ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ ಬಿಡಬೇಕು ಎಂಬ ಅಂತಾರಾಷ್ಟ್ರೀಯ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರ ಮನವಿಯನ್ನು ಸರ್ಕಾರ ಪುರಸ್ಕರಿಸಿ, ಈಗಾಗಲೇ ಸುತ್ತೋಲೆ ಹೊರಡಿಸಿದೆ.
ಅದರಂತೆ ಚಾಮರಾಜನಗರ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳ ಕಳೇಬರವನ್ನು ಹಾಗೆಯೇ ಬಿಡಲಾಗುತ್ತಿದೆ. ಸ್ವಾಭಾವಿಕ ಹಾಗೂ ಅಸ್ವಾಭಾವಿಕವಾಗಿ ಮೃತಪಡುವ ಹುಲಿಗಳು ಮತ್ತು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪುವ ಪ್ರಾಣಿಗಳಿಗೆ ಇದು ಅನ್ವಯಿಸುವುದಿಲ್ಲ. ಅಂತಹ ಪ್ರಾಣಿಗಳ ಕಳೇಬರವನ್ನು ನಿಯಮಾನುಸಾರ ಸುಡಲಾಗುತ್ತದೆ. ಸುಡದೆ ಬಿಡುವ ಇತರೆ ಪ್ರಾಣಿಗಳ ಮೃತದೇಹದಿಂದ ಬೇರೆ ಪ್ರಾಣಿಗಳಿಗೆ ಆಹಾರ ಒದಗಿಸಿ, ಪ್ರಕೃತಿ ಚಕ್ರ ಸಾಗಲು ಸಹಕರಿಸಲಾಗುತ್ತಿದೆ.
ಈ ಸಂದರ್ಭ ಮಾತನಾಡಿದ ಅಂತಾರಾಷ್ಟ್ರೀಯ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, ಪ್ರಾಣಿ, ಪಕ್ಷಿಗಳ ಆಹಾರ, ಅವುಗಳ ಸಾವಿನಿಂದ ಪ್ರಕೃತಿಗೆ ಆಗುವ ಅನುಕೂಲದ ಬಗ್ಗೆ ಹಾಗೂ ಪ್ರಕೃತಿಯ ಚಕ್ರವನ್ನು ಉಳಿಸುವ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಲಾಗಿತ್ತು. ಸರ್ಕಾರ ಅದಕ್ಕೆ ಸಮ್ಮತಿ ಸೂಚಿಸಿರುವುದು ಸಂತಸದ ಸಂಗತಿ ಎಂದರು.
ಬಿಳಿಗಿರಿ ರಂಗನಾಥಸ್ವಾಮಿ ಹುಲಿಸಂರಕ್ಷಿತ ಪ್ರದೇಶದ ಹುಲಿಯೋಜನೆ ನಿರ್ದೇಶಕ ಶ್ರೀಪತಿ, ಪ್ರಾಣಿಗಳು ಅಸಹಜವಾಗಿ ಸಾವನ್ನಪ್ಪಿದರೆ ನಿಯಮಾನುಸಾರ ಅವುಗಳ ಅಂತ್ಯಕ್ರಿಯೆ ನಡೆಸಲಾಗುವುದು. ಇಲ್ಲವಾದಲ್ಲಿ ಹಾಗೆಯೇ ಬಿಡಲಾಗುವುದು. ಇದರಿಂದ ಪ್ರಾಣಿ, ಪಕ್ಷಿ, ಪ್ರಕೃತಿಗೆ ಅನುಕೂಲವಾಗಲಿದೆ ಎನ್ನುತ್ತಾರೆ.
ಚಾಮರಾಜನಗರ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಹುಲಿ ಹಾಗೂ ಸಾಂಕ್ರಾಮಿಕ ರೋಗದಿಂದ ಮೃತಪಡುವ ಪ್ರಾಣಿ, ಪಕ್ಷಿ ಹೊರತುಪಡಿಸಿ ನೈಸರ್ಗಿಕವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಹಾಗೆಯೇ ಕೊಳೆಯಲು ಬಿಡಲಾಗುವುದು ಎಂದು ಹೇಳಿದರು.