಕೃತವಾದ ವರದಿಯನ್ನು ನೀಡಬಲ್ಲುದು. ಮುಂದೆ ಬರಲಿರುವ ವರದಿಯಲ್ಲಿ ಅರೆಕೋಲಿನ್‌ ಪಾಸಿಟಿವ್‌ ಫಲಿತಾಂಶಗಳನಿರೀಕ್ಷೆ ಬೆಳೆಗಾರರಲ್ಲಿರಬೇಕು.

ಈಚೆಗೆ ಅಸ್ಸಾಂನಲ್ಲಿ ಅಡಿಕೆ ಉದ್ಯಮವನ್ನು ಸ್ಥಾಪಿಸುವ ಬಗ್ಗೆ ಅಸ್ಸಾಂ ಸರ್ಕಾರ, ಅಲ್ಲಿನ ಮುಖ್ಯಮಂತ್ರಿಗಳು ರೈತರಿಗೆ ಭರವಸೆ ನೀಡಿದ್ದಾರೆ. ಅಸ್ಸಾಂನ ಅಡಿಕೆ ಇತರ ರಾಜ್ಯಗಳನ್ನು ತಲುಪಲು ಕೂಡಾ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ,  ಇಬ್ಬರು ಕೈಗಾರಿಕೋದ್ಯಮಿಗಳು ಅಸ್ಸಾಂನಲ್ಲಿ ಅಡಿಕೆ ಉದ್ಯಮವನ್ನು ಸ್ಥಾಪಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ , ಕೈಗಾರಿಕಾ ಸಂಸ್ಥೆಗಳು ಒಪ್ಪಂದಗಳಿಗೆ ಸಹಿ ಹಾಕಿವೆ. ಇದರಿಂದಾಗಿ ಅಸ್ಸಾಂನ ಅಡಿಕೆ ರಾಜ್ಯದಿಂದ ಹೊರಗೆ ಹೋಗುವುದನ್ನು ತಡೆಯುತ್ತದೆ ಮತ್ತು ರೈತರು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಇಂತಹದೊಂದು ಬೆಂಬಲ ಎಲ್ಲಾ ರಾಜ್ಯದಲ್ಲೂ ಅಡಿಕೆ ಬೆಳೆಗಾರರಿಗೆ ಲಭ್ಯವಾದರೆ,  ಅಡಿಕೆ ಹಾನಿಕಾರಕ ಎನ್ನುವ WHO ಹೇಳಿಕೆಗಳಿಗೆ ಸರಿಯಾದ ರೀತಿಯಲ್ಲಿ ಉತ್ತರವನ್ನೂ ನೀಡಿದಂತಾಗುತ್ತದೆ.

ಇದೇ ವೇಳೆ ಮಿಜೋರಾಂ ಸರ್ಕಾರವು ರಾಜ್ಯದಲ್ಲಿ ಅಡಿಕೆ  ಬೆಳೆಯುವುದನ್ನು ನಿಷೇಧಿಸುವುದಿಲ್ಲ, ಬದಲಿಗೆ ಮಿಶ್ರ ಬೆಳೆಗಳ ಮೂಲಕ ಅಡಿಕೆ ಬೆಳೆಯಲು ರೈತರಿಗೆ ನೆರವಾಗುತ್ತದೆ ಎಂದು ಅಧಿಕೃತವಾಗಿ ಹೇಳಿದೆ.

ತ್ರಿಪುರಾದಲ್ಲಿ ಅಡಿಕೆ ಬೆಳೆಯನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಯಲು ಬೇಕಾದ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತಿದೆ. ಅಡಿಕೆ ಬೆಳೆಯ ವಿಧಾನ, ಬೆಳೆಯುವ ಕ್ರಮ ಇತ್ಯಾದಿಗಳ ಬಗ್ಗೆ ಅಡಿಕೆ ಬೆಳೆಗಾರರಿಗೆ ಮಾಹಿತಿ ನೀಡಲು ಸಂಸ್ಥೆಗಳನ್ನು ಅಲ್ಲಿನ ಸರ್ಕಾರವೇ ಸಂಪರ್ಕಿಸಿ ಮಾಹಿತಿ ನೀಡಲು ವ್ಯವಸ್ಥೆ ಮಾಡುತ್ತಿದೆ.

ರಾಜ್ಯದಲ್ಲೂ ಅಡಿಕೆ ಬೆಳೆಗಾರರಿಗೆ ಬೆಂಬಲ ವ್ಯಕ್ತಪಡಿಸುವ ಹೇಳಿಕೆಗಳು ಹಾಗೂ ಕಾರ್ಯರೂಪದ ಕೆಲಸಗಳ ಬೇಕಾಗಿದೆ. ರಾಜ್ಯದಲ್ಲೂ ಅಡಿಕೆ ಉದ್ಯಮಗಳಿಗೆ ಅವಕಾಶಗಳು ಇವೆ. ಅಡಿಕೆ ಹಾನಿಕಾರಕ ಎನ್ನುವ ಗುಮ್ಮ ಆಗಾಗ ರೈತರನ್ನು ಕಾಡುವ ವೇಳೆ ಪರ್ಯಾಯದ ಬಗ್ಗೆಯೂ ಚಿಂತನೆ ಅಗತ್ಯ ಇದೆ. ಅಡಿಕೆಯ ಇತರ ಉದ್ಯಮಗಳಿಗೆ ಸರ್ಕಾರವು ಅವಕಾಶ ನೀಡಲು, ಬೆಂಬಲಿಸಲು ಪ್ರಯತ್ನ ಮಾಡಬೇಕಾಗಿದೆ. ಹಾಳೆತಟ್ಟೆ ಉದ್ಯಮ, ಅಡಿಕೆಯಲ್ಲಿ ಅರೆಕೋಲಿನ್‌ ಅಂಶಗಳ ಬಗ್ಗೆ, ಅಡಿಕೆ ಯ ಪರ್ಯಾಯ ಹಲವಾರು ಬಳಕೆಯ ಬಗ್ಗೆ ಸೂಕ್ತವಾದ ಅಧ್ಯಯನ ನಡೆಸಿ ಕ್ರಮಕೈಗೊಳ್ಳಬಹುದಾಗಿದೆ.

ಈ ಬಾರಿ ಕೂಡಾ ‌ಕ್ಯಾನ್ಸರ್‌ ವಿಷಯ ಬಂದಾಗ WHO ಅಡಿಕೆಯ ಪ್ರಸ್ತಾಪ ಮಾಡಿದೆ. ಇಂತಹ ಸಂದರ್ಭದಲ್ಲಿ ಪ್ರತಿನಿಧಿಗಳು ಅಡಿಕೆ ಬೆಳೆಗಾರರ ಕಡೆಯಿಂದ ಗಟ್ಟಿಯಾದ ಧ್ವನಿಯಲ್ಲಿ ಮಾತನಾಡಬೇಕಿದೆ. ಅಡಿಕೆಯೊಂದೇ ಕ್ಯಾನ್ಸರ್‌ಗೆ ಕಾರಣವಲ್ಲ ಎನ್ನುವುದನ್ನೂ ಹೇಳಬೇಕಿದೆ. ಸರಿಯಾದ ದಾಖಲೆಗಳನ್ನೂ ಅಡಿಕೆಯ ಪರವಾಗಿ ಸಿದ್ಧ ಮಾಡಬೇಕಾಗಿದೆ. ಏಕೆಂದರೆ ಮತ್ತೆ ಮತ್ತೆ ಅಡಿಕೆಯ ಮೇಲೆ ಪ್ರಹಾರ ನಡೆಯುತ್ತಿದೆ. ಈ ಬಾರಿ ಅಡಿಕೆಯ ಇಳುವರಿಯೂ ಕಡಿಮೆ, ಬರ್ಮಾದಿಂದ ಅಡಿಕೆಯೂ ಸಾಕಷ್ಟು ಪ್ರಮಾಣದಲ್ಲಿ ಭಾರತದೊಳಕ್ಕೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಸರ್ಕಾರ ಗಮನಿಸಿ ಕ್ರಮ ಕೈಗೊಳ್ಳಬೇಕು.

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 26-03-2025 | ಇಂದೂ ಕೆಲವು ಕಡೆ ಗಾಳಿ ಸಹಿತ ಮಳೆ ಸಾಧ್ಯತೆ | ಮಾ.27 ರಿಂದ ಮಳೆ ಕಡಿಮೆ |
March 26, 2025
1:29 PM
by: ಸಾಯಿಶೇಖರ್ ಕರಿಕಳ
ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರ | ಬದು ನಿರ್ಮಾಣದಿಂದ ಮಳೆ ನೀರು ಪೋಲು ನಿಯಂತ್ರಣ |
March 26, 2025
7:06 AM
by: The Rural Mirror ಸುದ್ದಿಜಾಲ
ಹಾಸನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ | ಸೆರೆ ಹಿಡಿದ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
March 26, 2025
6:49 AM
by: The Rural Mirror ಸುದ್ದಿಜಾಲ
ಕೋಲಾರ ತಾಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು  ಕಾರ್ಯಾಚರಣೆ
March 26, 2025
6:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group