ಶಿವಮೊಗ್ಗ ಜಿಲ್ಲೆಯ ಸಾಗರದ ಜೀವನ್ಮುಖಿ ಸಂಘಟನೆ ಹಾಗೂ ಭೀಮನಕೋಟೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಮಹಿಳಾ ಸ್ವಾವಲಂಬನೆಯನ್ನು ಬೆಂಬಲಿಸಿ ‘ಅವ್ವ ಸಂತೆ’ ಆಯೋಜಿಸಲಾಗಿತ್ತು.ಮಹಿಳಾ ಸಂಘಟನೆಗಳು ತಯಾರಿಸಿದ ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ, ಜೇನುತುಪ್ಪ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಬಾಳೆ ನಾರಿನ ಉತ್ಪನ್ನ, ಖಾದಿ ಬಟ್ಟೆ, ಆಹಾರ ಉತ್ಪನ್ನ ಸೇರಿದಂತೆ ಬಗೆಬಗೆಯ ಉತ್ಪನ್ನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ನಾಲ್ಕು ವರ್ಷದಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿಯೇ ತಯಾರಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಜೀವನ್ಮುಖಿ ಸಂಘಟನೆಯ ಸಂಘಟಕರಾದ ಚೂಡಮಣಿ ರಾಮಚಂದ್ರ ಹೇಳುತ್ತಾರೆ.
ಕೇಂದ್ರ ಸರ್ಕಾರದ ಯೋಜನೆಯಾದ ಪಿಎಂ-ಎಫ್ ಎಂಇ ಯೋಜನೆಯಡಿ ಆಹಾರ ಉತ್ಪನ್ನಗಳ ತಯಾರಿಕೆಗಾಗಿ ಆರ್ಥಿಕ ಸಹಾಯ ಪಡೆದಿದ್ದು, ಇದರಿಂದ ಗಾಣದಲ್ಲಿ ತಯಾರಿಸಿದ ಕೊಬ್ಬರಿ ಎಣ್ಣೆ , ಶೇಂಗಾ ಎಣ್ಣೆ ತಯಾರು ಮಾಡಲಾಗುತ್ತಿದೆ. ಇದರ ಜೊತೆಗೆ ಬಗೆ ಬಗೆಯ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಲಾಗುತ್ತಿದೆ ಎಂದು ಫಲಾನುಭವಿ ಅಮೃತಾ ಕಾಕಲ್ ಹೇಳುತ್ತಾರೆ.
ಉತ್ಪನ್ನಗಳ ತಯಾರಕರಾದ ಸ್ನೇಹ ಜೈನ್ ಅವರು ಸೌಂದರ್ಯ ವರ್ಧಕ ಉತ್ಪನ್ನಗಳನ್ನು ತಯಾರು ಮಾಡಿ, ಅವುಗಳನ್ನು ಮಹಿಳೆಯರೇ ಮಾರಾಟ ಮಾಡಿದ್ದು, ಅವುಗಳಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತಿದೆ ಎಂದು ಹೇಳಿದರು.