ಸಣ್ಣ ಜಮೀನು ಮಾತ್ರ ಹೊಂದಿದ್ದು ಯಾವುದೇ ಬಂಡವಾಳ ಇಲ್ಲದ ಸಣ್ಣಪ್ಪ ಬ್ಯಾಂಕಿನವರು ಒದಗಿಸಿದ ಅಲ್ಪಾವಧಿ ಬೆಳೆ ಸಾಲ,ದೀರ್ಘಾವಧಿ ಅಭಿವೃದ್ಧಿ ಸಾಲಗಳನ್ನು ಪಡೆದು ಹಂತಹಂತವಾಗಿ ಅಭಿವೃದ್ಧಿಗೊಳ್ಳುತ್ತಾ ಬಂದಿದ್ದ.ಶರೀರವನ್ನು ಸಾಕಷ್ಟು ಕುಗ್ಗಿಸಿಕೊಂಡು ಸಾಲಕ್ಕಾಗಿ ಬ್ಯಾಂಕಿಗೆ ಹೋಗಿದ್ದ ಸಣ್ಣಪ್ಪನಿಗೆ ಅಂದಿನ ಬ್ಯಾಂಕ್ ಮ್ಯಾನೇಜರ್ ಮಾಡಿದ್ದ ಆರ್ಥಿಕ ಶಿಸ್ತಿನ ಪಾಠ ಮರೆತು ಹೋಗಿರಲೇ ಇಲ್ಲ.ಯಾರೇನು ಹೇಳಿದರೂ ಗರಿಷ್ಚ ಮಟ್ಟದಲ್ಲಿ ಕಲಿತ ಪಾಠ ಪಾಲಿಸುತ್ತಿದ್ದ.………ಮುಂದೆ ಓದಿ……..
ಸಣ್ಣಪ್ಪನ ನೆರೆಮನೆಯಾತ ನಂಜಪ್ಪ.ಸಣ್ಣಪ್ಪನಿಗೆ ಇರುವುದು ಒಂದು ಎಕರೆ ಜಮೀನು ಆದರೆ ನಂಜಪ್ಪನಿಗೆ ಎರಡು ಎಕರೆ ಜಮೀನು ಇದೆ.ಆತನೂ ಯಥಾಸಾಧ್ಯ ಕೃಷಿ ಮಾಡ್ತಾನೆ.ಆರ್ಥಿಕ ಸಂಕಷ್ಟ ಆತನನ್ನೂ ಕಾಡ್ತಾ ಇದೆ.ಹೀಗಾಗಿ ಬ್ಯಾಂಕಿನಿಂದ ಅಲ್ಪಾವಧಿ ಬೆಳೆ ಸಾಲವನ್ನೂ ಪಡೆದಿದ್ದ.ವರ್ಷದ ಕೊನೆಗೆ ಬ್ಯಾಂಕಿನವರು ಮರುಪಾವತಿ ಮಾಡು ಅಂತ ನೋಟೀಸ್ ಜ್ಯಾರಿ ಮಾಡಿದಾಗ ಅದು ಸಾಧ್ಯವಾಗದೇ ನಂತರ ಬ್ಯಾಂಕ್ ಕಡೆ ತಲೆಹಾಕಿರಲಿಲ್ಲ.
ತನಗೆ ಸಾಧ್ಯ ಆಗದ್ದು ಸಣ್ಣಪ್ಪನಿಗೆ ಹೇಗೆ ಸಾಧ್ಯ ಆಗ್ತದೆ ಎಂಬುದೇ ನಂಜಪ್ಪನ ಚೋದ್ಯ.ಅದು ಹೇಗೆ ಬ್ಯಾಂಕಿನವರು ಸಣ್ಣಪ್ಪನಿಗೆ ಮೇಲಿಂದ ಮೇಲೆ ಬೇರೆ ಬೇರೆ ಸಾಲ ಕೊಡ್ತಾ ಇದ್ದಾರೆ ಎಂಬುದು ನಂಜಪ್ಪನಿಗೆ ಅರ್ಥವಾಗಿರಲೇ ಇಲ್ಲ.
ಹೀಗಾಗಿ ಊರಿನ ಅಂಗಡಿಯ ಹೊರಗಿನ ಕಟ್ಟೆಯಲ್ಲಿ ಕೂತು ಆಗಾಗ ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಭಾಷಣ ಬಿಗಿತಾ ಇರ್ತಾನೆ.ಕೇಳುಗರೂ ಒಂದಷ್ಟು ಜನ ಇರ್ತಾರೆ.ಸಣ್ಣಪ್ಪನಿಗೂ ಬ್ಯಾಂಕ್ ಮ್ಯಾನೇಜರಿಗೂ ಏನೋ ಒಳ ಒಪ್ಪಂದ ಇದೆ ಅಂತ ನಂಜಪ್ಪನ ಗುಮಾನಿ.ಸಣ್ಣಪ್ಪ ಪ್ರತಿ ಸಾಲಕ್ಕೂ ಯಾರ್ಯಾರಿಗೋ ಕಮಿಷನ್ ಕೊಡ್ತಾ ಇರ್ತಾನೆ ಅಂತ ಸದಾ ಕಾಲ ಹೇಳ್ತಾ ಇರ್ತಾನೆ.ಕೇಳುವವರು ಕೇಳ್ತಾ ಇರ್ತಾರೆ.ಸಣ್ಣಪ್ಪ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತನ್ನಷ್ಟಕ್ಕೇ ತನ್ನ ವ್ಯವಹಾರ ನಿಭಾಯಿಸ್ತಾ ಇದ್ದಾನೆ.
ಸಣ್ಣಪ್ಪನ ವ್ಯವಹಾರ ಹೇಗೆ ಅಂತ ಅರ್ಥ ಆಗಬೇಕಾದರೆ ಘಟನೆಯೊಂದನ್ನು ವಿವರಿಸ ಬೇಕಷ್ಟೇ.ಅಂದು ಸಣ್ಣಪ್ಪ ಕೊಕ್ಕೋ ಕುಯಿದಿದ್ದ.ಸುಮಾರು ಒಂದು ಕೇಜಿ ತೂಕದ ಕೋಕ್ಕೋ ಬೀಜಗಳು ಸಿಕ್ಕಿದವು.ಅವನ್ನು ಅಂಗಡಿಗೆ ಮಾರಾಟ ಮಾಡಿ ಬರ್ತೇನೆ ಅಂತ ಹೆಂಡತಿಯ ಬಳಿ ಹೇಳಿದ.ಆಕೆ ಬರುವಾಗ ಒಂದು ಕೇಜಿ ಬಾಸಮತಿ ಅಕ್ಕಿ ತಗೊಂಬನ್ನಿ,ಮಗ ಪುಲಾವ್ ಮಾಡು ಅಂತ ಹೇಳ್ತಾ ಇದ್ದಾನೆ’ ಅಂತ ಹೇಳಿದಳು.
ಸಣ್ಣಪ್ಪ ಅಂಗಡಿಗೆ ಬಂದ.ಕೊಕ್ಕೋ ಮಾರಾಟ ನಡೆಸುವ ಅಂಗಡಿಯಲ್ಲೇ ಬಾಸಮತಿ ಅಕ್ಕಿಯೂ ಮಾರಾಟಕ್ಕಿದೆ.ಅಂಗಡಿಯಾತ ಕೊಕ್ಕೋ ತೂಕ ಮಾಡಿ 120₹ ಕೊಡಬೇಕಾಗಿದೆ ಅಂದ.ಸಣ್ಣಪ್ಪ ಆ ಹಣ ಪಡೆದುಕೊಂಡ.ಬಳಿಕ ಒಂದು ಕೇಜಿ ಬಾಸಮತಿ ಅಕ್ಕಿ ಕೇಳಿದ.ಅಂಗಡಿಯಾತ ಅಕ್ಕಿ ಕೊಟ್ಟು 100₹ ಕೇಳಿದ.ಇದೀಗ ಸಣ್ಣಪ್ಪ ತನ್ನ ಫೋನ್ ತೆಗೆದು scan ಮಾಡಿ ಅಂಗಡಿಯಾತನಿಗೆ ಹಣ ಪಾವತಿಸಿದ.
ಅಂಗಡಿಯಲ್ಲೇ ಇದ್ದ ನಂಜಪ್ಪ ಘೊಳ್ಳೆಂದು ನಕ್ಕು ಬಿಟ್ಟ.’ ಅಲ್ಲ ಸಣ್ಣಪ್ಪಾ ಕೊಕ್ಕೋ ಕೊಡುವಾಗಲೇ ಅಕ್ಕಿಯನ್ನೂ ಕೇಳಿದ್ದರೆ ಅಂಗಡಿಯಾತ ಅಕ್ಕಿ ಜೊತೆಗೆ ಇಪ್ಪತ್ತು ರುಪಾಯಿ ಕೊಡ್ತಾ ಇದ್ದ.ಇದೆಂತಹ ವ್ಯವಹಾರ ನೀನೀಗ ಮಾಡಿದ್ದು?’.
ಸಣ್ಣಪ್ಪ ಅಲ್ಲಿಂದ ಸೀದಾ ಬ್ಯಾಂಕಿಗೆ ಹೋದ . ಅಲ್ಲಿ ತನ್ನ ಉಳಿತಾಯ ಖಾತೆಗೆ ಕೊಕ್ಕೋ ಮಾರಾಟದಿಂದ ಸಿಕ್ಕಿದ 120₹ಗಳನ್ನು ಜಮಾ ಮಾಡಿದ.ತನ್ನ ಎಲ್ಲಾ ಆದಾಯವನ್ನೂ ತನ್ನ ಬ್ಯಾಂಕ್ ಖಾತೆಗೆ ಜಮಾ ಮಾಡುವ ತನ್ನ ಸಂಪ್ರದಾಯವನ್ನು ಮುಂದುವರೆಸಿದ.
ಕೆಲವೊಮ್ಮೆ ಬ್ಯಾಂಕ್ ಗುಮಾಸ್ತರುಗಳೂ ಸಣ್ಣಪ್ಪನನ್ನು ಪ್ರಶ್ನಿಸುವುದಿದೆ.ಹೀಗೆ ಸಣ್ಣ ಸಣ್ಣ ಹಣವನ್ನೆಲ್ಲ ತಂದು ಕಟ್ಟುತ್ತಾ ಇರುವುದ್ಯಾಕೆ? ಸ್ವಲ್ಪ ದೊಡ್ಡ ಮಟ್ಟಿನ ಹಣ ಮಾತ್ರ ಬ್ಯಾಂಕ್ ಖಾತೆಗೆ ತುಂಬಿದರೆ ಸಾಲದೇ ಅಂತ.ಆದರೆ ಸಣ್ಣಪ್ಪ ಈ ವಿಷಯದಲ್ಲಿ ಯಾರ ಮಾತನ್ನೂ ಕೇಳಲಾರ.ತೀರಾ ಸಣ್ಣ ಮಟ್ಟಿನ ಆದಾಯವನ್ನೂ ತನ್ನ ಬ್ಯಾಂಕ್ ಖಾತೆಗೆ ತುಂಬುತ್ತಾನೆ.ಅಲ್ಲಿನ ಗುಮಾಸ್ತರುಗಳೂ ,ಮನದೊಳಗೆ ಗೊಣಗಿಕೊಳ್ಳುತ್ತಾ,ತುಂಬಿಸಿಕೊಳ್ತಾ ಇರ್ತಾರೆ.
ಸಣ್ಣಪ್ಪನಿಗೆ ಇದೀಗ ಬ್ಯಾಂಕಿಗ್ ಶಿಸ್ತು ಅಂದರೇನೆಂದು ಸರಿಯಾಗಿ ಗೊತ್ತಿದೆ.ಇಂತಹ ವ್ಯವಹಾರ ತನ್ನ ಸಿಬಿಲ್ ಸ್ಕೋರನ್ನು ವೃದ್ಧಿಸುತ್ತದೆ ಅಂತಲೂ ಗೊತ್ತಾಗಿದೆ.ಉನ್ನತ ಮಟ್ಟದ ಸಿಬಿಲ್ ಸ್ಕೋರ್ ಅಗತ್ಯ ಬಿದ್ದಾಗ ಸಾಲ ಪಡೆದುಕೊಳ್ಳಲು ಸಹಾಯಕವಾಗ್ತದೆ ಅಂತಲೂ ಗೊತ್ತಾಗಿದೆ.