ಎಲ್ಲೆಡೆ ಮೊದಲ ಮಳೆ ಖುಷಿ ತಂದರೆ ಕೆಲವು ಕಡೆಗಳಲ್ಲಿ ಭಾರೀ ಗಾಳಿ ಹಾಗೂ ಮಳೆ ಅವಾಂತರ ಸೃಷ್ಟಿಸಿದೆ.
ಸುಳ್ಯ ತಾಲೂಕಿನ ಪಂಜದ ಆಸುಪಾಸಿನಲ್ಲಿ ಬುಧವಾರ ಸಂಜೆ ಭಾರೀ ಗಾಳಿ ಹಾಗೂ ಮಳೆ ಸುರಿದಿದೆ. ಗಾಳಿಯ ಕಾರಣದಿಂದ ಪಂಜದ ಆಸುಪಾಸಿನಲ್ಲಿ ಅಪಾರ ಹಾನಿಯಾಗಿದೆ.
ಪಂಜ ಬಳಿಯ ಕಂರ್ಬಿ ಗಣೇಶ್ ಅವರ ತೋಟದಲ್ಲಿ ಸುಮಾರು 500 ಕ್ಕೂ ಹೆಚ್ಚು ಅಡಿಕೆ ಮರಗಳು,100 ಕ್ಕೂ ಹೆಚ್ಚು ರಬ್ಬರ್ ಮರಗಳು ಧರೆಗೆ ಉರುಳಿದೆ. ಈ ಆಸುಪಾಸಿನ ಸುಮಾರು 20 ಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡಾಗಿದ್ದು ವಿದ್ಯುತ್ ಪರಿವರ್ತಕಗಳು ಧರೆಗೆ ಉರುಳಿದೆ.
ಗಾಳಿ ಮಳೆಗೆ ಐನೆಕಿದು ಗ್ರಾಮದ ವಿಜಯ್ ಕೋಟೆ ಬೈಲ್ ಅವರ ಮನೆಗೆ ಮರ ಬಿದ್ದಿದೆ. ಮನೆ ಹಾಗೂ ಮನೆಯ ಎದುರುಗಡೆ ನಿಲ್ಲಿಸಿದ ಬೈಕ್ ಹಾನಿಗೊಳಗಾಗಿದೆ. ಮರ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದವರು ಸಣ್ಣಪುಟ್ಟ ಗಾಯಗೊಂಡು ಅದೃಷ್ಟವಶಾತ್ ಪಾರಾಗಿದ್ದಾರೆ.
ಘಟನೆ ಸ್ಥಳಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಪೈಲಾಜೆ, ಅಜಿತ್ ಕಲ್ಲೇರಿ, ಯಶವಂತ್ ಕೊಪ್ಪಳಗದ್ದೆ, ಅಶ್ವಥ್ ಕಲ್ಲೇರಿ, ಸುಹಾಸ್ ಕೋಟೆ ಬೈಲ್, ವಿಪತ್ತು ನಿರ್ವಹಣಾ ತಂಡದ ಬಾಲಸುಬ್ರಹ್ಮಣ್ಯ, ಲಕ್ಷಣ ಮೊದಲಾದವರು ಆಗಮಿಸಿ ಮರ ತೆರವು ಮಾಡಲು ಸಹಕರಿಸಿದರು.