ರಾಜನಾಗಿದ್ದವನು ಮರುದಿನ ಕಾಡಿಗೆ ಹೋಗಬೇಕಾದ ಸ್ಥಿತಿ. ನಿರ್ಮೋಹಿಯಾಗಿ ಶ್ರೀರಾಮಚಂದ್ರ ಕಾಡಿಗೆ ತೆರಳಿದನು. ಬುದ್ಧನೂ ಹಾಗೆ ಆತ ಎಲ್ಲವನ್ನೂ ಬಿಟ್ಟು ವಿರಕ್ತನಾದವನು. ಇದೆರಡೂ ಘಟನೆಗಳನ್ನು ಇಂದಿನ ಸ್ಥಿತಿಗೆ ಹೋಲಿಸಿ ನೀಡಿದರೆ, ತಿಳಿಯುತ್ತದೆ, ನಾವು ಎಷ್ಟು ವ್ಯಾಮೋಹವನ್ನು ಹೊಂದಿದ್ದೇವೆ. ಹೀಗಾಗಿಯೇ ಶ್ರೀರಾಮಚಂದ್ರ ಮಹಾಪುರುಷ, ನಾವು ಅಲ್ಲ… ಹೀಗೆಂದು ಹೇಳಿದವರು ವಿಧಾನಸಭಾ ಮಾಜಿ ಸ್ಪೀಕರ್ ರಮೇಶ್ ಕುಮಾರ್.
ಅವರು ಸುಳ್ಯ ತಾಲೂಕಿನ ಚೊಕ್ಕಾಡಿಯ ಶ್ರೀಸತ್ಯಸಾಯಿ ವಿದ್ಯಾಕೇಂದ್ರದ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಮಾತನಾಡಿದರು. ರಾಮ ನಂಬಿಕೆ. ಬುದ್ಧ ಚರಿತ್ರೆ ಹಾಗೂ ಇತಿಹಾಸ. ಸತ್ಯಸಾಯಿ ಬಾಬಾ ಜೊತೆಗಿದ್ದವರು. ಇವರಿಗೆ ಮೂವರಿಗೂ ಸಮಾನವಾದ ಗುಣ ಇದೆ. ಬೆಳಗ್ಗೆ ಅಯೋಧ್ಯೆಗೆ ರಾಮ ಪಟ್ಟಾಭಿಷೇಕಕ್ಕೆ ಸಿದ್ಧವಾಗಿತ್ತು, ತಂದೆ ದಶರಥ ಬೆಳಗ್ಗೆ ಹೇಳುತ್ತಾರೆ ಇದು ಸಾಧ್ಯವಿಲ್ಲ, ನೀನು ಅರಣ್ಯಕ್ಕೆ ಹೋಗಬೇಕು ಎಂದು ರಾಮನಿಗೆ ಹೇಳುತ್ತಾರೆ. ಒಬ್ಬ ರಾಜ ಆಗಬೇಕಾದವನಿಗೆ ಆ ಕ್ಷಣದಿಂದ ರಾಜತ್ವವೂ ಇಲ್ಲ, ಕಿರೀಟವೂ ಇಲ್ಲ, ಪಟ್ಟಾಭಿಷೇಕವೂ ಇಲ್ಲ. ಹಾಗಿದ್ದರೂ ಆತನ ಮನಸ್ಥಿತಿಯಲ್ಲಿ ಯಾವ ಬದಲಾವಣೆಯೂ ಇಲ್ಲ. ಅಂದರೆ ರಾಮ ನಿರ್ಮೋಹಿ. ಇಂದಿನ ಸ್ಥಿತಿಗೆ ಇದನ್ನು ಹೋಲಿಕೆ ಮಾಡಿಕೊಂಡಾಗ ನಮ್ಮ ವ್ಯಾಮೋಹಗಳು ಎಷ್ಟು ನಮ್ಮನ್ನು ಎಷ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಆದ್ದರಿಂದಲೇ ರಾಮ ಮರ್ಯಾದಾ ಪುರುಷೋತ್ತಮ.
ಬುದ್ಧ ಅರಮನೆಯಲ್ಲಿ ಇರುತ್ತಾನೆ, ರಾಜನಾಗಿರುತ್ತಾನೆ. ಜಿಗುಪ್ಸೆ ಬಂತು ವಿರಕ್ತಿಯಿಂದ ಅರಮನೆಯಿಂದ ಬೀದಿಗೆ ಬರುತ್ತಾನೆ. ಈಗಿನ ಸ್ಥಿತಿಗೆ ಹೋಲಿಕೆ ಮಾಡಿಕೊಳ್ಳಿ, ಅರಮನೆಗೆ ಹೋಗಲು ಪ್ರಯತ್ನ ಮಾಡುತ್ತೇವೆಯೇ ಹೊರತು ಅರಮನೆಯಿಂದ ಬೀದಿಗೆ ಬರಲು ಅಲ್ಲ. ನಿರ್ಮೋಹ.
ಭಗವಾನ್ ಸತ್ಯಸಾಯಿ ಬಾಬಾ ಈ ಸಾಲಿಗೆ ಸೇರಿದವರು. ಅವರಿಗೆ ಯಾವ ವ್ಯಾಮೋಹವೂ ಇಲ್ಲ. ಹಾಗಾಗಿಯೇ ಅವರ ಸಂಸ್ಥೆಗಳು ಆದರ್ಶ, ಅವರ ಕೆಲಸಗಳು ಮಾದರಿ ಎಂದು ರಮೇಶ್ ಕುಮಾರ್ ಹೇಳಿದರು.
ಬಾಬಾ ಅವರಿಗೆ ಯಾವ ವ್ಯಾಮೋಹ ವೂ ಇಲ್ಲ, ಬಾಬಾ ಮಠ ಇಲ್ಲ, ಉತ್ತರಾಧಿಕಾರಿ ಇಲ್ಲ, ಧರ್ಮ ಇಲ, ಮಾನವ ಧರ್ಮ, ಸೇವೆ, ಮಾನವೀಯ ಮೌಲ್ಯ ಇವುಗಳೇ ಮಾದರಿಗಳು. ವಿದ್ಯಾಸಂಸ್ಥೆಗಳು ಬೇರೆ , ಶಿಕ್ಷಣ ಸಂಸ್ಥೆಗಳು ಬೇರೆ. ವಿದ್ಯಾಸಂಸ್ಥೆಯಲ್ಲಿ ಸಂಸ್ಕಾರಕ್ಕೆ ಪ್ರಾಧಾನ್ಯತೆ ನೀಡಿದರೆ, ಶಿಕ್ಷಣ ಸಂಸ್ಥೆಗಳು ಅಕ್ಷರ ಜ್ಞಾನವನ್ನು ಮಾತ್ರಾ ನೀಡುತ್ತವೆ. ಮನುಷ್ಯರನ್ನಾಗಿಸುವುದು ವಿದ್ಯಾಸಂಸ್ಥೆಗಳು, ಎಲ್ಲಾ ವಿದ್ಯಾವಂತರು ಅಕ್ಷರಸ್ಥರಾಗಿರಬೇಕಾಗಿಲ್ಲ ಎಂದು ಹೇಳಿದರು. ಶಿಸ್ತು ಎಂದರೆ ಮಾನಸಿಕವಾಗಿ ಸಿದ್ಧತೆ ನಡೆಸುವುದು ಎನ್ನುವ ವ್ಯಾಖ್ಯಾನ ನೀಡಿದ ರಮೇಶ್ ಕುಮಾರ್, ಕತ್ತಲೆಯೇ ಹೆಚ್ಚಾಗಿರುವ ಈ ಸಮಾಜದಲ್ಲಿ ನಾವು ನಮ್ಮಕೆಲಸ ಮುಂದುವರಿಸೋಣ. ಬೆಟ್ಟದಷ್ಟು ಬೆಳಕು ನೀಡಲಾಗದೇ ಇದ್ದರೂ, ಮೇಣದ ಬತ್ತಿಯಷ್ಟು ಬೆಳಕು ನೀಡೋಣ. ಈ ದೇಶ ಯಾವತ್ತೂ ತಲೆ ತಗ್ಗಿಸದ ಹಾಗೆ ಆಗಲಿ, ಅದಕ್ಕಾಗಿ ಕೆಲಸ ಮಾಡೋಣ ಎಂದು ರಮೇಶ್ ಕುಮಾರ್ ಹೇಳಿದರು.
ವೇದಿಕೆಯಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ ಕೋಟೆ, ಕಾರ್ಯದರ್ಶಿ ಸಾಯಿಪ್ರಸಾದ ಅಜ್ಜನಗದ್ದೆ, ಖಜಾಂಜಿ ಮಹಾಬಲೇಶ್ವರ ಕಾಂಚೋಡು, ಶಾಲಾ ಮುಖ್ಯೋಪಾಧ್ಯಾಯ ಗುಣಶೇಖರ ಭಟ್, ಮಾಜಿ ಅಧ್ಯಕ್ಷರುಗಳಾದ ದಳ ನಾರಾಯಣ ಭಟ್, ಜಯರಾಜ್ ಆಚಾರ್, ಕೆ ಎನ್ ಪರಮೇಶ್ವರಯ್ಯ, ಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ತೇಜಪ್ರಕಾಶ್, ಭಗವಾನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಸದಸ್ಯರುಗಳಾದ ಉಮೇಶ್ ಬಿ ಹೂಲಿ, ಶಿವರಾಮ ಗೌಡ ಬೊಳ್ಳೂರು, ಸಾಯಿಸಂತೋಷ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಾಯಿಕಿರಣ್, ಸತ್ಯಸಾಯಿಸೇವಾ ಸಮಿತಿ ಪದಾಧಿಕಾರಿಗಳು ಇದ್ದರು.
ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.