ರಾಷ್ಟ್ರೀಯ ಜೇನು ಮಂಡಳಿ ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ವೈಜ್ಞಾನಿಕ ಜೇನು ಬೇಸಾಯ ಕುರಿತ ಕಾರ್ಯಾಗಾರ ನಡೆಯಿತು.………ಮುಂದೆ ಓದಿ……..
ಕಾರ್ಯಾಗಾರಕ್ಕೆ ಚಾಲನೆ ನೀಡಿದ ಶಾಸಕ ಶಿವರಾಮ್ ಹೆಬ್ಬಾರ್, ವೈಜ್ಞಾನಿಕ ಪದ್ಧತಿಯಲ್ಲಿ ಅಡಿಕೆಯಂತಹ ಬೆಳೆಯನ್ನು ಎಲ್ಲೆಡೆಯೂ ಬೆಳೆಯಲಾಗುತ್ತಿದೆ .ರೈತರು ಸುಲಭ ಬೆಳೆಗೆ ಮಾರು ಹೋಗಿದ್ದಾರೆ. ಆರ್ಥಿಕವಾಗಿ ಗಟ್ಟಿಯಾಗುವ ಬೆಳೆಗಳನ್ನು ಅಳವಡಿಸಿಕೊಂಡಿಲ್ಲ .ರೈತರು ತಮ್ಮ ಕೃಷಿಯಲ್ಲಿ ಜೇನಿನ ಪರ್ಯಾಯ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಲಾಭ ಮಾಡಿಕೊಳ್ಳಬೇಕಿದೆ. ಇಂತಹ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಪಿ. ಸತೀಶ್ ಜೇನು ಸಾಕಣೆ ಕುರಿತಂತೆ ಮಾಹಿತಿ ನೀಡಿ, ಪರಕೀಯ ಪರಾಗ ಸ್ಪರ್ಶ ಆಗುವ ಬೆಳೆಗಳಲ್ಲಿ ಶೇಕಡ 70ರಷ್ಟು ಪರಾಗಸ್ಪರ್ಶ ಜೇನಿನಿಂದಲೇ ಆಗಲಿದೆ. ಪರಾಗ ಸ್ಪರ್ಶದಿಂದಾಗುವ ಕೊರತೆಯಿಂದ ಸುಮಾರು 6 ಸಾವಿರ ಕೋಟಿ ರೂಪಾಯಿಯಷ್ಟು ಬೆಳೆ ಹಾನಿಯಾಗುತ್ತಿದ್ದು , ಅದನ್ನು ತಡೆಯುವಲ್ಲಿ ಜೇನು ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ಕೆ.ಟಿ. ವಿಜಯ ಕುಮಾರ್, ಜೇನು ಕೃಷಿ ಮಾಡುವ ಸಮಯದಲ್ಲಿ ಜೇನು ಮತ್ತು ಅವುಗಳ ಜೀವನ ಕ್ರಮದ ಬಗ್ಗೆ ತಿಳಿದುಕೊಂಡರೆ ಜೇನು ಕೃಷಿ ಸುಲಭವಾಗಲಿದೆ. ಜೇನಿನಲ್ಲಿಯೂ ಬೇರೆ ಬೇರೆ ಪ್ರಬೇಧಗಳಿವೆ. ಅದರ ಬಗ್ಗೆಯೂ ತಿಳಿದುಕೊಂಡು ವಾತಾವರಣಕ್ಕೆ ತಕ್ಕಂತೆ ಕೃಷಿ ಮಾಡಬೇಕಾಗಿದೆ ಎಂದು ಹೇಳಿದರು.
ಐದಾರು ವರ್ಷಗಳಿಂದ ತೋಟಗಾರಿಕಾ ಇಲಾಖೆಯ ಸಹಾಯ ಧನದಲ್ಲಿ ಜೇನು ಸಾಕಣೆ ಮಾಡುತ್ತಿದ್ದು, ಇದರಿಂದ ಆರ್ಥಿಕವಾಗಿ ಲಾಭವಾಗಿದೆ. ಜೇನು ಸಾಕಣಿಕೆಗೆ ಸರ್ಕಾರ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಕೃಷಿಕ ತಿಮ್ಮಣ್ಣ ಭಟ್ ಹೇಳಿದರು. ಕಳೆದ ಸಾಲಿನಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ 10 ಜೇನು ಪೆಟ್ಟಿಗೆಗಳನ್ನು ಪಡೆದು ಅದರಿಂದ ಲಾಭ ಮಾಡಿಕೊಳ್ಳಲಾಗಿದೆ. ಸರ್ಕಾರದ ಇಂತಹ ಯೋಜನೆಗಳು ಜೇನು ಕೃಷಿಕರಿಗೆ ಅನುಕೂಲವಾಗಲಿದೆ ಎಂದು ಕೃಷಿಕ ಎನ್. ಐ. ಕುಮಾರ್ ಹೇಳುತ್ತಾರೆ.