ಬೆಳ್ತಂಗಡಿಯಲ್ಲಿಯೇ ಯಾಕೆ ಹಾಗಾಗ್ತಿದೆ..?. ಬಿಜೆಪಿಯೂ ಏಕೆ ಕಾಂಗ್ರೆಸ್ ಹಾದಿ ಹಿಡಿಯುತ್ತಿದೆ..? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಈಚೆಗೆ ನೀಡಿದ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೂ ತಾಳೆ ಹಾಕಲು ಆಗ್ತದಾ..?. ಬಹಳ ಗಂಭೀರವಾಗಿ ಯೋಚಿಸಬೇಕಾದ ವಿಷಯ ಇದು. ದ್ವೇಷ ರಾಜಕಾರಣವು ಇಡೀ ಸಮಾಜವೇ ಗೌರವಿಸುವ ಅಧಿಕಾರಗಳ ಮೇಲೂ ತಿರುಗುತ್ತಿದೆ ಎನ್ನುವುದು ಅಪಾಯಕಾರಿ ಬೆಳವಣಿಗೆ. ಹೀಗೇ ಮುಂದುವರಿದರೆ ಶಾಂತಿ ಹಾಗೂ ಸುವ್ಯವಸ್ಥೆ ಹೇಗೆ ? ಅಧಿಕಾರಿಗಳ ಮಾತುಗಳನ್ನು, ನಿಯಮಗಳನ್ನು ಕೇಳುವವರು ಯಾರು..? ಹೀಗೇ ನಡೆಯುವ ರಾಜಕೀಯ ವ್ಯವಸ್ಥೆ ಅಪಾಯದಲ್ಲಿದೆ ಎಂದೇ ಅರ್ಥ.
ಕಳೆದ ಹತ್ತು ವರ್ಷಗಳ ಬೆಳ್ತಂಗಡಿ ಬೆಳವಣಿಗೆ. ಆರಂಭದ ಐದು ವರ್ಷ ಅಭಿವೃದ್ಧಿ ಪರ್ವ ಬೆಳ್ತಂಗಡಿಯಲ್ಲಿ. ಊರು ಊರಿಗೂ ಕಾಂಕ್ರೀಟು ರಸ್ತೆಯಾಗಿದೆ ಎನ್ನುವುದೇ ಜನರಿಗೆ ಖುಷಿ. ಇದೇ ಆ ಕ್ಷೇತ್ರಕ್ಕೆ ಹಾಗೂ ಶಾಸಕ ಹರೀಶ ಪೂಂಜಾ ಅವರಿಗೆ ಗರಿಯಾಗಿತ್ತು. ಅದಾಗಿ ಈಚೆಗೆ 2-3 ವರ್ಷಗಳಿಂದ ಗಮನಿಸಿ ನೋಡಿ ಕೆಲವು ಅನಪೇಕ್ಷಿತ ಘಟನೆಗಳು. ನೆಲ್ಯಾಡಿಯ ಮರದ ಪ್ರಕರಣ ಹಾಗೂ ಆ ಬಳಿಕ ನಡೆದ ಘಟನೆಗಳು, ಕೆಲವು ಸಮಯದ ಹಿಂದೆ ಅರಣ್ಯ ಅಧಿಕಾರಿಗಳ ವರ್ತನೆ ಹಾಗೂ ಆ ಘಟನೆಗಳು, ಬೆಳ್ತಂಗಡಿಯ ಶಾಸಕರ ಕಾರನ್ನು ಫಾಲೋ ಮಾಡಿ ತಲವಾರು ಝಲಪಿಸಿದ ಘಟನೆ, ಸ್ಥಳೀಯ ಪತ್ರಿಕೆ ಸಂಪಾದಕರ ವಿರುದ್ಧ ಬಹಿರಂಗವಾಗಿ ಮಾತನಾಡಿದ ಘಟನೆ, ಈಗ ಪೊಲೀಸ್ ಅಧಿಕಾರಿಗಳೊಂದಿಗೆ ವರ್ತಿಸಿದ ರೀತಿ, ಇದೆಲ್ಲಾ ಬೆಳ್ತಂಗಡಿಯಲ್ಲಿ ನಡೆಯಿತು. ಯಾಕೆ ಹೀಗಾಯಿತು ಬೆಳ್ತಂಗಡಿಯಲ್ಲಿ ಮಾತ್ರಾ ? ಅಲ್ಲಿನ ಶಾಸಕರು ಹಿಂದಿನ ಐದು ವರ್ಷ ನಡೆಸಿದ ಅಭಿವೃದ್ಧಿ ಕಾರ್ಯಗಳೇ ಮುಳುವಾಯಿತಾ ? ಅಧಿಕಾರಿಗಳು ಅತ್ಯಂತ ಕೆಟ್ಟದಾಗಿ ವರ್ತನೆ ಮಾಡುತ್ತಿದ್ದಾರಾ ? ಇದೆಲ್ಲಾ ಈಗ ತುರ್ತಾಗಿ ಗಮನಿಸಬೇಕಾದ ವಿಷಯ.
ಏಕೆಂದರೆ, ಅಧಿಕಾರಿಗಳು ಅವರ ಇಡೀ ಜೀವನ ಪೂರ್ತಿ ಸಮಾಜಕ್ಕಾಗಿ ಕೆಲಸ ಮಾಡುತ್ತಾರೆ. ಸರ್ಕಾರದಿಂದ ವೇತನ ಪಡೆಯುತ್ತಾರೆ ನಿಜವಾದರೂ, ಸಮಾಜದ ಸ್ವಾಸ್ಥ್ಯ ಕಾಪಾಡಲೂ ಅವರೇ ಕಾರಣರಾಗುತ್ತಾರೆ. ಸರ್ಕಾರಗಳ ಒತ್ತಡ ಇದ್ದರೂ ಸಂಯಮದಿಂದ ಅವರೂ ವರ್ತಿಸಬೇಕಾಗುತ್ತದೆ. ಅದಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ಸಂಸ್ಕಾರ ಪಡೆದ ಶಾಸಕರಿಗೂ ಇರುತ್ತದೆ. ಒಬ್ಬ ಶಾಸಕ ಇಡೀ ಕ್ಷೇತ್ರಕ್ಕೆ ಮಾಡೆಲ್ ಆಗಿರುತ್ತಾರೆ. ಶಾಸಕ ಮಾಡಿದ ರೀತಿಯಲ್ಲೇ ಕಾರ್ಯಕರ್ತರ ನಾಯಕ ಮಾಡುತ್ತಾನೆ. ಹೀಗೇ ಮುಂದುವರಿದರೆ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಹೇಗೆ? ಅಧಿಕಾರಿಗಳಿಗೆ ನಿಯಂತ್ರಣ ಹೇಗೆ?. ಯಾವುದೇ ಪಕ್ಷದ ಕಾರ್ಯಕರ್ತರು ತಪ್ಪು ಮಾಡಿದ್ದರೆ, ತಪ್ಪಿನ ಪರವಾಗಿ ನಿಲ್ಲುವ ಬದಲಾಗಿ ಮುಂದೆ ಅಂತಹ ತಪ್ಪುಗಳು ಆಗದಂತೆ ಮಾಡಿಸಬೇಕಾದ ಕೆಲಸ ಶಾಸಕ, ಜನಪ್ರತಿನಿಧಿ ಮೇಲೂ ಇರುತ್ತದೆ, ಇದನ್ನು ಬಿಜೆಪಿಯ ಪ್ರಾಥಮಿಕ ಪಾಠದಲ್ಲೇ ಹೇಳಲಾಗುತ್ತದೆ. ಇಂತ ಘಟನೆಗಳನ್ನೆಲ್ಲಾ ಬಿಜೆಪಿಯ ಮಾತೃ ಸಂಘಟನೆಯಾದ “ಸಂಘ”ವು ಹೇಗೆ ಸಹಿಸಿಕೊಳ್ಳುತ್ತಿದೆ..?. ಟಿಕೆಟ್ ಹಂಚಿಕೆಯ ವೇಳೆ ಸಂಘವೇ ಪ್ರಮುಖ ಪಾತ್ರವಹಿಸುವಾಗ, ಅಧಿಕಾರಿಗಳ ಮೇಲೆಯೂ ತೀರಾ ಅವಾಚ್ಯವಾಗಿ ಒಬ್ಬ ಶಾಸಕ ನಿಂದಿಸುವಾಗಲೂ ಏಕೆ ಕರೆದು ಹೇಳುತ್ತಿಲ್ಲ..? ಬಹಳ ಅಚ್ಚರಿಯಾಗುವುದೇ ಇಲ್ಲಿ..
ಕಾಂಗ್ರೆಸ್ ಮಾಡುತ್ತದೆ ಎಂದು ಬಿಜೆಪಿಯೂ ಅದೇ ಹಾದಿ ಹಿಡಿದರೆ ಹೇಗೆ? ಸಮರ್ಥವಾಗಿ ಎದುರಿಸುವುದು ಸಭ್ಯ ದಾರಿಯಲ್ಲೂ ಸಾಧ್ಯವಿದೆ. ಅದನ್ನು ಮಾಡಬೇಕಾದ ಕೆಲಸ ಆಗಬೇಕೇ ಹೊರತು ಅಧಿಕಾರಿಗಳಿಗೆ ಸೊಂಟದ ಕೆಳಗಿನ ಭಾಷೆಯನ್ನು ಸಂಸ್ಕಾರದ ಹಿನ್ನೆಲೆಯ ಪಕ್ಷ ಮಾಡುವುದು ಶೋಭೆ ಅಲ್ಲವೇ ಅಲ್ಲ. ಏಕೆಂದರೆ ಬಿಜೆಪಿ ಪಕ್ಷ ಬೆಳೆದಿರುವುದು ಸಂಸ್ಕಾರದ ಕಾರಣದಿಂದಲೇ ಹೊರತು ಸೊಂಟದ ಕೆಳಗಿನ ಭಾಷೆಯ ಕಾರಣದಿಂದ ಅಲ್ಲ. ಅನೇಕ ವರ್ಷಗಳಿಂದ ಮನೆ ಮನೆಗೆ ಹೋಗಿ ಚಪ್ಪಲಿ ಸವೆಸಿರುವ ಬಿಜೆಪಿಯ ನಿಜವಾದ ಕಾರ್ಯಕರ್ತರು ತಮ್ಮನ್ನು ರಕ್ಷಣೆಗೆ ಬಯಸುವುದು ಸರಿಯಾದ ವಿಷಯವೇ ಹೌದು. ಆದರೆ ಈ ಹಿಂದೆ ಪಕ್ಷವನ್ನು ಬೆಳೆಸಿರುವ ಸಾಕಷ್ಟು ಮಂದಿ ಅದಕ್ಕೂ ಒಂದು ಚೌಕಟ್ಟನ್ನು ಹಾಕಿಕೊಟ್ಟಿದ್ದಾರೆ. ಈಚೆಗೆ ದಕ ಜಿಲ್ಲೆಯಲ್ಲಿ ಆ ಚೌಕಟ್ಟು ಕುಸಿಯುತ್ತಿರುವುದು ಕಂಡುಬರುತ್ತಿದೆ. ಆದರೂ ಯಾರೊಬ್ಬರೂ ಮಾತನಾಡದೇ ಇರುವುದರ ಪರಿಣಾಮ ಇಂತಹ ಘಟನೆಗಳೂ ಹೆಚ್ಚಾಗುವುದು ಇನ್ನೂ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದೊಂದು ಸಹಜ ಘಟನೆಯಾಗುವ ಸಾಧ್ಯತೆಯೇ ಹೆಚ್ಚು.
ಒಂದು ಕಲ್ಲುಕೋರೆಯ ಪ್ರಕರಣದ ಕಾರಣದಿಂದ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರೂ ಸೊಂಟದ ಕೆಳಗಿನ ಭಾಷೆಯ ಪರ, ಒಂದು ಪೊಲೀಸ್ ಕೇಸಿನ ಪ್ರಕರಣದ ತನಿಖೆಯೂ ಹಿನ್ನಡೆಯಾಗುವುದಕ್ಕೆ ಕಾರಣವಾಯಿತು. ಇದಕ್ಕೆ ಈಗಿನ ಸರ್ಕಾರವೂ ಕಾರಣವಾಯಿತು. ಸರ್ಕಾರವೂ ಒಬ್ಬ ಶಾಸಕನನ್ನು ಬಂಧಿಸುವುದಕ್ಕೆ ಮೊದಲು ಆದ್ಯತೆ ನೀಡುವ ಬದಲಾಗಿ ಪ್ರಕರಣದ ಮೂಲ ತನಿಖೆಯನ್ನು ಮಾಡಿಸಬೇಕಿತ್ತು. ಸ್ಥಳೀಯ ವಿರೋಧ ಪಕ್ಷದ ನಾಯಕರೂ ಮೂಲ ಪ್ರಕರಣದ ತನಿಖೆಗೇ ಆದ್ಯತೆ ನೀಡುವಂತೆ ಒತ್ತಾಯ ಮಾಡಬೇಕಿತ್ತು. ಅದರ ಹೊರತಾಗಿ ಇಡೀ ಪ್ರಕರಣ ಹಳಿ ತಪ್ಪುವ ಹಾಗೆ ಮಾಡುವಲ್ಲಿ ಎಲ್ಲರ ಪಾತ್ರವೂ ಮಹತ್ವವಾಯಿತು.
ಅಂದ ಹಾಗೆ, ನಾಳೆ ಸಮಾಜದ ಯಾವುದೋ ಒಬ್ಬ ವ್ಯಕ್ತಿಯ ಮೇಲೆ ದ ಕ ಜಿಲ್ಲೆಯ ನಿಜವಾಗಿಯೂ ಸುಳ್ಳು ಕೇಸುಗಳು ದಾಖಲಾಗುವಾಗ, ಅಕ್ರಮ ಚಟುವಟಿಕೆಗಳು ನಡೆಯುವಾಗ ತಡೆಯುವಾಗ ಕೇಸುಗಳಾದರೆ ತಡೆಯುವವರು ಯಾರು, ಇದೇ ಮಾದರಿಯಲ್ಲಿ ಪ್ರತಿಭಟನೆ, ಹೋರಾಟ ಮಾಡುವವರು ಯಾರು..? ಮಾದರಿ ಆಗಬೇಕಾದ ಕಾರ್ಯಗಳು ಈಗ ನಡೆಯಬೇಕು, ನಡೆಸಬೇಕು. ಅಧಿಕಾರ ಶಾಶ್ವತವಲ್ಲ, ಮಾದರಿ ಕಾರ್ಯಗಳು ಶಾಶ್ವತ.