ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ ಗಟ್ಟಿ ನಿರ್ಧಾರಗಳು ಈ ಗಾದೆ ಮಾತನ್ನು ನಿಜವಾಗಿಸುತ್ತಾರೆ. ಅಂತಹವರಲ್ಲಿ ಆಸಿಯಾ ಒಬ್ಬರು. ಉತ್ತರ ಕಾಶ್ಮೀರದಲ್ಲಿ ನಡೆದ ಗುಂಡಿನ ದಾಳಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪತಿಯನ್ನು ಕಳೆದುಕೊಂಡು. ಮುಂದೆ ಜೀವನ ಹೇಗೆ ಎಂಬ ಪ್ರಶ್ನೆಗೆ, ತಾನೇ ಕೃಷಿಯ ಮೂಲಕ ಉತ್ತರ ಕಂಡುಕೊಂಡಿದ್ದಾರೆ.
ಆಸಿಯಾ ಅವರ ಬದುಕಿನ ಹೋರಾಟಗಳು ಅನೇಕರಿಗೆ ಧೈರ್ಯ ತಂದುಕೊಡುತ್ತವೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡರು. ಇಬ್ಬರು ಮಕ್ಕಳನ್ನು ಒಂಟಿಯಾಗಿ ಬೆಳೆಸಬೇಕಾಯಿತು. 2019 ರಲ್ಲಿ ಬೆಂಕಿಯು ಅವರ ಮನೆಯನ್ನು ನಾಶಮಾಡಿದಾಗ ಅವರ ಸವಾಲುಗಳು ಮತ್ತಷ್ಟು ಹೆಚ್ಚಾದವು. ಸೀಮಿತ ಸಂಪನ್ಮೂಲಗಳು ಮತ್ತು ಕೃಷಿ ಮಾಡಲು ಭೂಮಿ ಇಲ್ಲದ ಕಾರಣ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳು ಮತ್ತು ಸ್ವಯಂ-ಕಲಿಸಿದ ತಂತ್ರಗಳಿಂದ ತಮ್ಮ ಮೇಲ್ಛಾವಣಿಯನ್ನು ಸಣ್ಣ ಪ್ರಮಾಣದ ಸಾವಯವ ಕೃಷಿಯನ್ನು ಪ್ರಾರಂಭಿಸಲು ಬಳಸಿದರು.
ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠದಿಂದ, ರೂಪ್ ಟಾಪ್ ತರಕಾರಿ ತೋಟ ಹಾಗೂ ಅಣಬೆ ಕೃಷಿಯನ್ನು ತಮ್ಮ ಬದುಕಿನ ಬಂಡಿಗೆ ಮೂಲಧಾರವಾಗಿಸಿಕೊಂಡಿದ್ದಾರೆ. ಇಂದು ಆಸಿಯಾ ತಿಂಗಳಿಗೆ ರೂ 35,000 ದಿಂದ 40,000 ಆದಾಯ ಗಳಿಸುತ್ತಿದ್ದಾರೆ. 10×10 ಅಡಿ ಕೋಣೆಯಲ್ಲಿ ಅಣಬೆ ಕೃಷಿ ಮಾಡಿದ ಅವರು ಅಣಬೆಗಳಿಂದ ತಯಾರಿಸಿದ ವರ್ಮಿಕಾಂಪೋಸ್ಟ್ ಬಳಸಿ ತರಕಾರಿಗಳನ್ನು ಬೆಳೆಯಲು ನಿರ್ಧರಿಸುತ್ತಾರೆ. ಇವರ ಬಳಿ ಕೃಷಿ ಮಾಡಲು ಬೇಕಾದಷ್ಟು ಭೂಮಿ ಇರದ ಕಾರಣ ಮನೆಯ ಮೇಲ್ಛಾವಣಿಯನ್ನೇ ಕೃಷಿ ಭೂಮಿಯನ್ನಾಗಿಸಿಕೊಂಡಿದ್ದಾರೆ.

ಆಸಿಯಾ ಮನೆಯ ಟೆರೇಸ್ ನಲ್ಲೇ ಅಣಬೆ ಗೊಬ್ಬರ ಬಳಸಿಕೊಂಡು ಕೃಷಿಯಲ್ಲಿ ಪ್ರಯೋಗ ನಡೆಸಲು ಮುಂದಾದರು. ಪ್ಲಾಸ್ಟಿಕ್ ಬುಟ್ಟಿಗಳನ್ನು ಖರೀದಿಸಿ ಅದರಲ್ಲಿ ತರಕಾರಿ ಬೆಳೆಯಲಾರಂಭಿಸಿದರು. ಹೀಗೆ ನಿಧಾನವಾಗಿ ಅವರ ಪ್ರಯೋಗ ಫಲ ನೀಡಿತು. ಮೇಲ್ಛಾವಣಿ ಉದ್ಯಾನ ಅವರ ಪರಿಶ್ರಮಕ್ಕೆ ತಕ್ಕ ಬಹುಮಾನ ತಂದಿತು. ಆರಂಭದಲ್ಲಿ ಕಷ್ಟಗಳು ಎದುರಾದರೂ ನಿಧಾನವಾಗಿ ಸ್ಥಳಿಯ ಬಂಡಿಪೋರಾ ಮಾರುಕಟ್ಟೆಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.
ಕೊಲ್ಲಾರ್ಡ್ ಗ್ರೀನ್ಸ್, ಈರುಳ್ಳಿ, ಆಲೂಗಡ್ಡೆ, ಬದನೆಕಾಯಿ, ಪಾಲಕ್, ಮೆಣಸಿಕಾಯಿಗಳು, ಟೊಮ್ಯಾಟಿ, ಬೀನ್ಸ್, ಕ್ಯಾರೆಟ್, ಎಲೆಗಳ ಸೊಪ್ಪುಗಳು ಮತ್ತು ವಿವಿಧ ರೀತಿಯ ಮೊಳಕೆಗಳನ್ನು ಒಳಗೊಂಡಂತೆ ವರ್ಷಪೂರ್ತಿ ತರಕಾರಿಗಳನ್ನು ಬೆಳೆಸುತ್ತಾರೆ.


