ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಅನ್ನಪೂರ್ಣಾದೇವಿ ತಿಳಿಸಿದ್ದಾರೆ.
ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮವಾಗಿ ದುಡಿಯುವ ವರ್ಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ದ್ವಿಗುಣವಾಗಿದ್ದು, 2047ರ ವೇಳೆಗೆ ಶೇಕಡ 70ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಮಿಷನ್ ಸಕ್ಷಮ ಅಂಗನವಾಡಿ ಕೇಂದ್ರ ಯೋಜನೆಯ ಮೂಲಕ ದೇಶದ ಎರಡು ಲಕ್ಷಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳನ್ನು ಸಶಕ್ತಗೊಳಿಸಲಾಗಿದೆ. ಪಿಎಂ ಮಾತೃವಂದನಾ ಯೋಜನೆ, ಪೋಷಣ್ ಅಭಿಯಾನ ಮುಂತಾದ ಕಾರ್ಯಕ್ರಮಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸುರಕ್ಷತೆಗೆ ಗಮನ ನೀಡಲಾಗುತ್ತಿದೆ ಎಂದರು. ಮಾತೃವಂದನಾ ಯೋಜನೆಯ ಅಡಿ ಗರ್ಭಿಣಿಯರಿಗೆ 19 ಸಾವಿರ ಕೋಟಿ ರೂಪಾಯಿ ನೆರವು ನೀಡಲಾಗಿದೆ. ಪ್ರತಿ ಕ್ಷೇತ್ರದಲ್ಲೂ ಮಹಿಳೆಯರ ಪ್ರಗತಿಗೆ ಉತ್ತೇಜನ ನೀಡಲಾಗುತ್ತಿದ್ದು, ಸರ್ಕಾರದ ಎಲ್ಲಾ ಸಚಿವಾಲಯಗಳ ಯೋಜನೆಗಳಲ್ಲಿ ಲಿಂಗಾಧಾರಿತ ಅನುದಾನದಿಂದ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಹೇಳಿದರು. ಸ್ವಸಹಾಯ ಸಂಘಗಳ ಮೂಲಕ ದೇಶದ 10 ಕೋಟಿ ಮಹಿಳೆಯರು ಆರ್ಥಿಕ ವಹಿವಾಟು ನಡೆಸುತ್ತಿದ್ದು, ಗಣನೀಯ ಕೊಡುಗೆ ನೀಡುತ್ತಿದ್ದಾರೆ. ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಮಹಿಳಯರ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.