ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ 2ನೇ ಹಂತದ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ವಿಸ್ತಾರಕ್ಕೆ ತೆರವುಗೊಳ್ಳಬೇಕಾದ ಮರಗಳ ಮರು ಸಮೀಕ್ಷೆ ಪೂರ್ಣಗೊಂಡಿದೆ. ಅದರಂತೆ ಪಟ್ಟಾ, ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೇರಿದ 5,494 ಮರಗಳು ತೆರವುಗೊಳ್ಳಬೇಕಾಗಿದೆ. ಮರಗಳ ಜಾತಿ ಮತ್ತು ಅವುಗಳ ಗಾತ್ರಕ್ಕನುಗುಣವಾಗಿ ತೆರವುಗೊಳ್ಳುವ ಪ್ರತಿ ಮರಕ್ಕೆ ಇಲಾಖೆ ದರ ನಿಗದಿಪಡಿಸಲಿದೆ. ತೆರವುಗೊಳ್ಳುವ ಮರವೊಂದರ ಹತ್ತು ಪಟ್ಟು ದರವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೂಲಕ ಅರಣ್ಯ ಇಲಾಖೆಗೆ ಪಾವತಿಸಬೇಕು.
ಕಳೆದ ಮೇ ತಿಂಗಳಲ್ಲಿ ಮರಗಳ ಸಮೀಕ್ಷೆ ಪೂರ್ಣಗೊಂಡು, ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ 2022ರ ಜೂ.9ರಂದು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ನಿಗದಿಪಡಿಸಲಾಗಿತ್ತು. ಈ ಸಮಯ 35 ಕಿಮೀ ವ್ಯಾಪ್ತಿಯ ಈ ರಸ್ತೆಯನ್ನು ಹೆಚ್ಚು ನೇರಗೊಳಿಸುವ ಕುರಿತು ಆದೇಶ ಹೊರ ಬಿದ್ದ ಕಾರಣ ಅಹವಾಲು ಸ್ವೀಕಾರ ಸಭೆಯನ್ನು ಮುಂದೂಡಲಾಗಿತ್ತು.
ರಸ್ತೆ ನೇರಗೊಳ್ಳುವ ಕಾರಣ 35 ಕಿಮೀ ದೂರದ ವ್ಯಾಪ್ತಿ 33.1 ಕಿಮೀ.ಗೆ ಇಳಿಕೆಗೊಂಡು ತೆರವುಗೊಳ್ಳಬೇಕಾದ ಮರಗಳ ಮರು ಸಮೀಕ್ಷೆಗೆ ಆದೇಶ ನೀಡಲಾಗಿತ್ತು. ಇದರ ಪ್ರಕಾರ ಹಿಂದಿನ ರಸ್ತೆ ವ್ಯಾಪ್ತಿಯ ಹಲವಾರು ಸ್ಥಳಗಳು ಬದಲಾವಣೆಯಾಗಿ ರಸ್ತೆಯು ಕಾಡು ಪ್ರದೇಶಗಳಲ್ಲಿ ಹೆಚ್ಚು ಹಾದು ಹೋಗುವ ಕಾರಣದಿಂದ ಕಳೆದ ಬಾರಿಗಿಂತ ದುಪ್ಪಟ್ಟಿಗಿಂತಲೂ ಅಧಿಕ ಮರಗಳು ತೆರವು ಗೊಳ್ಳಬೇಕಾಗಿದೆ.
5,494 ಮರಗಳು: ಬೆಳ್ತಂಗಡಿ ತಾಲೂಕಿನ ಅರಣ್ಯ ಇಲಾಖೆಯ 5 ಉಪವಲಯಗಳ ಮೂಲಕ ಕಳೆದ ಬಾರಿಯ ಸಮೀಕ್ಷೆಯಲ್ಲಿ ರಸ್ತೆ ಅಭಿವೃದ್ಧಿಗೆ 2,452 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿತ್ತು. ಆದರೆ ಮರು ಸಮೀಕ್ಷೆ ಪ್ರಕಾರ ಪಟ್ಟಾ, ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸೇರಿದ 5,494 ಮರಗಳು ತೆರವುಗೊಳ್ಳಬೇಕಾಗಿದೆ. ಕಳೆದ ಬಾರಿ ಗುರುತಿಸಲ್ಪಟ್ಟ ಕೆಲವು ಮರಗಳು ಹೊಸ ಸಮೀಕ್ಷೆಯಿಂದ ಹೊರ ಬಿದ್ದಿವೆ. ಮರಗಳ ಜಾತಿ ಹಾಗೂ ಅವುಗಳ ಗಾತ್ರಕ್ಕನುಗುಣವಾಗಿ ತೆರವುಗೊಳ್ಳುವ ಪ್ರತಿ ಮರಕ್ಕೆ ಇಲಾಖೆ ದರ ನಿಗದಿಪಡಿಸಲಿದೆ. ತೆರವುಗೊಳ್ಳುವ ಮರವೊಂದರ ಹತ್ತು ಪಟ್ಟು ದರವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೂಲಕ ಅರಣ್ಯ ಇಲಾಖೆಗೆ ಪಾವತಿಸಬೇಕು.
ಕಾಮಗಾರಿ ಆರಂಭ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಗಿಡಗಂಟಿ ತೆರವು ಕಾಮಗಾರಿ ಮಡಂತ್ಯಾರು ಕಡೆಯಿಂದ ನಡೆಯುತ್ತಿದೆ. ಪ್ರಕ್ರಿಯೆಗಳು ಪೂರ್ಣಗೊಂಡ ಕೂಡಲೇ ಮರಗಳ ತೆರವು ನಡೆಯಲಿದ್ದು, ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ವೇಗ ಸಿಗಲಿದೆ.ತೆರವುಗೊಳ್ಳಬೇಕಾದ ಮರಗಳ ವಿವರ:
ಉಪವಲಯ- ಹಿಂದಿನ ಸಮೀಕ್ಷೆ ಹೊಸ ಸಮೀಕ್ಷೆ
ಮಡಂತ್ಯಾರು: 224 306
ಬೆಳ್ತಂಗಡಿ: 952 2,620
ಉಜಿರೆ: 780 968
ಚಿಬಿದ್ರೆ: 127 394
ಚಾರ್ಮಾಡಿ: 204 336