ಇತ್ತೀಚೆಗೆ ಹುಲಿ ಉಗುರಿನ ಹುಯಿಲೆದ್ದ ಮೇಲೆ ದೇಸಿ ಗೋವುಗಳ ಬಗೆಗಿನ ಚಿಂತನೆ ಮುನ್ನೆಲೆಗೆ ಬಂದಿದೆ. ಪ್ರಾಣಿ ಪ್ರಿಯರು ಹುಲಿಯ ಉಳಿವಿನ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಹುಲಿಯಷ್ಟೇ ವೇಗವಾಗಿ ಕ್ಷೀಣಿಸುತ್ತಿರುವ ದೇಸಿ ತಳಿ ಗೋವುಗಳ ಬಗ್ಗೆ ಯಾಕಿಲ್ಲ…? ಎಂದು ಪ್ರಶ್ನಿಸುತ್ತಿದ್ದಾರೆ. ಗೋವು ವನ್ಯಜೀವಿಯಾ..?
ಮೊನ್ನೆ ಒಂದು ತಿಂಗಳ ಹಿಂದೆ ಗ್ರಾಮೀಣ ಮಹಿಳೆಯೊಬ್ಬರು ತಮ್ಮ ಮನೆಯಂಗಳಕ್ಕೆ ಬಂದಿದ್ದ ಕಾಡುಕೋಣಕ್ಕೆ ಸಾಕಿದ ಎಮ್ಮೆಗೆ ಸಲೀಸಾಗಿ ನೀರು ಕೊಟ್ಟಂತೆ ಕೊಡುತ್ತಿದ್ದ ದೃಶ್ಯ ಎಲ್ಲೆಡೆ ಹರಿದಾಡಿ ಅಬ್ಬಾ… ಎಂಬ ಅಚ್ಚರಿ ಮೂಡಿಸಿತ್ತು.
ನಮ್ಮ ಬಹುತೇಕ ಎಲ್ಲ ಮಠ ಮಾನ್ಯಗಳಲ್ಲಿ ಜಿಂಕೆಯನ್ನು ಸಾಕಿದ್ದಾರೆ. ಅದೆಷ್ಟೋ ಗ್ರಾಮೀಣರ ಮನೆಯಲ್ಲಿ ನವಿಲನ್ನ ಪ್ರೀತಿಯಿಂದ ಸಾಕಿದ್ದಾರೆ. ಪಾರಿವಾಳ ಸೇರಿದಂತೆ ಅನೇಕ ಪಕ್ಷಿಗಳೂ ಪ್ರಾಣಿ ಪಕ್ಷಿಗಳ ಪ್ರಿಯರ ಮನೆಯಲ್ಲಿ ಪ್ರೀತಿಯ ಆಸರೆ ಪಡೆದಿವೆ.
ಚಿಕ್ಕಮಗಳೂರು ಜಿಲ್ಲೆಯ ಒಂದು ಕಡೆಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮಲೆನಾಡು ಗಿಡ್ಡ ತಳಿಯನ್ನು ಜನರು ಸಾಕೋಕಾಗೋಲ್ಲ ಎಂದು ತಂದು ಬಿಟ್ಟು, ಬಿಟ್ಟೂ ಆ ಹಸುಗಳೀಗ “ಕಾಡು ಪ್ರಾಣಿಗಳೇ ” ಆಗಿವೆ.
ದೇಶದ ಎಲ್ಲ ದೇಸಿ ಗೋ ತಳಿಗಳೂ ವನ್ಯ ಜೀವಿಗಳೇ. ಯಾವುದೇ ದೇಸಿ ಗೋವುಗಳಿಗೆ ಅವುಗಳಿಗೆ ನೀರು ಮತ್ತು ನೈಸರ್ಗಿಕ ಮೇವು ಲಭ್ಯವಾಗುವಂತಹ ವ್ಯವಸ್ಥೆ ಮಾಡಿದರೆ ಅವುಗಳು ಮನುಷ್ಯನ ಸಂಪರ್ಕ ಇಲ್ಲದೇ ಬಾಳಿ ಬದುಕಬಲ್ಲವು ಎಂಬುದಕ್ಕೆ ಮೇಲೆ ನಾನು ಹೇಳಿದ ” ಚಿಕ್ಕ ಮಗಳೂರು” ಜಿಲ್ಲೆಯ ಆ ಪ್ರದೇಶದ ಗೋವುಗಳೇ ಸಾಕ್ಷಿ.
ಕಾಡಂಚಿನ ಗ್ರಾಮದ ರೈತ ಗೋಪಾಲಕರು ಸಾಕಿದ ಹಸುಗಳನ್ನು ” ಕಾಡು ಪ್ರಾಣಿ ಹುಲಿ ” ತಿನ್ನಬಹುದು. ಮಂಗಗಳು ಊರು ಮನೆ ಕೃಷಿಗೆ ಇನ್ನಿಲ್ಲದೇ ತೊಂದರೆ ಕೊಟ್ಟರೂ ಅವು ವನ್ಯಜೀವಿಗಳೇ. ಆದರೆ ಮನುಷ್ಯ ತನ್ನ ಅನುಕೂಲಕ್ಕೆ ಈ ಗೋವುಗಳನ್ನ ಸಾಕುತ್ತಿದ್ದಾನೆ ಎಂದ ಮಾತ್ರಕ್ಕೆ ಗೋವುಗಳು ಸಾಕು ಪ್ರಾಣಿಗಳು ಅಂತ ಅಲ್ವೇ ಅಲ್ಲ.
ಒಂದು ಮೇಯ್ದು ಬರುವ ಹಸು ಸುಮಾರು ನೂರು ಎಕರೆ ವಿಸ್ತೀರ್ಣದ ಕಾಡು ಗುಡ್ಡ ಬಯಲಿನಲ್ಲಿ ತಾನು ಮೇಯ್ದು ಆ ಪರಿಸರದಲ್ಲಿ ತನ್ನ ಅಮೂಲ್ಯ ಔಷಧೀಯ ಗೋಮೂತ್ರ ಮತ್ತು ಕೋಟ್ಯಂತರ ಸೂಕ್ಷ್ಮಾಣು ಜೀವಿಯುಕ್ತ ಸಗಣಿ ಹಾಕಿ ಇಡೀ ಪರಿಸರವನ್ನು ಫುಷ್ಠಿ ಗೊಳಿಸುತ್ತವೆ. ನಮ್ಮ ಕಾಡು ಬೆಟ್ಟ ಬಯಲು ಗದ್ದೆ ಪ್ರದೇಶದಲ್ಲಿ ದೇಸಿ ತಳಿ ಹಸುಗಳು ಮೇಯಬೇಕು. ಈ ಮೇಯುವ ಹಸುಗಳಿಂದ ಅರಣ್ಯ ಪರಿಸರಕ್ಕೆ ಅನೇಕ ಪ್ರತ್ಯಕ್ಷ ಪರೋಕ್ಷ ಅನೇಕ ಲಾಭಗಳಿವೆ.
ಈಗ ನಮ್ಮ ದೇಶದಲ್ಲಿ ದೇಸಿ ತಳಿಗಳಲ್ಲಿ ಹಾಲಿನ ಇಳುವರಿಗಾಗಿ ಗುಜರಾತಿನ ದೇಸಿ ಗೀರ್ ತಳಿ ಅತ್ಯಂತ ಪ್ರಸಿದ್ಧ ಮತ್ತು ರೈತ ಗೋ ಉದ್ಯಮಿ ಸ್ನೇಹಿಯಾಗಿದೆ. ದೇಸಿ ತಳಿಗಳಲ್ಲೇ ಅತಿ ಹೆಚ್ಚು ಹಾಲಿನ ಇಳುವರಿ ನೀಡುವ ತಳಿ ಗೀರ್. ಈಗ ಯಾವುದಾದರೂ ಪಟ್ಟಣಿಗ ಬುದ್ದಿವಂತ ರೈತ ಟೆಕ್ಕಿಗಳ ಗೋ ಉದ್ದಾರ ಮಾಡುವ ಉಳಿಸುವ ಗೋ ಶಾಲೆ ಅಥವಾ ಗೋ ಸಂವರ್ಧಕ ಕೇಂದ್ರ ಎಂದರೆ 48 ಗೀರ್ ತಳಿ ಎರಡು ಮಲೆನಾಡು ಗಿಡ್ಡ ತಳಿಗಳ ದೇಸಿ ಹಸುಗಳ ಗೋಶಾಲೆಯಾಗಿರತ್ತದೆ. ದೇಶದ ಅತ್ಯಂತ ಅದೃಷ್ಟವಂತ ದೇಸಿ ಗೋ ತಳಿ ಎಂದರೆ ಗೀರ್. ಇತ್ತೀಚೆಗೆ ಪುಂಗನೂರು ಹಲವಾರು ಕಾರಣಕ್ಕೆ ಇಂತಹ ಹವ್ಯಾಸಿ ಗೋಪಾಲಕರ ಗಮನ ಸೆಳೆಯುತ್ತಿದೆ.
ಮಲೆನಾಡು ಗಿಡ್ಡ ತಳಿ: ಒಂದು ಕಾಲದಲ್ಲಿ ಯಥೇಚ್ಛವಾಗಿ ನೈಸರ್ಗಿಕ ಮೇವಿದ್ದ ಕಾಲದಲ್ಲಿ ಮಲೆನಾಡು ಗಿಡ್ಡ ತಳಿ ಹಸುಗಳು ಪ್ರತಿ ರೈತ ಕುಟುಂಬದಲ್ಲಿ ಕನಿಷ್ಠ ಐವತ್ತು ಹಸು ಗಳಾದರೂ ಇರುತ್ತಿದ್ದವು. ಅದೆಷ್ಟೋ ಹಸು ಗಳನ್ನು ಮನೆಯವರು ಕಟ್ಟುತ್ತಲೇ ಇರಲಿಲ್ಲ.
ಯಾವಾಗ ನಮ್ಮ ಪಶ್ಚಿಮ ಘಟ್ಟಗಳಲ್ಲಿ ಆಣೆಕಟ್ಟು, ಅರಣ್ಯ – ಕಂದಾಯ ಭೂಮಿ ಒತ್ತುವರಿ ಮತ್ತು ಎಂಪಿಎಂ ಪ್ಲಾಂಟೇಷನ್ ಬಂತೋ ಈ ದೇಸಿ ತಳಿ ಹಸುಗಳಿಗೆ ನೈಸರ್ಗಿಕವಾದ ಮೇವಿನ ಲಭ್ಯತೆ ಇಲ್ಲದಾಯಿತು. ಈಗ ಮಲೆನಾಡು ಗಿಡ್ಡ ತಳಿ ಹಸುಗಳನ್ನು ಸಾಕುವ ಗೋಪಾಲಕರು ಮಲೆನಾಡು ಗಿಡ್ಡ ತಳಿ ಸಾಕಬೇಕೆಂದರೆ ಮಲೆನಾಡು ಗಿಡ್ಡ ಹಸುಗಳಿಗೆ ಕೃತಕವಾಗಿ ಹೊರಗಿನಿಂದ ಒಣ ಹುಲ್ಲು ಹಿಂಡಿ ಖರೀದಿಸಿ ತಂದು ಹಾಕಿ ನಿರ್ವಹಣೆ ಮಾಡಬೇಕು.
ಒಂದು ಮಲೆನಾಡು ಗಿಡ್ಡ ಹಸು ದಿನಕ್ಕೆ ಒಂದು ಲೀಟರ್ ಹಾಲು ರೂಪಾಯಿ 50 ಮತ್ತು 50 ರೂಪಾಯಿ ಮೌಲ್ಯದ ಸಗಣಿ ಗೋ ಮೂತ್ರ ನೀಡಿದರೆ ಈ ಹಸುಗಳ ಹುಲ್ಲು ಹಿಂಡಿ ನಿರ್ವಹಣೆ ಗೆ ಕನಿಷ್ಠ 250 ರೂಪಾಯಿ ಖರ್ಚು ಮಾಡಿ ರುತ್ತಾನೆ. ಯಾವ ರೈತ ಈ ಹೊತ್ತಿಗೆ ಹತ್ತು ಲೀಟರ್ ಹಾಲು ಕೊಡುವ ಜೆರ್ಸಿ ಜಾನುವಾರುಗಳ ಕಾಲದಲ್ಲಿ ನೂರೈವತ್ತು ರೂಪಾಯಿ ಹೆಚ್ಚು ಖರ್ಚು ಮಾಡಿ ದೇಸಿ ತಳಿ ಹಸುಗಳನ್ನು ಸಾಕಿ ಸಲಹುತ್ತಾನೆ…?
ಹಳ್ಳಿಕಾರ್ ತಳಿ: ಹಳ್ಳಿಕಾರ್ ತಳಿ ಕರ್ನಾಟಕದ ಅತ್ಯುತ್ತಮ ದೇಸಿ ಹಸುಗಳಲ್ಲಿ ಒಂದು. ಈ ಹಸುಗಳ ಗಂಡು ಕರುಗಳು ಅತ್ಯುತ್ತಮ ಎತ್ತುಗಳಾಗಿ ಪರಿವರ್ತನೆ ಆಗುತ್ತಿತ್ತು. ಈಗ ಟಿಲ್ಲರ್ ಟ್ರ್ಯಾಕ್ಟರ್ ಬಂದ ಮೇಲೆ ಎತ್ತುಗಳನ್ನು ಸಾಕುವವರೇ ಇಲ್ಲ. ಈ ಗಂಡು ಹೋರಿಗಳಂತೂ ಈಗಿನ ಕಾಲದವರ ಲೆಕ್ಕಾಚಾರದಲ್ಲಿ ನೂರಕ್ಕೆ ಇನ್ನೂರರಷ್ಟು ನಷ್ಟ…!!
ಹೌದು ನಮ್ಮ ದೇಶದ ಹೆಚ್ಚು ಹಾಲಿನ ಇಳುವರಿ ಇಲ್ಲದ ಈ ಬಗೆಯ ದೇಸಿ ತಳಿ ಹಸುಗಳನ್ನು ಸರ್ಕಾರ “ವನ್ಯಜೀವಿ” ಎಂದು ಘೋಷಣೆ ಮಾಡಬೇಕು.ಮತ್ತು ಅರಣ್ಯ ಇಲಾಖೆಯ ಮೇವು ಲಭ್ಯವಿರುವ ಪ್ರದೇಶದಲ್ಲಿ ಹುಲಿ ಯೋಚನೆ , ನರಿ ಯೋಜನೆ , ಕರಡಿ ಧಾಮ , ಆನೆ ಧಾಮ , ಜಿಂಕೆ ಧಾಮದ ಮಾದರಿಯಲ್ಲಿ “ದೇಸಿ ತಳಿ ಹಸುಗಳ ಧಾಮ”
ಮಾಡಲಿ….
ಈ ದೇಶದ ಯಾವುದೇ ದೇಸಿ ಹಸುಗಳು ಮೇಯ್ದು ಬರುವಂತಹ ಮೂಲ ಕಾಡು ಜಾತಿಯವೇ ಆಗಿವೆ. ಇವತ್ತಿನ ವ್ಯಾವಹಾರಿಕ ಜಗತ್ತಿನಲ್ಲಿ ಈ ಹಸುಗಳ ನಿರ್ವಹಣೆ ಮೊದಲೇ ಬರಗಾಲ , ಕೃಷಿ ಉತ್ಪನ್ನ ಗಳ ನಿರಂತರವಾದ ಬೆಲೆ ಕುಸಿತ ಇತರ ಕಾರಣಕ್ಕೆ ನುಲುಗಿರುವ ಸೋತ ರೈತನಿಗೀಗ ನಷ್ಟದಾಯಕ. ಆದ್ದರಿಂದ ಈ ಹಸುಗಳನ್ನ ವನ್ಯಜೀವಿ ಗಳನ್ನಾಗಿ ಪರಿವರ್ತನೆ ಮಾಡಿ ಕಾಡು ಸೇರಿಸಿ ಅಲ್ಲಿ ಅವಕ್ಕೆ ನೈಸರ್ಗಿಕವಾದ ಮೇವು “ತಾವು” ಮತ್ತು ನೀರು ಸಿಗುವಂತೆ ಮಾಡಿದರೆ ಅವು ಹಾಗಾದರೂ ಉಳಿಯಲು ಸಾಧ್ಯ.
ಗೋ ಪ್ರೇಮಿಗಳೇ…. , ದಯಮಾಡಿ ಅರ್ಥ ಮಾಡಿಕೊಳ್ಳಿ… ಈ ದೇಸಿ ತಳಿಗಳನ್ನು ಗೋಶಾಲೆಗಳಿಗೆ ಕಳಿಸಬೇಡಿ. ಅಥವಾ ಈ ದೇಸಿ ತಳಿಗಾಗಿ ಗೋ ಶಾಲೆ ಬೇಡವೇ ಬೇಡ.
ಯಾವುದೇ ಗೋಶಾಲೆ ಮಾನವರ “ವೃದ್ದಾಶ್ರಮ ” ಇದ್ದಂತೆ. ವೃದ್ದಾಶ್ರಮ ಮನುಷ್ಯ ನ ಕಟ್ಟ ಕಡೆಯ ನಿಲ್ದಾಣ. ಹಾಗೆಯೇ ಗೋ ಶಾಲೆಗಳು ಗೋವುಗಳ ಕಟ್ಟ ಕಡೆಯ ಆವಾಸ ಸ್ಥಾನ . ಗೋ ಶಾಲೆಗಳು ಮುದಿ ,ಅಂಗವಿಕಲ, ಅಸಾಹಾಯಕ ಹಸುಗಳ ನೆಲೆಯಾಗಿ ಪರವಾಗಿಲ್ಲ. ಆದರೆ ಇನ್ನೂ ಕರುಗಳನ್ನ ಹಾಕಿ ಸಂತಾನ ವೃದ್ಧಿ ಮಾಡುವ ಚಿಕ್ಕ ವಯಸ್ಸಿನ ಹಸುಗಳು , ಸಂತಾನೋತ್ಪತ್ತಿ ಮಾಡುವ ಹೋರಿ ಗಳನ್ನು ಗೋ ಶಾಲೆಗೆ ಸೇರಿಸುವುದು “ಸೃಷ್ಟಿಕ್ರಿಯೆಗೆ” ವ್ಯತಿರಿಕ್ತವಾದುದ್ದಾಗಿದೆ.
ದೇಸಿತಳಿ ಹಸುಗಳ ಸಗಣಿ ಗೋಮೂತ್ರ ಗಳು ಅತ್ಯುತ್ತಮ ಕೋಟ್ಯಂತರ ಸೂಕ್ಷ್ಮಾಣು ಜೀವಿಯುಕ್ತ ಗಳಿಂದ ಅಮೂಲ್ಯ ಅಮೃತ ಸದೃಶವಾದರೂ ಹಾಲಿನ ಇಳುವರಿ ವಿಷಯದಲ್ಲಿ ಹಿಂದಿರುವ ಕಾರಣ ರೈತರು ದೇಸಿ ತಳಿ ಹಸುಗಳನ್ನು ಹೈಬ್ರೀಡ್ ಹಸುಗಳ ಹೋಲಿಸಿ ಬಹಳ “ದೊಡ್ಡ ನಷ್ಟ” ಎಂದು ದೇಸಿ ತಳಿ ಗಳನ್ನು “ಕಸಾಯಖಾನೆಗೆ” ನೀಡುತ್ತಿದ್ದಾರೆ.
ಖಂಡಿತವಾಗಿಯೂ ಇವತ್ತಿನ ಹಣ ಕೇಂದ್ರಿತ ಜಗತ್ತಿನಲ್ಲಿ ದೇಸಿ ತಳಿ ಹಸುಗಳನ್ನು ಸಾಕಲು ಸಾದ್ಯವಿಲ್ಲ ಮತ್ತು ಅವು ನೈಸರ್ಗಿಕವಾಗಿ ಮೇಯ್ದು ಬರಲು ಮೇವಿನ ತಾಣವೋ ಅಥವಾ ಪೂರಕ ಗೋ ಪ್ರೇಮಿಗಳು ತುಂಬಿರುವ ಪರಿಸರವೂ ಇಲ್ಲ…!!
ದೇಸಿ ತಳಿ ರೈತರ ಮನೆಯಲ್ಲಿ ಸಹಜವಾಗಿ ಉಳಿಯಲು ದೇಸಿ ತಳಿ ಹಸುಗಳ ಹಾಲು , ತುಪ್ಪ, ಮೊಸರು , ಮಜ್ಜಿಗೆ , ಸಗಣಿ ಮತ್ತು ಗೋ ಮೂತ್ರ ಗಳಿಗೆ ಸಮಾಜ ಪ್ರೋತ್ಸಾಹಾಕ ಅತ್ಯುತ್ತಮ ಬೆಲೆ ನೀಡಿ ಖರೀದಿಸಿ ಪ್ರೋತ್ಸಾಹಿಸಬೇಕು. ಸರ್ಕಾರ ದೇಸಿ ತಳಿ ಹಸುಗಳ ಪಶು ಸಂಗೋಪನೆ ಮಾಡುವ ಗೋಪಾಲಕರಿಗೆ “ರಿಯಾಯಿತಿ ದರದ” ಹುಲ್ಲು, ಹಿಂಡಿ ಇತರೆ ಪರಿಕರ ನೀಡುವುದರ ಜೊತೆಗೆ ಗವ್ಯೋತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿದರೆ ಮಾತ್ರ ಸಾದ್ಯ.
ನಾನೂ ಒಬ್ಬ ಚಿಕ್ಕ ಮಟ್ಟದ ಗೋ ಸಂವರ್ಧಕ. ನನಗೆ ಈ ಹೊತ್ತಿನ ಗೋ ಸಾಕಾಣಿಕೆಯ ಇಂಚಿಂಚೂ ಕಷ್ಟ ಗೊತ್ತು. ಕಡಿಮೆ ಹಾಲು ಕೊಡುವ ಮಲೆನಾಡು ಗಿಡ್ಡ ತಳಿ ಉಳಿಸಿಕೊಳ್ಳಲು ನಾನು ಮಲೆನಾಡು ಗಿಡ್ಡ ತಳಿ ಹಸುಗಳ ಸಗಣಿ ಗೋಮೂತ್ರ. ವನ್ನು ಮೌಲ್ಯವರ್ಧನೆ ಮಾಡುವ ಪ್ರಯತ್ನ ಮಾಡುತ್ತಿರುವೆ. ನಮ್ಮ ಗವ್ಯೋತ್ಪನ್ನ ಗಳು ಮೌಲ್ಯಯುತವಾದರೂ ಮಾರುಕಟ್ಟೆ ಕಷ್ಟ.
ಬಹಳಷ್ಟು ಮಂದಿ ಗೋ ಸಾಕಣೆ ಮಾಡದವರಿಗೆ “ಗೋವುಗಳ ಬಗ್ಗೆ ಕನಿಕರವಿದೆ”. ಆದರೆ ಅವರಗಳ ಪ್ರೋತ್ಸಾಹ “ಗೋ ಶಾಲೆ ಗೆ ಹೋಗುತ್ತಿದೆ” . ಇದರ ಬದಲಿಗೆ ದೇಸಿ ತಳಿ ಹಸುಗಳನ್ನು ಸಾಕುವ ಸಾಮಾನ್ಯ ರೈತ ಗೋಪಾಲಕರನ್ನ ಗುರುತಿಸಿ ಗೋ ಪ್ರೋತ್ಸಾಹಾಕ ರು ಸಹಾಯ ಮಾಡಿದರೆ ಗೋವು ಆ ರೈತನ ಮನೆಯಲ್ಲೇ ಉಳಿಯಬಹುದು. ದೇಸಿ ತಳಿ ಹಸುಗಳು ರೈತ ಗೋಪಾಲಕರ ಮನೆಯಲ್ಲಿ ಉಳಿದರೆ ಮಾತ್ರ ಗೋ ಸಂತತಿ ಉಳಿಯಲು ಸಾಧ್ಯ.
ನಮ್ಮ ದೇಸಿ ತಳಿ ಹಸುಗಳ ಸಗಣಿ ಗೋ ಮೂತ್ರ ದ ಗೊಬ್ಬರ ಈ ಜಗತ್ತಿನಲ್ಲೇ ಅತ್ಯುತ್ತಮ ಸೂಕ್ಷ್ಮಾಣು ಜೀವಿಯುಕ್ತ ಗೊಬ್ಬರ ವಾಗಿದೆ . ಈ ವಿಚಾರ ಹಲವಾರು ಗೋ ಸಾಕದ ರೈತರಿಗೂ ಗೊತ್ತಿದೆ. ಆದರೆ ಅಂತಹ ಕಾರ್ಪೊರೇಟ್ ರೈತರು ಯಾವುದೋ ಸಕ್ಕರೆ ಕಾರ್ಖಾನೆ ಯ “ಬೂದಿಗೆ ” ಹಣ ಕೊಡುವುದರ ಬದಲಿಗೆ ದೇಸಿ ತಳಿ “ಹಸುಗಳ ಗೊಬ್ಬರ ಕ್ಕೆ” ಹೆಚ್ಚು ಹಣ ಅಥವಾ “ನ್ಯಾಯವಾದ ಬೆಲೆ ” ಕೊಟ್ಟು ಖರೀದಿಸಿ ಪ್ರೋತ್ಸಾಹಿಸಿದರೆ ಸಾಕಷ್ಟು ಗೋವು ಉಳಿಯಲು ಸಾಧ್ಯ..
ದಯಮಾಡಿ ರೈತ ಗೋಪಾಲಕರ ಗವ್ಯೋತ್ಪನ್ನ ಖರೀದಿಸುವಾಗ ಚೆರ್ಚೆ ಮಾಡಬೇಡಿ ಎಂದು ಗವ್ಯೋತ್ಪನ್ನ ಖರೀದಿಸುವ ಗ್ರಾಹಕ ಮಹಾಶಯರಲ್ಲಿ ವಿನಯ ಪೂರ್ವಕವಾಗಿ ಬೇಡಿಕೊಳ್ಳುತ್ತೇನೆ. ವಿಪರ್ಯಾಸವೆಂದರೆ ಇದೇ ಕರುಣಾಳು ಗ್ರಾಹಕ ಖರೀದಿದಾರ ರೈತರು ಅಂಗಡಿಯಲ್ಲಿ “ಗೊಬ್ಬರ” ಕ್ಕೆ ಚೆರ್ಚೆ ಮಾಡದೇ ಅಂಗಡಿಯವ ಹೇಳಿದಷ್ಟು ಹಣ ನೀಡಿ ಖರೀದಿಸುತ್ತಾರೆ. ಅದೇ ರೈತ ಗೋಪಾಲಕರ ಬಳಿ ಗೊಬ್ಬರ ಖರೀದಿಸುವಾಗ ಬಹಳಷ್ಟು ಜನ ಗೊಬ್ಬರಕ್ಕೆ ಇನ್ನೂ ಬೆಲೆ ಕಡಿಮೆ ಮಾಡಿ ಎಂದು ಚೆರ್ಚೆ ಮಾಡುವುದು ಮತ್ತು ಗೊಬ್ಬರ ದ ಬಗ್ಗೆ ನೂರೆಂಟು ನೆಪ ಹೇಳುವುದು ಮಾಡುವ ಕೆಲಸ ಮಾಡಿ ದೇಸಿ ತಳಿ ಗೋಪಾಲಕರನ್ನ ಈ ನಷ್ಟ ಮಾಡಿಕೊಂಡು ಗೋಪಾಲನೆ ಮಾಡುವುದೇ ಬೇಡ ಎನ್ನುವ ಮನಸು ಬರುವಂತೆ ಮಾಡುತ್ತಿದ್ದಾರೆ.
ಗೋಪಾಲಕರ ಬಳಿ ಗವ್ಯೋತ್ಪನ್ನ ಖರೀದಿಸಿದರೆ ಅವರನ್ನು ಸತಾಯಿಸದೇ ಸರಿಯಾದ ಸಮಯಕ್ಕೆ ಗೋಪಾಲಕರು ನಿಗದಿಪಡಿಸಿದ ಬೆಲೆಯನ್ನು ನೀಡಿ ಎಂದು ಸಮಸ್ತ ಗೋಪಾಲಕರ ಪರವಾಗಿ ಬೇಡಕೊಳ್ಳು ತ್ತೇನೆ..
ಗೋವು ಉಳಿಯಲಿ, ನಿಸರ್ಗ ಉಳಿಯಲಿ, ನೀವು ನಾವು ಮತ್ತು ಮುಂದಿನ ಪೀಳಿಗೆಗೆ ಈ “ಗೋವು ನಿಸರ್ಗ ಸಹಜತೆ” ಉಳಿಯಲಿ…
Why shouldn’t desi breed cows be considered as wildlife….? Now the discussion has started about that.