ಕೃಷಿ ಬದುಕಿನ ಮಹಿಳೆಯೊಬ್ಬರು ತನ್ನದೇ ಕೃಷಿ ಚಟುವಟಿಕೆಯಲ್ಲಿ ಯಾವುದೇ ಸಂಕೋಚ ತೋರದೆ, ಅಡಿಕೆ ಮರ ಏರಿ ಈ ಬಾರಿ ಔಷಧಿ ಸಿಂಪಡಿಸಿದ ಸಾಧನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ತಮ್ಮ ಕೃಷಿ ಉಳಿಸಲು ಈ ಬಾರಿಯ ಔಷಧಿ ಸಿಂಪಡಿಸಿದವರು ಪದವೀಧರೆ, ಕೃಷಿಕ ಮಹಿಳೆ ದಿವ್ಯ.
ಈ ಬಾರಿಯ ಮಳೆಯ ಕಾರಣದಿಂದ ಎಲ್ಲಾ ಅಡಿಕೆ ಬೆಳೆಗಾರರು ಕೊಳೆರೋಗ ಬಗ್ಗೆ ಮಾತನಾಡುತ್ತಿದ್ದಾರೆ. ವಿವಿಧ ಕಡೆ ಕೃಷಿಕರೇ, ಸಮಸ್ಯೆ ಪರಿಹಾರಕ್ಕೆ ತಾವೇ ಔಷಧಿ ಸಿಂಪಡಣೆ ಮಾಡಿದ್ದಾರೆ. ಈ ಮೂಲಕ ಅಡಿಕೆ ಕೊಳೆರೋಗ ನಿಯಂತ್ರಣಕ್ಕಾಗಿ ಹೋರಾಟವನ್ನೇ ಮಾಡಿದ್ದಾರೆ. ಕೆಲವು ಕೃಷಿಕರು ದೋಟಿಯ ಮೂಲಕ ಔಷಧಿ ಸಿಂಪಡಿಸಿದರೆ ಇನ್ನೂ ಕೆಲವರು ಮರ ಏರಿ ತಾವೇ ಸ್ವತ: ಔಷಧಿ ಸಿಂಪಡಣೆ ಮಾಡಿದ್ದಾರೆ. ಆದರೆ ಇದೆಲ್ಲದರ ಹೊರತಾಗಿ ಈ ಬಾರಿ ಗಮನ ಸೆಳೆದದ್ದು ದಕ್ಷಿಣ ಕನ್ನಡ ಜಿಲ್ಲೆಯ ಶಿಬಾಜೆ ಗ್ರಾಮದ ಪಡಂತಾಜೆ ಮನೆಯ ದಿವ್ಯ . ಗೃಹಿಣಿಯಾಗಿರುವ ಇವರು ಅಭಿಲಾಷ್ ಗೌಡ ಎಂಬವರ ಪತ್ನಿ. ಪುಟ್ಟ ಮಗು ಇದೆ. ಕೃಷಿಯೇ ಈ ಕುಟುಂಬದ ಬದುಕಿಗೆ ಆಧಾರ. ಬಿಎಸ್ಸಿ ಫ್ಯಾಶನ್ ಡಿಸೈನ್ ಓದಿರುವ ದಿವ್ಯ ಅವರ ತವರು ಮನೆ ಕಡಬ ಬಳಿಯ ಮರ್ಧಾಳ. ಮದುವೆಯಾಗಿ ಶಿಬಾಜೆ ಗ್ರಾಮದ ಪಡಂತಾಜೆಯಲ್ಲಿದ್ದಾರೆ. ಕೃಷಿ ಕುಟುಂಬವಾದ್ದರಿಂದ ಇಡೀ ಮನೆಯವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದಿವ್ಯ ಅವರ ಅತ್ತೆ ವಲ್ಸಲಾ ಅವರು ಕೂಡಾ ಕೃಷಿ ಮಾಹಿತಿಯನ್ನು ಹೊಂದಿದ್ದರು. ಅತ್ತೆ, ಪತಿಯ ಜೊತೆ ದಿವ್ಯ ಕೂಡಾ ಕೃಷಿ ಕೆಲಸವನ್ನೂ ಮಾಡುತ್ತಿದ್ದರು.
ಈ ಬಾರಿ ಮಳೆಗಾಲದ ಮೊದಲು ಎಂದಿನಂತೆ ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸಲು ಕಾರ್ಮಿಕರು ಬಂದಿದ್ದಾರೆ. ಆದರೆ ಎರಡನೇ ಸುತ್ತಿನ ಔಷಧಿ ಸಿಂಪಡಣೆಗೆ ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗಲಿಲ್ಲ. ಮಳೆಯೂ ಜೋರಾದ್ದರಿಂದ ಅಡಿಕೆ ತೋಟದಲ್ಲಿ ಕೊಳೆರೋಗ ಕಾಣಿಸಿಕೊಂಡಿತು. ತಕ್ಷಣವೇ ಮನೆಯವರೆಲ್ಲಾ ಒಂದಾಗಿ ಔಷಧಿ ಸಿಂಪಡಣೆಗೆ ಮುಂದಾದರು. ದಿವ್ಯ ಅವರು ಸ್ವತ: ಮರ ಏರಿ ಔಷಧಿ ಸಿಂಪಡಣೆ ಮಾಡಿದರು. ಸುಮಾರು 100 ಅಡಿಕೆ ಮರಗಳಿಗೆ ತಾವೇ ಸ್ವತ: ಔಷಧಿ ಸಿಂಪಡಣೆ ಮಾಡಿದರು. ಒಟ್ಟು 400 ಕ್ಕೂ ಅಧಿಕ ಅಡಿಕೆ ಮರಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ. ಕೃಷಿ ಉಳಿಸಲು ಪ್ರಯತ್ನ ಮಾಡಿದ್ದಾರೆ.

ಒಬ್ಬ ಮಹಿಳೆಯ ಈ ಪ್ರಯತ್ನ ಈಗ ಗಮನ ಸೆಳೆದಿದೆ. ಪದವೀಧರೆಯಾಗಿ ಕೃಷಿ ಮುನ್ನಡೆಸುವ ಮಹಿಳೆ ಮಾದರಿಯಾಗಿದ್ದಾರೆ. ಅದರಲ್ಲೂ, ಅನಿವಾರ್ಯವಾದರೆ ತಾನೇ ಸ್ವತ: ಔಷಧಿ ಕೂಡಾ ಸಿಂಪಡಿಸಬಲ್ಲೆ ಎನ್ನುವ ಸಂದೇಶವನ್ನೂ ಇಲ್ಲಿ ದಿವ್ಯ ಅವರು ನೀಡಿದ್ದಾರೆ. ಮನೆಯವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಕೆಲಸ ಸಾಧ್ಯವಾಯಿತು ಎಂದು ಹೇಳುತ್ತಾರೆ ದಿವ್ಯ.
ಒಟ್ಟಿನಲ್ಲಿ ಈ ಬಾರಿಯ ಮಳೆ ಅಡಿಕೆ ಬೆಳೆಗಾರರಿಗೆ ಸಮಸ್ಯೆಯನ್ನು ನೀಡಿದ್ದರೆ, ಸಾಧನೆ ಮಾಡುವ, ಹೊಸ ಅನುಭವವನ್ನು ಪಡೆಯಲು ಕೂಡಾ ಈ ಬಾರಿಯ ಮಳೆ ಅವಕಾಶ ನೀಡಿದೆ. ಈ ಕಾರಣದಿಂದ ಮಹಿಳೆಯೊಬ್ಬರು ಮಾದರಿಯಾಗಿದ್ದಾರೆ. ಇನ್ನಷ್ಟು ಮಂದಿಗೆ ಪ್ರೇರಣೆಯೂ ಆಗಿದ್ದಾರೆ.



